ಲಕ್ನೋ: ಕೊರೊನಾದಿಂದ ಸಾವನ್ನಪ್ಪಿದ ಪತ್ರಕರ್ತರ ಕುಟುಂಬಕ್ಕೆ 10 ಲಕ್ಷ ರೂ. ಆರ್ಥಿಕ ನೆರವು ನೀಡುವುದಾಗಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಘೋಷಿಸಿದ್ದಾರೆ.

ಹಿಂದಿ ಪತ್ರಿಕೋದ್ಯಮ ದಿನಾಚರಣೆ ಸಂದರ್ಭದಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ಚಳವಳಿಯಿಂದ ಇಂದಿನವರೆಗೂ ಹಿಂದಿ ಪತ್ರಿಕೋದ್ಯಮ ಸಾಮಾಜಿಕ ಜಾಗೃತಿ ಹಾಗೂ ರಾಷ್ಟ್ರ ನಿರ್ಮಾಣಕ್ಕೆ ಅಭೂತಪೂರ್ವ ಕೊಡುಗೆ ನೀಡಿದೆ. ಹಿಂದಿ ಪತ್ರಿಕೋದ್ಯಮದ ಎಲ್ಲ ಪತ್ರಕರ್ತರಿಗೂ ನನ್ನ ಹೃತ್ಪೂರ್ವಕ ಶುಭಾಶಯಗಳು. ಪತ್ರಕರ್ತರಿಗೆ ಎಲ್ಲ ಬೆಂಬಲ ನೀಡಲು ಸರ್ಕಾರ ಬದ್ಧವಾಗಿದ್ದು, ಅವರನ್ನು ಪ್ರೋತ್ಸಾಹಿಸುವುದನ್ನು ಮುಂದುವರೆಸುತ್ತೇವೆ ಎಂದು ಹೇಳಿದ್ದಾರೆ.

ಪ್ರಸ್ತುತ ಸವಾಲಿನ ಸಂದರ್ಭದಲ್ಲಿ ಪತ್ರಕರ್ತರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು 24×7  ಕೆಲಸ ಮಾಡಿ ನಮಗೆ ಮಾಹಿತಿಯನ್ನು ತಲುಪಿಸುತ್ತಿದ್ದಾರೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು. ಕೊರೊನಾ ಎರಡನೆ ಅಲೆ ವೇಳೆ ದೇಶಾದ್ಯಂತ ಅನೇಕ ಪತ್ರಕರ್ತರು ಪ್ರಾಣ ಕಳೆದುಕೊಂಡಿದ್ದಾರೆ. ಇದರಿಂದ ಅವರ ಕುಟುಂಬಗಳು ಅಸಹಾಯಕರಾಗಿದ್ದಾರೆ ಎಂದು ಯುಪಿ ಸರ್ಕಾರ ತಿಳಿಸಿದೆ.

The post ಕೊರೊನಾದಿಂದ ಮೃತಪಟ್ಟ ಪತ್ರಕರ್ತರಿಗೆ 10 ಲಕ್ಷ ಪರಿಹಾರ: ಸಿಎಂ ಯೋಗಿ ಆದಿತ್ಯನಾಥ್ appeared first on Public TV.

Source: publictv.in

Source link