ಕೊರೊನಾ ಸೋಂಕು ಎರಡನೇ ಅಲೆಯಲ್ಲಿ ನಾಡಿನ ಹಲವರು ತಮ್ಮ ತಂದೆ-ತಾಯಿ, ಪೋಷಕರು ಆಪ್ತರನ್ನು ಕಳೆದುಕೊಂಡಿದ್ದಾರೆ. ಮತ್ತಷ್ಟು ಮಂದಿ ತಮ್ಮವರನ್ನು ಕಾಪಾಡಿಕೊಳ್ಳಲು ಸಾಕಷ್ಟು ಶ್ರಮವನ್ನು ವಹಿಸಿದ್ದರು. ಇದರಲ್ಲಿ ನಟ ದುನಿಯಾ ವಿಜಯ್ ಕೂಡ ಒಬ್ಬರು. ಸೋಂಕಿಗೊಳಗಾದ ಪೋಷಕರನ್ನು ದೂರ ಮಾಡದೇ ವೈದ್ಯರ ಸಲಹೆಯಂತೆ ಮನೆಯಲ್ಲೇ ಚಿಕಿತ್ಸೆ ನೀಡಿದ್ರೆ ಅವರನ್ನ ಉಳಿಸಿಕೊಳ್ಳಬಹುದು ಎಂಬುವುದನ್ನು ಸಾಬೀತು ಮಾಡಿದ್ದರು.

ಕೊರೊನಾ ಸೋಂಕಿಗೊಳಗಾಗಿದ್ದ ತಮ್ಮ ತಂದೆ-ತಾಯಿಯನ್ನ ಮನೆಯಲ್ಲೇ ಇರಿಸಿಕೊಂಡು ವೈದ್ಯರ ಮಾರ್ಗದರ್ಶನ ಪಡೆದು ಚಿಕಿತ್ಸೆ ನೀಡಿ ಸೋಂಕಿನಿಂದ ಗುಣಮುಖರನ್ನಾಗಿಸಿದ್ದರು. ಅಲ್ಲದೇ ತಮ್ಮ ತಂದೆ-ತಾಯಿಯನ್ನ ಹೇಗೆ ಆರೈಕೆ ಮಾಡಲಾಯ್ತು ಎಂಬ ವಿಡಿಯೋವನ್ನೂ ಹಂಚಿಕೊಂಡಿದ್ದ ಅವರು, ಕೊರೊನಾ ವಿರುದ್ಧ ಹೇಗೆ ಗೆಲ್ಲಬಹುದು ಎಂಬ ಭಾವನಾತ್ಮಕ ಸಂದೇಶವನ್ನೂ ತಮ್ಮ ಅಭಿಮಾನಿಗಳಿಗೆ ನೀಡಿದ್ದರು.

ಆದರೆ ಇನ್ನೇನು ಸಮಸ್ಯೆ ಬಗೆಹರಿಯಿತು ಎನ್ನುತ್ತಿರುವಾಗಲೇ ದುನಿಯಾ ವಿಜಯ್ ಅವರ ತಾಯಿ ನಾರಾಯಣಮ್ಮ ಅವರಿಗೆ ಬ್ರೇನ್ ಸ್ಟ್ರೋಕ್ ಆದ ಆರೋಗ್ಯ ತೀವ್ರ ಹದಗೆಟ್ಟಿತ್ತು. ಈ ವೇಳೆಯೂ ಮನೆಯಲ್ಲೇ ವಿಜಯ್ ತಮ್ಮ ತಾಯಿಗೆ ಮನೆಯಲ್ಲೇ ಚಿಕಿತ್ಸೆ ವ್ಯವಸ್ಥೆ ಮಾಡಿದ್ದರು. ಆದರೆ ಇಂದು ಅವರು ಕೊನೆಯುಸಿರೆಳೆದಿದ್ದು, ಅಮ್ಮ ಮತ್ತೆ ಹುಟ್ಟಿ ಬಾ ಎಂದು ಸಾಮಾಜಿಕ ಜಾಲತಾಣದಲ್ಲಿ ಅಮ್ಮನೊಂದಿಗೆ ಇರುವ ಫೋಟೋವನ್ನು ಹಂಚಿಕೊಂಡಿದ್ದಾರೆ.

ಅಂದು ದುನಿಯಾ ವಿಜಯ್​ ಏನು ಹೇಳಿದ್ರು..?
ಸುಮಾರು ಒಂದು ತಿಂಗಳಿಂದ ನನ್ನ ಜೀವನದಲ್ಲಿ ನಡೆದ ಕೆಲವು ಘಟನೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. ಮನುಷ್ಯ ಯಾವಾಗಲೂ ಪಾಸಿಟಿವ್ ಆಗಿರಬೇಕು ಅಂತಾರೆ. ನಾನು ಜೀವನದಲ್ಲಿ ಇರೋದು ಯಾವಾಗಲೂ ಹಾಗೇನೆ. ಆದರೆ ಒಂದು ದಿನ ನನ್ನ ಜನ್ಮದಾತರಿಬ್ಬರಿಗೂ ಕೊರೋನಾ ಪಾಸಿಟಿವ್ ಆಗಿದೆ ಎಂದಾಗ ಒಂದು ಕ್ಷಣ ನಲುಗಿದೆ. ಮತ್ತೆ ಮರುಕ್ಷಣ ಕಾರ್ಯಶೀಲನಾದೆ. ಬಿಯು ನಂಬರ್ ಬರೋವರೆಗೂ ನಮ್ಮ ತಂದೆ ತಾಯಿಗೆ ಬೆಡ್ ಸಿಗಲ್ಲ ಎಂಬ ವಿಷಯ ನನಗೆ ತಿಳಿಯಿತು. ನನ್ನ ತಂದೆಗೆ 80 ವರ್ಷ ವಯಸ್ಸು, ನನ್ನ ತಾಯಿಗೆ 76 ವರ್ಷ. ಈಗಾಗಲೇ ಅವರ ಆರೋಗ್ಯದ ಸ್ಥಿತಿ ಹದಗೆಟ್ಟಿದೆ. ಯೋಚಿಸಿಕೊಂಡು ಕೂರುವ ಸಮಯ ಇದಲ್ಲ ಎಂದು ತಿಳಿದ ನಾನು ನನ್ನ ಆತ್ಮೀಯ ವೈದ್ಯ ವಿದ್ಯಾನಂದ ರನ್ನು ಸಂಪರ್ಕಿಸಿದೆ. ಆಗ ಅವರು ಬೆಡ್​ಗೆ ಕಾಯದೇ ಟ್ರೀಟ್ಮೆಂಟ್ ಆರಂಭಿಸಲು ಹೇಳಿದರು.

ಅಂದು ಡಾಕ್ಟರ್ ಜೊತೆ ಸಾಯಂಕಾಲ ಮಾತನಾಡಿ ನಂತರ ರಾತ್ರಿ ಒಬ್ಬನೇ ಯೋಚಿಸುತ್ತಾ ಕುಳಿತಾಗ ‘ನಿಮ್ಮ ತಂದೆ-ತಾಯಿಗೆ ಬಂದಿರುವ ಕೊರೊನಾ ಅವರನ್ನು ಆರೈಕೆ ಮಾಡುವ ಸಮಯದಲ್ಲಿ ನಿನಗೂ ಬಂದು ಸಾಯುವೆ ನೆಂಬ ಭಯವೇ’ ಎಂಬ ಪ್ರಶ್ನೆಯನ್ನು ನನ್ನ ಆತ್ಮಸಾಕ್ಷಿ ನನ್ನ ಮುಂದಿಟ್ಟಿತು. ಮರುಕ್ಷಣದಲ್ಲೇ ನನ್ನ ಆತ್ಮಸಾಕ್ಷಿಗೆ ನನ್ನ ಉತ್ತರ ನಗುವಾಗಿತ್ತು. ಅವರೇ ನೀಡಿದ ಈ ಜನ್ಮ ಅವರ ಆರೈಕೆ ಸಂದರ್ಭದಲ್ಲಿ ಹೋದರೆ ಅದಕ್ಕಿಂತ ಅದೃಷ್ಟ ಇನ್ನೇನಿದೆ ಎಂದುಕೊಂಡು, ಸುಮಾರು 15 ಗಂಟೆಗಳ ನಂತರ.. ಅಂದರೆ ಮರುದಿನ ಬೆಳಗ್ಗೆ 9:00ರ ಮುಂಜಾನೆಗೆ ಒಂದು ಆಟೋದಲ್ಲಿ ಆಕ್ಸಿಜನ್, ಮೆಡಿಸಿನ್ ಜತೆ ಈಶ್ವರ್ ಎಂಬ ಆರೋಗ್ಯ ಶುಶ್ರೂಷಕ ಬಂದು ಇಳಿದರು. ನಾನು ನನ್ನ ಮಗ ಮತ್ತು ಕೀರ್ತಿ ಮೂರು ಜನ ನಮ್ಮ ತಂದೆ ತಾಯಿಯನ್ನು ಕರೆದುಕೊಂಡು ಹೋಗಲು ಬಂದಿದ್ದ ಕ್ರೂರಿ ಕೊರೊನಾ ಜೊತೆ ಸೆಣೆಸಾಡಲು ನಿಂತೆವು.

ಮಾನಸಿಕವಾಗಿ ನಾನು ನಂಬಿದ ಗುರುಗಳು ನನ್ನ ಜತೆಯಲ್ಲಿದ್ದರೆ, ದೈಹಿಕವಾಗಿ ನಮ್ಮ ಜೊತೆ ಆರೋಗ್ಯ ಶುಶ್ರೂಷಕ ಈಶ್ವರ್ ಪ್ರತಿ ದಿನ ಬೆಳಗ್ಗೆ ಮತ್ತು ಸಂಜೆ ಅರ್ಧಗಂಟೆ ಬಂದು ಹೋಗುತ್ತಿದ್ದರು. ನಮ್ಮ ತಂದೆ ಈಗಾಗಲೇ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದರು. ಅದರಲ್ಲಿ ಈ ಕೊರೊನಾ ಅವರನ್ನು ತುಂಬಾ ಬಳಲುವಂತೆ ಮಾಡಿತು. ನಮ್ಮ ತಾಯಿ ಎರಡು ಮೂರು ದಿನದಲ್ಲಿ ಚಿಕಿತ್ಸೆಗೆ ಸ್ಪಂದಿಸಲು ಪ್ರಾರಂಭಿಸಿದರು. ಈ ನಡುವೆ ಪ್ರತಿ ದಿನ ವಿಡಿಯೋ ಕಾಲ್ ಮೂಲಕ ವೈದ್ಯರು ಚಿಕಿತ್ಸೆಯನ್ನು ಹೇಳುತ್ತಿದ್ದರು ಮತ್ತು ಆರೋಗ್ಯದ ಬಗ್ಗೆ ಮಾಹಿತಿ ಪಡೆಯುತ್ತಿದ್ದರು. ಅದರ ಜತೆಗೆ ಪ್ರತಿ ದಿನ ಬರುತ್ತಿದ್ದ ಈಶ್ವರ ನಮ್ಮಗಳ ಪಾಲಿಗೆ ನಿಜವಾದ ಈಶ್ವರನೇ ಆದ.
ನಮ್ಮ ತಂದೆಯ ಆರೋಗ್ಯ ಮಾತ್ರ ದಿನದಿಂದ ದಿನಕ್ಕೆ ಬಿಗಡಾಯಿಸಲು ಪ್ರಾರಂಭಿಸಿತು. ಯಾವ ಮಟ್ಟಿಗೆ ಎಂದರೆ ನನ್ನ ಆತ್ಮೀಯರು ಫೋನ್ ಮಾಡಿದಾಗ ನಮ್ಮ ತಂದೆ ನಮ್ಮನ್ನು ಬಿಟ್ಟು ಹೋಗುತ್ತಾರೆ ಏನು ಎಂಬ ಅನುಮಾನ ಕಾಡುತ್ತಿದೆ ಎಂದು ಸ್ವತಃ ನಾನೇ ಹೇಳಿದ್ದುಂಟು. ಆ ಕಾರಣಕ್ಕೆ ಅವರ ಜತೆ ಕಳೆಯುತ್ತಿರುವ ಕೊನೆಯ ಕ್ಷಣಗಳು ನೆನಪಿನಲ್ಲಿ ಉಳಿಯಲಿ ಎಂಬ ಉದ್ದೇಶದಿಂದ ವಿಡಿಯೋ ಮಾಡಲು ಪ್ರಾರಂಭಿಸಿದೆವು. ಇದರ ಮಧ್ಯೆ ನಾನು ಭರವಸೆಯನ್ನು ಮಾತ್ರ ಕಳೆದುಕೊಂಡಿರಲಿಲ್ಲ. ಮೊದಲು ನನ್ನ ತಾಯಿ ಚೇತರಿಸಿಕೊಂಡು ಕೊರೊನಾದಿಂದ ಸಂಪೂರ್ಣವಾಗಿ ಗುಣಮುಖರಾದರು.

‘ನೀನು ಹೆದರಬೇಡ. ಚೇತರಿಸಿಕೊಂಡ ನಂತರ ನನ್ನಮ್ಮ ನನ್ನನ್ನು ಕರೆದು ‘ ನಮಗೆ ಯಾರಿಗೂ ಸಿಗದ ಯೋಗ ನಿನಗೆ ಸಿಕ್ಕಿದೆ. ನಿನ್ನನ್ನು ಪ್ರೀತಿಸುವವರು ಇರುವವರೆಗೂ, ಅವರ ಆಶೀರ್ವಾದ, ಆರೈಕೆ ನಿನ್ನನ್ನು ಕಾಯುತ್ತದೆ’ ಎಂದು ಹೇಳಿದರು. ನಿಜವಾಗಲೂ ನಮ್ಮ ತಾಯಿ ಹೇಳಿದಂತೆ ಆಯಿತು. ನಿಮ್ಮಗಳ ಆಶೀರ್ವಾದ ಮತ್ತು ದೈವ ಬಲದಿಂದ ನಮ್ಮ ಮನೆಯಲ್ಲಿ ಚಮತ್ಕಾರ ನಡೆಯಿತು. ನಮ್ಮ ತಂದೆ ದಿನದಿಂದ ದಿನಕ್ಕೆ ಚೇತರಿಸಿಕೊಳ್ಳುತ್ತಾ ಬಂದರು.

ನಾನು ನಿಮ್ಮೆಲ್ಲರ ಬಳಿ ಕೇಳಿಕೊಳ್ಳುವುದಿಷ್ಟೇ.. ಕೊರೊನಾ ಬಂತು ಎಂದು ಧೃತಿಗೆಡಬೇಡಿ, ತಂದೆ-ತಾಯಿಯರನ್ನು ಕೈಬಿಡಬೇಡಿ. ನನ್ನ ತಂದೆ-ತಾಯಿ ಬದುಕಿದ್ದಾರೆ ಎಂಬ ಖುಷಿಯಿಂದ ಈ ಘಟನೆಯನ್ನು ಹಂಚಿಕೊಳ್ಳುತ್ತಿಲ್ಲ, ಎಷ್ಟೋ ಜನ ನನ್ನ ರೀತಿ ಸೇವೆ ಮಾಡಿ ತಂದೆತಾಯಿಯನ್ನು ಕಳೆದುಕೊಂಡವರಿದ್ದಾರೆ. ಅವರ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆ. ಆದರೆ ಯಾವುದೇ ಕಾರಣಕ್ಕೂ ಧೃತಿಗೆಡಬೇಡಿ. ಸಕಾರಾತ್ಮಕವಾಗಿ ಯೋಚಿಸಿ ಈ ಕೊರೊನಾ ವಿರುದ್ಧ ಗೆಲ್ಲೋಣ. ಜತೆಗೆ ನನ್ನ ಜೀವನದಲ್ಲಿ ನಡೆದ ಈ ಘಟನೆ ಕೆಲವರಿಗೆ ಸ್ಪೂರ್ತಿಯಾಗುತ್ತದೆ ಎಂಬ ಕಾರಣಕ್ಕೆ ಇದನ್ನು ಹಂಚಿಕೊಂಡಿದ್ದೇನೆ. ಏನಾದರೂ ತಪ್ಪಾಗಿದ್ದರೆ ಕ್ಷಮೆಯಿರಲಿ.

ಇಂತಿ- ನಿಮ್ಮ ವಿಜಯ್

The post ಕೊನೆಗಾಲದಲ್ಲಿ ಮಗುವಿನಂತೆ ತಾಯಿ ಸೇವೆ ಮಾಡಿದ್ದರು ದುನಿಯಾ ವಿಜಯ್ appeared first on News First Kannada.

Source: newsfirstlive.com

Source link