ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮಳೆ ಹೆಚ್ಚು ಸುರಿಯುತ್ತಿದ್ದು, ಮಳೆಗಾಲದ ಹಿನ್ನೆಲೆ ಮುಂದಿನ ದಿನಗಳಲ್ಲಿ ವರುಣನ ಅಬ್ಬರ ಹೆಚ್ಚಾದರೆ ನದಿ ಪಾತ್ರಗಳಲ್ಲಿ ನೀರಿನ ಹರಿವು ಹೆಚ್ಚಾಗಲಿದ್ದು, ಸಾರ್ವಜನಿಕರ ಸುರಕ್ಷತೆ ಮತ್ತು ಸಾರ್ವಜನಿಕ ಆಸ್ತಿಪಾಸ್ತಿ ರಕ್ಷಣೆ ಹಿತದೃಷ್ಟಿಯಿಂದ ಮರಳುಗಾರಿಕೆ, ಮರದ ದಿಮ್ಮಿಗಳ ಸಾಗಾಣೆ ಮತ್ತು ಇತರೆ ಸರಕು ಸಾಗಾಣಿಕೆಯನ್ನು ಕೊಡಗು ಜಿಲ್ಲೆಯಾದ್ಯಂತ ನಿಷೇಧಿಸಲಾಗಿದೆ. ಮಳೆಗಾಲ ಮುಕ್ತಾಯವಾಗುವವರೆಗೆ ಈ ಆದೇಶ ಜಾರಿಯಲ್ಲಿರುತ್ತದೆ.

ಕೊಡಗು ಜಿಲ್ಲೆಯಲ್ಲಿ ಮುಂಗಾರು ಮಳೆ ಹೆಚ್ಚಾಗುವ ದಿನಗಳಲ್ಲಿ ರಸ್ತೆಯ ಪರಿಸ್ಥಿತಿ ಹದಗೆಡುತ್ತದೆ. ಹಾಗೆಯೇ ಅಧಿಕ ಭಾರ ತುಂಬಿದ ಸರಕು ಸಾಗಾಣೆಯ ಭಾರೀ ವಾಹನಗಳು ದಿನನಿತ್ಯ ಸಂಚರಿಸುವುದರಿಂದ ರಸ್ತೆಯ ಬದಿಗಳ ಮಣ್ಣು ಕುಸಿತದಿಂದಾಗಿ ಹಾಗೂ ರಸ್ತೆಯ ಮೇಲೆ ಮಣ್ಣು ಬಿದ್ದು, ರಸ್ತೆ ಸಂಚಾರಕ್ಕೆ ತೊಂದರೆಯಾಗಿ ಸಾಕಷ್ಟು ಅಪಘಾತಗಳಿಗೆ ಕಾರಣವಾಗುತ್ತದೆ. ಹೀಗಾಗಿ ಜೂನ್ 23 ರಿಂದ ಆಗಸ್ಟ್ 16ರ ವರೆಗೆ ಭಾರೀ ವಾಹನಗಳಿಗೆ ನಿಷೇಧ ಹೇರಲಾಗಿದೆ.

ಸಾರ್ವಜನಿಕರ ಜೀವ ಮತ್ತು ಆಸ್ತಿಗಳ ಹಿತದೃಷ್ಟಿಯಿಂದ ವಾಹನದ ನೋಂದಣಿ ತೂಕ 16,200 ಕೆ.ಜಿ.ಗಿಂತ ಹೆಚ್ಚಿನ ತೂಕದ ಸರಕು ಸಾಗಾಣಿಕೆ ವಾಹನ, ಮಲ್ಟಿ ಆಕ್ಸಿಲ್ ಟ್ರಕ್‍ಗಳ ಸಂಚಾರ ಮತ್ತು ಭಾರೀ ವಾಹನಗಳಾದ ಬುಲೆಟ್ ಟ್ಯಾಂಕರ್ಸ್, ಶಿಪ್ ಕಾರ್ಗೋ ಕಂಟೈನರ್ಸ್, ಲಾಂಗ್ ಚಾಸಿಸ್ (ಮಲ್ಟಿ ಆಕ್ಸಿಲ್) ಮತ್ತು ಮರಳು ಸಾಗಾಣಿಕೆ, ಮರದ ದಿಮ್ಮಿಗಳನ್ನು ಸಾಗಿಸುವ ಎಲ್ಲ ರೀತಿಯ ವಾಹನಗಳ ಸಂಚಾರವನ್ನು ಕೊಡಗು ಜಿಲ್ಲೆಯಲ್ಲಿ ಮಳೆಗಾಲ ಮುಗಿಯುವವರೆಗೆ ನಿರ್ಬಂಧಿಸಲು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಆದೇಶಿಸಿದ್ದಾರೆ.

ಹೆಚ್ಚಿನ ಮಳೆಯಾಗುವ ಕುರಿತು ರಾಜ್ಯ ಹವಾಮಾನ ಇಲಾಖೆ 2-3 ದಿನ ಮುಂಚಿತವಾಗಿ ಆಗಿಂದಾಗ್ಗೆ ವರದಿಯನ್ನು ನೀಡುತ್ತಿದೆ. ಇದನ್ನು ಅವಲೋಕಿಸಿ ಮತ್ತು ಕಳೆದ 3 ವರ್ಷಗಳಲ್ಲಿ ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆ ಮತ್ತು ನೆರೆ ಹಾವಳಿಯಿಂದಾಗಿ ಹಲವಾರು ರಸ್ತೆಗಳು ಹಾಳಾಗಿದೆ. ಈ ರಸ್ತೆಗಳನ್ನು ಈಗಾಗಲೇ ಮಳೆಹಾನಿ ದುರಸ್ತಿಯಡಿ ಸರಿಪಡಿಸಲಾಗುತ್ತಿದ್ದು, ಪ್ರಸ್ತುತ ವರ್ಷದ ಮಳೆಗಾಲ ಸಹ ಪ್ರಾರಂಭವಾಗಿದೆ. ಇದರಿಂದ ಮುಂದೆ ಸಂಭವಿಸಬಹುದಾದ ಅಪಾಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಹಾಗೂ ಸಾರ್ವಜನಿಕ ಆಸ್ತಿಪಾಸ್ತಿ ರಕ್ಷಣೆ, ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಭಾರೀ ಸರಕು ವಾಹನಗಳ ಸಂಚಾರವನ್ನು ನಿಷೇಧಿಸುವುದು ಸೂಕ್ತವಾಗಿದೆ. ಈ ರಸ್ತೆಗಳಲ್ಲಿ ಲಘು ವಾಹನಗಳು, ಬಸ್‍ಗಳು ಹಾಗೂ 10 ಟನ್ ತೂಕದೊಳಗಿನ ಸರಕು ವಾಹನಗಳನ್ನು ಹೊರತುಪಡಿಸಿ ಉಳಿದ ಭಾರೀ ವಾಹನಗಳ ಸಂಚಾರವನ್ನು ನಿಷೇಧಿಸುವುದು ಸೂಕ್ತವಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಈ ಎಲ್ಲ ಉಲ್ಲೇಖಗಳಲ್ಲಿನ ವರದಿ, ನಡವಳಿ ಹಾಗೂ ಪ್ರಕೃತಿ ವಿಕೋಪ ನಿರ್ವಹಣಾ ಪ್ರಾಧಿಕಾರದ ಸಭೆಯ ತೀರ್ಮಾನವನ್ನು ಪರಿಶೀಲಿಸಿ, ಕೊಡಗು ಜಿಲೆಯಲ್ಲಿ 2018-19, 2019-20 ಮತ್ತು 2020-21 ನೇ ಸಾಲಿನಲ್ಲಿ ಆದ ಭಾರೀ ಮಳೆಯಿಂದ ಹಲವು ಭಾಗಗಳಲ್ಲಿ ಭೂಕುಸಿತವಾಗಿದ್ದು, ಜೀವಹಾನಿಯೊಂದಿಗೆ ಭಾರೀ ಪ್ರಮಾಣದಲ್ಲಿ ಸಾರ್ವಜನಿಕ ಆಸ್ತಿ-ಪಾಸ್ತಿಗಳಿಗೆ ಹಾನಿಯಾಗಿದೆ. ಕೊಡಗು ಜಿಲ್ಲೆಯ ರಸ್ತೆಗಳು ಭಾರೀ ತಿರುವು ಹಾಗೂ ಏರಿಳಿತದಿಂದ ಕೂಡಿವೆ. ಪ್ರಸ್ತುತ ಮುಂಗಾರು ಪ್ರಾರಂಭವಾಗಿದ್ದು, ಮಳೆಯ ಪ್ರಮಾಣ ಹೆಚ್ಚಿದಂತೆ ನೆಲದಲ್ಲಿ ತೇವಾಂಶ ಹೆಚ್ಚಾಗಿ, ಅಧಿಕ ಭಾರದ ವಾಹನಗಳು ಸಂಚರಿಸಿದಲ್ಲಿ ಭೂ ಕುಸಿತ ಉಂಟಾಗಿ ಅನಾಹುತಗಳಾಗುವ ಸಾಧ್ಯತೆ ಹೆಚ್ಚಿದೆ ಎಂದು ಡಿಸಿ ತಿಳಿಸಿದ್ದಾರೆ.

ಕರ್ನಾಟಕ ಪೊಲೀಸ್ ಕಾಯ್ದೆ 1963ರ ವಿಧಿ 31, ಪ್ರಕೃತಿ ವಿಕೋಪ ನಿರ್ವಹಣಾ ಕಾಯ್ದೆ 2005ರ ಕಲಂ 33, ಮೋಟಾರು ವಾಹನ ಕಾಯ್ದೆ 1988ರ ಕಲಂ 115 ಹಾಗೂ ಕರ್ನಾಟಕ ಮೋಟಾರು ವಾಹನ ನಿಯಮಗಳ ನಿಯಮ 1989ರ (ತಿದ್ದುಪಡಿ ನಿಯಮಾವಳಿ 1990) ನಿಯಮ 221ಎ (5), ದಂಡಪ್ರಕ್ರಿಯಾ ಸಂಹಿತೆ 1973ರ ಕಲಂ 144ರ ಅಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ, ಸಾರ್ವಜನಿಕ ಆಸ್ತಿಪಾಸ್ತಿಗಳ ಸುರಕ್ಷತೆಯ ಹಿತದೃಷ್ಟಿಯಿಂದ ಕೊಡಗು ಜಿಲ್ಲೆಯಾದ್ಯಂತ ಇದೇ ಜೂನ್ 23 ರಿಂದ ಆಗಸ್ಟ್ 16 ವರೆಗೆ ಎಲ್ಲಾ ರೀತಿಯ ಮರದ ದಿಮ್ಮಿ ಮತ್ತು ಮರಳು ಸಾಗಾಣಿಕೆ ವಾಹನಗಳು, ವಾಹನದ ನೋಂದಣಿ ತೂಕ 16,200 ಕೆ.ಜಿ.ಗಿಂತ ಹೆಚ್ಚಿನ ಸರಕು ಸಾಗಾಣೆ ಮಾಡುವ ಸರಕು ಸಾಗಾಣಿಕೆ ವಾಹನಗಳು, ಭಾರೀ ವಾಹನಗಳಾದ ಬುಲೆಟ್ ಟ್ಯಾಂಕರ್ಸ್, ಶಿಪ್ ಕಾರ್ಗೋ ಕಂಟೈನರ್ಸ್, ಲಾಂಗ್ ಚಾಸಿಸ್ (ಮಲ್ಟಿ ಆಕ್ಸಿಲ್) ವಾಹನಗಳನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಚಾರುಲತಾ ಸೋಮಲ್ ಅವರು ಆದೇಶ ಹೊರಡಿಸಿದ್ದಾರೆ.

The post ಕೊಡಗಿನಲ್ಲಿ ಭಾರೀ ವಾಹನಗಳ ಸಂಚಾರಕ್ಕೆ ನಿಷೇಧ appeared first on Public TV.

Source: publictv.in

Source link