ಬೆಂಗಳೂರು: ಕೇರಳ ಗಡಿ ಭಾಗದ ಜಿಲ್ಲೆಗಳಲ್ಲಿ ಡೆಲ್ಟಾ ಪ್ಲಸ್​ ತಳಿಯ ಕೊರೊನಾ ಸೋಂಕಿನ ಬಗ್ಗೆ ಹೆಚ್ಚು ಎಚ್ಚರಿಕೆಯಿಂದ ಇರಬೇಕು ಅಂತ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಹೇಳಿದ್ದಾರೆ.

ಇಂದು ನಗರದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 2 ಡೆಲ್ಟಾ ಪ್ಲಸ್​ ಕೊರೊನಾ ಸೋಂಕು ಪ್ರಕರಣಗಳು ಅಧಿಕೃತವಾಗಿ ವರದಿಯಾಗಿವೆ. ಒಂದು ಮೈಸೂರು, ಇನ್ನೊಂದು ಬೆಂಗಳೂರಿನಲ್ಲಿ ಹಿರಿಯ ನಾಗರೀಕರಿಗೆ ಸೋಂಕು ಬಂದಿದೆ. ಅವರ ಮೇಲೆ ತೀವ್ರ ನಿಗಾ ಇಡಲಾಗಿದೆ. ಇವರ ಪ್ರಾಥಮಿಕ ಸಂಪರ್ಕಕ್ಕೊಳಗಾದವರನ್ನು ಪರೀಕ್ಷೆ ಮಾಡಲಾಗಿದೆ, ಇವತ್ತು ರಿಪೋರ್ಟ್ ಬರಬಹುದು ಎಂದರು.

ಡೆಲ್ಟಾ ಪ್ಲಸ್​ ಮತ್ತು ಡೆಲ್ಟಾ ಒಂದೇ ಗುಣಲಕ್ಷಣ ಇದೆ. ಆದ್ರೆ ಚಿಕಿತ್ಸೆ ವಿಧಾನ ಸ್ವಲ್ಪ ಬೇರೆ. ಯಾರೂ ಕೂಡ ಹೆಚ್ಚು ಆತಂಕ ಪಡಬಾರದು. ಜನರು ಲಸಿಕೆ ಹೆಚ್ಚು ಪಡೆಯಬೇಕು. ಲಸಿಕೆ ಈ ವೈರಸ್​ಗೂ ಕೆಲಸ ಮಾಡಲಿದೆ. ಹೀಗಾಗಿ ಲಸಿಕೆ ಪಡೆಯಬೇಕು ಎಂದು ಹೇಳಿದ್ರು.

ಈಗಾಗಲೇ ಜಿನೋಮ್ ಟೆಸ್ಟ್​ಗೆ 2 ಸಾವಿರಕ್ಕೂ ಹೆಚ್ಚು ಸ್ಯಾಂಪಲ್ ಕಳಿಸಲಾಗಿದೆ. ಇದನ್ನ ಮತ್ತಷ್ಟು ಹೆಚ್ಚಳ ಮಾಡ್ತೀವಿ. ಮತ್ತಷ್ಟು ಹೆಚ್ಚು ಸ್ಯಾಂಪಲ್ ಕಳಿಸೋ ಕೆಲಸ ಮಾಡ್ತೀವಿ. ಕೇರಳದಲ್ಲಿ ಸೋಂಕು ಹೆಚ್ಚಿದೆ. ಇದರ ಬಗ್ಗೆ ನಮಗೆ ಸ್ವಲ್ಪ ಆತಂಕ ಇದೆ. ಶೇಕಡ 4-5ರಷ್ಟು ಅಲ್ಲಿ ಈ ಕೇಸ್ ಬರ್ತಿದೆ. ಇದು ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ ಕೇರಳ ಗಡಿಭಾಗದ ಜಿಲ್ಲೆಗಳು ಹೆಚ್ಚು ಎಚ್ಚರಿಕೆಯಿಂದ ಇರಬೇಕು. ಗಡಿ ಭಾಗದ ಜಿಲ್ಲೆಗಳ ಅಧಿಕಾರಿಗಳಿಗೆ ಎಚ್ಚರ ವಹಿಸಲು ಸೂಚನೆ ನೀಡಲಾಗಿದೆ ಎಂದು ಸುಧಾಕರ್ ತಿಳಿಸಿದ್ರು.

The post ಕೇರಳ ಗಡಿಭಾಗದ ಜಿಲ್ಲೆಗಳು ಡೆಲ್ಟಾ ಪ್ಲಸ್​ ಬಗ್ಗೆ ಹೆಚ್ಚು ಎಚ್ಚರಿಕೆ ವಹಿಸಬೇಕು -ಸುಧಾಕರ್ appeared first on News First Kannada.

Source: newsfirstlive.com

Source link