ಕೊಪ್ಪಳ ಜಿಲ್ಲೆ ಆರೋಗ್ಯ ಇಲಾಖೆ ಎಡವಟ್ಟು; ಲಸಿಕೆ ಪಡೆಯದಿದ್ದರೂ 2ನೇ ಡೋಸ್ ಲಸಿಕೆ ಪಡೆದಿರುವುದಾಗಿ ಮೆಸೇಜ್ | Many people gets 2nd dose completing message without taking dose in koppal


ಕೊಪ್ಪಳ ಜಿಲ್ಲೆ ಆರೋಗ್ಯ ಇಲಾಖೆ ಎಡವಟ್ಟು; ಲಸಿಕೆ ಪಡೆಯದಿದ್ದರೂ 2ನೇ ಡೋಸ್ ಲಸಿಕೆ ಪಡೆದಿರುವುದಾಗಿ ಮೆಸೇಜ್

ಲಸಿಕೆ ಪಡೆಯದಿದ್ದರೂ 2ನೇ ಡೋಸ್ ಲಸಿಕೆ ಪಡೆದಿರುವುದಾಗಿ ಮೆಸೇಜ್ ಪಡೆದ ಯುವಕರು

ಕೊಪ್ಪಳ: ಕೊರೊನಾ ವಿಚಾರದಲ್ಲಿ ಸರ್ಕಾರ ಅನೇಕ ಬಾರಿ ಪದೇ ಪದೇ ಎಡವುತ್ತಿದ್ದು, ಆರೋಗ್ಯ ಇಲಾಖೆ ಎಡವಟ್ಟಿನಿಂದಾಗಿ ಲಸಿಕೆ ಪಡೆಯದವರಿಗೂ ಲಸಿಕೆ ಸಂಪೂರ್ಣವಾಗಿದೆ ಎನ್ನುವ ಪ್ರಮಾಣ ಪತ್ರ ದೊರೆತಿರುವುದು ಲಸಿಕೆ ಹಾಕಿಸಿಕೊಳ್ಳದವರನ್ಬು ಚಿಂತೆಗೀಡುಮಾಡಿದೆ. ಜಿಲ್ಲೆಯ ಆರೋಗ್ಯ ಇಲಾಖೆ ಮಹಾ ಎಡವಟ್ಟು ಮಾಡಿದೆ. 2ನೇ ಡೋಸ್ ಲಸಿಕೆಯನ್ನು ಪಡೆಯದಿದ್ದರೂ ಪಡೆದಿರುವುದಾಗಿ ಹಲವರ ಮೊಬೈಲ್‌ಗೆ ಮೆಸೇಜ್ ಬಂದಿದೆ. ಇದರಿಂದ ಜನ ಆರೋಗ್ಯ ಇಲಾಖೆ ನಡೆಯ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳ ಎಡವಟ್ಟಿನಿಂದಾಗಿ ಕೊಪ್ಪಳದ ಕಾರಟಗಿ ತಾಲೂಕಿನ ಮರ್ಲಾನಹಳ್ಳಿಯಲ್ಲಿ ಕೊರೊನಾ ಎರಡನೇ ಡೋಸ್ ಪಡೆಯದವರಿಗೂ ಲಸಿಕೆ ಪಡೆಯಲಾಗಿದೆ ಎಂಬ ಸಂದೇಶ ಬಂದಿದೆ. ಈ ಹಿನ್ನೆಲೆಯಲ್ಲಿ ಎರಡನೇ ಲಸಿಕೆ ಪಡೆಯದೆ ಇದ್ದರೂ, ಸೆಕೆಂಡ್ ಡೋಸ್ ಕಂಪ್ಲೀಟ್ ಆಗಿದೆ ಎಂಬ ಪ್ರಮಾಣ ಪತ್ರ ಬಂದಿರುವುದು ಗ್ರಾಮಸ್ಥರನ್ನು ಕಂಗಾಲಾಗಿಸಿದೆ. ಮರ್ಲಾನಹಳ್ಳಿ ಗ್ರಾಮದ ಆಂಜನೇಯ ಹಾಗೂ ಚರಮಸ್ ಎಂಬ ಯುವಕರಿಗೆ ಈ ಮೇಸೆಜ್ ಬಂದಿದೆ. ಇವರಲ್ಲದೆ ಗ್ರಾಮದ ಇತರರಿಗೂ ಇದೇ ರೀತಿಯ ಸಂದೇಶಗಳು ಬರುತ್ತಿವೆ. ಸೆಪ್ಟೆಂಬರ್ 2021ರಲ್ಲಿ ಯುವಕರು ಮೊದಲನೇ ಲಸಿಕೆ ಹಾಕಿಸಿಕೊಂಡಿದ್ದು, ಎರಡನೇ ಡೋಸ್ ಹಾಕಿಸಿಕೊಳ್ಳಲು ಕಾಯುತಿದ್ದರು. ಈ ಮಧ್ಯೆಯೇ ಲಸಿಕೆ ಪೂರ್ಣಗೊಂಡಿದೆ ಎಂಬ ಪ್ರಮಾಣ ಪತ್ರ ದೊರೆತಿದೆ. ಈ ಸಂಬಂಧ ಆರೋಗ್ಯ ಇಲಾಖೆ ಗಮನಕ್ಕೆ ತರಲಾಗಿದೆ. ಆದರೆ, ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ತಲೆಕೆಡಿಸಿಕೊಂಡಿಲ್ಲ. ಈಗ ಎರಡನೇ ಲಸಿಕೆ ಹಾಕಿಸಿಕೊಳ್ಳಬೇಕೇ ಬೇಡವೇ ಎಂಬ ಚಿಂತೆಯಲ್ಲಿ ಯುವಕರಿದ್ದಾರೆ.

ಕೊರೊನಾ ಎರಡನೇ ಲಸಿಕೆ ಪಡೆಯದೆ ಇದ್ದರೂ, ನನಗೆ ಎರಡನೇ ಲಸಿಕೆ ಸಂಪೂರ್ಣವಾಗಿದೆ ಎನ್ನುವ ಪ್ರಮಾಣ ಪತ್ರ ದೊರೆತಿದೆ. ನನಗೆ ಇನ್ನೊಂದು ಲಸಿಕೆ ಪಡೆಯಬೇಕೇ? ಬೇಡವೇ? ಎನ್ನುವ ಗೊಂದಲದಲ್ಲಿದ್ದೀನಿ. ಗ್ರಾಮದ ಇತರರಿಗೂ ಇದೇ ಸಂದೇಶ ಬಂದಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳ ಎಡವಟ್ಟಿನಿಂದಾಗಿ ಲಸಿಕೆ ಪಡೆಯದೇ ಇದ್ದರೂ, ಸಂಕಷ್ಟ ಅನುಭವಿಸುವಂತಾಗಿದೆ. ಸಂಬಂಧ ಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು ಎಂದು ಆಂಜನೇಯ ತಾವರಗೇರಾ ಎಂಬ ಯುವಕ ಸರ್ಕಾರಕ್ಕೆ ಒತ್ತಾಯ ಮಾಡಿದ್ದಾರೆ.

TV9 Kannada


Leave a Reply

Your email address will not be published. Required fields are marked *