ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಸ್ಫೋಟಗೊಳ್ಳತ್ತಲೇ ಇದೆ. ಇದರೊಂದಿಗೆ ಇದೀಗ ಜಿಲ್ಲೆಯಲ್ಲಿ ವ್ಯಾಕ್ಸಿನ್ ಖಾಲಿಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.

ಜಿಲ್ಲೆಯಲ್ಲಿ ನಿತ್ಯ ಕನಿಷ್ಠ 500ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿದ್ದು, ಜನರು ವ್ಯಾಕ್ಸಿನ್ ತೆಗೆದುಕೊಳ್ಳಲು ಈಗಾಗಲೇ ಭಾರೀ ಸಂಖ್ಯೆಯಲ್ಲಿ ನೋಂದಣಿ ಮಾಡಿಸಿಕೊಂಡಿದ್ದಾರೆ. ಆದರೆ ಜಿಲ್ಲೆಯಲ್ಲಿ ವ್ಯಾಕ್ಸಿನ್ ಇಲ್ಲ. ಸದ್ಯ ಕೋವಿಶೀಲ್ಡ್ 900 ಡೋಸ್ ಇದ್ದರೆ, ಕೋವ್ಯಾಕ್ಸಿನ್ ಕೇವಲ 600 ಡೋಸ್ ಇತ್ತು. ಆದರೆ ಅದನ್ನು ಈಗಾಗಲೇ ಶನಿವಾರವೇ ಜಿಲ್ಲೆಯ ಪ್ರತೀ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಹಂಚಿಕೆ ಮಾಡಲಾಗಿದೆ. ಹೀಗಾಗಿ ಡಿಎಚ್‍ಓ ಕಚೇರಿಯಲ್ಲಿ ವ್ಯಾಕ್ಸಿನ್ ಇಲ್ಲ. ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಈಗಾಗಲೇ ಹಂಚಿಕೆ ಮಾಡಿರುವ ವ್ಯಾಕ್ಸಿನ್ ಅನ್ನು ಇಂದು ಜನರಿಗೆ ಹಾಕಲಾಗಿದ್ದು, ನಾಳೆಯಿಂದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ವ್ಯಾಕ್ಸಿನ್ ಇರುವುದಿಲ್ಲ. ಆದರೆ ಜಿಲ್ಲಾ ಆರೋಗ್ಯ ಅಧಿಕಾರಿ ಮೋಹನ್ ಕುಮಾರ್ ಅವರು ಇಂದು ಸಂಜೆ ವ್ಯಾಕ್ಸಿನ್ ಬರುವ ಸಾಧ್ಯತೆ ಇದೆ ಎನ್ನುತ್ತಿದ್ದಾರೆ.

ಜಿಲ್ಲೆಗೆ ಬೇಕಾಗಿರುವ ವ್ಯಾಕ್ಸಿನ್ ಇಂದು ಸಂಜೆ ಬಾರದಿದ್ದಲ್ಲಿ, ಜಿಲ್ಲೆಯಲ್ಲಿ ವ್ಯಾಕ್ಸಿನ್ ಇರದೆ ನೋಂದಣಿ ಮಾಡಿಕೊಂಡಿರುವವರು ವ್ಯಾಕ್ಸಿನ್ ಕೇಂದ್ರಗಳಿಗೆ ಬಂದು ವಾಪಸ್ ಹೋಗಬೇಕಾದ ಸ್ಥಿತಿ ನಿರ್ಮಾಣವಾಗಲಿದೆ. ಜಿಲ್ಲೆಯಲ್ಲಿ ಈ ವ್ಯಾಕ್ಸಿನ್ ಕೊರತೆ ಎದುರಾಗಿರುವುದರಿಂದ ಉಸ್ತುವಾರಿ ಸಚಿವರು ಮತ್ತು ಸರ್ಕಾರದ ವಿರುದ್ಧ ಸ್ಥಳೀಯ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಜಿಲ್ಲೆಯಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಉಸ್ತುವಾರಿ ಸಚಿವರು ಹೇಳಿ ಹೋಗುತ್ತಿದ್ದಾರೆ. ಆದರೆ ವ್ಯಾಕ್ಸಿನ್ ಜಿಲ್ಲೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ದೊರೆಯುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.

The post ಕೊಡಗಿನಲ್ಲಿ ಕೊರೊನಾ ಲಸಿಕೆ ಖಾಲಿ appeared first on Public TV.

Source: publictv.in

Source link