ಸಾಮಾನ್ಯವಾಗಿ ಬೇರೆ ಭಾಷೆಗಳ ನಿರ್ಮಾಪಕರು ಕನ್ನಡ ಸಿನಿಮಾಗಳನ್ನು ನಿರ್ಮಾಣ ಮಾಡುವುದನ್ನು ನೋಡಿದ್ದೇವೆ, ಕೇಳಿದ್ದೇವೆ. ಅಂಥದ್ದರಲ್ಲಿ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ‘ತಿಂಗಳಾಯಿಚ ನಿಶ್ಚಯಂ’ ಎಂಬ ಮಲಯಾಳಂ ಸಿನಿಮಾ ಮಾಡಿ, ಕೇರಳ ರಾಜ್ಯ ಪ್ರಶಸ್ತಿಯನ್ನೂ ಸ್ವೀಕರಿಸಿದ್ದಾರೆಂದರೆ ಇದು ಕನ್ನಡಿಗರು ಹೆಮ್ಮೆ ಪಡುವ ವಿಚಾರವೆ ಸರಿ.
ಹೌದು ಸ್ಯಾಂಡಲ್ವುಡ್ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಅವರು ತಮ್ಮ ಮಲಯಾಳಂ ಸಿನಿಮಾ ‘ತಿಂಗಳಾಯಿಚ ನಿಶ್ಚಯಂ’ಗೆ ಕೇರಳ ರಾಜ್ಯ ಪ್ರಶಸ್ತಿ ಸ್ವೀಕರಿಸಿದ್ದಾರೆ. ಸೆನ್ನಾ ಹೆಗ್ಡೆ ನಿರ್ದೇಶನದ ‘ತಿಂಗಳಾಯಿಚ ನಿಶ್ಚಯಂ’, ಎರಡನೇ ಅತ್ಯುತ್ತಮ ಸಿನಿಮಾ ಮತ್ತು ಅತ್ಯುತ್ತಮ ಕಥೆ ಸೇರಿದಂತೆ ಒಟ್ಟು ಎರಡು ವಿಭಾಗಗಳಲ್ಲಿ ಪ್ರಶಸ್ತಿ ಗೆದ್ದುಕೊಂಡಿತ್ತು. ಇತ್ತೀಚೆಗೆ ನಡೆದ 51ನೇ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ನಿರ್ಮಾಪಕ ಪುಷ್ಕರ್ ಮತ್ತು ನಿರ್ದೇಶಕ ಸೆನ್ನಾ ಹೆಗ್ಡೆ ಪ್ರಶಸ್ತಿ ಸ್ವೀಕರಿಸಿದ್ದಾರೆ.
ಮೊದಲನೇ ಅತ್ಯುತ್ತಮ ಸಿನಿಮಾ ಪ್ರಶಸ್ತಿ ‘ದಿ ಗ್ರೇಟ್ ಇಂಡಿಯನ್ ಕಿಚನ್’ ಸಿನಿಮಾ ಪಾಲಾಗಿದೆ. ‘ಗೋದಿ ಬಣ್ಣ ಸಾಧಾರಣ ಮೈಕಟ್ಟು’, ‘ಕಿರಿಕ್ ಪಾರ್ಟಿ’, ‘ಹಂಬಲ್ ಪೊಲಿಟಿಷಿಯನ್ ನೊಗರಾಜ್’, ‘ಕಥೆಯೊಂದು ಶುರುವಾಗಿದೆ’, ‘ಅವನೇ ಶ್ರೀಮನ್ನಾರಾಯಣ’, ‘ಪಾಪ್ ಕಾರ್ನ್ ಮಂಕಿ ಟೈಗರ್’ ಹೀಗೆ ಸಾಲು ಸಾಲು ಸದಭಿರುಚಿಯ ಹಾಗೂ ಪ್ರಯೋಗಾತ್ಮಕ ಸಿನಿಮಾಗಳನ್ನು ಮಾಡಿರುವ ಕೀರ್ತಿ ಪುಷ್ಕರ್ ಅವರದ್ದು. ತಿಂಗಳಾಯಿಚ ನಿಶ್ಚಯಂ ಸಿನಿಮಾ ಕಥೆಯನ್ನು ಮೊದಲು ಕನ್ನಡದಲ್ಲಿ ಮಾಡಬೇಕಾಗಿತ್ತು, ಆದರೆ ಕಥೆಯ ಪರಿಸರ ಕೇರಳವನ್ನು ಹೋಲುತ್ತಿದ್ದುದರಿಂದ ಮಲಯಾಳಂನಲ್ಲಿ ಸಿನಿಮಾ ಮಾಡುವ ನಿರ್ಧಾರಕ್ಕೆ ಪುಷ್ಕರ್ ಮತ್ತು ಸೆನ್ನಾ ಹೆಗ್ಡೆ ಬಂದಿದ್ದರು.