ಚಿಕ್ಕಮಗಳೂರು: ಹೆಮ್ಮಾರಿ ಕೊರೊನಾಗೆ ಕಾಫಿನಾಡು ಚಿಕ್ಕಮಗಳೂರಿನಲ್ಲಿ ಎರಡು ವರ್ಷದ ಮಗು ಬಲಿಯಾಗಿದೆ.

ಜಿಲ್ಲೆಯಲ್ಲಿ ಕೊರೊನಾಗೆ ಮಗು ಸಾವನ್ನಪ್ಪಿದ ಮೊದಲ ಪ್ರಕರಣ ಇದಾಗಿದೆ. ಜಿಲ್ಲೆಯ ಶೃಂಗೇರಿ ತಾಲೂಕಿನ ಕಿಗ್ಗಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಗು ಕೊರೊನಾಗೆ ಸಾವನ್ನಪ್ಪಿದ್ದು, ಮೃತ ಮಗು ಕಿಗ್ಗಾ ಗ್ರಾಮ ಪಂಚಾಯಿತಿ ಸದಸ್ಯರ ಮಗುವಾಗಿದೆ. ಮಗುವಿಗೆ ಕಳೆದೊಂದು ವಾರದಿಂದ ತೀವ್ರವಾದ ಕಫ ಸಮಸ್ಯೆ ಕಾಡುತ್ತಿತ್ತು. ಮಗುವನ್ನು ಇದೇ ಜೂನ್ 17 ರಂದು ಮಣಿಪಾಲ್‍ನ ಕಸ್ತೂರಿ ಬಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಕಳೆದ ನಾಲ್ಕು ದಿನದಿಂದ ಮಗುವಿಗೆ ಚಿಕಿತ್ಸೆ ನೀಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗಿದೆ ಮಗು ಕೊನೆಯುಸಿರೆಳೆದಿದೆ. ಕಳೆದ 21 ದಿನ ಜಿಲ್ಲೆಯಲ್ಲಿ 18 ವರ್ಷದ ಒಳಗಿನ 766 ಮಕ್ಕಳಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ. ಇದರಿಂದ ಜಿಲ್ಲೆಯ ಜನರಲ್ಲಿ ಆತಂಕ ಕೂಡ ಹೆಚ್ಚಾಗಿದೆ. ಕೊರೊನಾ ಮೊದಲ ಅಲೆಯಲ್ಲಿ 18 ವರ್ಷದೊಳಗಿನ 1,736 ಮಕ್ಕಳಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗಿತ್ತು. ಆದರೆ, ಯಾರೂ ಸಾವನ್ನಪ್ಪಿರಲಿಲ್ಲ. ಇಂದು ಸಾವನ್ನಪ್ಪಿದ್ದ ಮಗುವಿಗೂ ಕೂಡ ಬೇರೆ ಯಾವುದೇ ಆರೋಗ್ಯ ಸಮಸ್ಯೆ ಇರಲಿಲ್ಲ. ಕಫದ ಸಮಸ್ಯೆಯೊಂದೇ ಇದ್ದಿದ್ದು. ನಾಲ್ಕು ದಿನದ ಚಿಕಿತ್ಸೆಯ ಬಳಿಕವೂ ಮಗು ಸಾವನ್ನಪ್ಪಿರುವುದು ಜಿಲ್ಲೆಯ ಜನರಲ್ಲಿ ಆತಂಕ ತಂದಿದೆ.

The post ಕೊರೊನಾಗೆ ಎರಡು ವರ್ಷದ ಬಾಲಕ ಸಾವು – ಕಾಫಿನಾಡಲ್ಲಿ ಇದೇ ಮೊದಲ ಪ್ರಕರಣ appeared first on Public TV.

Source: publictv.in

Source link