ಮಡಿಕೇರಿ: ಕೆಲ ದಿನಗಳಿಂದ ದಕ್ಷಿಣ ಕೊಡಗಿನ ಜನರ ನಿದ್ದೆಗೇಡಿಸಿರೋ ಹುಲಿರಾಯ. ಇದೀಗ ಈ ವ್ಯಾಘ್ರನ ಸೆರೆಗೆ ಕೊನೆಗೂ ಕಾಲ ಕೂಡಿ ಬಂದಂತಿದೆ. ಈ ಭಾಗದ ಜನರಿಗೆ ಧುಸ್ವಪ್ನವಾಗಿ ಕಾಡ್ತಿರೋ ಹುಲಿಯನ್ನ ಸೆರೆ ಹಿಡಿಯಲು ಅರಣ್ಯ ಇಲಾಖೆ ಕಾರ್ಯಾಚರಣೆಗೆ ಇಳಿದಿದೆ. ಗೋ ಹಂತಕ ಹುಲಿಯನ್ನ ಸೆರೆಹಿಡಿಯೊ ಕಾರ್ಯಾಚರಣೆಗೆ ಇಳಿದಿದೆ.
ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲ್ಲೂಕಿನ ನಾಲ್ಕೇರಿ, ತೂಚುಮಕೇರಿ, ಶ್ರೀಮಂಗಲ, ಬಿ ಶೆಟ್ಟಿಗೇರಿ, ಬೆಳ್ಳೂರು ಸೇರಿದಂತೆ ಹಲವು ಗ್ರಾಮಗಳಲ್ಲಿ ಕಳೆದೊಂದು ತಿಂಗಳಿನಿಂದ ಹುಲಿಯ ಹಾವಳಿ ಮಿತಿ ಮೀರಿದೆ. 10 ಹಸುಗಳ ಮೇಲೆ ದಾಳಿ ಮಾಡಿ ಆ ವ್ಯಾಘ್ರ ಕೊಂದು ಹಾಕಿದೆ. ಜನರು ಮನೆ ಬಿಟ್ಟು ಹೊರಬರಲೂ ಹೆದರುವಂತಾಗಿದೆ. ಯಾವಾಗ ಈ ಹುಲಿ ಮನುಷ್ಯರ ಮೇಲೆ ದಾಳಿ ಮಾಡುತ್ತೋ ಅಂತ ಭೀತಿಯಲ್ಲಿ ಬದುಕುವಂತಾಗಿದೆ. ಹೀಗಾಗಿ ಈ ಹುಲಿಯನ್ನ ಸೆರೆ ಹಿಡಿಯಲು ಅರಣ್ಯ ಸಚಿವಾಲಯ ಅನುಮತಿ ನೀಡಿದೆ.
ಈ ಹುಲಿಯ ಸಿಸಿಟಿವಿ ಫೋಟೋಗಳನ್ನ ಗಮನಿಸಿದಾಗ ಇದು ನಾಗರಹೊಳೆಯ ಅಭಯಾರಣ್ಯದಲ್ಲಿ ಎರಡು ವರ್ಷಗಳ ಹಿಂದೆ ಗುರುತಿಸಲ್ಪಟ್ಟಿದ್ದ 22ಯು44 ಐಡಿ ಯ ಹುಲಿ ಅಂತ ಕಂಡು ಹಿಡಿಯಲಾಗಿದೆ. 4 ರಿಂದ 5 ವರ್ಷ ಪ್ರಾಯದ ಈ ಹುಲಿ ಅರಣ್ಯ ಬಿಟ್ಟು ನಾಡಿನತ್ತ ಬಂದಿರೋದು ಯಾಕೆ ಅನ್ನೋದು ನಿಗೂಢವಾಗಿದೆ.
ಸದ್ಯ ತೂಚುಮಕೇರಿ ಗ್ರಾಮ ವ್ಯಾಪ್ತಿಯಲ್ಲಿ ಐದು ದಿನಗಳ ಹಿಂದೆ ಇದು ಹೆಜ್ಜೆ ಗುರುತು ಮೂಡಿಸಿದೆ. ಹೀಗಾಗಿ ಇದೇ ಊರಿನ ಶಾಲೆಯಲ್ಲಿ ಅರಣ್ಯ ಇಲಾಖೆ ಬಿಡಾರ ಹೂಡಿದ್ದು ಇಂದಿನಿಂದಲೇ ಹುಲಿ ಸೆರೆಗೆ ಕಾರ್ಯಾಚರಣೆ ನಡೆಸಿದೆ. ಮತ್ತಿಗೋಡು ಶಿಬಿರದಿಂದ ಎರಡು ಸಾಕಾನೆಗಳಾದ ಭೀಮ ಮತ್ತು ಮಹೇಂದ್ರನನ್ನ ಕರೆಸಲಾಗಿದೆ. ಜೊತೆಗೆ ನಾಗರಹೊಳೆ ಅಭಯಾರಣ್ಯದ ಪಶು ವೈದ್ಯ ಡಾ ರಮೇಶ್ ಕೂಡ ಸಾತ್ ನೀಡಿದ್ದಾರೆ. ವಿಶೇಷವಾಗಿ ಆದಿವಾಸಿ ಜನರನ್ನು ಕರೆಸಿ ಹುಲಿಯ ಜಾಡು ಪತ್ತೆ ಹಚ್ಚಲಾಗುತ್ತಿದೆ.
ಆದ್ರೆ ಅರಣ್ಯ ಇಲಾಖೆಗೆ ಬಹುದೊಡ್ಡ ತಲೆ ನೋವು ಅಂದ್ರೆ ಈ ಹೆಣ್ಣು ಹುಲಿ ಇನ್ನು ಸಣ್ಣ ಪ್ರಾಯದ್ದಾಗಿದ್ದು, ಕಳೆದ ನಾಲ್ಕು ದಿನಗಳಿಂದ ಎಲ್ಲಿದೆ ಅನ್ನೋ ಸುಳಿವನ್ನೇ ನೀಡಿಲ್ಲ. ಕಳೆದ ವರ್ಷವೂ ಸುಮಾರು 15 ದಿನಗಳ ಕಾಲ ಅರಣ್ಯ ಇಲಾಖೆ ಹುಲಿಗಾಗಿ ಇನ್ನಿಲ್ಲದ ಪ್ರಯತ್ನ ನಡೆಸಿ ಸುಸ್ತಾಗಿತ್ತು. ಇದೀಗ ಈ ಹುಲಿ ಕಣ್ಣಿಗೆ ಬೀಳುತ್ತಾ, ಸೆರೆಯಾಗುತ್ತಾ ಅಂತ ಎಲ್ಲರೂ ಕಾತರದಿಂದ ಕಾಯುವಂತಾಗಿದೆ.