ಬೆಂಗಳೂರು: ಕನ್ನಡದ ಫೇಮಸ್ ರಿಯಾಲಿಟಿ ಶೋ 72ನೇ ದಿನಕ್ಕೆ ಸ್ಥಗಿತಗೊಂಡಿದೆ. ಸದ್ಯ ಬಿಗ್ ಮನೆಯಿಂದ ಹೊರ ಬಂದಿರುವ ಸ್ಪರ್ಧಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳ ಜೊತೆ ಮಾತುಕತೆ ನಡೆಸಿದ್ದಾರೆ. ಅಂತೆಯೇ ನಟಿ ನಿಧಿ ಸುಬ್ಬಯ್ಯ ಅವರು ಕೂಡ ಫೇಸ್‍ಬುಕ್ ಮೂಲಕ ಲೈವ್ ಗೆ ಬಂದಿದ್ದು, ಈ ವೇಳೆ ತಮ್ಮ ವೈವಾಹಿಕ ಜೀವನದ ಬಗ್ಗೆ ಬಿಚ್ಚಿಟ್ಟಿದ್ದಾರೆ.

ಹೌದು. ಬಿಗ್ ಬಾಸ್ ಮನೆಯಲ್ಲಿ ಎಲ್ಲಾ ಸ್ಪರ್ಧಿಗಳು ತಮ್ಮ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ್ದರು. ನಿಧಿ ಕೂಡ ತಮ್ಮ ತಂದೆಗೆ ಕ್ಯಾನ್ಸರ್ ಆಗಿತ್ತು ಎಂಬಿತ್ಯಾದಿ ವಿಷಯಗಳನ್ನು ಹಂಚಿಕೊಂಡಿದ್ದರು. ಆದರೆ ಅವರು ತನಗೆ ಮದುವೆ ಆಗಿದೆ ಎನ್ನುವ ವಿಚಾರವನ್ನು ಎಲ್ಲಿಯೂ ಬಹಿರಂಗಪಡಿಸಿರಲಿಲ್ಲ. ಇದು ಏಕೆ ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಡಿತ್ತು. ಆದರೆ ಇದೀಗ ಈ ಕುರಿತು ಗುಟ್ಟು ಬಿಟ್ಟುಕೊಡುವ ಮೂಲಕ ಮದುವೆ ವಿಚಾರಕ್ಕೆ ನಿಧಿ ಫುಲ್ ಸ್ಟಾಪ್ ಹಾಕಿದ್ದಾರೆ.

ಮನೆಯಿಂದ ಹೊರಬಂದ ಬಳಿಕ ಮೈಸೂರಿನಲ್ಲಿರುವ ನಿಧಿ, ಫೇಸ್ ಬುಕ್ ಲೈವ್ ಮೂಲಕ ತಮ್ಮ ಬಿಗ್ ಬಾಸ್ ಜರ್ನಿ ಬಗ್ಗೆ ಮನ ಬಿಚ್ಚಿ ಮಾತನಾಡಿದ್ದಾರೆ. ಈ ವೇಳೆ ಬಿಗ್ ಬಾಸ್ ನಲ್ಲಿ ನಿಮ್ಮ ಮದುವೆ ಹಾಗೂ ಮದುವೆ ನಂತರದ ವೈವಾಹಿಕ ಜೀವನದ ಬಗ್ಗೆ ಯಾಕೆ ಮಾತನಾಡಿಲ್ಲ ಎಂಬ ಪ್ರಶ್ನೆಯನ್ನು ಕೇಳಲಾಗಿದೆ. ಈ ಪ್ರಶ್ನೆಗೆ ನಿಧಿ ಅವರು ನಾಜೂಕಾಗಿ ಉತ್ತರಿಸಿದ್ದಾರೆ.

ಈ ಪ್ರಶ್ನೆಗೆ ನಾನು ಹೇಗೆ ಉತ್ತರಿಸಲಿ. ನಿಜ ಜೀವನದಲ್ಲಿ ಏನಾದರೂ ಕೆಟ್ಟದ್ದು ಆದಾಗ ಅದರ ಬಗ್ಗೆ ಮಾತಾಡುವುದು. ಈ ಮೂಲಕ ಸಿಂಪತಿ ಪಡೆಯಬೇಕು ಅನ್ನೋ ವ್ಯಕ್ತಿ ನಾನಲ್ಲ. ಎಲ್ಲರ ಜೀವನದಲ್ಲೂ ಏರುಪೇರು ಇದ್ದೇ ಇರುತ್ತದೆ. ಒಳ್ಳೆಯ ಸಂಗತಿಗಳನ್ನು ಜನ ತುಂಬಾ ಕಡಿಮೆ ಮಾತಾಡ್ತಾರೆ, ಬೇಸರದ ಬಗ್ಗೆ ತುಂಬ ಮಾತಾಡ್ತಾರೆ. ಆದರೆ ನಾನು ಸ್ವಲ್ಪ ವಿಭಿನ್ನ ಅಂತ ನಿಧಿ ಹೇಳಿದ್ದಾರೆ.

ಅಲ್ಲದೆ ನನ್ನ ಜೀವನದಲ್ಲಿ ಏನಾಯ್ತು ಅನ್ನೋದು ಎಲ್ಲರಿಗೂ ಗೊತ್ತು. ಅಲ್ಲಿ ನಾನು ಏನಾದರೂ ಹೇಳಿದರೆ ಅದು ಒಂದು ಕಡೆಯ ಮಾತಾಗಿರುತ್ತದೆ. ನಾನು ಮದುವೆ ಆಗಿದ್ದೆ. 10 ತಿಂಗಳ ನಂತರ ಅದು ಮುಂದುವರಿಯಲಿಲ್ಲ. ಅಮ್ಮನ ಬಳಿಯೂ ಈ ಬಗ್ಗೆ ನಾನು ಚರ್ಚೆ ಮಾಡಲ್ಲ. ಅದನ್ನು ಅಲ್ಲಿಗೆ ಬಿಟ್ಟು ಜೀವನದ ಜೊತೆ ಮುಂದೆ ಸಾಗೋಣ ಅನ್ನೋದು ನನ್ನ ಪಾಲಿಸಿ. ಅದಕ್ಕೆ ನಾನು ಅದರ ಬಗ್ಗೆ ಅಲ್ಲಿ ಮಾತನಾಡಲಿಲ್ಲ ಎಂದು ತಿಳಿಸಿದ್ದಾರೆ.

 

The post ಕೊನೆಗೂ ತಮ್ಮ ಮದುವೆ ಬಗ್ಗೆ ಮೌನ ಮುರಿದ ನಿಧಿ..! appeared first on Public TV.

Source: publictv.in

Source link