ನವದೆಹಲಿ: ನಡೆಯಬಾರದ ಘಟನೆ ನಡೆದುಹೋಗಿದೆ. 4 ದಶಕಗಳ ಕಾಲ ದೇಶವನ್ನು ಶತ್ರುಗಳಿಂದ ರಕ್ಷಿಸಿದ್ದ ಕೆಚ್ಚೆದೆಯ ಸೇನಾ ಮುಖ್ಯಸ್ಥ ವಿಧಿಯಾಟಕ್ಕೆ ಬಲಿಯಾಗಿದ್ದಾರೆ. 14 ಜನರ ಪೈಕಿ ಬಿಪಿನ್ ರಾವತ್ ಹಾಗೂ ಪತ್ನಿ ಸೇರಿ 13 ಜನರು ಮೃತಪಟ್ಟರೆ, ಅದೃಷ್ಟವಶಾತ್ ಗ್ರೂಪ್ ಕ್ಯಾಪ್ಟನ್ ಒಬ್ಬರು ಬದುಕುಳಿದಿದ್ದಾರೆ.
ಭಾರತದ ಪಾಲಿಗೆ ಕರಾಳ ಮಂಗಳವಾರ.. ಭಾರತೀಯ ಸೇನೆಗೆ ಕಾಲಕಾಲಕ್ಕೂ ತುಂಬಲಾರದ ನಷ್ಟ. ದೇಶದ ಮೊಟ್ಟಮೊದಲ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಬಿಪಿನ್ ರಾವತ್ ಸೇನೆಯ ಮೂರೂ ವಿಭಾಗಕ್ಕೆ ಮಾರ್ಗದರ್ಶಕರಂತಿದ್ದವರು. ಆದ್ರೆ ವಿಧಿಯ ಕ್ರೂರ ಆಟಕ್ಕೆ ರಾವತ್ ಬಲಿಯಾಗಿದ್ದಾರೆ. ದೇಶಕ್ಕೆ ದೇಶವೇ ಆಘಾತಕ್ಕೊಳಗಾಗಿದೆ.
ಸಿಡಿಎಸ್ ಬಿಪಿನ್ ರಾವತ್ ಬಲಿ ಪಡೆದ ಹೆಲಿಕಾಪ್ಟರ್ ದುರಂತ
ಘೋರ ದುರ್ಘಟನೆಯಲ್ಲಿ ರಾವತ್ ದಂಪತಿ ಸಜೀವ ದಹನ
ಹೆಲಿಕಾಪ್ಟರ್ನ ಅವಶೇಷಗಳು ಹೊತ್ತಿ ಉರೀತಿದ್ರೂ ಒಂದು ಕ್ಷಣ ನಂಬಲು ಅಸಾಧ್ಯವಾದಂಥಾ ದುರ್ಘಟನೆ. ದೇಶ ಸೇವೆಗಾಗಿಯೇ ತಮ್ಮ ಬದುಕನ್ನು ಮುಡಿಪಾಗಿಟ್ಟಿದ್ದ ಬಿಪಿನ್ ರಾವತ್ ತಮ್ಮ ಪತ್ನಿ ಜೊತೆಗೇ ದುರಂತ ಅಂತ್ಯ ಕಾಣ್ತಾರೆ ಅಂತಾ ಯಾರೂ ಊಹಿಸಿರಲಿಲ್ಲ. ಸೈನಿಕ ಶಾಲೆಯಲ್ಲಿ ಉಪನ್ಯಾಸ ಕೊಡೋದಕ್ಕೆ ಹೊರಟಿದ್ದ ಬಿಪಿನ್ ರಾವತ್ ಇದ್ದ ಹೆಲಿಕಾಪ್ಟರ್ ತಮಿಳುನಾಡಿನ ಕೂನೂರಿನ ದಟ್ಟಾರಣ್ಯದ ಬಳಿ ತಲುಪ್ತಿದ್ದಂತೆ ಅದೇನಾಯ್ತೋ ಏನೋ ನೋಡನೋಡ್ತಿದ್ದಂತೆ ಬೆಂಕಿಯುಂಡೆಯಂತಾಗಿ ಕಾಡಿನ ಮಧ್ಯೆ ಭೂಮಿಗೆ ಅಪ್ಪಳಿಸಿದೆ.
ಹೆಲಿಕಾಪ್ಟರ್ನಲ್ಲಿದ್ದ 13 ಮಂದಿ ಕೊನೆಯುಸಿರು, ಏಕೈಕ ಸೈನಿಕ ಬಚಾವ್
ವಾಯುಸೇನೆಗೆ ಸೇರಿದ್ದ Mi-17V-5 ಹೆಲಿಕಾಪ್ಟರ್ ತಮಿಳುನಾಡಿನ ಸೂಲೂರು ಏರ್ಬೇಸ್ನಿಂದ ವೆಲ್ಲಿಂಗ್ಟನ್ಗೆ ತೆರಳಿತ್ತು. ಆದ್ರೆ ಟೇಕಾಫ್ ಆಗಿ ಕೆಲವೇ ಹೊತ್ತಲ್ಲಿ ಕೂನೂರು ಅರಣ್ಯದಲ್ಲಿ ಪತನವಾಗಿದೆ. ಇನ್ನೇನು 10 ನಿಮಿಷಗಳ ಪ್ರಯಾಣ ಬಾಕಿ ಇರೋವಾಗಲೇ ದಾರಿ ಮಧ್ಯೆಯೇ ಘೋರ ದುರಂತ ಸಂಭವಿಸಿದೆ. ಏನಾಯ್ತು, ಹೇಗಾಯ್ತು ಅಂತಾ ಯೋಚನೆ ಮಾಡೋ ಮುನ್ನವೇ ನೆಲಕ್ಕಪ್ಪಿಳಿಸಿದ್ದ ಹೆಲಿಕಾಪ್ಟರ್ ಅಕ್ಷರಶಃ ಬೆಂಕಿಯುಂಡೆಯಾಗಿತ್ತು. ಹೆಲಿಕಾಪ್ಟರ್ನಲ್ಲಿದ್ದ 14 ಜನ ಪ್ರಾಣ ಉಳಿಸಿಕೊಳ್ಳಲೂ ಅವಕಾಶವಿಲ್ಲದಂತೆ ಅಗ್ನಿ ಕುಂಡದಲ್ಲಿ ಬೆಂದುಹೋದ್ರು. ಅದೃಷ್ಟವಶಾತ್ ಹೆಲಿಕಾಪ್ಟರ್ನಲ್ಲಿದ್ದ ಗ್ರೂಪ್ ಕಮಾಂಡರ್ ವರುಣ್ ಸಿಂಗ್ ಪ್ರಾಣಾಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೀತಿದ್ದಾರೆ.
ಸೇನಾ ಹೆಲಿಕಾಪ್ಟರ್ನಲ್ಲಿದ್ದವರು
- ಬಿಪಿನ್ ರಾವತ್, ಸಿಡಿಎಸ್
- ಮಧುಲಿಕಾ ರಾವತ್, ಬಿಪಿನ್ ರಾವತ್ ಪತ್ನಿ
- ಎಲ್.ಎಸ್. ಲಿಡ್ಡರ್, ಬ್ರಿಗೇಡಿಯರ್
- ಹರ್ಜಿಂದರ್ ಸಿಂಗ್, ಲೆಫ್ಟಿನೆಂಟ್ ಕರ್ನಲ್
- ಗುರ್ಸೇವಕ್ ಸಿಂಗ್, ನಾಯಕ್
- ಜಿತೇಂದ್ರ ಕುಮಾರ್, ನಾಯಕ್
- ವಿವೇಕ್ ಕುಮಾರ್, ಲ್ಯಾನ್ಸ್ನಾಯಕ್
- ಬಿ.ಸಾಯಿ ತೇಜ, ಲ್ಯಾನ್ಸ್ನಾಯಕ್
- ಸತ್ಪಾಲ್, ಹವಾಲ್ದಾರ್
- ಪಿಎಸ್. ಚೌಹ್ವಾಣ್, ವಿಂಗ್ ಕಮಾಂಡರ್
- ಪ್ರದೀಪ್, ಜೆಡಬ್ಲ್ಯೂಒ
- ಕೆ.ಸಿಂಗ್, ಸ್ಕ್ವಾಡ್ರನ್ ಲೀಡರ್
- ದಾಸ್, ಜೆಡಬ್ಲ್ಯೂಒ
- ವರುಣ್ ಸಿಂಗ್, ಗ್ರೂಪ್ ಕ್ಯಾಪ್ಟನ್ (ಚಿಕಿತ್ಸೆ ಪಡೆಯುತ್ತಿದ್ದಾರೆ)
ಆದ್ರೆ ವಿಧಿಯ ಕ್ರೂರ ಆಟಕ್ಕೆ 14 ಜನರ ಪೈಕಿ 13 ಮಂದಿ ಕೊನೆಯುಸಿರೆಳೆದಿದ್ದು, ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಶೇಕಡಾ 80ರಷ್ಟು ಸುಟ್ಟ ಗಾಯಗಳೊಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ನಲ್ಲಿ ದುರಂತವೊಂದಕ್ಕೆ ದೇಶ ಸಾಕ್ಷಿಯಾಗಿ ನಿಂತಿದೆ. ಸೇನಾ ಮುಖ್ಯಸ್ಥರ ಅನಿರೀಕ್ಷಿತ ನಿಧನ ಸೇನೆ ಹಾಗೂ ದೇಶದ ಜನತೆಗೆ ಅರಗಿಸಿಕೊಳ್ಳಲಾಗದಷ್ಟು ನೋವನ್ನು ಕೊಟ್ಟಿದೆ.