ಕೊನೆಗೂ ಪ್ರಧಾನಿ ಮೋದಿ ‘ರೈತ ಶಕ್ತಿ’ಗೆ ತಲೆ ಬಾಗಿದ್ದಾರೆ -ಟಿ.ಎ.ಶರವಣ


ಬೆಂಗಳೂರು: ಕೊನೆಗೂ ಪ್ರಧಾನಿ ನರೇಂದ್ರ ಮೋದಿ ಒತ್ತಡಕ್ಕೆ ಮಣಿದು, ರೈತ ಶಕ್ತಿಗೆ ತಲೆ ಬಾಗಿದ್ದಾರೆ ಎಂದು ಜೆಡಿಎಸ್ ಹಿರಿಯ ನಾಯಕ, ವಿಧಾನಪರಿಷತ್ ಮಾಜಿ ಸದಸ್ಯ ಟಿ.ಎ. ಶರವಣ ಹೇಳಿದ್ದಾರೆ.

ಮೂರು ಕೃಷಿ ಕಾಯ್ದೆಯನ್ನ ವಾಪಸ್ ಪಡೆದ ಬೆನ್ನಲ್ಲೇ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಶರವಣ.. ಆ ಮೂರು ಕೃಷಿ ಕಾಯ್ದೆಗಳು ರೈತರ ಬದುಕಿಗೆ ಮತ್ತು ದೇಶದ ಕೃಷಿ ವ್ಯವಸ್ಥೆಗೆ ದಮನಕಾರಿ ಆಗಿದ್ದವು. ಹೀಗಾಗಿ ಮಣ್ಣಿನ ಮಕ್ಕಳ ಚಾರಿತ್ರಿಕ ಪ್ರತಿಭಟನೆಗೆ ಕಾರಣವಾಗಿದ್ದ ಮೂರು ದಮನಕಾರಿ ಕೃಷಿ ಕಾಯಿದೆಗಳನ್ನು ದಿಢೀರ್ ಹಿಂದಕ್ಕೆ ಪಡೆಯುವ ಮೂಲಕ ಮೋದಿ ರೈತ ಶಕ್ತಿಗೆ ತಲೆ ಬಾಗಿದ್ದಾರೆ ಎಂದಿದ್ದಾರೆ.

ಜಗತ್ತಿನ ಅತಿ ದೊಡ್ಡ ಪ್ರಜಾಸತ್ತೆ ಎಂದು ಬಿಂಬಿಸಲ್ಪಟ್ಟ ಭಾರತದಲ್ಲಿ ಪ್ರತಿಭಟನೆಗಳು ಕೂಡ ಐತಿಹಾಸಿಕ ಪ್ರಾಮುಖ್ಯತೆ ಪಡೆದುಕೊಂಡಿವೆ. ಪ್ರತಿಭಟನೆಗಳೂ ಕೂಡ ಪ್ರಜಾಸತ್ತೆಯ ಭಾಗವಾಗಿದೆ. ಈ ಪ್ರತಿಭಟನೆಗೆ ಬಲಿಷ್ಠ ಪ್ರಧಾನಿ ಎಂದು ಬಿಂಬಿಸಲ್ಪಟ್ಟ ನರೇಂದ್ರ ಮೋದಿ ಅವರೂ ಕೂಡ ಮಣಿದಿರುವುದು ರೈತಾಪಿ ಜನರ ಹೋರಾಟಕ್ಕೆ ಸಂದ ಜಯವಾಗಿದೆ ಎಂದು ಬಣ್ಣಿಸಿದ್ದಾರೆ.

ಜೆಡಿಎಸ್ ಯಾವತ್ತೂ ರೈತರ ಪರವಾಗಿದ್ದು, ಪ್ರಧಾನಿ ನಿರ್ಧಾರವನ್ನು ಸ್ವಾಗತಿಸಲಿದೆ ಎಂದು ಶರವಣ ಹೇಳಿದ್ದಾರೆ. ಪಂಜಾಬ್, ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗಳ ಹಿನ್ನಲೆಯಲ್ಲಿ ಜನಕ್ರೋಶಕ್ಕೆ ಬೆದರಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ವಿಶ್ಲೇಷಿಸಲಾಗಿದೆ ಆದರೂ, ಇದು ಕಪಟ ತೀರ್ಮಾನ ಆಗಿರದೆ, ನಿಜ ಅರ್ಥ ಪಡೆಯಲಿ. ಮತ್ತೆ ಹಿಂಬಾಗಿಲಿಂದ ಇಂಥ ಏಕಪಕ್ಷೀಯ ಕಾಯಿದೆಗಳು ಬರುವ ದಿನಗಳಲ್ಲಿ ಜಾರಿಯಾಗದಿರಲಿ ಎಂದು ಆಶಿಸಿದ್ದಾರೆ. ಪ್ರಜಾಸತ್ತೆಯಲ್ಲಿ ಜನಶಕ್ತಿಯೇ ಅಂತಿಮ ಎಂಬುದು ಈ ವಿದ್ಯಮಾನದ ಸಾರಾಂಶ ಎಂದು ಅವರು ಹೇಳಿದ್ದಾರೆ.

ಇದನ್ನೂ  ಓದಿ: ನೂತನ 3 ಕೃಷಿ ಕಾನೂನು ವಾಪಸ್​ -ಪ್ರಧಾನಿ ಮೋದಿ ಘೋಷಣೆ

The post ಕೊನೆಗೂ ಪ್ರಧಾನಿ ಮೋದಿ ‘ರೈತ ಶಕ್ತಿ’ಗೆ ತಲೆ ಬಾಗಿದ್ದಾರೆ -ಟಿ.ಎ.ಶರವಣ appeared first on News First Kannada.

News First Live Kannada


Leave a Reply

Your email address will not be published. Required fields are marked *