– ಮಗಳ ಮದ್ವೆ ಮುಂದೂಡಿ ಸಮಾಜ ಸೇವೆ

ನವದೆಹಲಿ: ಕೊರೊನಾ ಸೋಂಕಿನಿಂದ ಮರಣ ಹೊಂದಿದವರ ಅಂತ್ಯಕ್ರಿಯೆಗೆ ಯಾರೂ ಮುಂದೆ ಬಾರದ ಸಂದರ್ಭ ಡೆಲ್ಲಿ ಪೊಲೀಸ್ ಇಲಾಖೆಯ ಎಎಸ್‍ಐ ಒಬ್ಬರು 1,100 ಹೆಣಗಳ ಅಂತ್ಯಕ್ರಿಯೆ ನೆರವೇರಿಸುವ ಮೂಲಕ ಸಮಾಜದ ನಿಜವಾದ ಹಿರೋ ಆಗಿ ಗುರುತಿಸಿಕೊಂಡಿದ್ದಾರೆ.

56 ವರ್ಷ ಪ್ರಾಯದ ರಾಕೇಶ್ ಕುಮಾರ್ ಡೆಲ್ಲಿ ಪೊಲೀಸ್ ಇಲಾಖೆಯಲ್ಲಿ ಎಎಸ್‍ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕಳೆದ ಒಂದು ತಿಂಗಳಿನಿಂದ ಡೆಲ್ಲಿಯಲ್ಲಿ ಕೊರೊನಾ ಸೋಂಕಿನಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಳವಾಗ ತೊಡಗಿದೆ. ಆದರೆ ಸಾವನ್ನಪ್ಪಿರುವವರ ಹೆಣ ಸುಡಲು ಮಾತ್ರ ಯಾರು ಕೂಡ ಮುಂದೆ ಬರುತ್ತಿರಲಿಲ್ಲ. ಇದನ್ನು ಗಮನಿಸಿದ ರಾಕೇಶ್ ಕುಮಾರ್ ತಾನೇ ಸ್ವತಃ ಅಂಬುಲೆನ್ಸ್‍ನಲ್ಲಿ ಬರುವ ಹೆಣಗಳನ್ನು ಹೊತ್ತು ತಂದು ಅಂತ್ಯಕ್ರಿಯೆ ನೆರವೇರಿಸಲು ಮುಂದಾಗಿದ್ದಾರೆ. ಈ ಕಾರ್ಯಕ್ಕಾಗಿ ತನ್ನ ಮಗಳ ಮದುವೆಯನ್ನು ಕೂಡ ಮುಂದೂಡಿ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ.

ರಾಕೇಶ್ ಕುಮಾರ್ ತನ್ನ ಹಿರಿಯ ವಯಸ್ಸಿನಲ್ಲೂ ಕೂಡ ಈ ರೀತಿ ಸಮಾಜ ಸೇವೆಯಲ್ಲಿ ತೊಡಗಿಕೊಂಡಿರುವ ವೀಡೀಯೊ ಒಂದನ್ನು ಶೇರ್ ಮಾಡಿರುವ ಡೆಲ್ಲಿ ಪೊಲೀಸ್ ಕಮಿಷನರ್ ಎಸ್.ಎನ್ ಶ್ರೀವತ್ಸವ್, ರಾಕೇಶ್ ಕುಮಾರ್ ಅವರ ಸೇವೆ ತುಂಬಾ ಅಮೂಲ್ಯವಾದದ್ದು, ಜನ ಅವರನ್ನು ನೋಡಿ ಕಲಿಯಲು ಸಾಕಷ್ಟು ಇದೆ ಎಂದು ಬರೆದುಕೊಂಡಿದ್ದಾರೆ.

ಪೊಲೀಸ್ ಅಧಿಕಾರಿ ಈ ರೀತಿಯ ಸಮಾಜ ಸೇವೆಯಲ್ಲಿ ತೊಡಗಿಕೊಂಡಿರುವುದನ್ನು ಕಂಡು ಹಲವು ಜನ ಅವರ ಸೇವೆಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

The post ಕೊರೊನಾದಿಂದ ಮರಣಹೊಂದಿದ 1,100 ಜನರ ಅಂತ್ಯಕ್ರಿಯೆ ನೆರವೇರಿಸಿದ ಎಎಸ್‍ಐ appeared first on Public TV.

Source: publictv.in

Source link