ಕೊರೊನಾ ಮಹಾಮಾರಿಯ ಎರಡನೇ ಅಲೆಗೆ ಜನರು ತತ್ತರಿಸಿದ್ದಾರೆ. ಎಷ್ಟೋ ಮಂದಿ  ತಮ್ಮ ಕುಟುಂಬದ ಹಲವರನ್ನ ಕಳೆದುಕೊಂಡಿದ್ದಾರೆ. ಕೆಲವೇ ದಿನಗಳ ಅಂತರದಲ್ಲಿ ಅಪ್ಪ-ಅಮ್ಮನನ್ನು ಕಳೆದುಕೊಂಡು ಮಕ್ಕಳು ಅನಾಥರಾಗಿರೋ ಸಾಕಷ್ಟು ಪ್ರಕರಣಗಳಿವೆ.
ಕೆಲವರು  ಅಂಥ ಕೆಲ ಅನಾಥ ಮಕ್ಕಳದ್ದು ಎನ್ನಲಾದ ಮಾಹಿತಿಯನ್ನ ವಾಟ್ಸ್​​ಆ್ಯಪ್​ನಲ್ಲಿ ಹಂಚಿಕೊಂಡು ದತ್ತು ಪಡೆಯುವಂತೆ ಕೇಳಿಕೊಳ್ತಿರೋದು ಕೂಡ ಗಮನಕ್ಕೆ ಬಂದಿದೆ. ಆದ್ರೆ ಹಾಗೆ ಮಾಡುವುದು ಕಾನೂನಿಗೆ ವಿರುದ್ಧ ಮತ್ತು ಆ ಮಕ್ಕಳಿಗೂ ಅಪಾಯ. ದತ್ತು ಸ್ವೀಕಾರ ಹೆಸರಿನಲ್ಲಿ ಮಕ್ಕಳನ್ನ ಬೇರೆ ಕೂಪಕ್ಕೆ ತಳ್ಳುವ ಸಾಧ್ಯತೆ ಇರುತ್ತದೆ. ಹೀಗಾಗಿ ಎಚ್ಚರಿಕೆ ವಹಿಸಿ. ಅನಾಥ ಮಕ್ಕಳ ಬಗ್ಗೆ ನಿಮಗೆ ಮಾಹಿತಿ ಸಿಕ್ಕರೆ ಏನು ಮಾಡಬಹುದು ಅನ್ನೋದನ್ನ ಕೇಂದ್ರ ಸಚಿವೆ ಸ್ಮೃತಿ ಇರಾನಿ ವಿವರಿಸಿದ್ದಾರೆ. ಈ ಕುರಿತು ಅವರು ಸರಣಿ ಟ್ವೀಟ್​​ಗಳನ್ನ ಮಾಡಿ ಮಾಹಿತಿ ನೀಡಿದ್ದಾರೆ.
ಅನಾಥ ಮಕ್ಕಳ ಮಾಹಿತಿ ಸಿಕ್ಕರೆ ಹೀಗೆ ಮಾಡಿ 
  • ತಂದೆ ತಾಯಿ ಇಬ್ಬರನ್ನೂ ಕಳೆದುಕೊಂಡ ಮಕ್ಕಳ ಬಗ್ಗೆ ಮಾಹಿತಿ ಇದ್ದರೆ, ಅವರನ್ನ ನೋಡಿಕೊಳ್ಳಲು ಯಾರು ಇಲ್ಲವಾದ್ರೆ ಮೊದಲು ಪೊಲೀಸರಿಗೆ ಅಥವಾ ನಿಮ್ಮ ಜಿಲ್ಲೆಯ ಮಕ್ಕಳ ಕಲ್ಯಾಣ ಸಮಿತಿ ಮಾಹಿತಿ ಕೊಡಿ. ಅಥವಾ 1098ಗೆ ಕರೆ ಮಾಡಿ ತಿಳಿಸಿ. ಇದು ನಿಮ್ಮ ಕಾನೂನಾತ್ಮಕ ಜವಾಬ್ದಾರಿ
  • ಬೇರೆಯವರ ಮಕ್ಕಳನ್ನ ನೀವೇ ನೇರವಾಗಿ ದತ್ತು ನೀಡುವುದು ಅಥವಾ ದತ್ತು ಪಡೆಯುವುದು ಕಾನೂನಿಗೆ ವಿರುದ್ಧ. ಅಂಥ ಮಕ್ಕಳನ್ನ ಚೈಲ್ಡ್​ ವೆಲ್​ಫೇರ್​ ಕಮಿಟಿ ಬಳಿ ಕರೆದೊಯ್ಯಬೇಕು. ಅವರು ಮಕ್ಕಳ ಹಿತಾಸಕ್ತಿಗೆ ತಕ್ಕಂತೆ ಅಗತ್ಯ ಕ್ರಮ ಕೈಗೊಳ್ಳುತ್ತಾರೆ.
  • ಮಕ್ಕಳನ್ನ ದತ್ತು ನೀಡಲು ನಿಮನ್ನ ಯಾರಾದ್ರೂ ನೇರವಾಗಿ ಸಂಪರ್ಕಿಸಿದ್ರೆ , ಅದಕ್ಕೆ ಮರುಳಾಗಬೇಡಿ. ಅದು ಕಾನೂನಿಗೆ ವಿರುದ್ಧ. ಆ ರೀತಿ ಮಾಡದಂತೆ ತಡೆಯಿರಿ.
  • ಅನಾಥ ಮಕ್ಕಳನ್ನ ಕಾನೂನುಬದ್ಧವಾಗಿ ದತ್ತು ಪಡೆಯುವಂತೆ ನಾವೆಲ್ಲರೂ ಖಚಿತಪಡಿಸಿಕೊಳ್ಳಬೇಕು. ಇಲ್ಲದಿದ್ದರೆ ಮಕ್ಕಳನ್ನು ದತ್ತು ಸ್ವೀಕಾರ ಮಾಡುವ ಹೆಸರಿನಲ್ಲಿ ಅವರ ಕಳ್ಳಸಾಗಾಟ ಮಾಡಬಹುದು.ಮಕ್ಕಳನ್ನ ಉಳಿಸಿ.
  • ಸಂಕಷ್ಟದಲ್ಲಿರೋ ಮಕ್ಕಳ ಫೋಟೋ, ಫೋನ್ ನಂಬರ್​ಗಳನ್ನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಬೇಡಿ. ಕಾನೂನಿನ ಪ್ರಕಾರ ಅಂಥ ಮಕ್ಕಳ ಗುರುತನ್ನ ಗೌಪ್ಯವಾಗಿಟ್ಟು ಸಂರಕ್ಷಿಸಬೇಕು. ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ಅವರ ಮಾಹಿತಿ ಶೇರ್ ಮಾಡಬೇಡಿ. ಅದರ ಬದಲು ಪೊಲೀಸರಿಗೆ, ಮಕ್ಕಳ ಕಲ್ಯಾಣ ಸಮಿತಿ ಅಥವಾ ಮಕ್ಕಳ ಸಹಾಯವಾಣಿ 1098ಗೆ ಕರೆ ಮಾಡಿ.

The post ಕೊರೊನಾದಿಂದ ಮತ್ತೊಂದು ಸಮಸ್ಯೆ; ಅನಾಥರಾದ ಮಕ್ಕಳ ಬಗ್ಗೆ ಯಾರಿಗೆ ಮಾಹಿತಿ ನೀಡಬೇಕು ಗೊತ್ತಾ? appeared first on News First Kannada.

Source: newsfirstlive.com

Source link