ಪ್ರೀತಿಯ ಸಂಬಂಧ ಇನ್ನೇನು ಬ್ರೇಕ್‌ ಅಪ್‌ ಹಂತ ತಲುಪುತ್ತೆ ಅನ್ನುವಾಗ ಪ್ರೇಮಿಗಳ ಚಟಪಡಿಕೆ ನೋಡಿದ್ದೇವೆ. ಆದರೆ ಅದೊಂದು ಜೋಡಿ ತಮ್ಮ ಪ್ರೇಮ ಸಂಬಂಧ ಉಳಿಸಿಕೊಳ್ಳಲು ಮಾಡಿದ ಕೊನೆಯ ಕಸರತ್ತು ವಿಭಿನ್ನವಾಗಿತ್ತು. ಇಡೀ ವಿಶ್ವದ ಗಮನವನ್ನೇ ಸೆಳೆದಿತ್ತು. ಅಷ್ಟಕ್ಕೂ ಅವರ ಪ್ರೀತಿ ಏನಾಯ್ತು..? ಇಲ್ಲಿದೆ ಓದಿ..

ಪ್ರೇಮಿಗಳೇ ಹಾಗೇ, ಪ್ರೀತಿ ಗಾಢವಾಗಿದ್ದಾಗ ಅವರಿಗೆ ಪ್ರಪಂಚವೇ ಕಾಣದಂತೆ ನಲಿ ನಲಿಯುತಾ ಜೊತೆಯಾಗಿ ಇರ್ತಾರೆ. ಅದೇ ಸಂಬಂಧದಲ್ಲಿ ಸಣ್ಣ ಬಿರುಕು ಆರಂಭವಾಗಿ ಬ್ರೇಕ್‌ ಅಪ್‌ ಹಂತಕ್ಕೆ ಹೋಯ್ತು ಅಂದ್ರೆ ಕಥೆ ಮುಗಿಯಿತು. ಆಕಾಶವೇ ಮೈಮೇಲೆ ಬಿದ್ದವರ ರೀತಿ ವಿಲವಿಲ ಒದ್ದಾಡ್ತಾರೆ. ಇರೋ ಬರೋ ದೇವರಿಗೆಲ್ಲ ಹರಕೆ ಹೊರುತ್ತಾರೆ. ದೇವರೇ ಕಾಪಾಡಪ್ಪ ಅಂತ ಪರಿಪರಿಯಾಗಿ ಬೇಡಿಕೊಳ್ತಾರೆ. ಯಾರಿಗೂ ಕಾಣದಂತೆ ಒಂದು ಮೂಲೆಯಲ್ಲಿ ಕುಳಿತು ಕಣ್ಣೀರು ಸುರಿಸುತ್ತಾರೆ. ಅವರ ವಿರಹ ವೇದನೆ ನೋಡಲಾಗದು. ಆದರೆ, ಈಗ ನಾವು ಹೇಳ್ತಾ ಇರೋ ಪ್ರೇಮಿಗಳ ಸಾಹಸವೇ ವಿಭಿನ್ನ, ಬ್ರೇಕ್‌ ಅಪ್‌ ಆಗೋದನ್ನು ಉಳಿಸಿಕೊಳ್ಳಲು ಅವರು ಇಟ್ಟ ಹೆಜ್ಜೆಯೇ ರೋಮಾಂಚನ. ಈ ಸ್ಟೋರಿ ನೋಡಿದ್ರೆ ಹೀಗೂ ಬದುಕಲು ಸಾಧ್ಯವಾ ಅನಿಸಿಬಿಡುತ್ತೆ. ಅಷ್ಟಕ್ಕೂ ಆ ಪ್ರೇಮಿಗಳ ಕಥೆ ಏನು ಅಂತ ಎಳೆ ಎಳೆಯಾಗಿ ಹೇಳ್ತೀವಿ ಕೇಳಿ.

ಗಾಢವಾದ ಪ್ರೀತಿಯಲ್ಲಿ ದಿಢೀರ್‌ ಬಿರುಕು
ಬ್ರೇಕ್‌ ಅಪ್‌ ಮಾಡಿಕೊಳ್ಳಲು ಒಪ್ಪದ ಮನಸ್ಸು
ರೋಮಿಯೋ-ಜ್ಯೂಲಿಯಟ್‌, ಸಹಜಾನ್‌-ಮಮ್ತಾಜ್‌ ಅವರಂತಹ ಪ್ರೇಮ ಕಥೆಗಳನ್ನು ಅಲ್ಲೋ ಇಲ್ಲೋ ಕೇಳಿರುತ್ತೀರಿ. ಆದ್ರೆ, ನಾವು ಹೇಳ್ತಾ ಇರೋ ಉಕ್ರೇನ್‌ನ ಅಲೆಕ್ಸಾಂಡರ್‌ ಕುಡ್ಲೆ, ವಿಕ್ಟೋರಿಯಾ ಪುಸ್ಟೊವಿಟೋವಾ ಎಂಬ ಪ್ರೇಮಿಗಳ ಕಥೆ ನೀವು ಕೇಳಿರಲು ಸಾಧ್ಯವೇ ಇಲ್ಲ. ಆಧುನಿಕ ಪ್ರೇಮಿಗಳಂತೆ ಈ ಜೋಡಿಯ ದೀರ್ಘಕಾಲದ ಪ್ರೀತಿಯಲ್ಲಿ ನೋವಿತ್ತು, ನಲಿವಿತ್ತು. ಪಾರ್ಕ್, ಸಿನಿಮಾ, ಪ್ರವಾಸಿ ಸ್ಥಳ, ಶಾಪಿಂಗ್‌ ಮಾಲ್‌ ಅಂತ ಈ ಜೋಡಿ ಸುತ್ತಾಡದ ಸ್ಥಳ ಇರಲಿಲ್ಲ. ಎಲ್ಲಾ ಕಡೆ ಕೈಕೈ ಹಿಡಿದು ಅಮರ ಪ್ರೇಮಗಳ ರೀತಿ ಸುತ್ತಾಡಿದ್ರು. ಮುಂದೊಂದು ದಿನ ತಮ್ಮ ನಡುವೆ ಬಿರುಕು ಮೂಡುತ್ತೆ ಬ್ರೇಕ್‌ ಅಪ್‌ ಹಂತಕ್ಕೆ ಹೋಗುತ್ತೆ ಅಂತ ಅವರೆಂದೂ ಅಂದುಕೊಂಡಿರಲಿಲ್ಲ. ಆದ್ರೆ, ಎಷ್ಟು ದಿನ ಅಂತ ಸಂತೋಷದಲ್ಲಿ ತೇಲಾಡಲು ಸಾಧ್ಯ, ಎಷ್ಟು ದಿನ ಅಂತ ಸಂಬಂಧವನ್ನು ಬಿಗಿಯಾಗಿ ಹಿಡಿದುಕೊಳ್ಳಲು ಸಾಧ್ಯ ಹೇಳಿ. ಅಂತೂ ಆ ಗಳಿಗೆ ಬಂದೇ ಬಿಡ್ತು. ಇಬ್ಬರ ನಡುವಿನ ಮುನಿಸು ತಾರಕಕ್ಕೇರಿತು. ಇನ್ನೇನು ಬ್ರೇಕ್‌ ಅಪ್‌ ಆಗೇ ಬಿಡ್ತು ಅನ್ನೋ ಹಂತಕ್ಕೂ ತಲುಪಿ ಬಿಡುತ್ತೆ. ಆದ್ರೆ, ಬೇರೆ ಆಗಲು ಮಾತ್ರ ಇಬ್ಬರ ಮನಸ್ಸು ಒಪ್ಪುತ್ತಿರಲಿಲ್ಲ. ಯಾಕೆಂದ್ರೆ ಅದಾಗಲೇ ಅಷ್ಟೊಂದು ಗಾಢವಾದ ಪ್ರೀತಿ ಅವರನ್ನು ಆವರಿಸಿ ಬಿಟ್ಟಿತ್ತು. ಒಬ್ಬರನ್ನು ಬಿಟ್ಟು ಒಬ್ಬರು ಬದುಕಲಾರೆವು ಅನ್ನುವ ಹಂತ ತಲುಪಿ ಬಿಟ್ಟಿತ್ತು. ಇಂತಹ ಸಂದರ್ಭದಲ್ಲಿ ಪ್ರೀತಿ ಉಳಿಸಿಕೊಳ್ಳಲು ಮಾಡಿದ ಕೊನೆಯ ಪ್ರಯತ್ನವೇ ರೋಮಾಂಚನ. ಅದೇನದು ಅನ್ನೋದನ್ನು ಹೇಳ್ತೀವಿ ನೋಡಿ.

ಪ್ರೇಮಿಗಳ ದಿನದಂದೇ ಕೈಕೋಳ ತೊಟ್ಟ ಜೋಡಿ
ಸಂಬಂಧ ಉಳಿಸಿಕೊಳ್ಳಲು ದಾರಿಯೇ ಕಾಣದಾಗಿತ್ತು
ಹೌದು, ಹೇಗಾದ್ರೂ ಮಾಡಿ ತಮ್ಮ ಪ್ರೀತಿಯ ಸಂಬಂಧ ಉಳಿಸಿಕೊಳ್ಳಬೇಕು. ತಾವು ಮೊದಲಿನಂತೆ ನಲಿಯುತ್ತಾ, ಕುಣಿದಾಡುತ್ತಾ ಇರಬೇಕು ಅನ್ನೋದು ಈ ಜೋಡಿಯದ್ದಾಗಿತ್ತು. ಏನೇನೋ ಯೋಚನೆ ಮಾಡಿ ಕೈ ಬಿಡಲಾಗಿತ್ತು. ಅಂತಿಮವಾಗಿ ಇಬ್ಬರು ಕೈಕೋಳ ತೊಟ್ಟು ಜೊತೆ ಜೊತೆಯಾಗಿ ಜೀವಿಸಬೇಕು. ಹಾಗೇ ಮಾಡಿದ್ರೆ ಬಿರುಕು ಬಿಟ್ಟಿರೋ ತಮ್ಮ ಸಂಬಂಧ ಗಟ್ಟಿಯಾಗುತ್ತೆ ಅಂತ ನಿರ್ಧರಿಸುತ್ತಾರೆ. ಪ್ರೇಮಿಗಳ ದಿನವಾದ ಫೆಬ್ರುವರಿ 14 ರಂದೇ ಅದಕ್ಕೆ ಮುಹೂರ್ತ ಇಟ್ಟುಕೊಳ್ತಾರೆ. ಅಂದು, ಅಲೆಕ್ಸಾಂಡರ್‌ ಕುಡ್ಲೆ ಬಲಕೈ, ವಿಕ್ಟೋರಿಯಾಳ ಎಡಗೈ ಸೇರಿ ಕೈಕೋಳ ಹಾಕಿಕೊಳ್ಳಲಾಗುತ್ತೆ.

ಈ ಜೋಡಿ ಕೈಕೋಳ ತೊಟ್ಟಿರುವುದು ಅಂದೇ ವೈರಲ್‌ ಆಗಿ ಬಿಡುತ್ತೆ. ಅದನ್ನು ನೋಡಿ ಎಷ್ಟೋ ಜನ ಮೂಗು ಮುರಿದಿರುತ್ತಾರೆ. ಇದೊಂದು ಹುಚ್ಚಾಟ, ಎಷ್ಟು ದಿನ ಅಂತ ಈ ರೀತಿ ಹುಚ್ಚಾಟ ಸಾಧ್ಯ ಅಂತ ಅದೆಷ್ಟೋ ಮಂದಿ ಅನುಮಾನ ಪಟ್ಟಿರುತ್ತಾರೆ. ಹೆಚ್ಚೆಂದರೆ ಎರಡ್ಮೂರು ದಿನ ಇಟ್ಟುಕೊಳ್ಳಬಹುದು, ಆಮೇಲೆ ಕಿತ್ತಾಟ ಆಗುತ್ತೆ, ಅವರೇ ಸಾಕಪ್ಪ ಸಾಕು ಅಂತ ಬಿಚ್ಚಿಕೊಳ್ತಾರೆ ಅಂತ ಜನ ಆಡಿಕೊಳ್ತಾರೆ. ಆದ್ರೆ, ಆಗಿದ್ದೇ ಬೇರೆ, ಜನರ ನಿರೀಕ್ಷೆಯೇ ಸುಳ್ಳಾಗಿ ಬಿಡುತ್ತೆ. ಪ್ರೇಮಿಗಳಲ್ಲಿ ತಾವು ಹೀಗೆಯೇ ಬಹುಕಾಲ ಇರಬಲ್ಲೆವು ಅಂತ ಅಚಲವಾದ ವಿಶ್ವಾಸ ಇತ್ತು. ಆ ವಿಶ್ವಾಸವೇ ಅವರನ್ನು ಬರೊಬ್ಬರಿ ನಾಲ್ಕು ತಿಂಗಳ ಕಾಲ ಕರೆದುಕೊಂಡು ಹೋಯ್ತು ನೋಡಿ.

ಬರೋಬ್ಬರಿ 123 ದಿನ ಕೈಕೋಳ ತೊಟ್ಟ ಜೋಡಿ
ಎಲ್ಲವೂ ಜೊತೆ ಜೊತೆಯಾಗಿಯೇ ಮಾಡ್ತಾ ಇದ್ರು
ಹೌದು, ಅದು ಅಂತಿಂಥ ನಿರ್ಧಾರವಾಗಿರಲಿಲ್ಲ. ಪರಸ್ಪರ ಇಬ್ಬರು ಕೈಕೋಳ ತೊಟ್ಟು ಒಂದು ಗಂಟೇ ಕೂಡ ಇರಲು ಸಾಧ್ಯವಾಗಲ್ಲ. ಆದ್ರೆ, ಈ ಜೋಡಿ ಇದ್ದದ್ದು ಬರೊಬ್ಬರಿ 123 ದಿನ. ಊಟ ಮಾಡುವುದು, ಬಾತ್‌ ರೂಮ್‌ ಹೋಗುವುದು, ಶಾಪಿಂಗ್‌ ಹೋಗುವುದು, ಸುತ್ತಾಟಕ್ಕೆ ಹೋಗುವುದು… ಹೀಗೇ ಎಲ್ಲವೂ ಜೊತೆ ಜೊತೆಯೇ ಆಗಿತ್ತು. ಇವರನ್ನು ನೋಡಿದವರಿಗೂ ಅಚ್ಚರಿ ಮೇಲೆ ಅಚ್ಚರಿ. ಹೀಗೂ ಬದುಕಲು ಸಾಧ್ಯನಾ ಅಂತ ಅವರನ್ನೇ ಯೋಚನೆಗೆ ಹಚ್ಚಿ ಬಿಟ್ಟಿತ್ತು.

ತಾವು ಪ್ರೀತಿಸುವವರು ಸದಾ ತಮ್ಮ ಜೊತೆಗೆ ಇರಬೇಕು ಅಂತ ಪ್ರೇಮಿಗಳು ಅಂದುಕೊಳ್ಳುವುದೇನೋ ಸಹಜ. ಆದ್ರೆ, ಈ ರೀತಿ ಕೈಕೋಳ ಹಾಕಿಕೊಂಡು ಜೊತೆ ಜೊತೆಯಾಗಿ ಇರಲು ಸಾಧ್ಯ ಆಗುತ್ತಾ ಅನಿಸಿಬಿಡುತ್ತೆ. ಆದ್ರೆ ಈ ಉಕ್ರೇನ್‌ ಜೋಡಿ ಮಾಡಿ ತೋರಿಸಿದೆ. ತಪ್ಪಿ ಹೋಗುತ್ತಿದ್ದ ತಮ್ಮ ಸಂಬಂಧವನ್ನೇ ಕೈಕೋಳದಿಂದ ಸರಿ ಪಡಿಸಿಕೊಳ್ಳಲು ಶ್ರಮಿಸಿದೆ. ಪರಸ್ಪರ ಇರುವಂತಹ ಅನುಮಾನ, ಅಪನಂಬಿಕೆಯನ್ನು ದೂರ ಮಾಡಿಕೊಳ್ಳಲು ಪ್ರಯತ್ನಿಸಿ ಸೋತಿದ್ದಾರೆ.

ಕೈಕೋಳ ತೊಟ್ಟು ಇರಲು ಅದೇಗೆ ಸಾಧ್ಯ ಆಯ್ತು?
ಇಬ್ಬರ ನಡುವೆ ಮುನಿಸು, ಜಗಳ ಉದ್ಭವಿಸಲೇ ಇಲ್ವಾ?
ಪ್ರೇಮಿಗಳು ಅಂದ್ರೆ ಹಾಗೇ, ಅವರ ನಡುವೆ ಒಂದಷ್ಟು ಮುನಿಸು, ಒಂದಷ್ಟು ಜಗಳ, ಒಂದಷ್ಟು ಕಿತ್ತಾಟ, ಒಂದಷ್ಟು ತುಂಟಾಟ ಎಲ್ಲವೂ ಇದ್ದೇ ಇರುತ್ತೆ. ಜಗಳವಾಗಿ ದೂರ ಆದ ಸ್ವಲ್ಪ ಸಮಯದಲ್ಲೇ ಯಾರಾದ್ರೂ ಒಬ್ಬರು ಸಾರಿ ಕೇಳುತ್ತಾ ಮಾತಾಡಿಸಲು ಮುಂದಾಗಿ ಬಿಡ್ತಾರೆ. ಅಲ್ಲಿಯವರೆಗೂ ನಡೆದ ಜಗಳವೆಲ್ಲ ಮಾಯವಾಗಿ ಬಿಡುತ್ತೆ. ಮುನಿಸು ಮರೆತು ಮತ್ತೆ ಒಂದಾಗಿ ಬಿಡ್ತಾರೆ. ಆದ್ರೆ, ಈ ಜೋಡಿ ಜೊತೆಯಾಗೇ ಇರುವುದರಿಂದ ಅವರ ನಡುವೆ ಜಗಳ ಆಗಿಲ್ವ? ಕಿತ್ತಾಟ ನಡೆದಿಲ್ವ? ಅಂಥ ಪ್ರಶ್ನೆ ಮೂಡಬಹುದು. ಸತ್ಯ, ಅವರ ನಡುವೆ ಜಗಳ ಆಗಿದೆ. ಕಿತ್ತಾಟವೂ ಆಗಿದೆ. ಆದ್ರೆ, ಅಂತಿಮವಾಗಿ ಏನಾಯ್ತು ಅನ್ನೋದನ್ನು ಮುಂದೆ ಹೇಳ್ತೀವಿ.

ಬೇರೆಯವರ ಜೊತೆ ಚಾಟಿಂಗ್‌, ಟಾಕಿಂಗ್‌ ಕಥೆ ಏನು?
ಇಂದಿನ ದಿನಮಾನಗಳಲ್ಲಿ ಪ್ರೇಮಿಗಳ ನಡುವೆ ಮಿಸ್‌ ಅಂಡರ್ಸ್ಟ್ಯಾಂಡಿಂಗ್‌ ತಂದು ದೂರ ಮಾಡುವುದೇ ಚಾಟಿಂಗ್‌, ಟಾಕಿಂಗ್‌ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಅದೆಷ್ಟೇ ಪ್ರೀತಿ ಇದ್ರೂ ಬೇರೊಬ್ಬರಿಂದ ಒಂದ ಒಂದು ಮೆಸೇಜ್‌, ಒಂದು ಫೋನ್‌ ಕಾಲ್‌ ಪ್ರೀತಿಗಳನ್ನು ದೂರ ಮಾಡಿ ಬಿಡುತ್ತೆ. ಅದಕ್ಕೆ ನೋಡಿ, ಪ್ರೇಮಿಗಳಲ್ಲಿ ಗೌಪ್ಯತೆ ಜಾಸ್ತಿ. ತಮ್ಮ ಮೊಬೈಲ್‌ ಬೇರೊಬ್ಬರು ನೋಡಂತೆ ಲಾಕ್‌ ಮಾಡಿಕೊಂಡಿರುತ್ತಾರೆ. ಪ್ರೇಮಿಯ ಜೊತೆ ಇದ್ದಾಗ ಸ್ನೇಹಿತರ ಕಾಲ್‌ ಬಂದರೆ ರಿಸೀವ್‌ ಮಾಡಲು ಹೋಗಲ್ಲ. ಕೆಲವರಂತೂ ಆಪ್ತ ಸ್ನೇಹಿತರ ನಂಬರ್‌ ಅನ್ನೇ ತಾತ್ಕಾಲಿಕವಾಗಿ ಬ್ಲಾಕ್‌ ಮಾಡಿಕೊಂಡಿರುತ್ತಾರೆ. ಎಲ್ಲಿ ಸ್ನೇಹಿತರ ವಿಡಿಯೋ ಕಾಲ್‌ ಬಂದು ತಮ್ಮ ಪ್ರೀತಿಗೆ ಎಳ್ಳು ನೀರು ಬೀಳುತ್ತೋ ಅಂತ ಇಂಟರ್‌ ನೆಟ್‌ ಅನ್ನೇ ಆಫ್‌ ಮಾಡಿಕೊಳ್ಳುತ್ತಾರೆ. ಹಾಗಾದ್ರೆ, ಉಕ್ರೇನ್‌ ಜೋಡಿಗೆ ಅಂತ ಸಮಸ್ಯೆ ಆಗಿಲ್ವ? ಖಂಡಿತ ಆಗಿರುತ್ತೆ.

123 ದಿನದ ನಂತರ ಕೈಕೋಳಕ್ಕೆ ಬಿತ್ತು ಅಂತ್ಯ
ಯಾವುದೇ ವ್ಯಕ್ತಿಗಾದ್ರೂ ಖಾಸಗಿಯ ಜೀವನ ಅನ್ನೋದು ಇದ್ದೇ ಇರುತ್ತೆ. ಪ್ರೇಮಿಗಳ ಜೊತೆ ಎಲ್ಲವನ್ನು ಹಂಚಿಕೊಳ್ಳಲು ಆಗಲ್ಲ. ಕೆಲವನ್ನಾದ್ರೂ ಗೌಪ್ಯವಾಗಿ ಕಾಪಾಡಿಕೊಳ್ಳಲೇ ಬೇಕಾಗುತ್ತೆ. ಆದ್ರೆ, ಈ ಜೋಡಿ ಎಲ್ಲದ್ರಲ್ಲಿಯೂ ಮುಕ್ತವಾಗಿತ್ತು. ಏನೇ ಇದ್ರೂ ಪರಸ್ಪರ ಹಂಚಿಕೊಳ್ತಾ ಇದ್ರು. ಇವರ ಮುಖ್ಯ ಉದ್ದೇಶವೇ ಪರಸ್ಪರ ದೂರ ಆಗ್ತಿರೋ ಸಂಬಂಧವನ್ನು ಮತ್ತೆ ಒಂದು ಮಾಡುವುದಾಗಿತ್ತು. ಅಂತೂ 123 ದಿನ ಇದ್ದ ಕೈಕೋಳಕ್ಕೆ ಕತ್ತರಿ ಹಾಕಿಸಿದ್ರು.

ಕೈಕೋಳದ ಸಾಹಸ ಬೇಡ ಅಂದ ಜೋಡಿ
ಜಗತ್ತಿನಲ್ಲಿ ಯಾರೂ ಮಾಡ್ಬೇಡಿ ಅಂತ ಕರೆ
ಬರೋಬ್ಬರಿ 123 ದಿನ ಕೈಕೋಳ ತೊಟ್ಟುಕೊಂಡು ಜೊತೆಯಾಗಿ ಜೀವಿಸಿದ ಜೋಡಿ ತಾವು ಕರೆ ಕೊಟ್ಟಿರುವುದು ಮಾತ್ರ ಜಗತ್ತಿನಲ್ಲಿ ಯಾರೂ ಇಂತಹ ಕೆಲಸ ಮಾಡಬೇಡಿ ಅಂಥ. ನಾವು ಪ್ರೇಮಿಗಳಾಗಿದ್ರೂ ಕೂಡ ನಮ್ಮಲ್ಲಿ ವಿಭಿನ್ನ ಮನಸ್ಥಿತಿ ಇದೆ ಅನ್ನೋದು ಸಾಬೀತಾಗಿದೆ. ಪ್ರತಿಯೊಬ್ಬರಿಗೂ ವೈಯಕ್ತಿಕ ಜೀವನ ಅನ್ನೋದು ಇದ್ದೇ ಇರುತ್ತೆ ಅದನ್ನು ಕಾಪಾಡಿಕೊಳ್ಳಬೇಕು. ಯಾರೂ ಕೂಡ ನಾವು ಮಾಡಿದಂತಹ ಸಾಹಸ ಮಾಡಲು ಹೋಗಲೇಬೇಡಿ ಅಂತ ಕರೆ ನೀಡಿದ್ದಾರೆ.

ಕೈಕೋಳ ಬಿಚ್ಚುತ್ತಿದ್ದಂತೆ ಕಣ್ಣೀರು ಹಾಕಿದ ವಿಕ್ಟೋರಿಯಾ
ಅಂತಿಮವಾಗಿ ಬ್ರೇಕ್‌ ಅಪ್‌ಗೆ ಮುಂದಾದ ಜೋಡಿ
ಪ್ರೇಮಿಗಳ ದಿನದಂತೆ ಕೈಕೋಳ ತೊಟ್ಟುಕೊಂಡ ಈ ಜೋಡಿ 123 ದಿನದ ಬಳಿಕ ಕೈಕೋಳ ಕತ್ತರಿಸಿಕೊಂಡಿತು. ಆರಂಭದಲ್ಲಿ ಕೈಕೋಳ ತೊಟ್ಟಾಗ ಕಿರಿಕಿರಿ ಮಾಡುತ್ತಿದ್ದ ವಿಕ್ಟೋರಿಯಾ ಕೈಕೋಳ ಬಿಚ್ಚುತಿದ್ದಂತೆ ಕಣ್ಣೀರು ಹಾಕಿದ್ದಾರೆ. ಇಷ್ಟು ದಿನ ಜೊತೆಗೆ ಇದ್ದರೂ ತನ್ನ ಪ್ರೇಮಿ ಒಂದೇ ಒಂದು ದಿನ ಮಿಸ್‌ ಯೂ ಅಂತ ಹೇಳಲೇ ಇಲ್ಲ ಅಂತ ಹಗ್‌ ಮಾಡಿಕೊಂಡು ಬೇಸರ ವ್ಯಕ್ತಪಡಿಸಿದ್ದಾಳೆ. ಆದ್ರೆ, ವಿಪರ್ಯಾಸ ಅಂದ್ರೆ, ಯಾವ ಉದ್ದೇಶಕ್ಕೆ ಈ ಜೋಡಿ 123 ದಿನ ಕೈಕೋಳ ಹಾಕಿಕೊಂಡಿದ್ರೋ ಅದು ಪ್ರಯೋಜನಕ್ಕೆ ಬಂದಿಲ್ಲ. ಅಂತಿಮವಾಗಿ ಬ್ರೇಕ್‌ ಅಪ್‌ಗೆ ತೀರ್ಮಾನಿಸಿದ್ದಾರೆ.

ಕೈಕೋಳ ತೊಟ್ಟು ಬರೊಬ್ಬರಿ 123 ದಿನ ಜೊತೆಯಾಗಿದ್ದ ಉಕ್ರೇನ್‌ ಜೋಡಿಯದ್ದು, ಹುಚ್ಚಾಟವೋ? ಪ್ರೀತಿಯ ಉತ್ತುಂಗವೋ ನೀವೇ ನಿರ್ಧರಿಸಿ. ಆದ್ರೆ, ಅವರು ಮಾಡಿದಂತೆ ನೀವು ಮಾಡಲು ಹೋಗಬೇಡಿ ಅನ್ನೋದೆ ನಮ್ಮ ಕಿವಿ ಮಾತು ಕೂಡ.

The post ಕೈಕೋಳ ತೊಟ್ಟು ಬರೋಬ್ಬರಿ 123 ದಿನ ಜೊತೆಯಾಗಿದ್ದ ಜೋಡಿ -ಏನಾಯ್ತು ಅವರಿಬ್ಬರ ಪ್ರೀತಿ? appeared first on News First Kannada.

Source: newsfirstlive.com

Source link