ಕೇರಳದ ವಿಝಿಞಂನಲ್ಲಿ ಅದಾನಿ ಬಂದರು ವಿರುದ್ಧ ಪ್ರತಿಭಟನೆ: ಯೋಜನೆ, ಆಕ್ರೋಶ ಮತ್ತು ಈವರೆಗಿನ ಬೆಳವಣಿಗೆಗಳ ಬಗ್ಗೆ ಇಲ್ಲಿದೆ ಮಾಹಿತಿ – Protests against Adani Group’s Vizhinjam International Seaport in Kerala All you need to know


Vizhinjam Protest ಮೀನುಗಾರರ ಪ್ರತಿಭಟನೆಗೆ ಲ್ಯಾಟಿನ್ ಕ್ಯಾಥೋಲಿಕ್ ಚರ್ಚ್ ಬೆಂಬಲ ನೀಡುತ್ತಿದ್ದರೆ, ಸ್ಥಳೀಯ ಜನರ ಕ್ರಿಯಾ ಸಮಿತಿಯು ಯೋಜನೆಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಒತ್ತಾಯಿಸುತ್ತಿದೆ. ಈ ಸಮಿತಿಯು ಮೇಲ್ಜಾತಿಯ ನಾಯರ್ ಸರ್ವಿಸ್ ಸೊಸೈಟಿಯಂತಹ ವಿವಿಧ ಹಿಂದೂ ಸಮುದಾಯದ ಸಂಘಟನೆಗಳ ಬೆಂಬಲವನ್ನು ಹೊಂದಿದೆ

ಕೇರಳದ ವಿಝಿಞಂನಲ್ಲಿ ಅದಾನಿ ಬಂದರು ವಿರುದ್ಧ ಪ್ರತಿಭಟನೆ: ಯೋಜನೆ, ಆಕ್ರೋಶ ಮತ್ತು ಈವರೆಗಿನ ಬೆಳವಣಿಗೆಗಳ ಬಗ್ಗೆ ಇಲ್ಲಿದೆ ಮಾಹಿತಿ

ವಿಝಿಞಂನಲ್ಲಿ ಪ್ರತಿಭಟನೆ

ಕೇರಳದ ಅದಾನಿ ಗ್ರೂಪ್‌ನ (Adani Group)ವಿಝಿಞಂ ಇಂಟರ್‌ನ್ಯಾಷನಲ್ ಸೀಪೋರ್ಟ್ ಲಿಮಿಟೆಡ್ (Vizhinjam International Seaport Limited) ವಿರುದ್ಧದ ಪ್ರತಿಭಟನೆಗಳು ಸೋಮವಾರವೂ ಮುಂದುವರಿದಿದ್ದು, ಭಾನುವಾರ ರಾತ್ರಿ ಪೊಲೀಸ್ ಠಾಣೆಯ ಮೇಲೆ ಮೀನುಗಾರರು ದಾಳಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 3,000 ಜನರನ್ನು ಬಂಧಿಸಿದ್ದಾರೆ. ಭಾನುವಾರ ರಾತ್ರಿ ವಿಝಿಞಂ ಪ್ರದೇಶದಲ್ಲಿ ನಡೆದ ಹಿಂಸಾಚಾರದಲ್ಲಿ 36 ಪೊಲೀಸರು ಮತ್ತು ಸುಮಾರು 20 ಪ್ರತಿಭಟನಾಕಾರರು ಗಾಯಗೊಂಡಿದ್ದಾರೆ. ದಾಳಿಯಲ್ಲಿ ತಮ್ಮ ಇಲಾಖೆಗೆ 85 ಲಕ್ಷ ರೂಪಾಯಿ ನಷ್ಟವಾಗಿದೆ ಎಂದು ಎಫ್‌ಐಆರ್‌ನಲ್ಲಿ ಪೊಲೀಸರು ತಿಳಿಸಿದ್ದಾರೆ.

ಏನಿದು ವಿಝಿಞಂ ಬಂದರು ಯೋಜನೆ?

ತಿರುವನಂತಪುರಂ ಬಳಿಯ ವಿಝಿಞಂನಲ್ಲಿ ಅದಾನಿ ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್‌ನೊಂದಿಗೆ ಸಾರ್ವಜನಿಕ ಖಾಸಗಿ ಸಹಭಾಗಿತ್ವದ (ಪಿಪಿಪಿ) ಮಾದರಿಯಲ್ಲಿ ನಿರ್ಮಿಸಲಾಗುತ್ತಿರುವ ರೂ 7,525 ಕೋಟಿ ಬಂದರಿನ ಶಂಕುಸ್ಥಾಪನೆಯನ್ನು ಅಂದಿನ ಕೇರಳ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರು ಡಿಸೆಂಬರ್ 2015 ರಲ್ಲಿ ಹಾಕಿದರು. ಇದು ಮುಕ್ತಾಯದ ಗಡುವನ್ನು ಮೀರಿದೆ.
ಬಂದರು 30 ಬರ್ತ್‌ಗಳನ್ನು ಹೊಂದಿದ್ದು, ಇದು ದೈತ್ಯ “ಮೆಗಾಮ್ಯಾಕ್ಸ್” ಕಂಟೇನರ್ ಹಡಗುಗಳನ್ನು ನಿರ್ವಹಿಸಲು ಸಾಧ್ಯವಾಗುತ್ತದೆ. ಪ್ರಮುಖ ಅಂತಾರಾಷ್ಟ್ರೀಯ ಹಡಗು ಮಾರ್ಗಗಳಿಗೆ ಸಮೀಪದಲ್ಲಿರುವ ಅಲ್ಟ್ರಾಮೋಡರ್ನ್ ಬಂದರು ಭಾರತದ ಆರ್ಥಿಕತೆಯನ್ನು ಉತ್ತೇಜಿಸುತ್ತದೆ ಎಂದು ಅದಾನಿ ಗ್ರೂಪ್ ಹೇಳಿದೆ. ಇದರ ಸ್ಥಳವು ಕಾರ್ಯತಂತ್ರದ ಪ್ರಾಮುಖ್ಯತೆಯನ್ನು ಹೊಂದಿದೆ ಎಂದು ಯೋಜನೆಯ ಬೆಂಬಲಿಗರು ಹೇಳಿಕೊಂಡಿದ್ದಾರೆ. ಟ್ರಾನ್ಸ್‌ಶಿಪ್‌ಮೆಂಟ್ ಟ್ರಾಫಿಕ್‌ನ ಪಾಲುಗಳಿಗಾಗಿ ಈ ಬಂದರು ಕೊಲಂಬೊ, ಸಿಂಗಾಪುರ ಮತ್ತು ದುಬೈಗಳೊಂದಿಗೆ ಸ್ಪರ್ಧಿಸುವ ನಿರೀಕ್ಷೆಯಿದೆ.

ವಿಝಿಞಂ ಇಂಟರ್ನ್ಯಾಷನಲ್ ಸೀಪೋರ್ಟ್ ವೆಬ್‌ಸೈಟ್‌ನ ಪ್ರಕಾರ, ಬಂದರಿನ ಅನುಕೂಲಗಳು ಅಂದರೆ ಕರಾವಳಿಯಿಂದ ಒಂದು ನಾಟಿಕಲ್ ಮೈಲಿ ಒಳಗೆ 20 ಮೀ ಬಾಹ್ಯರೇಖೆಯ ಲಭ್ಯತೆ, ಕರಾವಳಿಯುದ್ದಕ್ಕೂ ಕನಿಷ್ಠ ಸಮುದ್ರ ದಿಕ್ಚ್ಯುತಿ(ದಡಕ್ಕೆ ಸಮಾನಾಂತರವಾಗಿರುವ ಕೆಸರುಗಳ ಚಲನೆ), ಅಷ್ಟೇನೂ ನಿರ್ವಹಣೆ ಅಗತ್ಯವಿಲ್ಲ, ರಾಷ್ಟ್ರೀಯ/ಪ್ರಾದೇಶಿಕ ರಸ್ತೆ, ರೈಲು ನೆಟ್ ವರ್ಕ್ ಲಿಂಕ್‌ಗಳು, ಮತ್ತು ಅಂತರಾಷ್ಟ್ರೀಯ ಹಡಗು ಮಾರ್ಗಗಳ ಸಾಮೀಪ್ಯ ಈ ಬಂದರಿಗೆ ಇದೆ.

ಮೀನುಗಾರರು ಪ್ರತಿಭಟನೆ ನಡೆಸುತ್ತಿರುವುದೇಕೆ?

ಕಳೆದ ನಾಲ್ಕು ತಿಂಗಳಿನಿಂದ ಮೀನುಗಾರರು ಯೋಜನೆಯ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ, ಇದರ ನಿರ್ಮಾಣದಿಂದ ಭಾರಿ ಸಮುದ್ರ ಕೊರೆತ ಉಂಟಾಗುತ್ತಿದೆ, ತಮ್ಮ ಜೀವನೋಪಾಯ ಮತ್ತು ವಸತಿಗಳನ್ನು ಕಸಿದುಕೊಳ್ಳುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಪರಿಣಾಮಗಳ ಬಗ್ಗೆ ಅಧ್ಯಯನವನ್ನು ನಡೆಸಬೇಕು ಮತ್ತು ಅಧ್ಯಯನ ವರದಿ ಬರುವವರೆಗೆ ಯೋಜನೆಯನ್ನು ಸ್ಥಗಿತಗೊಳಿಸಬೇಕೆಂದು ಅವರು ಬಯಸಿದ್ದಾರೆ.

ಕೇರಳ ಹೈಕೋರ್ಟಿನ ಆದೇಶದ ನಂತರ ಯೋಜನೆಯ ನಿರ್ಮಾಣವು ಶನಿವಾರ ಪುನರಾರಂಭವಾಗಿದ್ದು ಭಾನುವಾರ ಇಲ್ಲಿ ಹಿಂಸಾಚಾರ ನಡೆದಿದೆ.
ಮೀನುಗಾರ ಸಮುದಾಯವು ಇತರ ಆರು ಬೇಡಿಕೆಗಳನ್ನು ಮುಂದಿಟ್ಟಿದೆ: ಅವುಗಳೆಂದರೆ

(i) ಸಮುದ್ರ ಕೊರೆತದಿಂದ ಮನೆ ಕಳೆದುಕೊಂಡ ಕುಟುಂಬಗಳಿಗೆ ಪುನರ್ವಸತಿ

(ii) ಕರಾವಳಿ ಸವೆತವನ್ನು ತಗ್ಗಿಸಲು ಪರಿಣಾಮಕಾರಿ ಕ್ರಮಗಳು

(iii) ಹವಾಮಾನ ಎಚ್ಚರಿಕೆ ನೀಡಿದ ದಿನಗಳಲ್ಲಿ ಮೀನುಗಾರರಿಗೆ ಆರ್ಥಿಕ ನೆರವು

( iv) ಮೀನುಗಾರಿಕೆ ಅಪಘಾತಗಳಲ್ಲಿ ಪ್ರಾಣ ಕಳೆದುಕೊಳ್ಳುವವರ ಕುಟುಂಬಗಳಿಗೆ ಪರಿಹಾರ

(v) ಸಬ್ಸಿಡಿ ಸೀಮೆಎಣ್ಣೆ

(vi) ತಿರುವನಂತಪುರಂ ಜಿಲ್ಲೆಯ ಅಂಜ್ ತೆಂಙು ಮುತಲಪ್ಪೋಳಿ ಮೀನುಗಾರಿಕಾ ಬಂದರನ್ನು ಹೂಳೆತ್ತುವ ಕಾರ್ಯವಿಧಾನ

ಈ ಯೋಜನೆಯಿಂದಾಗಿ ಮೀನುಗಾರರು ಮೀನು ಹಿಡಿಯಲು ಸಮುದ್ರದ ಆಳಕ್ಕೆ ಹೋಗಬೇಕಾಗಿದ್ದು, ಇಂಧನ ವೆಚ್ಚದ ಹೊರೆ ಹೆಚ್ಚುತ್ತಿದೆ ಎಂದು ಆರೋಪಿಸಿ ಸೀಮೆಎಣ್ಣೆ ಸಬ್ಸಿಡಿಗೆ ಬೇಡಿಕೆ ಇಡಲಾಗಿದೆ.
ಸೀಮೆಎಣ್ಣೆ ಸಬ್ಸಿಡಿ ಮತ್ತು ಬಂದರು ನಿರ್ಮಾಣವನ್ನು ಸ್ಥಗಿತಗೊಳಿಸುವುದನ್ನು ಹೊರತುಪಡಿಸಿ ಎಲ್ಲಾ ಬೇಡಿಕೆಗಳನ್ನು ಸರ್ಕಾರ ಒಪ್ಪಿಕೊಂಡಿದೆ.

ಪ್ರತಿಭಟನೆಗಳಿಗೆ ಬೆಂಬಲ ನೀಡುತ್ತಿರುವವರು ಯಾರು?

ಮೀನುಗಾರರ ಪ್ರತಿಭಟನೆಗೆ ಲ್ಯಾಟಿನ್ ಕ್ಯಾಥೋಲಿಕ್ ಚರ್ಚ್ ಬೆಂಬಲ ನೀಡುತ್ತಿದ್ದರೆ, ಸ್ಥಳೀಯ ಜನರ ಕ್ರಿಯಾ ಸಮಿತಿಯು ಯೋಜನೆಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಒತ್ತಾಯಿಸುತ್ತಿದೆ. ಈ ಸಮಿತಿಯು ಮೇಲ್ಜಾತಿಯ ನಾಯರ್ ಸರ್ವಿಸ್ ಸೊಸೈಟಿಯಂತಹ ವಿವಿಧ ಹಿಂದೂ ಸಮುದಾಯದ ಸಂಘಟನೆಗಳ ಬೆಂಬಲವನ್ನು ಹೊಂದಿದೆ. ಶ್ರೀ ನಾರಾಯಣ ಧರ್ಮ ಪರಿಪಾಲನಾ ಯೋಗಂನಂತಹ OBC ಹಿಂದೂ ಸಂಘಟನೆಯ ಜೊತೆಗೆ, ದಕ್ಷಿಣ ಕೇರಳದಲ್ಲಿ ನಾಡಾರ್ ಸಮುದಾಯದಲ್ಲಿ ಗಣನೀಯ ಅಸ್ತಿತ್ವವನ್ನು ಹೊಂದಿರುವ ವೈಕುಂಡ ಸ್ವಾಮಿ ಧರ್ಮ ಪ್ರಚಾರಣವೂ ಬೆಂಬಲ ನೀಡಿದೆ.

ಬಂದರು ಯೋಜನೆಗೆ ವಿರೋಧ ಪಕ್ಷ ಬಿಜೆಪಿ ಮತ್ತು ಆಡಳಿತಾರೂಡ ಸಿಪಿಐ(ಎಂ) ಸಾಮಾನ್ಯ ಕಾರಣ ನೀಡಿ ಪ್ರತಿಭಟನಾಕಾರರನ್ನು ಟೀಕಿಸಿದ್ದಾರೆ.ಸಿಪಿಐ(ಎಂ) ಹಿರಿಯ ನಾಯಕ ಮತ್ತು ರಾಜ್ಯ ಶಿಕ್ಷಣ ಸಚಿವ ವಿ ಶಿವನ್‌ಕುಟ್ಟಿ ಅವರು ಲ್ಯಾಟಿನ್ ಕ್ಯಾಥೋಲಿಕ್ ಚರ್ಚ್ ಗಲಭೆ ಸೃಷ್ಟಿಸುವ ಪ್ರಯತ್ನ ನಡೆಸುತ್ತಿದೆ ಎಂದು ದೂಷಿಸಿದ್ದಾರೆ. ರಾಜ್ಯದ ಎಡಪರ ಮಾಧ್ಯಮಗಳೂ ಮೀನುಗಾರರ ಆಂದೋಲನದ ಹಿಂದೆ ವಿದೇಶಿ ನಿಧಿಯ ಕೈವಾಡವಿದೆ ಎಂದು ಆರೋಪಿಸಿದ್ದವು.

ತಮಿಳುನಾಡಿನ ಕನ್ಯಾಕುಮಾರಿ ಬಳಿ ಕೂಡಂಕುಳಂ ಪರಮಾಣು ಸ್ಥಾವರದ ವಿರುದ್ಧ ಪ್ರತಿಭಟನೆಯನ್ನು ಆಯೋಜಿಸಿದ್ದ ಶಕ್ತಿಗಳೇ ವಿಝಿಞಂ ಪ್ರತಿಭಟನೆಯ ಹಿಂದೆ ಇದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ ಸುರೇಂದ್ರನ್ ಹೇಳಿದ್ದಾರೆ. ಕೂಡಂಕುಳಂ ಪ್ರತಿಭಟನೆಯ ನೇತೃತ್ವವನ್ನು ಲ್ಯಾಟಿನ್ ಕ್ಯಾಥೋಲಿಕ್ ಡಯಾಸಿಸ್ ಆಫ್ ಟುಟಿಕೋರಿನ್ ವಹಿಸಿತ್ತು.

TV9 Kannada


Leave a Reply

Your email address will not be published. Required fields are marked *