ಬೆಂಗಳೂರು: ಕೊರೊನಾ ಸೋಂಕಿನಿಂದ ಕನ್ನಡ ಹಿರಿಯ ನಟ ರಾಜಾ ರಾಮ್ ಅವರು ಇಂದು ಸಾವನ್ನಪ್ಪಿದ್ದಾರೆ.

84 ವರ್ಷ ರಾಜಾ ರಾಮ್ ಅವರಿಗೆ ಕಳೆದ ಭಾನುವಾರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಕೋವಿಡ್ ಟೆಸ್ಟ್ ಮಾಡಿಸಿದ ಬಳಿಕ ಪಾಸಿಟಿವ್ ಎಂದು ಧೃಡಪಟ್ಟಿತ್ತು. ಬೆಡ್ ಸಿಗದ ಪರಿಣಾಮ ಅವರು ಮನೆಯಲ್ಲೇ ಹೋಂ ಕ್ವಾರಂಟೈನ್ ಆಗಿದ್ದರು. ಇಂದು ಉಸಿರಾಟದ ತೊಂದರೆ ಹೆಚ್ಚಾಗಿ ಮನೆಯಲ್ಲೇ ಕೊನೆಯುಸಿರೆಳೆದಿದ್ದಾರೆ.

ಆರ್. ಎಸ್. ರಾಜಾರಾಮ್ ಅವರು ಕೋಲಾರ ಜಿಲ್ಲೆಯ ಕೆ.ಜಿ.ಎಫ್ ನಲ್ಲಿ 1938ರ ಜುಲೈ 10ರಂದು ಜಿ.ಎಸ್.ರಘುನಾಥರಾವ್, ಶಾರದಾಬಾಯಿ ಪುತ್ರರಾಗಿ ಜನಿಸಿದ್ದರು. ರಾಜಾರಾಮ್ ಅವರು ಕರ್ನಾಟಕ ಸರ್ಕಾರದ ಸಚಿವಾಲಯದಲ್ಲಿ ಉದ್ಯೋಗಕ್ಕೆ ಸೇರಿ ಅಧೀನ ಕಾರ್ಯದರ್ಶಿ ಹುದ್ದೆಗೇರಿ ನಿವೃತ್ತಿ ಹೊಂದಿದ್ದರು. ರಂಗಭೂಮಿಯಲ್ಲಿ ಆಸಕ್ತರಾದ ರಾಜಾರಾಮ್ ಅವರು ಮಲ್ಲೇಶ್ವರದ ಸ್ನೇಹಿತರೊಡನೆ ರಸಿಕ ರಂಜನಿ ಕಲಾವಿದರು ಸಂಸ್ಥೆ ಸ್ಥಾಪಿಸಿದರು. ಪರ್ವತವಾಣಿ, ಕೈಲಾಸಂ, ದಾಶರಥಿದೀಕ್ಷಿತ್, ಕೆ. ಗುಂಡಣ್ಣ ಮುಂತಾದವ ನಾಟಕಗಳಲ್ಲಿ ಅಭಿನಯಿಸಿದ್ದರು. ರಣ ಹದ್ದು, ಮಗು ಮದ್ವೆ, ಪಂಚಭೂತ, ಹೋಂರೂಲು, ಅವರೇ ಇವರು- ಇವರೇ ಅವರು ಮೊದಲಾದವು ಇವರ ಕೆಲವು ಪ್ರಸಿದ್ಧ ನಾಟಕಗಳು.

ರಾಜಾರಾಮ್ ಅವರು ಸರಸ್ವತಿ ಕಲಾನಿಕೇತನ, ಪ್ರಧಾನ ಮಿತ್ರ ಮಂಡಲಿ, ಸುಪ್ರಭಾತ ಕಲಾವಿದರು, ಕಮಲ ಕಲಾ ಮಂದಿರ ಮುಂತಾದ ಸಂಸ್ಥೆಗಳೊಡನೆ ನಿರಂತರ ಒಡನಾಟ ಹೊಂದಿದ್ದರು. 1964ರಲ್ಲಿ ಸಚಿವಾಲಯ ಉದ್ಯೋಗಿಗಳೊಡನೆ ‘ಸಚಿವಾಲಯ ಸಾಂಸ್ಕೃತಿಕ ಸಂಘ’ ಸ್ಥಾಪಿಸಿದರು. ಆ ಮೂಲಕ ಕೋಲ್ಕತ್ತದಲ್ಲಿ ನಡೆದ ಸಚಿವಾಲಯ ಕ್ಲಬ್ ನೌಕರರ ನಾಟಕ ಸ್ಪರ್ಧೆಗಳಲ್ಲಿ ಭಾಗಿಯಾದರು. ಕರ್ನಾಟಕ ಸರಕಾರದ ವಾರ್ತಾ ಮತ್ತು ಪ್ರಚಾರ ಇಲಾಖೆಯ ಸಂಗೀತ ಮತ್ತು ನಾಟಕ ವಿಭಾಗದ ಅನೇಕ ನಾಟಕಗಳಲ್ಲಿಯೂ ನಟಿಸಿದರು.

ರಾಜಾರಾಮ್ ಅವರು 1972ರಿಂದ ‘ನಟರಂಗ’ ಮತ್ತು 1983ರಿಂದ ‘ವೇದಿಕೆ’ಯ ರಂಗ ಚಟುವಟಿಕೆಗಳಲ್ಲಿ ತೊಡಗಿ ಸಿ.ಆರ್. ಸಿಂಹ ಅವರ ನಿರ್ದೇಶನದಲ್ಲಿ ಹಲವಾರು ನಾಟಕಗಳಲ್ಲಿ ಅಭಿನಯಿಸಿ ಖ್ಯಾತಿ ಪಡೆದರು. ಇದಲ್ಲದೆ ಬಿ.ವಿ. ಕಾರಂತ, ಎಂ.ಎಸ್. ಸತ್ಯು, ಶ್ರೀನಿವಾಸ್ ಜಿ. ಕಪ್ಪಣ್ಣ, ಜಯತೀರ್ಥ ಜೋಶಿ, ಸಿ.ಎಚ್. ಲೋಕನಾಥ್, ಆರ್. ನಾಗೇಶ್, ಪ್ರಕಾಶ್ ಬೆಳವಾಡಿ ಮುಂತಾದವರ ನಿರ್ದೇಶನದಲ್ಲಿ ಮಂಡೋದರಿ, ವಿಗಡವಿಕ್ರಮರಾಯ, ಎಚ್ಚಮನಾಯಕ, ಟಿಪ್ಪುಸುಲ್ತಾನ್, ಕಿತ್ತೂರು ಚೆನ್ನಮ್ಮ, ರಕ್ತಾಕ್ಷಿ, ಸದಾರಮೆ, ಕಾಕನ ಕೋಟೆ, ತುಘಲಕ್, ಮೃಚ್ಛಕಟಿಕ, ಸಂಕ್ರಾಂತಿ, ಅಗ್ನಿ ಮತ್ತು ಮಳೆ ಮುಂತಾದ ನಾಟಕಗಳಲ್ಲಿ ಅಭಿನಯಿಸಿದ ಖ್ಯಾತಿ ರಾಜಾರಾಮ್ ಅವರದ್ದು . ಹೈದರಾಬಾದ್, ಚೆನ್ನೈ, ಕೋಲ್ಕತ್ತಾ, ಕಾಶ್ಮೀರ ಮುಂಬೈ, ಛಂಡಿಗಡ ಮುಂತಾದೆಡೆ ನಾಟಕ ಪ್ರದರ್ಶನದಲ್ಲಿ ಭಾಗಿಯಾದರು. ಅಲ್ಲದೇ ಹಲವು ಚಲನಚಿತ್ರಗಳು ಮತ್ತು ಕಿರುತೆರೆಯ ಕಥಾನಕಗಳಲ್ಲೂ ಅಭಿನಯಿಸಿದ್ದರು. ರಾಜರಾಮ್ ಅವರಿಗೆ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಯೂ ಸೇರಿದಂತೆ ಅನೇಕ ಸಂಘ ಸಂಸ್ಥೆಗಳು ಮತ್ತು ಪ್ರತಿಷ್ಠಾನಗಳ ಗೌರವಗಳು ಸಂದಿವೆ.

The post ಕೊರೊನಾಗೆ ಚಿಕಿತ್ಸೆ ಪಡೆಯಲು ಬೆಡ್ ಸಿಗದೆ ಕನ್ನಡದ ಹಿರಿಯ ನಟ ಆರ್.ಎಸ್.ರಾಜಾರಾಮ್ ನಿಧನ appeared first on News First Kannada.

Source: newsfirstlive.com

Source link