ಈ ಮೊದಲು ಕೊಲೆ ಬಗ್ಗೆ ಪ್ರತಿಕ್ರಿಯಿಸಿದ್ದ ಸಿಪಿಎಂ ರಾಜ್ಯ ಸೆಕ್ರಟರಿಯೇಟ್ ಹಂತಕರು ರಾಜ್ಯದಲ್ಲಿ ಗಲಭೆಗಳನ್ನು ಪ್ರಚೋದಿಸಲು ಬಯಸುವ ಸಮಾಜವಿರೋಧಿಗಳು ಎಂದು ಹೇಳಿತ್ತು.

ಪ್ರಾತಿನಿಧಿಕ ಚಿತ್ರ
ಪಾಲಕ್ಕಾಡ್: ಕೇರಳದ ಪಾಲಕ್ಕಾಡ್ (Palakkad) ಜಿಲ್ಲೆಯಲ್ಲಿ ಸ್ಥಳೀಯ ಸಿಪಿಎಂ (CPM) ಮುಖಂಡರೊಬ್ಬರು ಹತ್ಯೆಯಾದ ಒಂದು ದಿನದ ನಂತರ, ಕೊಲೆಗಾರರ ರಾಜಕೀಯ ಸಂಬಂಧದ ಬಗ್ಗೆ ಸೋಮವಾರ ವಿವಾದ ಭುಗಿಲೆದ್ದಿದೆ. ಸಿಪಿಎಂ ಸ್ಥಳೀಯ ಸಮಿತಿ ಸದಸ್ಯ ಕೆ.ಶಾಜಹಾನ್ (40) ಅವರನ್ನು ಭಾನುವಾರ ತಡರಾತ್ರಿ ಸ್ವಾತಂತ್ರ್ಯ ದಿನಾಚರಣೆಯ ಸಿದ್ಧತೆಯಲ್ಲಿ ತೊಡಗಿದ್ದಾಗ ತಂಡವೊಂದು ಕಡಿದು ಹತ್ಯೆ ಮಾಡಿತ್ತು. ಹತ್ಯೆಯ ಪ್ರತ್ಯಕ್ಷದರ್ಶಿ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬರು ಶಾಜಹಾನ್ ಮೇಲೆ ತಮ್ಮದೇ ಪಕ್ಷದವರೇ ಹಲ್ಲೆ ನಡೆಸಿದ್ದಾರೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದು, ಸಿಪಿಎಂನ ಜಿಲ್ಲಾ ಕಾರ್ಯದರ್ಶಿ ಹಂತಕರು ವರ್ಷಗಳ ಹಿಂದೆಯೇ ಪಕ್ಷವನ್ನು ತೊರೆದಿದ್ದಾರೆ ಎಂದು ಹೇಳಿದ್ದಾರೆ. ಈ ಮೊದಲು ಕೊಲೆ ಬಗ್ಗೆ ಪ್ರತಿಕ್ರಿಯಿಸಿದ್ದ ಸಿಪಿಎಂ ರಾಜ್ಯ ಸೆಕ್ರಟರಿಯೇಟ್ ಹಂತಕರು ರಾಜ್ಯದಲ್ಲಿ ಗಲಭೆಗಳನ್ನು ಪ್ರಚೋದಿಸಲು ಬಯಸುವ ಸಮಾಜವಿರೋಧಿಗಳು ಎಂದು ಹೇಳಿತ್ತು. ಮಧ್ಯಾಹ್ನದ ನಂತರ, ರಾಜ್ಯ ಸೆಕ್ರಟರಿಯೇಟ್ ಬಿಜೆಪಿ-ಆರ್ಎಸ್ಎಸ್ ಗ್ಯಾಂಗ್ ಈ ಹತ್ಯೆಗೆ ಕಾರಣ ಎಂದು ಹೇಳಿಕೆ ನೀಡಿತು. ಸಿಪಿಐ (ಎಂ) ಕಾರ್ಯಕರ್ತರನ್ನು ಕೊಂದು ನಂತರ ನಿರಾಧಾರ ಪ್ರಚಾರ ನಡೆಸುವುದು ಬಿಜೆಪಿ-ಆರ್ಎಸ್ಎಸ್ನ ಅಭ್ಯಾಸವಾಗಿದೆ. ಈ ಪ್ರಕರಣದಲ್ಲೂ ಬಿಜೆಪಿ, ಮಾಧ್ಯಮಗಳ ನೆರವಿನಿಂದ ಸುಳ್ಳು ಪ್ರಚಾರ ಆರಂಭಿಸಿದೆ ಎಂದು ಸೆಕ್ರಟರಿಯೇಟ್ ತಮ್ಮ ಹೇಳಿಕೆಯಲ್ಲಿ ತಿಳಿಸಿದೆ.