ಸೌಂಥಾಂಪ್ಟನ್: ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಗೆದ್ದುಕೊಳ್ಳುವ ಮೂಲಕ ನ್ಯೂಜಿಲೆಂಡ್ ಇತಿಹಾಸ ನಿರ್ಮಿಸಿದೆ. ಭಾರತದ ವಿರುದ್ಧ 8 ವಿಕೆಟ್‍ಗಳಿಂದ ಗೆದ್ದ ನ್ಯೂಜಿಲೆಂಡ್ ಚೊಚ್ಚಲ ಐಸಿಸಿ ಟ್ರೋಫಿಗೆ ಮುತ್ತಿಕ್ಕಿದೆ.

ಗೆಲ್ಲಲು 139 ರನ್‍ಗಳ ಗುರಿಯನ್ನು ಪಡೆದ ನ್ಯೂಜಿಲೆಂಡ್ 45.5 ಓವರ್ ಗಳಲ್ಲಿ  2 ವಿಕೆಟ್ ನಷ್ಟಕ್ಕೆ 140 ರನ್ ಹೊಡೆಯುವ ಮೂಲಕ ವಿಜಯದ ನಗೆ ಬೀರಿತು. ಇಲ್ಲಿಯವರೆಗೆ ಐಸಿಸಿ ಆಯೋಜಿಸಿದ್ದ ಯಾವುದೇ ಟೂರ್ನಿಯನ್ನು ನ್ಯೂಜಿಲೆಂಡ್ ಗೆದ್ದಿರಲಿಲ್ಲ. ಆದರೆ ಈ ಬಾರಿ ಫೈನಲ್ ಗೆಲ್ಲುವ ಮೂಲಕ ಐಸಿಸಿ ಟ್ರೋಫಿ ಗೆಲ್ಲುವ ಕನಸನ್ನು ಕೊನೆಗೂ ನನಸು ಮಾಡಿದೆ.

ನ್ಯೂಜಿಲೆಂಡ್ ಪರ ನಾಯಕ ಕೇನ್ ವಿಲಿಯಮ್ಸನ್ ಮತ್ತು ರಾಸ್ ಟೇಲರ್ ಮುರಿಯದ ಮೂರನೇ ವಿಕೆಟಿಗೆ 173 ಎಸೆತಗಳಲ್ಲಿ 96 ರನ್ ಜೊತೆಯಾಟವಾಡಿ ಗೆಲುವು ತಂದುಕೊಟ್ಟರು. ಕೇನ್ ವಿಲಿಯಮ್ಸನ್ 52 ರನ್(89 ಎಸೆತ, 8 ಬೌಂಡರಿ), ರಾಸ್ ಟೇಲರ್ 47 ರನ್(100 ಎಸೆತ, 6 ಬೌಂಡರಿ) ಹೊಡೆದರು. ಭಾರತದ ಪರ ಸ್ಪಿನ್ನರ್ ಅಶ್ವಿನ್ 2 ವಿಕೆಟ್ ಪಡೆದರು.

5ನೇ ದಿನ 2 ವಿಕೆಟ್ ನಷ್ಟಕ್ಕೆ 62 ರನ್‍ಗಳಿಸಿದ್ದ ಭಾರತ ಇಂದು 8 ವಿಕೆಟ್ ಗಳ ಸಹಾಯದಿಂದ 92 ರನ್‍ಗಳಿಸಿ ಅಂತಿಮವಾಗಿ 73 ಓವರ್‍ಗಳಲ್ಲಿ 170 ರನ್‍ಗಳಿಗೆ ಆಲೌಟ್ ಆಯ್ತು. ಭಾರತದ ಪರ ರಿಷಭ್ ಪಂತ್ 41 ರನ್(88 ಎಸೆತ, 4 ಬೌಂಡರಿ), ರವೀಂದ್ರ ಜಡೇಜಾ 16 ರನ್, ಅಜಿಂಕ್ಯಾ ರಹಾನೆ 15 ರನ್, ವಿರಾಟ್ ಕೊಹ್ಲಿ ಮತ್ತು ಮೊಹಮ್ಮದ್ ಶಮಿ 13 ರನ್ ಹೊಡೆದು ಔಟಾದರು.

ಟಿಮ್ ಸೌಥಿ 4 ವಿಕೆಟ್ ಪಡೆದರೆ, ಟ್ರೆಂಡ್ ಬೌಲ್ಟ್ 3, ಕೈಲ್ ಜೇಮಿಸನ್ 2, ನೆಲಿ ವ್ಯಾಗ್ನರ್ 1 ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್
ಭಾರತ ಮೊದಲ ಇನ್ನಿಂಗ್ಸ್ 217/10
ನ್ಯೂಜಿಲೆಂಡ್ ಮೊದಲ ಇನ್ನಿಂಗ್ಸ್ 249/10
ಭಾರತ ಎರಡನೇ ಇನ್ನಿಂಗ್ಸ್ 170/10
ನ್ಯೂಜಿಲೆಂಡ್ ಎರಡನೇ ಇನ್ನಿಂಗ್ಸ್ 140/2

The post ಕೊನೆಗೂ ಕನಸು ನನಸು: ಫಸ್ಟ್ ಟೈಂ ಐಸಿಸಿ ಟ್ರೋಫಿಗೆ ಮುತ್ತಿಕ್ಕಿದ ನ್ಯೂಜಿಲೆಂಡ್ appeared first on Public TV.

Source: publictv.in

Source link