– ಹೆಟ್ಮಿಯರ್ ಸ್ಫೋಟಕ ಆಟ
– ಅಗ್ರಸ್ಥಾನಕ್ಕೆ ಏರಿದ ಆರ್‌ಸಿಬಿ

ಅಹಮದಾಬಾದ್: ಸೋಲುವ ಹಂತಕ್ಕೆ ಜಾರಿದ್ದ  ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೊನೆಯ ಓವರಿನಲ್ಲಿ ಡೆಲ್ಲಿ ವಿರುದ್ಧ 1 ರನ್‍ನಿಂದ ರೋಚಕವಾಗಿ ಗೆದ್ದುಕೊಂಡಿದೆ.

ಗೆಲ್ಲಲು 172 ರನ್‍ಗಳ ಕಠಿಣ ಗುರಿಯನ್ನು ಪಡೆದ ಡೆಲ್ಲಿ ನಾಯಕ ರಿಷಭ್ ಪಂತ್ ಮತ್ತು ಶಿಮ್ರಾನ್ ಹೆಟ್ಮಿಯರ್ ಅವರ ಅರ್ಧಶತಕದ ಹೊರತಾಗಿಯೂ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 170 ರನ್ ಹೊಡೆಯಿತು. ಈ ಮೂಲಕ ಒಟ್ಟು 10 ಅಂಕ ಸಂಪಾದಿಸಿದ ಆರ್‌ಸಿಬಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಏರಿದೆ.

ಗೆದ್ದಿದ್ದು ಹೇಗೆ?
ಡೆಲ್ಲಿ ತಂಡಕ್ಕೆ ಕೊನೆಯ 24 ಎಸೆತದಲ್ಲಿ 56 ರನ್ ಬೇಕಿತ್ತು. ಹರ್ಷಲ್ ಪಟೇಲ್ ಎಸೆದ 17ನೇ ಓವರ್‍ನಲ್ಲಿ 10 ರನ್ ಬಂದರೆ ಜೇಮಿಸನ್ ಎಸೆದ 18ನೇ ಓವರ್‍ನಲ್ಲಿ ಹೆಟ್ಮಿಯರ್ 3 ಸಿಕ್ಸರ್ ಸಿಡಿಸಿದರು. ಈ ಓವರಿನಲ್ಲಿ 21 ರನ್ ಬಂತು. ಈ ಮೂಲಕ ಪಂದ್ಯ ರೋಚಕ ಘಟಕ್ಕೆ ತಿರುಗಿತು. ಹರ್ಷಲ್ ಪಟೇಲ್‍ಎಸೆದ 19ನೇ ಓವರ್‍ನಲ್ಲಿ 11 ರನ್ ಬಂತು.

ಕೊನೆಯ 6 ಎಸೆತಕ್ಕೆ 14 ರನ್ ಬೇಕಿತ್ತು. ಸಿರಾಜ್ ಎಸೆದ ಮೊದಲ ಎರಡು ಎಸೆತದಲ್ಲಿ ಒಂದೊಂದು ರನ್ ಓಡಿದರೆ 3ನೇ ಎಸೆತದಲ್ಲಿ ಯಾವುದೇ ರನ್ ಬರಲಿಲ್ಲ. 4ನೇ ಎಸೆತದಲ್ಲಿ 2 ರನ್ ಬಂದರೆ 5 ಮತ್ತು 6ನೇ ಎಸೆತದಲ್ಲಿ ಪಂತ್ ಬೌಂಡರಿ ಹೊಡೆದರು. ಈ ಮೂಲಕ ಬೆಂಗಳೂರು ರೋಚಕವಾಗಿ 1 ರನ್‍ಗಳಿಂದ ಗೆದ್ದುಕೊಂಡಿತು.

ಪೃಥ್ವಿ ಶಾ 21 ರನ್, ರಿಷಭ್ ಪಂತ್ ಔಟಾಗದೇ 58 ರನ್(48 ಎಸೆತ, 6 ಬೌಂಡರಿ) ಹೆಟ್ಮಿಯರ್ ಔಟಾಗದೇ 53 ರನ್(25 ಎಸೆತ, 2 ಬೌಂಡರಿ, 4 ಸಿಕ್ಸರ್) ಹೊಡೆದು ತಂಡವನ್ನು ಜಯದತ್ತ ತಂದಿದ್ದರು.

ಜೇಮಿಸನ್ ಎಸೆದ 15ನೇ ಓವರಿನ ಮೊದಲ ಎಸೆತವನ್ನು ಹೆಟ್ಮಿಯರ್ ಬಲವಾಗಿ ಹೊಡೆದಿದ್ದರು. ಆದರೆ ಔಟ್ ಸೈಡ್ ಆಫ್‍ನಲ್ಲಿದ್ದ ಪಡಿಕ್ಕಲ್ ಕ್ಯಾಚ್ ಕೈ ಚೆಲ್ಲಿದ್ದರು. ಈ ವೇಳೆ ಹೆಟ್ಮೆಯರ್ 15 ರನ್ ಹೊಡೆದಿದ್ದರು.

ಎಬಿಡಿ ಸ್ಫೋಟಕ ಆಟ:
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಬೆಂಗಳೂರು 30 ರನ್ ಗಳಿಸುವಷ್ಟರಲ್ಲಿ ವಿರಾಟ್ ಕೊಹ್ಲಿ 12 ರನ್, ದೇವದತ್ ಪಡಿಕ್ಕಲ್ 17 ರನ್ ಗಳಿಸಿ ಔಟಾದರು.

ರಜತ್ ಪಟೀದಾರ್ 31 ರನ್(22 ಎಸೆತ, 2 ಬೌಂಡರಿ) ಹೊಡೆದರೆ ಗ್ಲೇನ್ ಮ್ಯಾಕ್ಸ್ ವೆಲ್ 25 ರನ್(20 ಎಸೆತ, 1 ಬೌಂಡರಿ, 2 ಸಿಕ್ಸರ್) ಹೊಡೆದು ಔಟಾದರು.

5 ವಿಕೆಟ್ 139 ರನ್‍ಗಳಿಸಿದ್ದಾಗ ಎಬಿಡಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಸ್ಟೋಯ್ನಿಸ್ ಎಸೆದ 20ನೇ ಓವರ್‍ನಲ್ಲಿ ಎಬಿಡಿ 3 ಸಿಕ್ಸ್ ಸಿಡಿಸಿದರು ಈ ಓವರ್‍ನಲ್ಲಿ 23 ರನ್ ರನ್ ಬಂತು. ಎಬಿಡಿ 35 ಎಸೆತದಲ್ಲಿ ಅರ್ಧಶತಕ ಹೊಡೆದರೆ 42 ಎಸೆತದಲ್ಲಿ 3 ಬೌಂಡರಿ, 5ಸಿಕ್ಸರ್ ಸಿಡಿಸಿ 75 ರನ್ ಗಳಿಸಿ ಅಜೇಯರಾಗಿ ಉಳಿದರು. ಅಂತಿಮವಾಗಿ ಬೆಂಗಳೂರು 5 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿತು.

The post ಕೊನೆಯ ಓವರಿನಲ್ಲಿ 23 ರನ್ ಚಚ್ಚಿದ ಎಬಿಡಿ – ಬೆಂಗಳೂರಿಗೆ ರೋಚಕ 1 ರನ್ ಜಯ appeared first on Public TV.

Source: publictv.in

Source link