ಕೇರಳದಲ್ಲಿ ಆರ್​ಎಸ್​ಎಸ್​ ಕಾರ್ಯಕರ್ತನ ಹತ್ಯೆ; ತನಿಖೆಯನ್ನು ಎನ್​ಐಎಗೆ ವಹಿಸಲು ಬಿಜೆಪಿ ಒತ್ತಾಯ | BJP seeks NIA probe in RSS worker Sanjith Murder in Kerala


ಕೇರಳದಲ್ಲಿ ಆರ್​ಎಸ್​ಎಸ್​ ಕಾರ್ಯಕರ್ತನ ಹತ್ಯೆ; ತನಿಖೆಯನ್ನು ಎನ್​ಐಎಗೆ ವಹಿಸಲು ಬಿಜೆಪಿ ಒತ್ತಾಯ

ಸಾವನ್ನಪ್ಪಿದ ಆರ್​ಎಸ್​ಎಸ್​ ನಾಯಕ ಸಂಜಿತ್

ಪಾಲಕ್ಕಾಡ್: ಕೇರಳದ ಪಾಲಕ್ಕಾಡ್ ಜಿಲ್ಲೆಯ ಮಲಂಪುಳದಲ್ಲಿ ಸೋಮವಾರ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಸ್ಥಳೀಯ ಮುಖಂಡನನ್ನು ಪತ್ನಿಯ ಎದುರೇ ಕೊಚ್ಚಿ ಕೊಲೆ ಮಾಡಲಾಗಿತ್ತು. ಈ ಘಟನೆಯ ಹಿಂದೆ ಎಸ್​ಡಿಪಿಐ ಕೈವಾಡವಿದೆ ಎಂದು ಬಿಜೆಪಿ ನಾಯಕರು ಅರೋಪಿಸಿದ್ದರು. ಈ ಪ್ರಕರಣದ ವಿಚಾರಣೆಯನ್ನು ರಾಷ್ಟ್ರೀಯ ತನಿಖಾ ತಂಡಕ್ಕೆ (ಎನ್​ಐಎ) ವಹಿಸಬೇಕೆಂದು ಕೇರಳದ ಬಿಜೆಪಿ ನಾಯಕರು ಇಂದು ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರಿಗೆ ಮನವಿ ಸಲ್ಲಿಸಿದ್ದಾರೆ.

ನಿನ್ನೆ ಕೇರಳದ ಎಲಪ್ಪುಲ್ಲಿ ಮೂಲದ ಎಸ್. ಸಂಜಿತ್ (27) ಎಂಬ ಆರ್​ಎಸ್​ಎಸ್​ ಕಾರ್ಯಕರ್ತ ಬೆಳಗ್ಗೆ 9 ಗಂಟೆಗೆ ತನ್ನ ಪತ್ನಿಯನ್ನು ಜಿಲ್ಲೆಯ ಮಂಬರಂ ಪ್ರದೇಶದಲ್ಲಿ ಕೆಲಸಕ್ಕೆ ಕರೆದುಕೊಂಡು ಹೋಗುತ್ತಿದ್ದಾಗ ಗುಂಪೊಂದು ಅವರ ಮೇಲೆ ಹಲ್ಲೆ ನಡೆಸಿತ್ತು. ಆ ಹಲ್ಲೆ ನಡೆಸಿದವರು ಸಂಜಿತ್​ನನ್ನು ವಾಹನದಲ್ಲಿ ಹಿಂಬಾಲಿಸಿ ಅವರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದರು. ಸಂಜಿತ್ ಬೈಕ್​ನಿಂದ ಕೆಳಗೆ ಬಿದ್ದಾಗ ಆತನ ಹೆಂಡತಿ ಮತ್ತು ಇತರ ಕೆಲವರ ಮುಂದೆಯೇ ಸಂಜಿತ್​ಗೆ ಚಾಕುವಿನಿಂದ ಇರಿದು ಕೊಂದಿದ್ದರು. ಸಂಜಿತ್‌ ದೇಹದ ಮೇಲೆ 50ಕ್ಕೂ ಹೆಚ್ಚು ಇರಿತದ ಗಾಯಗಳಾಗಿ ಸಂಜಿತ್ ಸಾವನ್ನಪ್ಪಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ಕೊಲೆಯನ್ನು ನೋಡಿದ ಸ್ಥಳದಲ್ಲಿದ್ದ 56 ವರ್ಷದ ರಾಮು ಎಂಬುವವರು ಆಘಾತದಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದರು.

ಸಂಜಿತ್ ಹತ್ಯೆಯಲ್ಲಿ ಇಸ್ಲಾಮಿ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ)ನ ರಾಜಕೀಯ ಶಾಖೆಯಾದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಕಾರ್ಯಕರ್ತರ ಪಾತ್ರವಿದೆ ಎಂದು ಬಿಜೆಪಿ ಹಾಗೂ ಆರ್​ಎಸ್​ಎಸ್​ ಅನುಮಾನ ವ್ಯಕ್ತಪಡಿಸಿತ್ತು. ಇಂದು ಕೇರಳದ ಬಿಜೆಪಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ನೇತೃತ್ವದಲ್ಲಿ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರನ್ನು ರಾಜಭವನದಲ್ಲಿ ಭೇಟಿಯಾದ ಬಿಜೆಪಿ ನಾಯಕರು ಈ ಪ್ರಕರಣದ ತನಿಖೆಯನ್ನು ಎನ್​ಐಎಎ ವಹಿಸಲು ಒತ್ತಾಯಿಸಿದ್ದಾರೆ.

2020ರಿಂದ ಎಸ್‌ಡಿಪಿಐ ಮೃತ ಆರ್​ಎಸ್​ಎಸ್​ ಕಾರ್ಯಕರ್ತ ಸಂಜಿತ್​ನನ್ನು ಗುರಿಯಾಗಿಸಿಕೊಂಡಿತ್ತು. ರಾಜ್ಯ ಪೊಲೀಸರು ಅವರಿಗೆ ಸೂಕ್ತ ಭದ್ರತೆಯನ್ನು ಒದಗಿಸುವಲ್ಲಿ ವಿಫಲರಾಗಿದ್ದರು ಎಂದು ಬಿಜೆಪಿ ಆರೋಪಿಸಿದೆ. ಆಡಳಿತಾರೂಢ ಸಿಪಿಐ(ಎಂ) ಅನ್ನು ಗುರಿಯಾಗಿಸಿಕೊಂಡು ಸುರೇಂದನ್ ಅವರು ರಾಜ್ಯದಲ್ಲಿ ಮಾರ್ಕ್ಸ್‌ವಾದಿ ಪಕ್ಷ ಮತ್ತು ಇಸ್ಲಾಮಿಕ್ ಭಯೋತ್ಪಾದಕ ಸಂಘಟನೆಗಳು ಈಗ ಕೈಜೋಡಿಸಿರುವುದು ಬಹಿರಂಗ ರಹಸ್ಯವಾಗಿದೆ. ದಕ್ಷಿಣದ ರಾಜ್ಯದಲ್ಲಿ ರಾಷ್ಟ್ರೀಯವಾದಿ ಶಕ್ತಿಗಳನ್ನು ನಿರ್ನಾಮ ಮಾಡುವುದು ಅವರ ಸಾಮಾನ್ಯ ಗುರಿಯಾಗಿದೆ ಎಂದು ಬಿಜೆಪಿ ಆರೋಪಿಸಿದೆ.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸುರೇಂದ್ರನ್, ಕಳೆದ 10 ದಿನಗಳಲ್ಲಿ ಕೇರಳದಲ್ಲಿ ಇಬ್ಬರು ಆರ್‌ಎಸ್‌ಎಸ್ ಕಾರ್ಯಕರ್ತರನ್ನು ಎಸ್‌ಡಿಪಿಐ ಕಾರ್ಯಕರ್ತರು ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ಕೇವಲ ಮದ್ಯದ ವಾಸನೆ ಬಂದರೆ ವ್ಯಕ್ತಿ ಅಮಲೇರಿದ ಎಂದು ಅರ್ಥವಲ್ಲ: ಕೇರಳ ಹೈಕೋರ್ಟ್

ಹಿಂದುತ್ವದ ಹೆಸರಲ್ಲಿ ಮತ್ತೊಂದು ವಿವಾದ ಸೃಷ್ಟಿಸಿದ ಮೆಹಬೂಬಾ ಮುಫ್ತಿ; ಬಿಜೆಪಿ, ಆರ್​ಎಸ್​ಎಸ್​ ವಿರುದ್ಧ ಟೀಕೆ

TV9 Kannada


Leave a Reply

Your email address will not be published. Required fields are marked *