ದೇಶದಲ್ಲಿ ಎರಡನೇ ಅಲೆಯ ಅಬ್ಬರ ಜೋರಾಗುತ್ತಿದ್ದಂತೆಯೇ ಕೆಲವರು ಸದ್ಯಕ್ಕೆ ಈ ದೇಶವೇ ಬೇಡವೆಂದು ವಿದೇಶಕ್ಕೆ ಹಾರಿದ್ದಾರೆ. ಶ್ರೀಮಂತರು ಮಾತ್ರವಲ್ಲದೇ ಮಧ್ಯಮ ವರ್ಗದ ಜನರು ಕೂಡ ಈ ಕೊರೊನಾಗೆ ಹೆದರಿ ದೇಶ ಬಿಟ್ಟಿದ್ದಾರೆ. ಕೈಯಲ್ಲಿ ದುಡ್ಡಿದ್ರೂ ಸ್ಥಿತಿವಂತರು ದೇಶವನ್ನು  ತೊರೆಯುತ್ತಿರುವುದು ಇಲ್ಲಿಯ ಆರೋಗ್ಯ ವ್ಯವಸ್ಥೆಯನ್ನು ಪ್ರಶ್ನೆ ಮಾಡುವಂತಿದೆ.

ಕೊರೊನಾ ಎರಡನೇ ಅಲೆ ದೇಶದಲ್ಲಿ ಸೃಷ್ಠಿಸಿರುವ ಸಮಸ್ಯೆಗಳು ಅಷ್ಟಿಷ್ಟಲ್ಲ. ಸದ್ಯಕ್ಕೆ 130 ಕೋಟಿ ಭಾರತೀಯರ ಕಣ್ಣ ಮುಂದಿರುವ ಏಕೈಕ ಶತ್ರುವೇ ಈ ಕಣ್ಣಿಗೆ ಕಾಣದ ಅಗೋಚರ ವೈರಸ್. ದೇಶಕ್ಕೆ ಫೆಬ್ರವರಿ ತಿಂಗಳಲ್ಲಿ  ಅಪ್ಪಳಿಸಿದ ಕೊರೊನಾ ಅಲೆಯ ತೀವ್ರತೆಗೆ ಭಾರತದ  ವೈದ್ಯಕೀಯ ಜಗತ್ತೆ ತಲ್ಲಣಗೊಂಡಿದ್ದು, ದೇಶದ ಇಡೀ ಆರೋಗ್ಯ ವ್ಯವಸ್ಥೆ ದುರಂತವನ್ನು ಎದುರಿಸುತ್ತಿದೆ. ಕೊರೊನಾ ಪ್ರಸರಣದ ವೇಗಕ್ಕೆ ಇಡೀ ವೈದ್ಯಕೀಯ ಜಗತ್ತೇ ಒಂದು ಕ್ಷಣ ದಿಗಿಲುಗೊಂಡಿತ್ತು. ಮಾರ್ಚ್-ಏಪ್ರಿಲ್ ತಿಂಗಳಲ್ಲಿ ಕೊರೊನಾದ 2ನೇ ಅಲೆಯ ತೀವ್ರತೆ ಮತ್ತಷ್ಟು ಭೀಕರ ಸ್ವರೂಪವನ್ನು ಪಡೆದುಕೊಂಡಿತ್ತು. ಎಲ್ಲಿಯವರೆಗೆ ಅಂದ್ರೆ ಕೆಲವರಿಗೆ ನಮ್ಮ ದೇಶ ನಮಗೆ ಸುರಕ್ಷಿತವೇ ಎನ್ನುವಷ್ಟರ ಮಟ್ಟಿಗೆ.

ಮಾರ್ಚ್ ಏಪ್ರಿಲ್ ತಿಂಗಳಲ್ಲಿ ಕೊರೊನಾದ 2ನೇ ಅಲೆಯ ಅಬ್ಬರ ಜೋರಾಗುತ್ತಿದ್ದಂತೆಯೇ ಕೆಲ ಸೆಲೆಬ್ರೆಟಿಗಳು, ಉದ್ಯಮಿಗಳು, ರಾಜಕಾರಣಿಗಳು ಸೇರಿದಂತೆ ಹಲವರು ಈ ದೇಶವನ್ನೇ ಬಿಟ್ಟು ವಿದೇಶಕ್ಕೆ ಹಾರಿದ್ದಾರೆ. ಇವರಲ್ಲಿ ಶ್ರೀಮಂತರು ಮಾತ್ರವಲ್ಲ, ಮಧ್ಯಮ ವರ್ಗದ ಜನರು ಕೂಡ ದೇಶ ಸುರಕ್ಷಿತವಲ್ಲವೆಂದುಕೊಂಡು ವಿದೇಶಗಳಿಗೆ ಜಂಪ್ ಮಾಡಿದ್ದಾರೆ.

ಏರಿದ ಸೋಂಕಿತರ ಸಂಖ್ಯೆ: ವಿದೇಶಕ್ಕೆ ಹಾರಿದವರ ಸಂಖ್ಯೆ ದ್ವಿಗುಣ

ಹೌದು, ದೇಶದಲ್ಲಿ ಕೊರೊನಾದ 2ನೇ ಅಲೆ ಹೆಚ್ಚುತ್ತಿದ್ದಂತೆಯೇ ವಿವಿಧ ದೇಶಗಳಿಗೆ ಹಾರುತ್ತಿದ್ದ ಭಾರತೀಯರ ಸಂಖ್ಯೆಯೂ ದ್ವಿಗುಣವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದ್ರೆ ಕಳೆದೆರಡು ತಿಂಗಳಲ್ಲಿ ವಿದೇಶಕ್ಕೆ ಹಾರಿದ ಭಾರತೀಯರ ಸಂಖ್ಯೆಯಲ್ಲಿ ಶೇ.30 ರಷ್ಟು ಹೆಚ್ಚಾಗಿದೆ. ಈ ಬಾರಿ ಶ್ರೀಮಂತರು ಮಾತ್ರವಲ್ಲ ಮಧ್ಯಮ ವರ್ಗದ ಜನರು ಕೂಡ ಖಾಸಗಿ ಜೆಟ್ ಗಳ ಮೂಲಕ ವಿವಿಧ ದೇಶಕ್ಕೆ ಹೋಗಿದ್ದಾರೆ. ಈ ಬಾರಿ ವಿದೇಶಕ್ಕೆ ಹಾರಿದವರ ಪೈಕಿ ಶ್ರೀಮಂತರು ಮಾತ್ರವಲ್ಲ, ಮಧ್ಯಮ ವರ್ಗದ ಜನರು ಕೂಡ ಇದ್ದಾರೆ.

ವಿದೇಶಕ್ಕೆ ಹಾರಿದ ಸ್ಟಾರ್ ಸೆಲೆಬ್ರೆಟಿಗಳು

ಪ್ರಯಾಣಿಕರ ಸಂಖ್ಯೆಯಲ್ಲಿ 20% ಏರಿಕೆ

ಭಾರತದ ವೈದ್ಯಲೋಕದ ಸುತ್ತಾ ಸಮಸ್ಯೆಗಳ ಸರಮಾಲೆ ಸುತ್ತಿಕೊಳ್ಳುತ್ತಿದ್ದಂತೆಯೇ ಕೆಲ ಶ್ರೀಮಂತರು ಗುಂಪುಗೂಡಿ ಖಾಸಗಿ ಜೆಟ್ ಗಳ ವ್ಯವಸ್ಥೆ ಮಾಡಿ ಅನೇಕ ದೇಶಗಳಿಗೆ ಹಾರಿದ್ರು. ದೇಶದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿದ್ದಂತೆಯೇ ಒಂದೊಂದೇ ರಾಜ್ಯಗಳು ಲಾಕ್ ಡೌನ್ ಘೋಷಣೆ ಮಾಡುತ್ತಿದ್ದಂತೆಯೇ ಕ್ರೀಡೆ- ಸಿನಿಮಾ ಸಿನಿಮಾ ಚಟುವಟಿಕೆಗಳು ಸ್ತಬ್ಧವಾಯ್ತು. ಟಿ.ವಿ ಶೋಗಳು ಅಥವಾ ಸಿನಿಮಾ ಶೂಟಿಂಗ್ ಕೂಡ ನಿಂತು ಹೋಯ್ತು. ಬಣ್ಣದ ಲೋಕದ ಎಲ್ಲಾ ಕಾರ್ಯಕ್ರಮಗಳು ಸ್ಥಗಿತವಾದ್ದರಿಂದ ಸಿನಿಮಾ ನಟ ನಟಿಯರು, ಸೆಲೆಬ್ರೆಟಿಗಳು ದೇಶ ಬಿಟ್ಟು ವಿದೇಶದ ಕಡೆ ಮುಖ ಮಾಡಿದ್ದಾರೆ.

ಭಾರತದ ವೈದ್ಯಕೀಯ ವ್ಯವಸ್ಥೆ ಅಷ್ಟೊಂದು ಹದಗೆಟ್ಟಿದ್ಯಾ?

 ದುಡ್ಡಿದ್ರೂ ಶ್ರೀಮಂತರು ದೇಶ ತೊರೆಯುತ್ತಿರುವುದೇಕೆ?

ಕೊರೊನಾಗೆ ಬಡವ ಶ್ರೀಮಂತ ಅನ್ನೋ ಬೇಧಭಾವವಿಲ್ಲ. ರಾಜಕಾರಣಿಗಳು, ಉದ್ಯಮಿಗಳು ಎನ್ನುವ ತಾತ್ಸರವಿಲ್ಲ. ಅದ್ಕೆ ಬೇಕಾಗಿರುವುದು ಒಂದು ದೇಹ ಅಷ್ಟೇ. ಈ ಹಿಂದೆ, ದುಡ್ಡಿದ್ರೆ ಭೂಮಿಯ ಮೇಲೆ ಎಲ್ಲಿ ಹೋದ್ರೂ ಬದುಕ್ತಾರೆ ಎನ್ನುವ ಮಾತಿತ್ತು. ದುಡ್ಡಿದ್ರೆ ಕೈಲಾಸ ಎನ್ನುತ್ತಿದ್ರು. ಆದ್ರೆ ಕೊರೊನಾ ಮಾತ್ರ ಆ ಮಾತನ್ನು  ಪಕ್ಕಾ ಉಲ್ಟಾ ಮಾಡಿತ್ತು. ಯಾಕಂದ್ರೆ ಲಕ್ಷ ಲಕ್ಷಗಟ್ಟಲೇ ದುಡ್ಡು ಸುರಿದ್ರು ಅದೆಷ್ಟೋ ಕುಟುಂಬಗಳಿಗೆ ತಮ್ಮವರನ್ನು ಕೊರೊನಾದ ಕಪಿಮುಷ್ಠಿಯಿಂದ ಬಿಡಿಸಿಕೊಳ್ಳಲಾಗ್ಲಿಲ್ಲ. ಆಸ್ಪತ್ರೆಗೆ ಕೋಟಿ ಕೋಟಿ  ಸುರಿದ್ರೂ ತಮ್ಮವರ ಪ್ರಾಣ ಉಳಿಸಿಕೊಳ್ಳಲಾಗ್ಲಿಲ್ಲ. ಅದೆಷ್ಟೋ ಶಾಸಕರು, ಸಚಿವರು , ಸಂಸದರು, ಉದ್ಯಮಿಗಳು, ಸೆಲೆಬ್ರೆಟಿಗಳು ಕೂಡ ಇದೇ ಕೊರೊನಾದಿಂದ ಚಿಕಿತ್ಸೆ ಫಲಕಾರಿಯಾಗಿದೆ ಮೃತಪಟ್ಟಿದ್ದಾರೆ. ಇನ್ನು ದುಡ್ಡಿದ್ದವರ ಪರಿಸ್ಥಿತಿ ಹೀಗಾದ್ರೆ ಸಾಮಾನ್ಯ ಜನರ ಪರಿಸ್ಥಿತಿ ಹೇಳ್ಬೇಕಾ ಹೇಳಿ? ಸರಿಯಾದ ಚಿಕಿತ್ಸೆ ಸಿಗದೇ ಅದೆಷ್ಟೋ ಜನರು ಬೀದಿಯಲ್ಲೇ, ಆ್ಯಂಬುಲೆನ್ಸ್ ನಲ್ಲೇ ಪ್ರಾಣ ಉಸಿರು ಕೈ ಚೆಲ್ಲಿದ್ದಾರೆ. ಕೈಯಲ್ಲಿ ದುಡ್ಡಿದ್ರೂ ಬೆಡ್ ಸಿಗದೆ, ಆಕ್ಸಿಜನ್ ಸಿಗದೆ ಉಸಿರು ನಿಲ್ಲಿಸಿದವರು ಇದ್ದಾರೆ. ಕಡೆಗೆ  ಚಿತಗಾರದಲ್ಲಿ ಬಡವ ಶ್ರೀಮಂತರೆನ್ನದೆ ಕೊರೊನಾದಿಂದ ಮೃತಪಟ್ಟವರ ಅಂತ್ಯಕ್ರಿಯೆಯನ್ನು ಸಾಮೂಹಿಕವಾಗಿ ನಡೆಸಲಾಯ್ತು. ಇವೆಲ್ಲವು ಕೊರೊನಾ ಕಾಲದ ಒಂದೊಂದು ಕರಾಳ ಕಥೆಗಳು.

ಇದ್ರಿಂದ ಕೆಲವರಿಗೆ ಕೈಯಲ್ಲಿ ದುಡ್ಡಿದ್ರೆ ಕೊರೊನಾ ಗೆಲ್ಲಬಹುದೆನ್ನುವ ಮಾತಿನ ಮೇಲೆ ನಂಬಿಕೆ ಕಳೆದುಕೊಳ್ಳುವಂತಾಯ್ತು. ಸ್ಥಿತಿವಂತರೇ ಕೊರೊನಾದಿಂದ ಸಾಲು ಸಾಲಾಗಿ ಸಾವಿನ ಮನೆ ಸೇರಿಕೊಳ್ಳುತ್ತಿದ್ದಂತೆಯೇ ಬೆದರಿದ ಕೆಲ ಶ್ರೀಮಂತರು ದೇಶ ಬಿಟ್ಟು ಉತ್ತಮ ಆಸ್ಪತ್ರೆ ಸೌಲಭ್ಯಗಳನ್ನು ಹೊಂದಿರುವ ಅನ್ಯ ದೇಶಗಳ ಕಡೆ ಮುಖ ಮಾಡ್ತಿದ್ದಾರೆ. ಬದುಕುಳಿದ್ರೆ ಸಾಕಪ್ಪಾ ಅಂದುಕೊಂಡ ಸ್ಥಿತಿವಂತರು ದುಡ್ಡಿನ ಮುಖ ನೋಡದೆ, ದುಬಾರಿ ಮೊತ್ತ ಪಾವತಿಸಿ ಖಾಸಗಿ ಜೆಟ್ ಗಳ ಮೂಲಕ ಕುಟುಂಬ ಸಮೇತರಾಗಿ ವಿದೇಶಕ್ಕೆ ಹಾರಿದ್ದಾರೆ. ಕಳೆದ ವರ್ಷದ ದರಕ್ಕಿಂತ 10 ಪಟ್ಟು ಹೆಚ್ಚು ದರವನ್ನು ಕೊಟ್ಟು ಇಲ್ಲಿಂದ ಕಾಲ್ಕಿತ್ತಿದ್ದಾರೆ. ವಿದೇಶದಲ್ಲೇ ತಮ್ಮ ಮಡದಿ ಮಕ್ಕಳೊಂದಿಗೆ ಜೀವನ ಸಾಗಿಸುತ್ತಿದ್ದಾರೆ. ಇದ್ರಿಂದ ಭಾರತದ ಆರೋಗ್ಯ ವ್ಯವಸ್ಥೆ ಮೇಲೆ ದುಡ್ಡಿರುವವರೇ ನಂಬಿಕೆ ಕಳ್ಕೊಂಡ್ರಾ? ಅಥವಾ ಭಾರತದ ಆರೋಗ್ಯ ವ್ಯವಸ್ಥೆ ಅಷ್ಟೊಂದು ಹದಗೆಟ್ಟಿದ್ಯಾ ಎನ್ನುವ ಪ್ರಶ್ನೆ ಸಹಜವಾಗಿ ಮೂಡುತ್ತದೆ.

ದೇಶದಲ್ಲಿ ಕೊರೊನಾದ ಜೊತೆಗೆ ವೈದ್ಯಕೀಯ ವ್ಯವಸ್ಥೆಯ ಲೋಪದಿಂದಲೂ ನೂರಾರು ಸೋಂಕಿತರು ಪ್ರಾಣ ಕಳ್ಕೊಂಡಿದ್ದಾರೆ. ದೆಹಲಿ ಆಕ್ಸಿಜನ್ ದುರಂತ, ಯುಪಿ ಬಿಹಾರದಲ್ಲಿ ಉಂಟಾದ ಆಕ್ಸಿಜನ್ ಹಾಹಾಕರ, ಸೇರಿದಂತೆ ಹಲವು ಘಟನೆಗಳು ಇಲ್ಲಿಯ ವೈದ್ಯಕೀಯ ಲೋಕವನ್ನೇ ಪ್ರಶ್ನೆ ಮಾಡುವಂತಿತ್ತು. ಕೊರೊನಾ ಸೋಂಕಿದೆ ಎನ್ನುವ ಏಕೈಕ ಕಾರಣಕ್ಕೆ ಆಸ್ಪತ್ರೆಗೆ ದಾಖಲಾದವರು ಹೆಣವಾಗಿ ಹೊರಬರುತ್ತಿರುವುದನ್ನು ನೋಡಿದ ಜನರಿಗೆ ಇಲ್ಲಿಯ ವೈದ್ಯಕೀಯ ಲೋಕದ ಬಗ್ಗೆಯೇ ಅನುಮಾನ ಮೂಡಿತ್ತು. ಇದ್ರಿಂದ ಬೆದರಿದ ದುಡ್ಡಿರೋ ಜನರು ಕೊರೊನಾದಿಂದ ನಮಗೆ ಈ ದೇಶ ಸುರಕ್ಷಿತವಲ್ಲವೆಂದು ಉತ್ತಮ ವೈದ್ಯಕೀಯ ಸೌಲಭ್ಯಗಳನ್ನು ಹೊಂದಿರುವ ದೇಶಗಳಿಗೆ ಹೋಗುವ ಸೇಫ್ ಝೋನ್ ಕಂಡುಕೊಳ್ಳುವ ಪ್ರಯತ್ನ ಮಾಡಿದ್ದಾರೆ.

ಖಾಸಗಿ ಜೆಟ್ ಗಳಿಗೆ ಹೆಚ್ಚಿದ ಬಾರಿ ಬೇಡಿಕೆ

ಮೊದಲ ಅಲೆ ಅಪ್ಪಳಿಸಿದಾಗ ದೇಶದಲ್ಲಿ ಲಾಕ್ ಡೌನ್ ಹೇರಿದ ಸಂದರ್ಭದಲ್ಲಿ ಎಲ್ಲಾ ರೀತಿಯ ಪ್ರಯಾಣವನ್ನು ನಿರ್ಬಂಧಿಸಲಾಗಿತ್ತು. ಇದ್ರಿಂದ ರಾತ್ರಿ ಹಗಲೆನ್ನದೇ ದೇಶ ವಿದೇಶಗಳಿಗೆ ಸಂಚರಿಸುತ್ತಿದ್ದ ವಿಮಾನಗಳು ಕೂಡ ಏರ್ ಪೋರ್ಟ್ ನಲ್ಲಿ ಸಾಲು ಸಾಲಾಗಿ ನಿಂತ್ತಿದ್ದವು. ಆದ್ರೆ 2ನೇ ಅಲೆಯ ವೇಳೆ ಬಸ್, ಮೆಟ್ರೋ ಸಾರಿಗೆ ವ್ಯವಸ್ಥೆಗೆ ನಿಷೇಧ ಹೇರಿದ್ರು ಕೇಂದ್ರ ಸರ್ಕಾರ ವಿಮಾನಗಳು ಪ್ರಯಾಣಕ್ಕೆ ಯಾವುದೇ ನಿರ್ಬಂಧ ಹೇರಿಲ್ಲ. ಆದ್ರೆ ಭಾರತದಲ್ಲಿ ಕೊರೊನಾ ಹೆಚ್ಚುತ್ತಿರುವ ಹಿನ್ನೆಲೆ ಬಹುತೇಕ ದೇಶಗಳು ಈಗಾಗಲೇ ದೇಶದ ವಿಮಾನಗಳಿಗೆ ನಿರ್ಬಂಧ ಹೇರಿದೆ. ಇದ್ರಿಂದ ಕೆಲವರು ಖಾಸಗಿ ಜೆಟ್ ಗಳಲ್ಲಿ ದುಬಾರಿ ಮೊತ್ತ ಪಾವತಿಸಿ ವಿದೇಶಕ್ಕೆ ಹಾರಿದ್ದಾರೆ.  ಇದ್ರಿಂದ ಖಾಸಗಿ ಜೆಟ್ ಗಳಿಗೆ  ಬಾರಿ ಬೇಡಿಕೆ ಉಂಟಾಗಿದ್ದು, ಪ್ರಯಾಣದ ದರ ಕೂಡ ಹತ್ತು ಪಟ್ಟು ಹೆಚ್ಚಾಗಿದೆ. ಇನ್ನೂ ಖಾಸಗಿ ಜೆಟ್ ಗಳಲ್ಲಿ ಪ್ರಯಾಣಿಸುವವರ ಸಂಖ್ಯೆ ಕಳೆದ ವರ್ಷಕ್ಕೆ ಹೋಲಿಸಿದ್ರೆ ಈ ವರ್ಷ ಶೇ.25 ರಷ್ಟು ಹೆಚ್ಚಾಗಿದೆ. ಅದರಲ್ಲೂ ಕೊರೊನಾ 2ನೇ ಹೆಚ್ಚು ಕಾಡಿದ ಮಾರ್ಚ್-ಏಪ್ರಿಲ್ ತಿಂಗಳಲ್ಲೇ ಪ್ರಯಾಣಿಸಿದವರ ಸಂಖ್ಯೆ ಶೇ.20 ರಷ್ಟು ಹೆಚ್ಚಾಗಿದ್ದು ಪ್ರಮುಖವಾಗಿ ಇಲ್ಲಿ ನಾವು ಗಮನಿಸಲೇಬೇಕಾದ  ಸಂಗತಿ.

ಖಾಸಗಿ ಜೆಟ್ ಗಳಿಗೆ ಹೆಚ್ಚಿದ ಬೇಡಿಕೆ

ತಿಂಗಳು            2019-20      2020-21

ಜನವರಿ             30               31.7

ಫೆಬ್ರವರಿ           3.5              9.2

ಮಾರ್ಚ್          37.7           71.8

2019-20ರ ಜನವರಿ ತಿಂಗಳಲ್ಲಿ ಖಾಸಗಿ ಜೆಟ್ ವಿಮಾನಗಳಿಗೆ ಶೇಕಡಾ 30 ಬೇಡಿಕೆ ಇದ್ರೆ  2020-21 ರ ಜನವರಿ ವೇಳೆಗೆ ಶೇಕಡಾ 31.7ಕ್ಕೆ ಏರಿತ್ತು. ಇನ್ನು ಭಾರತದಲ್ಲಿ ಎರಡನೇ ಅಲೆ ಕಾಣಿಸಿಕೊಂಡ ಫೆಬ್ರವರಿ -ಮಾರ್ಚ್ ತಿಂಗಳಲ್ಲಿ ಖಾಸಗಿ ಜೆಟ್ ವಿಮಾನಗಳ ಡಿಮ್ಯಾಂಡ್ ಫುಲ್ ಹೆಚ್ಚಾಯ್ತು.  2019-20ರ  ಫೆಬ್ರವರಿಯಲ್ಲಿ 3.5 ರಷ್ಟು ಜನರು ಖಾಸಗಿ ಜೆಟ್ ಗಳನ್ನು ಅವಲಂಬಿಸಿದ್ರೆ, 2020-21 ರ ಫೆಬ್ರವರಿಯಲ್ಲಿ ಬರೋಬ್ಬರಿ 9.2 ರಷ್ಟು ಜನರು ಪ್ರೈವೆಟ್ ಜೆಟ್ ಗಳ ಮೊರೆ ಹೋಗಿದ್ರು. ಇನ್ನೂ ಕಳೆದ ಮಾರ್ಚ್ ತಿಂಗಳಲ್ಲಿ 37-7 ರಷ್ಟಿದ್ದ ಡಿಮ್ಯಾಂಡ್ ಈ ಭಾರಿ ಗಣನೀಯವಾಗಿ ಏರಿಕೆಯಾಗಿದ್ದು, ಶೇಕಡಾ 71.8 ರಷ್ಟು ಜನರು ಖಾಸಗಿ ಜೆಟ್ ಗಳ ಅವಲಂಬಿಸಿದ್ದಾರೆ.

ವಿದೇಶಕ್ಕೆ ಹಾರಿದ್ದು ಶ್ರೀಮಂತರು ಮಾತ್ರನಾ?

ವಿಶ್ವದ ದೊಡ್ಡಣ್ಣನ ಮೇಲೂ ನಂಬಿಕೆ ಕಳ್ಕೊಂಡ್ರಾ?

ಕೊರೊನಾಗೆ ಹೆದರಿ ವಿದೇಶಕ್ಕೆ ಹಾರಿದವರ ಪೈಕಿ ಶ್ರೀಮಂತರ ಪಾಲೇ ದೊಡ್ಡದಿರಬಹುದು. ಹಾಗೆಂದ ಮಾತ್ರಕ್ಕೆ ಈ ಬರೀ ಶ್ರೀಮಂತ್ರೂ ಮಾತ್ರ ವಿದೇಶಕ್ಕೆ ಹಾರಿದ್ದಾರೆ ಅನ್ಕೊಂಡ್ರಾ..? ಖಂಡಿತ ಇಲ್ಲ. ಈ ಬಾರಿ ಅನ್ಯ ದೇಶಗಳ ಮೊರೆ ಹೋದವರ ಪೈಕಿ ಮಧ್ಯಮ ವರ್ಗದ ಜನರು ಕೂಡ ಇದ್ದಾರೆ. ಇಷ್ಟು ದಿನ ವಿಮಾನವೇರದವರು ಕೂಡ ಇದೇ ಮೊದಲ ಬಾರಿ  ವಿಮಾನವೇರಿ ವಿದೇಶಗಳಿಗೆ  ಹಾರಿದ್ದಾರೆ.  ಈ ಬಾರಿ ಅಮೆರಿಕ ಕೆನಡಾಕ್ಕಿಂತ ಜನರು ಸಣ್ಣ ಪುಟ್ಟ ರಾಷ್ಟ್ರಗಳನ್ನು ಹೆಚ್ಚು ನೆಚ್ಚಿಕೊಂಡಿದ್ದಾರೆ.

ಶ್ರೀಮಂತಿಕೆ, ಅಭಿವೃದ್ಧಿ ಎಂದಾಗ ಮೊದಲಿಗೆ ಕಣ್ಣಿಗೆ ಬೀಳುವುದೇ ವಿಶ್ವದ ದೊಡ್ಡಣ್ಣ ಅಮೆರಿಕ. ಎಂತಹ ಬಲಿಷ್ಠವಾದ್ರೂ ಅಮೆರಿಕವನ್ನು ಎದುರು ಹಾಕಿಕೊಳ್ಳಲು ವಿಶ್ವದ ಸೂಪರ್ ಪವರ್ ದೇಶಗಳೇ ಒಂದಲ್ಲ.. ನೂರು ಬಾರಿ ಯೋಚ್ನೆ ಮಾಡುತ್ತವೆ. ಜಪಾನ್ ನ ಹಿರೋಶಿಮ ನಾಗಸಾಕಿಯನ್ನು ಅಣುಬಾಂಬ್ ಹಾಕಿ ಧ್ವಂಸ ಮಾಡಿ ಜಗತ್ತಿನೆದ್ರು ಮೀಸೆ ತಿರುವಿದ ಮೇಲೆ ಅಮೆರಿಕದ ಅಬ್ಬರ ಜೋರಾಗಿಯೇ ಇತ್ತು. ಹೀಗೆ ಬೀಗುತ್ತಿದ್ದ ವಿಶ್ವದ ಕೊರೊನಾ ಶಾಕ್ ಕೊಟ್ಟಿತ್ತು. ಅಗೋಚರ ವೈರಸ್ ನ ಕೊಟ್ಟ ಹೊಡೆತಕ್ಕೆ ಅಮೆರಿಕವೇ ಬೆಚ್ಚಿ ಬಿದ್ದಿತ್ತು. ಸದ್ಯ ಅಮೆರಿಕ ಚೇತರಿಕೆ ಕಾಣುತ್ತಿದ್ರೂ ಅಮೆರಿಕದಲ್ಲಿ ಇನ್ನೂ 50 ಲಕ್ಷಕ್ಕೂ ಅಧಿಕ ಸಕ್ರಿಯ ಪ್ರಕರಣಗಳಿವೆ.

ಉತ್ತಮ ವೈದ್ಯಕೀಯ, ಸುಸಜ್ಜಿತ ಆಸ್ಪತ್ರೆಗಳ ಸೌಲಭ್ಯವಿದ್ರೂ ವಿಶ್ವದ ದೊಡ್ಡಣ್ಣನಿಗೆ ಕೊರೊನಾ ಸೋಂಕನ್ನು ಕಂಟ್ರೋಲ್ ಮಾಡಕ್ಕಾಗಿಲ್ಲ. ಸಾವು ನೋವಿನಲ್ಲೂ ಅಮೆರಿಕ ಕೂಡ ಸದಾ ಅಗ್ರಸ್ಥಾನದಲ್ಲಿದೆ. ಅಮೆರಿಕದ ಕೊರೊನಾ ಸ್ಥಿತಿಗತಿಯನ್ನು ಮನಗಂಡ ಕೆಲವರು ಅಮೆರಿಕ ಉತ್ತಮ  ವೈದ್ಯಕೀಯ ವ್ಯವಸ್ಥೆಯನ್ನು ಹೊಂದಿದ್ರೂ ಅಮೆರಿಕಾಗೆ ಹೋಗಲು ಹಿಂದೇಟು ಹಾಕಿದ್ದಾರೆ. ಅಮೆರಿಕದ ಬದಲು ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ಕತಾರ್, ಪೋರ್ಚುಗಲ್, ಟರ್ಕಿಯಂತಹ ಸಣ್ಣ ಸಣ್ಣ ರಾಷ್ಟ್ರಗಳೇ ಹೆಚ್ಚು ಸುರಕ್ಷಿತವೆಂದು ಪುಟ್ಟ ರಾಷ್ಟ್ರಗಳನ್ನು ಹೆಚ್ಚು ನೆಚ್ಚಿಕೊಂಡಿದ್ಧಾರೆ. ಭಾರತದಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ತಮ್ಮ ತಮ್ಮ ದೇಶಗಳಿಗೆ ಬರ್ತಿರುವುದರಿಂದ ಕೆಲ ಅರಬ್ ರಾಷ್ಟ್ರಗಳು ಎರಡು ವಾರಗಳ ಕಡ್ಡಾಯ ಕ್ವಾರೆಂಟೈನ್ ವಿಧಿಸಿದೆ. ಕೆಲ ದೇಶಗಳು ಈಗಾಗಲೇ ಭಾರತೀಯ ಪ್ರಯಾಣಿಕರಿಗೆ ನಿರ್ಬಂಧ ಹೇರಿದ್ದು, ಪ್ರಯಾಣಿಕರಿಗೆ ಬ್ರೇಕ್ ಹಾಕಿದೆ.

ಕೊರೊನಾದ ಎರಡನೇ ಅಲೆಗೆ ಹೆದರಿ ಕೆಲವರು ದೇಶ ಬಿಟ್ಟಿದ್ದಾರೆನ್ನುವುದೇನೋ ನಿಜ. ದೇಶ ಬಿಟ್ಟ ಮಾತ್ರಕ್ಕೆ ಎಲ್ಲವು ಸರಿಹೋಗಿದೆ ಎಂದರ್ಥವಲ್ಲ. ಇವರು ಹೋಗಿರುವ ದೇಶಗಳಲ್ಲೂ ಇನ್ನೂ ಕೊರೊನಾ ಕೇಸ್ ಗಳು ಸಕ್ರಿಯವಾಗಿದೆ. ಮುಂದೊಂದು ದಿನ ಅಲ್ಲಿಯೂ ಕೊರೊನಾ ಕೇಸ್ ಹೆಚ್ಚಾಗಿ, ಅವರು ಮತ್ತೆ ಭಾರತದ ಕಡೆ ಮುಖ ಮಾಡಿದ್ರೂ ಅಚ್ಚರಿಯಿಲ್ಲ.

The post ಕೊರೊನಾಗೆ ಹೆದರಿ ದೇಶ ಬಿಡ್ತಿದ್ದಾರಂತೆ ಜನರು..? ಇಲ್ಲಿದೆ ಶಾಕಿಂಗ್ ವರದಿ appeared first on News First Kannada.

Source: newsfirstlive.com

Source link