ರಾಜ್ಯ ಕಾಂಗ್ರೆಸ್​ನಲ್ಲಿ ಈಗ ಕೂಸು ಹುಟ್ಟುವ ಮುನ್ನವೇ ಕುಲಾವಿ ಹೊಲಿಸಲಾಗ್ತಾ ಇದೆ. ಚುನಾವಣೆಗೆ ಇನ್ನೂ ಎರಡು ವರ್ಷ ಬಾಕಿ ಇರುವಾಗಲೇ ಮುಂದಿನ ಮುಖ್ಯಮಂತ್ರಿ ಯಾರಾಗಬೇಕು ಅನ್ನೋದ್ರ ಚರ್ಚೆ ತಾರಕಕ್ಕೇರಿರೋದು ವಿಪರ್ಯಾಸವಾದರೂ ಸತ್ಯ. ನಿಜಕ್ಕೂ ಕಾಂಗ್ರೆಸ್​ನಲ್ಲಿ ಯಾಕೆ ಈ ವಿಚಾರ ಅಷ್ಟೊಂದು ಚರ್ಚೆಯಾಗ್ತಿದೆ?

ರಾಜ್ಯ ಕಾಂಗ್ರೆಸ್​ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಅಚ್ಚರಿಗೆ ಕಾರಣವಾಗ್ತಾ ಇವೆ. ಯಾಕೋ ಗೊತ್ತಿಲ್ಲ ಕಾಂಗ್ರೆಸ್ ನಾಯಕರಿಗೆ ಈಗಲೇ ಮುಖ್ಯಮಂತ್ರಿ ಸ್ಥಾನದ ಕನಸು ಬೀಳಲಾರಂಭಿಸಿದೆ. ಕಾಂಗ್ರೆಸ್​ನಲ್ಲಿ ಘಟಾನುಘಟಿ ನಾಯಕರು ಈಗಲೇ ಸಿಎಂ ರೇಸ್​ನಲ್ಲಿ ನಿಂತಿರೋದು ಯಾಕೆ ಅಂತಾನೇ ಪಕ್ಷದ ಕಾರ್ಯಕರ್ತರಿಗೆ ಗೊತ್ತಾಗ್ತಾ ಇಲ್ಲ. ಇದು ಯಾಕೆ ಈಗಲೇ ಮುನ್ನೆಲೆಗೆ ಬಂದು ನಿಂತಿದೆ ಅನ್ನೋದೂ ಕೂಡ ಒಂದು ರೀತಿ ನಿಗೂಢ ರಹಸ್ಯ. ಬಿಜೆಪಿಯಲ್ಲಿ ನಾಯಕತ್ವದ ವಿಚಾರ ಚರ್ಚೆಯಾಗ್ತಾ ಇರುವಂತೆಯೇ ಕಾಂಗ್ರೆಸ್ ನಲ್ಲೂ ಇದೇ ರೀತಿಯ ಚರ್ಚೆಗಳು ಶುರುವಾಗಿದ್ದು ಕಾಕತಾಳೀಯ. ಬಿಜೆಪಿ ಅಧಿಕಾರದಲ್ಲಿರೋದ್ರಿಂದ ಇಲ್ಲಿ ನಾಯಕತ್ವ ವಿಚಾರಕ್ಕೆ ಹೆಚ್ಚು ಮಹತ್ವ ಬಂದಿತ್ತು. ಮುಖ್ಯಮಂತ್ರಿ ಯಡಿಯೂರಪ್ಪನವರನ್ನ ಬದಲಾಯಿಸ್ತಾರಾ ಅನ್ನೋ ಮಾತುಗಳು ಕೇಳಿ ಬರ್ತಾ ಇದ್ವು. ಆದ್ರೆ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಬಂದು ಹೋದ ಮೇಲೆ ಅಷ್ಟರ ಮಟ್ಟಿಗೆ ಈ ವಿಚಾರ ತಣ್ಣಗಾಗಿದೆ. ಆದ್ರೆ ಈಗ ಕಾಂಗ್ರೆಸ್ ನಲ್ಲಿ ಮಾತ್ರ ಮುಂದಿನ ಮುಖ್ಯಮಂತ್ರಿ ಯಾರು ಅನ್ನೋದ್ರ ಕುರಿತಾಗಿನ ಚರ್ಚೆಯೇ ಮುನ್ನೆಲೆಗೆ ಬಂದು ನಿಂತಿದೆ. ಇನ್ನು ಚುನಾವಣೆ ಹತ್ತಿರ ಬರಬೇಕು, ಬಳಿಕ ಆಗಬೇಕು, ಪಕ್ಷ ಗೆಲ್ಲಬೇಕು, ಆಮೇಲೆ ಅಧಿಕಾರ ನಡೆಸುವ ಅವಕಾಶ ಬಂದಾಗ ತಾರಕಕ್ಕೇರಬೇಕಿದ್ದ ಚರ್ಚೆ ಈಗಲೇ ಶುರುವಾಗಿರೋದು ವಿಚಿತ್ರವಾಗಿ ಕಾಣಿಸುತ್ತಿದೆ.

ಜಮೀರ್ ಅಹ್ಮದ್ ಹೇಳಿಕೆಯಿಂದ ಶುರುವಾಯ್ತು ಚರ್ಚೆ
ಅವತ್ತು ಮೈಸೂರಿನಿಂದ ಹೊತ್ತಿಸಿದ್ದ ಕಿಡಿ ಇನ್ನೂ ಆರಿಸಿಲ್ಲ
ಡಿ.ಕೆ.ಶಿವಕುಮಾರ್ ಅಧ್ಯಕ್ಷರಾದಾಗಿನಿಂದಲೂ ಇದೇ ಚರ್ಚೆ

ಜಮೀರ್ ಅಹ್ಮದ್ ಒಮ್ಮೆ ಮೈಸೂರಿಗೆ ಹೋದಾಗ ಕೊಟ್ಟ ಹೇಳಿಕೆಯಿಂದ ಕಾಂಗ್ರೆಸ್ ನಲ್ಲಿ ಮುಂದಿನ ಮುಖ್ಯಮಂತ್ರಿ ವಿಚಾರದ ಚರ್ಚೆ ಶುರುವಾಗಿತ್ತು. ಡಿ.ಕೆ.ಶಿವಕುಮಾರ್ ಯಾವಾಗ ರಾಜ್ಯ ಕಾಂಗ್ರೆಸ್ ಸಾರಥ್ಯ ವಹಿಸಿಕೊಂಡ್ರೋ ಆಗಿನಿಂದಲೇ ಇಂಥಾದ್ದೊಂದು ವಿಚಾರ ಪಕ್ಷದ ಪಡಸಾಲೆಯಲ್ಲಿ ಪಿಸುಮಾತಿನಲ್ಲಿ ಚರ್ಚೆಯ ಆಗ್ತಾ ಇತ್ತು. ಆದ್ರೆ ಯಾರು ಕೂಡ ಈ ವಿಚಾರವನ್ನು ಬಹಿರಂಗವಾಗಿ ಚರ್ಚೆ ಮಾಡ್ತಾ ಇರಲಿಲ್ಲ. ಸಾಮಾನ್ಯವಾಗಿ ಕಾಂಗ್ರೆಸ್ ಅಧ್ಯಕ್ಷರಾಗಿದ್ದವರೇ ಮುಂದಿನ ಸಿಎಂ ಆಗ್ತಾರೆ ಅನ್ನೋದು ಒಂದು ನಿಲುವು. ಹೀಗಾಗಿ ಮುಂದೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಡಿ.ಕೆ.ಶಿವಕುಮಾರ್ ಅವರಿಗೆ ಆ ಸ್ಥಾನ ಒಲಿಯಬಹುದು ಅಂತಾನೇ ಹೇಳಲಾಗ್ತಾ ಇತ್ತು. ಆದ್ರೆ ಮಾಜಿ ಮುಖ್ಯಮಂತ್ರಿ, ಹಾಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸುಮ್ನನಿರ್ತಾರಾ? ಒಂದು ಬಾರಿ ಮುಖ್ಯಮಂತ್ರಿಯಾಗಿಬಿಟ್ರೆ ಇನ್ನೊಂದು ಬಾರಿ ಆಗಬಾರದಾ? ಹೀಗಾಗಿ ಸಿದ್ದರಾಮಯ್ಯನವರಲ್ಲೂ ಸಹಜವಾಗಿ ಮತ್ತೆ ಮುಖ್ಯಮಂತ್ರಿಯಾಗುವ ಬಯಕೆ ಇದ್ದೇ ಇದೆ. ಆದ್ರೆ ಅವರು ಅದನ್ನು ಬಹಿರಂಗವಾಗಿ ಹೇಳಲಾಗುತ್ತಾ? ಆದರೆ ಸಿದ್ದರಾಮಯ್ಯನವರ ಶಿಷ್ಯರು ಮಾತ್ರ ಸುಮ್ಮನೇ ಇರ್ತಾ ಇಲ್ಲ. ಅದರಲ್ಲೂ ಬೆಂಗಳೂರು ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ಅವರಂತೂ ಹೋದಲ್ಲಿ, ಬಂದಲ್ಲಿ ಸಿದ್ದರಾಮಯ್ಯನವರೇ ಮುಂದಿನ ಸಿಎಂ ಆಗ್ತಾರೆ ಅನ್ನೋ ಅರ್ಥದಲ್ಲಿ ಮಾತನಾಡಿಕೊಂಡು ಬರ್ತಾ ಇದಾರೆ.

ಜಮೀರ್ ಹೇಳಿಕೆ ಕೊಡ್ತಾ ಇದ್ದಂತೆ ಅವತ್ತೇ ಇದೆಲ್ಲ ಸರಿ ಅಲ್ಲ ಅನ್ನೋ ಅಭಿಪ್ರಾಯ ರಾಜ್ಯ ಕಾಂಗ್ರೆಸ್ ವಲಯದಲ್ಲಿ ವ್ಯಕ್ತವಾಗಿತ್ತು. ಆದ್ರೆ ಜಮೀರ್ ಅಹ್ಮದ್ ಅವರ ಬಾಯಿ ಮುಚ್ಚಿಸುವ ಕೆಲಸವನ್ನು ಸಿದ್ದರಾಮಯ್ಯ ಮಾಡಲೇ ಇಲ್ಲ. ಅವರಿಗೂ ತಮ್ಮ ಪರವಾಗಿ ಒಬ್ಬರು ಕಹಳೆ ಊದುವವರು ಬೇಕಾಗಿತ್ತು. ಇತ್ತೀಚೆಗಂತೂ ಸಿದ್ದರಾಮಯ್ಯನವರ ಹಿಂದೆ ಮುಂದೆ ಸುಳಿದಾಡ್ತಾನೇ ಇರುವ ಜಮೀರ್ ಅಹ್ಮದ್, ಅದನ್ನು ಕಂಟಿನ್ಯೂ ಮಾಡಿದ್ದಾರೆ. ಸಿದ್ದರಾಮಯ್ಯನವರ ಹೆಸರನ್ನು ಬಿಟ್ಟು ಜಮೀರ್ ಅಹ್ಮದ್ ಮಾತೇ ಹೊರಡ್ತಾ ಇಲ್ಲ. ಎಲ್ಲಿಯೇ ಹೋದ್ರೂ ಏನೇ ಮಾಡಿದ್ರೂ ಅಲ್ಲಿ ಸಿದ್ದರಾಮಯ್ಯನವರನ್ನು ತರ್ತಿದಾರೆ ಜಮೀರ್ ಅಹ್ಮದ್.

ಒಂದು ವರ್ಷದಿಂದ ಕೇಳಿ ಕೇಳಿ ಡಿ.ಕೆ.ಶಿವಕುಮಾರ್ ಗರಂ
ಕೊನೆಗೂ ಜಮೀರ್ ಅಹ್ಮದ್ ಗೆ ಡಿಕೆಶಿ ಖಡಕ್ ವಾರ್ನಿಂಗ್
ಡಿ.ಕೆ.ಶಿವಕುಮಾರ್ ವಾರ್ನಿಂಗ್ ಬಳಿಕವೂ ಜಮೀರ್ ಮಾತು
ಸಿದ್ದು ಬೆಂಬಲ ಇಲ್ಲದೇ ಇದ್ರೆ ಜಮೀರ್ ಹೀಗೆ ಮಾತಾಡ್ತಾರಾ?

ಜಮೀರ್ ಅಹ್ಮದ್ ಹೋದಲ್ಲಿ, ಬಂದಲ್ಲಿ ಸಿದ್ದರಾಮಯ್ಯನವರೇ ಸಿಎಂ ಆಗಬೇಕು, ಅದು ನನ್ನ ಬಯಕೆ, ರಾಜ್ಯದ ಜನರೂ ಕೂಡ ಅದನ್ನೇ ಬಯಸ್ತಾ ಇದಾರೆ ಅಂತೆಲ್ಲ ಹೇಳ್ತಾನೇ ಇದಾರೆ. ಇದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಕಂಗೆಡಿಸಿ ಬಿಟ್ಟಿತ್ತು. ಹೀಗೆ ಹೇಳಿ ಹೇಳಿನೇ ಸಿದ್ದರಾಮಯ್ಯನವರನ್ನ ಮತ್ತೆ ಮೆರೆಸುವುದು ಡಿ.ಕೆ.ಶಿವಕುಮಾರ್ ಅವರಿಗೆ ಇಷ್ಟ ಇಲ್ಲ. ಕಾರಣ ಡಿ.ಕೆ.ಶಿವಕುಮಾರ್ ತಮ್ಮ ರಾಜಕೀಯ ಬದುಕಿನಲ್ಲಿ ಇಷ್ಟು ದಿನ ತಾಳ್ಮೆಯಿಂದ, ಅಷ್ಟೇ ಪರಿಣಾಮಕಾರಿಯಾಗಿ ಹೆಜ್ಜೆ ಇಡ್ತಿರೋದೇ ಒಂದು ಬಾರಿ ಈ ರಾಜ್ಯದ ಮುಖ್ಯಮಂತ್ರಿ ಆಗಬೇಕು ಅಂತಾ ಎನ್ನಲಾಗಿದೆ. ಹೀಗಾಗಿಯೇ ಹೈಕಮಾಂಡ್ ನಿಂದ ಹಿಡಿದು ಕಾರ್ಯಕರ್ತರವರೆಗೆ ಎಲ್ಲಾ ಕಡೆ ತಮ್ಮ ಪರವಾಗಿಯೇ ಅಭಿಪ್ರಾಯ ರೂಪಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನ ನಡೆಸ್ತಾನೇ ಇದಾರೆ. ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಹೀಗಿದ್ದಾಗ ಜಮೀರ್ ಅಹ್ಮದ್, ಸಿದ್ದರಾಮಯ್ಯನವರನ್ನು ಅಟ್ಟದ ಮೇಲೆ ಕೂರಿಸಲು ಈಗಲೇ ವೇದಿಕೆ ಸಿದ್ಧ ಮಾಡುತ್ತಿರುವಂತೆ ನಡೆದುಕೊಳ್ತಾ ಇರೋದು ಡಿ.ಕೆ. ಎಸ್ ಗರಂ ಆಗುವಂತೆ ಮಾಡಿದೆ. ಹೀಗಾಗಿಯೇ ಹೀಗೆಲ್ಲ ಮಾತನಾಡಬಾರದು ಅಂತ ಡಿ.ಕೆ.ಶಿವಕುಮಾರ್ ನೇರವಾಗಿಯೇ ಖಡಕ್ ಆಗಿ ವಾರ್ನಿಂಗ್ ಕೊಟ್ಟಿದ್ದಾರೆ. ತಮ್ಮ ಉದ್ದೇಶ ಪಕ್ಷವನ್ನು ಅಧಿಕಾರಕ್ಕೆ ತರೋದು, ಅದನ್ನು ಬಿಟ್ಟು ಈಗಲೇ ಮುಖ್ಯಮಂತ್ರಿ ಯಾರಾಗಬೇಕು ಅಂತೆಲ್ಲ ಬಹಿರಂಗವಾಗಿ ಚರ್ಚೆ ಮಾಡೋದು ಸರಿಯಲ್ಲ ಅಂತ ಅವರು ಹೇಳಿ ಬಿಟ್ರು.

ಇಷ್ಟಾದ ಮೇಲೂ ಜಮೀರ್ ಅಹ್ಮದ್ ತಾವು ಹೇಳಿಕೆ ಕೊಡೋದನ್ನ ನಿಲ್ಲಿಸ್ತಾನೇ ಇಲ್ಲ. ಜಮೀರ್ ಅಹ್ಮದ್ ಅವರು ಬಾಯಿ ಬಿಟ್ರೆ ಸಿದ್ದರಾಮಯ್ಯನವರೇ ಬೇಕು ಅಂತಿದಾರೆ. ಹೀಗೆ ನಿರಂತರವಾಗಿ ಜಮೀರ್ ಯಾಕೆ ಮಾತನಾಡ್ತಾರೆ? ಕಾಂಗ್ರೆಸ್​ನಲ್ಲಿರುವ ರೀತಿ-ರಿವಾಜು ಅವರಿಗೆ ಗೊತ್ತಿಲ್ಲವೇ? ಕಾಂಗ್ರೆಸ್ ಹೈಕಮಾಂಡ್ ಯಾವ ರೀತಿಯಾಗಿ ನಾಯಕತ್ವದ ವಿಚಾರವನ್ನು ಡಿಸೈಡ್ ಮಾಡುತ್ತೆ ಅನ್ನೋದು ಜಮೀರ್ ಗೆ ತಿಳಿಯದ ವಿಷಯವೇ? ಹೀಗಂತ ಕೇಳಿದ್ರೆ ಜಮೀರ್ ಗೆ ಇದೆಲ್ಲ ಖಂಡಿತವಾಗಿ ಗೊತ್ತಿದೆ. ಆದರೂ ಜಮೀರ್ ಯಾಕೆ ಪದೇ ಪದೇ ಹೀಗೆ ಹೇಳ್ತಾ ಇದಾರೆ ಅಂದ್ರೆ ಅವರ ಹಿಂದೆ ಇರೋದು ಸಿದ್ದರಾಮಯ್ಯ. ಸಿದ್ದರಾಮಯ್ಯ ಹಿಂದೆಯೂ ಪ್ರತಿಪಕ್ಷ ನಾಯಕರಾಗಿ ಬಳ್ಳಾರಿಗೆ ಪಾದಯಾತ್ರೆ ನಡೆಸಿ, ಬಳಿಕ ತಾವೇ ಎಲೆಕ್ಷನ್ ನಲ್ಲಿ ಮುಂದಾಳತ್ವ ವಹಿಸಿದ್ದರು. ಮೊದಲು ಆರ್. ವಿ.ದೇಶಪಾಂಡೆ, ಬಳಿಕ ಡಾಕ್ಟರ್ ಜಿ.ಪರಮೇಶ್ವರ್ ಕೆಪಿಸಿಸಿ ಅಧ್ಯಕ್ಷರಾಗಿದ್ದರೂ ಸಿದ್ದರಾಮಯ್ಯನವರ ಪ್ರಭಾವವೇ ಹೆಚ್ಚಿತ್ತು. ಅವರು ಅಂದುಕೊಂಡಂತೆಯೇ ಸಿಎಂ ಆಗಿ ಬಿಟ್ಟರು. ಸಿಎಂ ಸ್ಥಾನದ ಮೇಲೆ ಸಹಜವಾಗಿ ಬಯಕೆ ಇಟ್ಟುಕೊಂಡಿದ್ದ ಪರಮೇಶ್ವರ್ ತಮ್ಮ ಕ್ಷೇತ್ರ ಕೊರಟಗೆರೆಯಲ್ಲಿ ಸೋತು ಹೋಗಿದ್ದರು. ಇದರಿಂದ ಸಿದ್ದರಾಮಯ್ಯನವರಿಗೆ ಯಾರೂ ಕಾಂಪಿಟೇಟರ್ ಇಲ್ಲ ಎಂಬಂತಾಗಿತ್ತು. ಕಾರಣ ಮಲ್ಲಿಕಾರ್ಜುನ ಖರ್ಗೆ ಅಷ್ಟೊತ್ತಿಗೆ ದೆಹಲಿ ರಾಜಕಾರಣದ ಪಡಸಾಲೆ ಸೇರಿದ್ದರು. ಈಗ ಡಿ.ಕೆ.ಶಿವಕುಮಾರ್ ಮತ್ತೆ ಮಲ್ಲಿಕಾರ್ಜನ ಖರ್ಗೆಯವರ ಹೆಸರು ಪ್ರಸ್ತಾಪಿಸುತ್ತಿದ್ದಾರೆ. ಅದಕ್ಕೆ ಕಾರಣವೂ ಇದೆ.

ಮಲ್ಲಿಕಾರ್ಜನ ಖರ್ಗೆಯವರಿಗೆ ಯಾಕೆ ತಪ್ತಿದೆ ಅವಕಾಶ?
ಡಿ.ಕೆ.ಶಿವಕುಮಾರ್ ಖರ್ಗೆಯವರ ಹೆಸರು ತಂದಿದ್ದೇಕೆ??

ಮಲ್ಲಿಕಾರ್ಜನ ಖರ್ಗೆ ರಾಜ್ಯ ಕಾಂಗ್ರೆಸ್ ನಲ್ಲಿ ಹಿರಿಯ ನಾಯಕ. ದಶಕಗಳಿಂದ ರಾಜಕಾರಣದಲ್ಲಿರುವ ಖರ್ಗೆಯವರಿಗೆ ಬಹಳಷ್ಟು ಸಲ ಮುಖ್ಯಮಂತ್ರಿಯಾಗುವ ಅವಕಾಶ ತಪ್ಪಿ ಹೋಗಿದೆ. ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಖರ್ಗೆಯವರು ಯಾಕೆ ಸಿಎಂ ಆಗಬಾರದು ಅನ್ನೋ ಚರ್ಚೆಯನ್ನು ಡಿ.ಕೆ.ಶಿವಕುಮಾರ್ ಅವರೇ ಮತ್ತೆ ಮುನ್ನೆಲೆಗೆ ತರ್ತಾ ಇದಾರೆ. ಕಾರಣ, ಅಹಿಂದ ನಾಯಕ ಅಂತ ಬಿಂಬಿಸಿಕೊಂಡಿರುವ ಸಿದ್ದರಾಮಯ್ಯನವರಿಗೆ ಟಾಂಗ್ ಕೊಡೋದು ಮತ್ತು ದಲಿತ ಅಸ್ತ್ರ ಪ್ರಯೋಗದ ಮೂಲಕ ತಾವಾಗದಿದ್ದರೂ ಸಿದ್ದರಾಮಯ್ಯ ಮತ್ತೆ ಸಿಎಂ ಆಗಬಾರದು ಅನ್ನೋ ಉದ್ದೇಶವೂ ಇರಬಹುದು. ಈ ರಾಜ್ಯದಲ್ಲಿ ಲಿಂಗಾಯತ, ಒಕ್ಕಲಿಗ, ಸವಿತಾ, ರಜಪೂತ, ಬ್ರಾಹ್ಮಣ, ಕುರುಬ ಸಮುದಾಯದವರೆಲ್ಲ ಕಾಂಗ್ರೆಸ್​ನಿಂದ ಮುಖ್ಯಮಂತ್ರಿ ಆಗಿದ್ದಾರೆ. ಆದ್ರೆ ಇನ್ನೂ ಅವಕಾಶ ಸಿಗದೇ ಇರೋದು ಅಂದ್ರೆ ಅದು ದಲಿತ ಸಮುದಾಯಕ್ಕೆ. ಹೀಗಾಗಿ ಮಲ್ಲಿಕಾರ್ಜುನ ಖರ್ಗೆಯವರ ಹೆಸರು ಯಾವತ್ತೂ ಮುಂಚೂಣಿಯಲ್ಲಿರುತ್ತದೆ. ಗಟ್ಟಿ ಮನುಷ್ಯ ಡಿ.ಕೆ.ಶಿವಕುಮಾರ್ ಅವರೇ ಕೆಪಿಸಿಸಿ ಸಾರಥ್ಯ ವಹಿಸಿದ್ದಾರೆ. ಇನ್ನೊಂದು ಕಡೆ ಕಳೆದ ಬಾರಿ ಅವಕಾಶ ತಪ್ಪಿಸಿಕೊಂಡ ಡಾಕ್ಟರ್ ಜಿ.ಪರಮೇಶ್ವರ್ ಇದ್ದಾರೆ. ಮತ್ತೊಂದು ಕಡೆ ಮಲ್ಲಿಕಾರ್ಜನ ಖರ್ಗೆಯವರು ಕರ್ನಾಟಕದ ಮುಖ್ಯಮಂತ್ರಿ ಆಗಬೇಕೆಂಬುದು ಮೊದಲಿನಿಂದಲೂ ಇದೆ. ಮೊಯಿಲಿ, ಬಂಗಾರಪ್ಪ, ಕೃಷ್ಣ, ಧರಂಸಿಂಗ್ ಅವರೆಲ್ಲ ಆದ ಮೇಲೆ ಆ ಸಾಲಿಗೆ ಸೇರುವ ಖರ್ಗೆಯವರಿಗೂ ಇಂತಹದೊಂದು ಬಯಕೆ ಇರೋದು ಕೂಡ ಸಹಜಾನೇ. ಇದೆಲ್ಲ ಸಿದ್ದರಾಮಯ್ಯನವರಿಗೆ ಗೊತ್ತಿದೆ. ಹೀಗಾಗಿಯೇ ಚುನಾವಣೆ ಇನ್ನೂ ದೂರ ಇದ್ದರೂ ಕೂಡ ಸಿದ್ದರಾಮಯ್ಯ ತಮ್ಮನ್ನು ತಾವು ಹೆಚ್ಚಾಗಿ ಬಿಂಬಿಸಿಕೊಂಡು ತಮ್ಮದೇ ಮುಂದಾಳತ್ವ ಅಂತ ಅನಿಸಿಕೊಳ್ಳಲು ಪ್ರಯತ್ನ ನಡೆಸ್ತಾನೇ ಇದಾರೆ ಎನ್ನಲಾಗಿದೆ. ಅವರ ಮನಸ್ಸಿನಲ್ಲಿರೋದನ್ನು ಜಮೀರ್ ಅಹ್ಮದ್ ಹೇಳ್ತಾ ಇದ್ದಾರೆ. ಡಿ.ಕೆ.ಶಿವಕುಮಾರ್ ವಾರ್ನಿಂಗ್ ಕೊಟ್ಟ ಮೇಲೂ ಜಮೀರ್ ಅಹ್ಮದ್ ತಮ್ಮ ಮಾತು ನಿಲ್ಲಿಸ್ತಾನೇ ಇಲ್ಲ.

ಪದೇ ಪದೇ ಸಿದ್ದರಾಮಯ್ಯಗೆ ವೇದಿಕೆ ಕಲ್ಪಿಸುತ್ತಿರುವ ಜಮೀರ್
ಹುಲಿಯಾ ಅಂತ ಘೋಷಣೆ, ಸ್ಪರ್ಧೆಗೂ ಜಮೀರ್ ವ್ಯವಸ್ಥೆ
ಸಿದ್ದರಾಮಯ್ಯಗೆ ಕ್ಷೇತ್ರ ಬಿಟ್ಟು ಕೊಡಲೂ ರೆಡಿಯಾದ ಜಮೀರ್
ಇದೆಲ್ಲದ್ರ ಹಿಂದೆ ಇರಬಹುದಾದ ಪ್ಲಾನ್ ಬಗ್ಗೆ ನಾಯಕರಿಗೆ ಸುಳಿವು

ಜಮೀರ್ ಅಹ್ಮದ್, ಸಿದ್ದರಾಮಯ್ಯನವರ ಹಿಂದೆ ಮುಂದೆ ಸುಳಿದಾಡ್ತಿರೋದು ಮಾತ್ರ ಅಲ್ಲ. ಸಿದ್ದರಾಮಯ್ಯನವರಿಗೆ ತಮ್ಮದೇ ಕ್ಷೇತ್ರದಲ್ಲಿ ಪದೇ ಪದೇ ವೇದಿಕೆಯನ್ನು ಸೃಷ್ಟಿ ಮಾಡಿ ಜೈಕಾರ ಹಾಕಿಸುತ್ತಿದ್ದಾರೆ. ಹುಲಿಯಾ ಅಂತೆಲ್ಲ ಮತ್ತೆ ಘೋಷಣೆ ಕೂಗಿಸಿ ಸಿದ್ದರಾಮಯ್ಯ ಇಲ್ಲೇ ಸ್ಪರ್ಧಿಸಲಿ ಅಂತ ಜನರ ಹತ್ತಿರ ಹೇಳಿಸಿ ಅದು ಎಲ್ಲಾ ಕಡೆ ಪ್ರಚಾರ ಆಗುವಂತೆ ನೋಡಿಕೊಂಡಿದ್ದಾರೆ. ಸಿದ್ದರಾಮಯ್ಯ ಕೂಡ ಇದಕ್ಕೆ ಇಲ್ಲ ಅಂತಾ ಹೇಳ್ತಾನೇ ಇಲ್ಲ. ಚುನಾವಣೆ ಬರಲಿ ನೋಡೋಣ ಅಂತಾನೇ ತೇಪೆ ಹಚ್ತಾ ಇದಾರೆ. ಸಿದ್ದರಾಮಯ್ಯ ಹಿಂದಿನ ಚುನಾವಣೆಯಲ್ಲೂ ಎರಡು ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ರು. ಒಂದು ಕ್ಷೇತ್ರದಲ್ಲಿ ಸೋತು ಬಾದಾಮಿಯಲ್ಲಿ ಗೆದ್ದರು. ಈಗ ಬಾದಾಮಿಯಲ್ಲಿ ಮತ್ತೆ ಗೆಲ್ಲುವ ಪೂರ್ಣ ವಿಶ್ವಾಸ ಸಿದ್ದರಾಮಯ್ಯನವರಿಗೆ ಇಲ್ಲವೇ? ಹೀಗಾಗಿಯೇ ಸೇಫ್ಟಿಗೆ ಅಂತಾನೇ ಚಾಮರಾಜಪೇಟೆಯಲ್ಲೂ ಸ್ಪರ್ಧೆ ಮಾಡ್ತಾರೆ ಅನ್ನೋ ಗುಸು ಗುಸು ಈಗಲೇ ಶುರುವಾಗಿದೆ. ಜಮೀರ್ ಕೂಡ ಇದಕ್ಕೆ ಪೂರಕವಾದ ವಾತಾವರಣ ಸೃಷ್ಟಿ ಮಾಡೋದಕ್ಕೆ ಇನ್ನಿಲ್ಲದ ಪ್ರಯತ್ನ ಮಾಡ್ತಾನೇ ಇದ್ದಾರೆ. ನೋಡಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಹೇಗೆ ಜೈಕಾರ ಹಾಕಿಸಿದ್ರು ಜಮೀರ್.
ಇದೆಲ್ಲ ನೋಡ್ತಾ ಇರುವ ಕಾಂಗ್ರೆಸ್ ಹಲವು ನಾಯಕರಿಗೆ ಸಹಜವಾಗಿ ಅಸಮಾಧಾನ ಶುರುವಾಗಿದೆ. ಕಾಂಗ್ರೆಸ್ ನ ಹಿರಿಯ ನಾಯಕ, ಕಳೆದ ಬಾರಿ ಸ್ವಲ್ಪದರಲ್ಲೇ ಮುಖ್ಯಮಂತ್ರಿ ಸ್ಥಾನ ತಪ್ಪಿಸಿಕೊಂಡಿರುವ ಪರಮೇಶ್ವರ್ ಕೂಡ ಇದಕ್ಕೆ ಖಡಕ್ ಆಗಿಯೇ ಪ್ರತಿಕ್ರಿಯೆ ನೀಡಿದ್ದಾರೆ.

ಪಕ್ಷದ ಅಧ್ಯಕ್ಷರೇ ಸುಪ್ರೀಂ ಅಂದ್ರು ಡಾ.ಜಿ.ಪರಮೇಶ್ವರ್
ಜಮೀರ್ ಅಹ್ಮದ್ ಗೆ ನೇರವಾಗಿಯೇ ಪರಮೇಶ್ವರ್ ಟಾಂಗ್
ಎಲ್ಲರಿಗೂ ಅವರವರ ಅನುಯಾಯಿಗಳು ಇರ್ತಾರೆ ಅಂತ ಸೆಡ್ಡು

ಕಾಂಗ್ರೆಸ್ ನಲ್ಲಿ ಪಕ್ಷದ ಅಧ್ಯಕ್ಷರೇ ಸುಪ್ರೀಂ. ಹೀಗಾಗಿ ಡಿ.ಕೆ.ಶಿವಕುಮಾರ್ ಏನು ಹೇಳ್ತಾರೋ ಅದನ್ನು ಕೇಳಬೇಕು, ಅವರನ್ನು ಬೆಂಬಲಿಸಬೇಕು ಅಂತ ಪರಮೇಶ್ವರ್ ಹೇಳಿ ಬಿಟ್ಟಿದ್ದಾರೆ. ಅಷ್ಟೇ ಅಲ್ಲ, ಜಮೀರ್ ಅಹ್ಮದ್ ಅವರಿಗೂ ನೇರವಾಗಿಯೇ ಟಾಂಗ್ ಕೊಟ್ಟಿದ್ದಾರೆ. ಎಲ್ಲರಿಗೂ ಅವರವರ ಅನುಯಾಯಿಗಳು ಇರ್ತಾರೆ, ಅವರು ಇಷ್ಟ ಪಡುವ ನಾಯಕರೂ ಇರ್ತಾರೆ. ಹಾಗಂತ ಕಾಂಗ್ರೆಸ್ ನಲ್ಲಿ ಅಧ್ಯಕ್ಷರು ಏನು ಹೇಳ್ತಾರೋ ಅದೇ ಫೈನಲ್ ಅಂತ ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ. ಅಷ್ಟೇ ಅಲ್ಲ, ಕಾಂಗ್ರೆಸ್ ನಲ್ಲಿ ಬಣ ರಾಜಕಾರಣವೆಲ್ಲ ಶುರುವಾಗಿಲ್ಲ ಅಂತ ಸ್ಪಷ್ಟಪಡಿಸಿದ್ದಾರೆ.

ಜಮೀರ್-ಸಿದ್ದರಾಮಯ್ಯ ಜೋಡಿ ಆಟಕ್ಕೆ ನಾಯಕರು ಗರಂ
ಪಕ್ಷಕ್ಕೆ ಮುಜುಗರ ತರುವಂತೆ ಮಾಡಬಾರದು ಅಂತ ಹೇಳಿಕೆ

ನಿತ್ಯ ಜಮೀರ್ ಅಹ್ಮದ್ ಮತ್ತು ಸಿದ್ದರಾಮಯ್ಯ ಇದೇ ರೀತಿ ರಾಜಕೀಯದಾಟ ಆಡ್ತಾ ಹೋದ್ರೆ ಕಾಂಗ್ರೆಸ್ ನಲ್ಲಿನ ಘಟಾನುಘಟಿ ನಾಯಕರು ಸುಮ್ಮನೇ ಇರ್ತಾರಾ. ಇವರಿಗೆ ಬ್ರೇಕ್ ಹಾಕಲೇಬೇಕು ಅಂತ ಕಾಯ್ತಾ ಇದ್ದಾರೆ. ದೆಹಲಿಯಲ್ಲಿ ಪಕ್ಷದ ವರಿಷ್ಠರ ಬಳಿ ಇಂತಾದ್ದೆಲ್ಲಾ ವಿಚಾರವನ್ನ ಈಗಲೇ ತೆಗೆದುಕೊಂಡು ಹೋಗಿ ರಂಪ ಮಾಡಿಕೊಳ್ಳೋದು ಬೇಡ ಅಂತ ಸುಮ್ಮನಿದ್ದಾರೆ. ಆದರೆ, ಪಕ್ಷಕ್ಕೆ ಮುಜುಗರ ತರುವಂತ ಹೇಳಿಕೆಗಳನ್ನು ಜಮೀರ್ ಅಹ್ಮದ್ ನೀಡಬಾರದು ಅಂತ ಅನೇಕರು ಹೇಳ್ತಾನೇ ಇದಾರೆ.

ದೆಹಲಿಗೆ ಹೋದಾಗ ಈ ಬಗ್ಗೆ ಏನಂದ್ರು ಡಿ.ಕೆ.ಶಿವಕುಮಾರ್?
ಮತ್ತೆ ಜಮೀರ್ ಅಹ್ಮದ್ ಗೆ ಪರೋಕ್ಷ ಎಚ್ಚರಿಕೆ ಕೊಟ್ರಾ ಡಿಕೆ?
ಸಿದ್ದರಾಮಯ್ಯನವರಿಗೂ ಟಾಂಗ್ ಕೊಟ್ರಾ ಕೆಪಿಸಿಸಿ ಅಧ್ಯಕ್ಷರು?

ಈ ನಡುವೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ದೆಹಲಿಗೆ ತೆರಳಿದ್ದು ಅಲ್ಲಿ ವರಿಷ್ಠರನ್ನು ಭೇಟಿ ಮಾಡ್ತಾ ಇದ್ದಾರೆ. ಇತ್ತೀಚೆಗೆ ರಾಜ್ಯದಲ್ಲಿ ಪಕ್ಷದಲ್ಲಿನ ಬೆಳವಣಿಗೆಗಳ ಬಗ್ಗೆ ಅವರು ಮಾಹಿತಿ ನೀಡಲಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯ ಕಾಂಗ್ರೆಸ್ ನಲ್ಲಿ ಈಗಲೇ ಶುರುವಾಗಿರುವ ನಾಯಕತ್ವದ ವಿಚಾರ, ಮುಖ್ಯಮಂತ್ರಿಯಾಗುವ ವಿಚಾರ ಇದನ್ನೂ ಕೂಡ ಗಮನಕ್ಕೆ ತರುವ ಸಾಧ್ಯತೆ ಇದೆ. ಕಾರಣ, ಈಗಿನಿಂದಲೇ ಮುಖ್ಯಮಂತ್ರಿ ಸ್ಥಾನಕ್ಕೆ ನಾಯಕರನ್ನು ಬಿಂಬಿಸೋದ್ರಿಂದ ಏನೆಲ್ಲ ಸಮಸ್ಯೆಗಳು ಸೃಷ್ಟಿಯಾಗ್ತಾವೆ ಅನ್ನೋದನ್ನು ವಿವರಿಸಲಿದ್ದಾರೆ ಅಂತ ತಿಳಿದು ಬಂದಿದೆ. ಆದ್ರೆ ಡಿ.ಕೆ.ಶಿವಕುಮಾರ್, ಇಂತಾ ಸಣ್ಣ ವಿಚಾರವನ್ನೆಲ್ಲ ಯಾರ ಬಳಿಯೂ ಪ್ರಸ್ತಾಪ ಮಾಡಲ್ಲ ಎಂದಿದ್ದಾರೆ. ಆದ್ರೆ ಇದೇ ವೇಳೆ ಮತ್ತೊಂದು ಹೇಳಿಕೆ ನೀಡಿ ಯಾರಿಗೆ ತಲುಪಬೇಕೋ ಅವರಿಗೆ ಬಿಸಿ ಮುಟ್ಟಿಸುವ ಪ್ರಯತ್ನ ಮಾಡಿದ್ದಾರೆ. ಪಕ್ಷದಲ್ಲಿ ವ್ಯಕ್ತಿ ಪೂಜೆಗೆ ಅವಕಾಶ ಇಲ್ಲ ಅಂತ ಯಾರೊಬ್ಬ ವ್ಯಕ್ತಿಗಿಂತ ಸಾಮೂಹಿಕ ನಾಯಕತ್ವದ ವಿಚಾರವನ್ನು ಮತ್ತೆ ಪ್ರತಿಪಾದಿಸಿದ್ದಾರೆ.

ಇವತ್ತು ಮತ್ತೆ ಗರಂ ಆಗಿದ್ದೇಕೆ ಸಿದ್ದರಾಮಯ್ಯ ಗೊತ್ತಾ?
ಜಮೀರ್ ಹೇಳಿಕೆ ಪ್ರಸ್ತಾಪಿಸ್ತಾ ಇದ್ದಂತೆ ಸಿಟ್ಟು ಸಿಡುಕು

ನೀವೇ ಸಿಎಂ ಆಗಬೇಕು ಅಂತ ಜಮೀರ್ ಅಹ್ಮದ್ ಹೇಳ್ತಾ ಇದ್ದಾರೆ ಇದಕ್ಕೆ ನಿಮ್ಮ ಪ್ರತಿಕ್ರಿಯೆ ಅಂತ ಕೇಳಿದಾಗ ಸಿದ್ದರಾಮಯ್ಯ ಗರಂ ಆಗಿ ಬಿಟ್ಟಿದ್ದಾರೆ. ಈ ವಿಚಾರ ತಮ್ಮ ಬಾಯಲ್ಲಿ ಹೇಳಿಸೋ ಪ್ರಯತ್ನ ಮಾಡಿರೋದು ಅವರಿಗೆ ಇಷ್ಟ ಆಗಿಲ್ಲ. ಹೋಗುವ ಮೆಸೆಜ್ ಹೋಗ್ತಾ ಇರಬೇಕು. ಆದ್ರೆ ತಮ್ಮಿಂದಲೇ ನೇರವಾಗಿ ಹೋಗಬಾರದು ಅನ್ನೋದು ಸಿದ್ದರಾಮಯ್ಯನವರ ಪ್ಲಾನ್ ಮಾಡಿದ್ದಾರಂತೆ. ಹೀಗಾಗಿ ಅವರಿಗೆ ಇಂತಹ ಪ್ರಶ್ನೆ ಕೇಳಿದ್ರೆ ಸಹಜವಾಗಿ ಸಿಟ್ಟು ಬರುತ್ತೆ.

ಯಾರು ಏನೇ ಹೇಳಿದ್ರೂ ಕಾಂಗ್ರೆಸ್ ನಲ್ಲಿ ಮುಂದಿನ ಮುಖ್ಯಮಂತ್ರಿ ಯಾರಾಗ್ತಾರೆ ಅನ್ನೋ ಚರ್ಚೆ ಈಗಿನಿಂದಲೇ ಶುರುವಾಗಿರೋದಂತೂ ನಿಜ. ಮುಂದೆ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದೇ ಬರುತ್ತೆ ಅನ್ನೋ ವಿಶ್ವಾಸದಲ್ಲಿರುವ ನಾಯಕರು, ಈಗಿನಿಂದಲೇ ಇದಕ್ಕೆ ವೇದಿಕೆ ಸೃಷ್ಟಿ ಮಾಡಿಕೊಳ್ತಾ ಇರೋದಂತೂ ನಿಜ. ಈಗ ಕಾಂಗ್ರೆಸ್ ಹೈಕಮಾಂಡ್ ಕೂಡ ಅಷ್ಟೇನೂ ಪ್ರಬಲವಾಗಿಲ್ಲದ ಕಾರಣ ನಾಯಕರ ಹೇಳಿಕೆಗಳು ಇನ್ನಷ್ಟು ವಿನಿಮಯ ಆಗಬಹುದು. ಮುಂದೆ ಇದೇ ಚರ್ಚೆ ಕಾಂಗ್ರೆಸ್ ನಲ್ಲಿ ಅದೆಷ್ಟು ಬಣಗಳನ್ನು ಸೃಷ್ಟಿ ಮಾಡುತ್ತೋ, ಮುಂದಿನ ಚುನಾವಣೆ ಹೊತ್ತಿಗೆ ಯಾರ್ಯಾರು ಯಾವ ದಿಕ್ಕು ಹಿಡಿತಾರೋ ಕಾದು ನೋಡಬೇಕು.

ಕಾಂಗ್ರೆಸ್ ನಲ್ಲಿ ಈಗಲೇ ಮುಖ್ಯಮಂತ್ರಿ ಸ್ಥಾನದ ಬಗ್ಗೆ ಚರ್ಚೆಯಾಗ್ತಾ ಇದೆ. ಚುನಾವಣೆಗೆ ವರ್ಷಗಟ್ಟಲೇ ಸಮಯ ಇರುವಾಗ ಬಣ ರಾಜಕಾರಣ ಶುರುವಾಗಿದೆ ಅಂದ್ರೆ ಇನ್ನು ಎಲೆಕ್ಷನ್ ಹತ್ತಿರ ಬಂದಾಗ ಇನ್ನೇನೇನಾಗುತ್ತೋ ನೋಡಬೇಕು.

The post ಕೈ ಪಾಳಯದಲ್ಲಿ ಸಿಎಂ ಅಭ್ಯರ್ಥಿಯ ರೇಸ್: ಕೂಸು ಹುಟ್ಟುವ ಮೊದಲೇ ಕುಲಾವಿ ಯಾಕೆ..? appeared first on News First Kannada.

Source: newsfirstlive.com

Source link