‘ಕೈ’ ಮುಂಚೂಣಿ ನಾಯಕರಿಗೆ ಹೈಕಮಾಂಡ್​ ಬುಲಾವ್ -ಮುಂದಿನ ಸಿಎಂ ಚರ್ಚೆಗೆ ವೇದಿಕೆ ಆಗುತ್ತಾ ಮೀಟಿಂಗ್!


ಬೆಂಗಳೂರು: ಉತ್ತರದ ಚುನಾವಣೆ ಗಾಳಿ ದಕ್ಷಿಣದತ್ತ ಬೀಸೋದಕ್ಕೆ ಶುರುವಾಗಿದೆ. ಬಿಡುವಿಲ್ಲದ ಚಟುವಟಿಕೆಯಲ್ಲಿ ನಿರತವಾಗಿರುವ ಕಾಂಗ್ರೆಸ್​​ಗೆ ಮತ್ತಷ್ಟು ಉತ್ಸಾಹ ತುಂಬಲು ಹೈಕಮಾಂಡ್​​ ಬಯಸಿದೆ. 27ಕ್ಕೆ ಮೇಕೆದಾಟು ಜಲಸಂಗ್ರಾಮಕ್ಕೂ ಮುನ್ನ ಅಂದ್ರೆ, 25ಕ್ಕೆ ರಾಜ್ಯ ಕೈಪಡೆ ದೆಹಲಿ ಯಾತ್ರೆ ಕೈಗೊಳ್ತಿದೆ.. ಭವಿಷ್ಯದ ಚುನಾವಣೆ, ನಾಯಕತ್ವ ಬಗ್ಗೆ ಗಹನ ಚರ್ಚೆ ನಡೆಸಲಿದೆ.

ಪಂಚನದಿಗಳ ಬೀಡು ಪಂಜಾಬ್​​, ದೇವಭೂಮಿ ಉತ್ತರಾಖಂಡ್​ಗೆ ಭಿನ್ನ ಪ್ರಯೋಗ ನಡೆಸಿದ ಕಾಂಗ್ರೆಸ್​ ಈಗ ಮಾರ್ಚ್​ 10ರ ಜನತಾ ತೀರ್ಪಿನ ಆತಂಕದಲ್ಲಿದೆ. ಕಾಂಗ್ರೆಸ್​ ತನ್ನ ಅವಕಾಶದ ಭಾಗ್ಯದ ಬಾಗಿಲಾಗಿ ದಕ್ಷಿಣದ ಕರ್ನಾಟಕದತ್ತ ಹೊಸ ಆಸೆಯನ್ನ ಹೊತ್ತು ಕೂತಿದೆ.

ಪಂಚರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್​​​ ಮುಖ್ಯವಾಗಿ ಎರಡು ದಾಳ ಉರುಳಿಸಿದೆ. 5 ತಿಂಗಳು ಮುನ್ನ ಸಾರಥಿ ಬದಲಿಸಿ ಪಂಜಾಬ್​​ನಲ್ಲಿ ದಲಿತಾಸ್ತ್ರ ಪ್ರಯೋಗಿಸಿದ ಕಾಂಗ್ರೆಸ್​, ಉತ್ತರಾಖಂಡ್​ನಲ್ಲಿ ಮಾತ್ರ ಸಾಮೂಹಿಕ ಮಂತ್ರ ಪಠಿಸಿತ್ತು. ಈ ಎರಡು ಅಸ್ತ್ರಗಳು ಹೇಗೆ ಲಾಭ ತರಲಿದೆ ಅನ್ನೋದು ಜನಮತ ಹೇಳಲಿದೆ.

ಚುನಾವಣಾ ದಾಹವನ್ನೇ ಮರೆತಿದ್ದ ಎಐಸಿಸಿ​​, ಫಿನಿಕ್ಸ್​​ನಂತೆ ಮೈಧೂಳು ಕೊಡವಿದೆ. ಉತ್ತರ ಭಾರತದ ಫಲಿತಾಂಶಕ್ಕೂ ಮುನ್ನವೇ ​ದಕ್ಷಿಣದತ್ತ ಆಸೆಗಣ್ಣು ನೆಟ್ಟಿದೆ. ಕರ್ನಾಟಕದಲ್ಲಿ 15 ತಿಂಗಳು ಮುನ್ನವೇ ತಾಲೀಮು ಆರಂಭಿಸ್ತಿದೆ. ರಾಜ್ಯ ಕಾಂಗ್ರೆಸ್​​ ಮುಂಚೂಣಿ ನಾಯಕರಿಗೆ ಹೈಕಮಾಂಡ್​ ಬುಲಾವ್ ನೀಡಿದೆ.

ಪಂಜಾಬ್​​ನಲ್ಲಿ ವರಿಷ್ಠರಿಗೆ ಚನ್ನಿ ಚಿನ್ನದಂತೆ ಕಾಣುತ್ತಲೇ ಸಿಎಂ ಅಭ್ಯರ್ಥಿ ಆಗಿ ಘೋಷಣೆ ಆಗಿತ್ತು. ಆದರೂ ನವಜೋತ್​​​ ಸಿಧು ಒಡಲ ಸಿಟ್ಟು ಸ್ಫೋಟ ಮಾಡದೇ ಸೈಲೆಂಟ್​​ ಆಗಿದ್ರು. ಕರ್ನಾಟಕದಲ್ಲೂ ಈ ಬೆಳವಣಿಗೆ ಆಗದಂತೆ ಹಸ್ತ ಸಾರಥಿಗಳು ಮುಂಜಾಗೃತೆ ವಹಿಸ್ತಿದ್ದಾರೆ. ಪಂಜಾಬ್​​ ಮಾದರಿಯಲ್ಲೇ ಸಿಎಂ ಅಭ್ಯರ್ಥಿ ಘೋಷಣೆ ಆಗಬಹುದು ಅನ್ನೋ ಚರ್ಚೆ ಗರಿಗೆದರಿವೆ.

ಬಣ ಗುದ್ದಾಟಕ್ಕೆ ‘ಹೈ’ ಮುಲಾಮು
ಸದ್ಯ ರಾಜ್ಯ ಕಾಂಗ್ರೆಸ್​​ನಲ್ಲಿ ಬಣ ರಾಜಕಾರಣ ಮೀತಿಮೀರಿದೆ.. ಈ ಹೊತ್ತಲ್ಲೇ ಇದಕ್ಕೆ ಮದ್ದರೆಯಲು, ರಾಜ್ಯದಲ್ಲಿ ಮುಂದಿನ ಸಿಎಂ ಅಭ್ಯರ್ಥಿ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ. ಪಂಜಾಬ್ ಮಾದರಿಯಂತೆ ಸಿಎಂ ಆಯ್ಕೆ ವಿಮರ್ಶೆ ನಡೆಯಲಿದ್ದು, ಚನ್ನಿ ಆಯ್ಕೆಯಂತೆ ಜನಾಭಿಪ್ರಾಯದ ಕಲ್ಪನೆ ರಾಜ್ಯದಲ್ಲೂ ಬಿತ್ತುವ ಸಾಹಸಕ್ಕೆ ರಾಹುಲ್ ಮುಂದಾಗ್ತಾರೆ ಎನ್ನಲಾಗ್ತಿದೆ. ಒಟ್ಟಾರೆ, ಕಾಂಗ್ರೆಸ್​ನ ಬಣ ರಾಜಕಾರಣಕ್ಕೆ ಈ ಮೀಟಿಂಗ್​​​​ ಫುಲ್​ಸ್ಟಾಪ್​ ನೀಡುತ್ತಾ? ಸಿಎಂ ಅಭ್ಯರ್ಥಿ ಘೋಷಣೆ ಆಗುತ್ತಾ? ಅಥವಾ ಕರ್ನಾಟಕಕ್ಕೆ ಬೇರೆಯದ್ದೇ ಪ್ರಯೋಗಕ್ಕೆ ಹೈಕಮಾಂಡ್​​​ ಚಾಲನೆ ನೀಡುತ್ತಾ ಅನ್ನೋ ಕೌತುಕ, ಕುತೂಹಲ ಮತ್ತಷ್ಟು ದ್ವಿಗುಣಗೊಳಿಸಿದೆ.

ವಿಶೇಷ ವರದಿ: ವೀರೇಂದ್ರ, ಪೊಲಿಟಿಕಲ್​ ಬ್ಯೂರೋ

The post ‘ಕೈ’ ಮುಂಚೂಣಿ ನಾಯಕರಿಗೆ ಹೈಕಮಾಂಡ್​ ಬುಲಾವ್ -ಮುಂದಿನ ಸಿಎಂ ಚರ್ಚೆಗೆ ವೇದಿಕೆ ಆಗುತ್ತಾ ಮೀಟಿಂಗ್! appeared first on News First Kannada.

News First Live Kannada


Leave a Reply

Your email address will not be published. Required fields are marked *