ಬೆಂಗಳೂರು: ಕೇಳಿದಷ್ಟು ಹಣ ಕೊಡಲಿಲ್ಲ ಅಂತ ಖಾಸಗಿ ಆ್ಯಂಬುಲೆನ್ಸ್​ ಡ್ರೈವರ್ ಒಬ್ಬ ಕೋವಿಡ್ ಮೃತದೇಹವನ್ನ ಚಿತಾಗಾರದ ಮುಂಭಾಗದ ರಸ್ತೆಯಲ್ಲೇ ಬಿಟ್ಟು ಹೋದ ದಾರುಣ ಘಟನೆ ಬೆಂಗಳೂರಲ್ಲಿ ನಡೆದಿದೆ.

ಬಡ ಕುಟುಂಬದ ವ್ಯಕ್ತಿಯೊಬ್ಬರು ಕೊರೊನಾ ಸೋಂಕಿನಿಂದಾಗಿ ನಗರದ ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದರು. ಇವರ ಅಂತ್ಯಕ್ರಿಯೆಗಾಗಿ ಮೃತದೇಹವನ್ನ ಹೆಬ್ಬಾಳದ ಚಿತಾಗಾರಕ್ಕೆ ತಂದುಕೊಡುವಂತೆ ಆ್ಯಂಬುಲೆನ್ಸ್​ ಡ್ರೈವರ್​ಗೆ ಮನವಿ ಮಾಡಿಕೊಂಡಿದ್ದರು. ಆದರೆ ಆ್ಯಂಬುಲೆನ್ಸ್ ಡ್ರೈವರ್​ ಬರೋಬ್ಬರಿ 10 ಸಾವಿರ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾನೆ.

ಆದರೆ ಮೃತ ವ್ಯಕ್ತಿಯ ಪತ್ನಿ ಬಳಿ 10 ಸಾವಿರ ಇಲ್ಲದ್ದಕ್ಕೆ 3 ಸಾವಿರ ಹಣ ನೀಡಿದ್ದಾರೆ. ಕೇಳಿದಷ್ಟೂ ಹಣ ಕೊಡಲಿಲ್ಲ ಅಂತ ಚಿತಾಗಾರದ ಮುಂದಿನ ರಸ್ತೆಯಲ್ಲಿ ಶವವನ್ನ ಇಟ್ಟು ಖಾಸಗಿ ಆ್ಯಂಬುಲೆನ್ಸ್ ಡ್ರೈವರ್ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ ಅನ್ನೋ ಆರೋಪ ಕೇಳಿಬಂದಿದೆ.

ಪ್ರಕರಣ ಸಂಬಂಧ ಹೆಬ್ಬಾಳ ಪೊಲೀಸರು ಚಾಲಕನ ಬಗ್ಗೆ ಮಾಹಿತಿ ಕಲೆಹಾಕಿದ್ದಾರೆ. ಅಮಾನವೀಯತೆ ಮರೆತು ವಿಕೃತಿ ಮೆರೆತ ಆ್ಯಂಬುಲೆನ್ಸ್ ಡ್ರೈವರ್​ಗಾಗಿ ತಲಾಶ್ ಆರಂಭಿಸಿದ್ದಾರೆ.

The post ಕೇಳಿದಷ್ಟು ಹಣ ಕೊಡ್ಲಿಲ್ಲವೆಂದು ರಸ್ತೆ ಬದಿಯಲ್ಲೇ ಶವ ಇಳಿಸಿಹೋದ ಆ್ಯಂಬುಲೆನ್ಸ್​ ಡ್ರೈವರ್ appeared first on News First Kannada.

Source: newsfirstlive.com

Source link