ಕೊಪ್ಪಳದಲ್ಲಿ ಜಾನುವಾರುಗಳಿಗೆ ವಿಚಿತ್ರ ಕಾಯಿಲೆ: ತಿರುಗಿ ಬಿದ್ದು ಸಾಯುತ್ತಿವೆ ದನಕರುಗಳು – Disease for Cattles in Koppal Farmers Bring carcass to District Administration Office stage protest


ಕಾಯಿಲೆ ಹೆಸರು, ಚಿಕಿತ್ಸಾ ವಿಧಾನದ ಬಗ್ಗೆ ಮಾಹಿತಿ ಸಿಗದೆ ರೈತರು ಕಂಗಾಲಾಗಿದ್ದು, ಪಶುವೈದ್ಯರು ಸ್ಪಂದಿಸುತ್ತಿಲ್ಲ ಎಂದು ರೈತರು ದೂರಿದ್ದಾರೆ.

ಕೊಪ್ಪಳದಲ್ಲಿ ಜಾನುವಾರುಗಳಿಗೆ ವಿಚಿತ್ರ ಕಾಯಿಲೆ: ತಿರುಗಿ ಬಿದ್ದು ಸಾಯುತ್ತಿವೆ ದನಕರುಗಳು

ಕೊಪ್ಪಳ ಜಿಲ್ಲೆಯಲ್ಲಿ ಮೃತಪಟ್ಟ ಜಾನುವಾರುಗಳ ಕಳೇಬರಗಳನ್ನು ರೈತರು ಜಿಲ್ಲಾಡಳಿತ ಭವನಕ್ಕೆ ತಂದು ಪ್ರತಿಭಟಿಸಿದರು.

ಕೊಪ್ಪಳ: ಜಿಲ್ಲೆಯ ವಿವಿಧೆಡೆ ಜಾನುವಾರುಗಳಿಗೆ ವಿಚಿತ್ರ ಕಾಯಿಲೆಯೊಂದು ಕಾಡುತ್ತಿದೆ. ಕಾಯಿಲೆ ಹೆಸರು, ಚಿಕಿತ್ಸಾ ವಿಧಾನದ ಬಗ್ಗೆ ಮಾಹಿತಿ ಸಿಗದೆ ರೈತರು ಕಂಗಾಲಾಗಿದ್ದು, ಪಶುವೈದ್ಯರು ಸ್ಪಂದಿಸುತ್ತಿಲ್ಲ ಎಂದು ದೂರಿದ್ದಾರೆ. ಕೊಪ್ಪಳದ ಜಿಲ್ಲಾಡಳಿತ ಭವನದಕ್ಕೆ ಮೃತ ಜಾನುವಾರುಗಳ ಕಳೇಬರಗಳೊಂದಿಗೆ ಬಂದಿದ್ದ ರೈತರು ಮಂಗಳವಾರ (ನ 15) ಕೆಲ ಸಮಯ ಪ್ರತಿಭಟನೆ ನಡೆಸಿದರು. ತಾಲ್ಲೂಕಿನ ದನದನಕೊಡ್ಡಿ, ಕೂಕನಪಳ್ಳಿ, ಕಾಮನೂರು, ಕೆರಳ್ಳಿ ಗ್ರಾಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜಾನುವಾರುಗಳು ಮೃತಪಟ್ಟಿವೆ. ಕಳೆದ 15 ದಿನಗಳ ಅವಧಿಯಲ್ಲಿ 50ಕ್ಕೂ ಹೆಚ್ಚು ಜಾನುವಾರುಗಳು ತಿರುತಿರುಗಿ ಸಾವನ್ನಪ್ಪುತ್ತಿವೆ ಎಂದು ರೈತರು ಮಾಹಿತಿ ನೀಡಿದ್ದಾರೆ. ಜಾನುವಾರುಗಳಿಗೆ ಸಮಸ್ಯೆಯಾಗಿದೆ ಎಂದು ಮಾಹಿತಿ ನೀಡಿದರೂ ಚಿಕಿತ್ಸೆ ನೀಡಲು ಪಶುವೈದ್ಯರು ಗ್ರಾಮಗಳಿಗೆ ಬರುತ್ತಿಲ್ಲ ಎಂದು ದೂರಿದ್ದಾರೆ.

ಚರ್ಮಗಂಟು ರೋಗ ಉಲ್ಬಣ

ಪಶ್ಚಿಮ ಭಾರತದಲ್ಲಿ ಜಾನುವಾರುಗಳನ್ನು ಕಾಡುತ್ತಿದ್ದ ಚರ್ಮಗಂಟು ರೋಗವು (Lumpy Skin Disease) ಇದೀಗ ಕರ್ನಾಟಕದಲ್ಲಿಯೂ ಉಪಟಳ ನೀಡುತ್ತಿದೆ. ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ರಾಸುಗಳಿಗೆ ಚರ್ಮಗಂಟು ರೋಗವು ಕಾಣಿಸಿಕೊಂಡಿದ್ದು, ಹಸು, ಎತ್ತುಗಳು ಜೀವ ಕಳೆದುಕೊಳ್ಳುತ್ತಿವೆ. ರಾಯಚೂರು ಜಿಲ್ಲೆಯಲ್ಲಿಯೂ ರೋಗದ ಉಪಟಳ ಹೆಚ್ಚಾಗಿದೆ. ದಕ್ಷಿಣ ಕರ್ನಾಟಕ ಮತ್ತು ಮಧ್ಯ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಚರ್ಮಗಂಟು ರೋಗ ಕಾಣಿಸಿಕೊಂಡಿತ್ತು. ಆದರೆ ಇದೀಗ ರೋಗವು ಬಹುತೇಕ ಎಲ್ಲ ಜಿಲ್ಲೆಗಳನ್ನೂ ವ್ಯಾಪಿಸಿಕೊಂಡಿದ್ದು ರೈತರಲ್ಲಿ ಆತಂಕ ಮನೆ ಮಾಡಿದೆ.

ರೋಗ ಕಾಣಿಸಿಕೊಂಡ ರಾಸುಗಳ ಚರ್ಮದಲ್ಲಿ ಗಂಟುಗಳು ಕಾಣಿಸಿಕೊಳ್ಳುತ್ತವೆ. ರೋಗ ಕಾಣಿಸಿಕೊಳ್ಳುವ ಮೊದಲು ಲಸಿಕೆ ಕೊಡಬಹುದಾಗಿದೆ. ಆದರೆ ಒಮ್ಮೆ ರೋಗ ಕಾಣಿಸಿಕೊಂಡ ನಂತರ ರೋಗದ ಲಕ್ಷಣಗಳಿಗೆ ಉಪಚಾರ ಮಾಡಬಹುದೇ ಹೊರತು ನಿರ್ದಿಷ್ಟ ಔಷಧಿ ಇನ್ನೂ ಲಭ್ಯವಾಗುತ್ತಿಲ್ಲ. ಚರ್ಮಗಂಟು ರೋಗದ ತಡೆಗೆ ಜಾನುವಾರುಗಳಿಗೆ ಐಎಎಚ್‌ ಹಾಗೂ ವಿಬಿ ಲಸಿಕೆಗಳನ್ನು ಕೊಡಲಾಗುತ್ತಿದೆ. ಪಶುಸಂಗೋಪನಾ ಇಲಾಖೆಯ ವೈದ್ಯರು ಆರೋಗ್ಯವಂತ ರಾಸುಗಳನ್ನು ಕಾಪಾಡಲು ಶ್ರಮಿಸುತ್ತಿದ್ದಾರೆ. ಆದರೆ ಚರ್ಮಗಂಟು ರೋಗವು ಸಾಂಕ್ರಾಮಿಕವಾಗಿದ್ದು ತುಸು ಎಚ್ಚರ ತಪ್ಪಿಸಿದರೂ ಭೌಗೋಳಿಕ ಗಡಿ ಮೀರಿ ವಿಸ್ತರಿಸುವ ಅಪಾಯ ಎದುರಾಗಿದೆ.

ತಾಜಾ ಸುದ್ದಿ

TV9 Kannada


Leave a Reply

Your email address will not be published.