ಕೊರೊನಾ ಆತಂಕದಿಂದ ಮುಖ್ಯ ಪರೀಕ್ಷಾ ಮಾದರಿಯಲ್ಲಿಯೇ ದ್ವಿತೀಯ ಪಿಯುಸಿ ಪರೀಕ್ಷೆಗೆ ಮುಂದಾದ ಪಿಯು ಬೋರ್ಡ್ | Karnataka Second PU Midterm Exams 2021 PU board decided to do midterm exams in the model of main exam


ಕೊರೊನಾ ಆತಂಕದಿಂದ ಮುಖ್ಯ ಪರೀಕ್ಷಾ ಮಾದರಿಯಲ್ಲಿಯೇ ದ್ವಿತೀಯ ಪಿಯುಸಿ ಪರೀಕ್ಷೆಗೆ ಮುಂದಾದ ಪಿಯು ಬೋರ್ಡ್

ಸಾಂದರ್ಭಿಕ ಚಿತ್ರ

ಬೆಂಗಳೂರು: ಕೊರೊನಾ ಆತಂಕದಿಂದಾಗಿ ಮುಖ್ಯ ಪರೀಕ್ಷಾ ಮಾದರಿಯಲ್ಲಿಯೇ ದ್ವಿತೀಯ ಪಿಯುಸಿ ಪರೀಕ್ಷೆಗೆ ಪಿಯು ಬೋರ್ಡ್ ಮುಂದಾಗಿದೆ. ದ್ವಿತೀಯ ಪಿಯುಸಿ ಮಧ್ಯವಾರ್ಷಿಕ ಪರೀಕ್ಷೆಯನ್ನು(PU Midterm Exams) ಮುಖ್ಯ ಪರೀಕ್ಷಾ ಮಾದರಿಯಲ್ಲಿ ನಡೆಸಲು ಪಿಯು ಬೋರ್ಡ್(PU Board) ನಿರ್ಧರಿಸಿದೆ. ಸಿಬಿಎಸ್​ಸಿ, ಐಸಿಎಸ್​ಇ ಮಾದರಿಯಲ್ಲಿ ಪರೀಕ್ಷೆಗೆ ಮುಂದಾಗಿದ್ದು, ವಾರ್ಷಿಕ ಪರೀಕ್ಷೆ ಮಾದರಿಯಲ್ಲಿ ಮಧ್ಯವಾರ್ಷಿಕ ಪರೀಕ್ಷೆ ಆಯೋಜಿಸಲಾಗಿದೆ. ನವೆಂಬರ್ 29ರಿಂದ ಡಿಸೆಂಬರ್ 10ರವರೆಗೆ ದ್ವಿತೀಯ ಪಿಯು ಪರೀಕ್ಷೆ(Second PUC exam) ನಡೆಯಲಿದೆ. ಪ್ರಶ್ನೆಪತ್ರಿಕೆ ತಯಾರಿ ಮತ್ತು ಮೌಲ್ಯಮಾಪನಕ್ಕೂ ಕೇಂದ್ರೀಕೃತ ವ್ಯವಸ್ಥೆ ಮಾಡಲಾಗಿದೆ.

ಈ ಮೊದಲು ಮಧ್ಯವಾರ್ಷಿಕ ಪರೀಕ್ಷೆಗೆ ಜಿಲ್ಲಾ ಮಟ್ಟದಲ್ಲಿ ಪ್ರಶ್ನೆಪತ್ರಿಕೆ ತಯಾರಿ ಆಗುತ್ತಿತ್ತು. ಮೌಲ್ಯಮಾಪನ ಆಯಾ ಕಾಲೇಜು ಮಟ್ಟದಲ್ಲಿ ನಡೆಯುತ್ತಿತ್ತು. ಇನ್ನು ಪರೀಕ್ಷಾ ದಿನಾಂಕವೂ ಕೂಡ ಹಿಂದೆಮುಂದೆ ಆಗುತ್ತಿತ್ತು. ಆದರೀಗ ಕೊರೊನಾ 3ನೇ ಅಲೆ ಹಿನ್ನೆಲೆ, ಮಧ್ಯವಾರ್ಷಿಕ ಪರೀಕ್ಷೆ ವಾರ್ಷಿಕ ರೀತಿಯಲ್ಲಿಯೇ ಗಂಭೀರತೆ ಪಡೆದಿದೆ.

ಪಿಯು ಬೋರ್ಡ್​ನಿಂದಲೇ ಪ್ರಶ್ನೆಪತ್ರಿಕೆ, ಮೌಲ್ಯಮಾಪನ ವ್ಯವಸ್ಥೆ
3 ಗಂಟೆಗಳ ಕಾಲ ಮಧ್ಯವಾರ್ಷಿಕ ಪರೀಕ್ಷೆ ನಡೆಯಲಿದ್ದು, ರಾಜ್ಯದಲ್ಲಿ ಏಕಕಾಲಕ್ಕೆ ದ್ವಿತೀಯ ಪಿಯು ಪರೀಕ್ಷೆ ನಡೆಯಲಿದೆ. ರಾಜ್ಯಾದಂತ 6.5ಲಕ್ಷ ಪಿಯು ವಿದ್ಯಾರ್ಥಿಗಳಿಗೆ ಏಕಕಾಲಕ್ಕೆ ಪರೀಕ್ಷೆ ನಡೆಸಲು ಪಿಯು ಬೋರ್ಡ್ ಮುಂದಾಗಿದೆ. ಕೊರೊನಾದಿಂದ ವಿದ್ಯಾರ್ಥಿಗಳು ಯಾವುದೇ ಮುಖ್ಯ ಪರೀಕ್ಷೆ ಬರೆದಿಲ್ಲ. ಕಳೆದ ಎರಡು ವರ್ಷದಿಂದ ನೇರವಾಗಿ ಪಾಸ್ ಆಗಿದ್ದಾರೆ. ಇದರಿಂದ ಪಿಯು ವಿದ್ಯಾರ್ಥಿಗಳಿಗೆ ಮುಖ್ಯ ಪಿಯುಸಿ ಪರೀಕ್ಷೆ ಬರೆಯುವುದು ಕಷ್ಟವಾದ ಹಿನ್ನಲೆ, ರಾಜ್ಯದ್ಯಂತ ಏಕಾಕಾಲಕ್ಕೆ ಪಿಯು ಮುಖ್ಯ ಪರೀಕ್ಷೆಯ ಮಾದರಿಯಲ್ಲಿಯೇ ಪಿಯು ಮಧ್ಯವಾರ್ಷಿಕ ಪರೀಕ್ಷೆ ನಡೆಸಲು ಪಿಯು ಬೋರ್ಡ್ ನಿರ್ಧರಿಸಿದೆ.

ದ್ವಿತೀಯ ಪಿಯು ಮಧ್ಯವಾರ್ಷಿಕ ಪರೀಕ್ಷೆ ವೇಳಾಪಟ್ಟಿ ಪ್ರಕಟ
ದ್ವಿತೀಯ ಪಿಯು ಮಧ್ಯ ವಾರ್ಷಿಕ ಪರೀಕ್ಷೆ ವೇಳಾಪಟ್ಟಿ ಪ್ರಕಟ ಮಾಡಲಾಗಿದೆ. ನವೆಂಬರ್ 29 ರಿಂದ ಡಿಸೆಂಬರ್ 10 ರ ವರೆಗೆ ಪರೀಕ್ಷೆ ನಡೆಯಲಿದೆ. ಪದವಿ ಪೂರ್ವ ಶಿಕ್ಷಣ ಇಲಾಖೆ ನವೆಂಬರ್ 12 ರಂದು ವೇಳಾಪಟ್ಟಿ ಪ್ರಕಟಿಸಿದೆ. ಅಕ್ಟೋಬರ್ 3ರಿಂದ 6ನೇ ತರಗತಿಯಿಂದ ದ್ವಿತೀಯ ಪಿಯುಸಿವರೆಗೆ ಶೇಕಡಾ 100ರಷ್ಟು ಮಕ್ಕಳ ಹಾಜರಾತಿಗೆ ಅವಕಾಶ ಕಲ್ಪಿಸಲಾಗಿತ್ತು. ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದರು.

ಕೊರೊನಾ ಸೋಂಕು ನಿಯಂತ್ರಣ ಸಂಬಂಧ ಸಭೆ ಬಳಿಕ ಅವರು ಸುದ್ದಿಗಾರರಿಗೆ ಈ ವಿಷಯ ತಿಳಿಸಿದ್ದರು. ಅಕ್ಟೋಬರ್ 3ರಿಂದ ಪಬ್‌ಗಳಲ್ಲೂ ನಿರ್ಬಂಧ ತೆರವುಗೊಳಿಸಲಾಗುವುದು ಎಂದು ಅವರು ಘೋಷಿಸಿದ್ದರು. ಇದೀಗ ಎಲ್​ಕೆಜಿ, ಯುಕೆಜಿ ಸಹಿತ ಎಲ್ಲಾ ಶಾಲಾ ತರಗತಿಗಳು ಕೂಡ ಆರಂಭವಾಗಿದೆ. ಕೊರೊನಾ ಸಂಬಂಧಿಸಿ ಇದ್ದ ನೈಟ್ ಕರ್ಫ್ಯೂ ಕೂಡ ಸಂಪೂರ್ಣವಾಗಿ ಹಿಂಪಡೆಯಲಾಗಿದೆ.

ಕೊರೊನಾ ಎರಡನೇ ಅಲೆ ಬಳಿಕ ಜನಜೀವನ ಸಮತೋಲನಕ್ಕೆ ಬರುತ್ತಿದೆ. ಆನ್​ಲೈನ್ ವಿಧಾನದಲ್ಲೇ ಸಾಗಿದ್ದ ಶಿಕ್ಷಣ ಮತ್ತೆ ಆಫ್​ಲೈನ್ ಮೂಲಕ ಸಾಗುತ್ತಿದೆ. ಶಾಲೆ, ಕಾಲೇಜು ತರಗತಿಗಳು ಮತ್ತೆ ತುಂಬಿಕೊಂಡಿವೆ. ಈ ನಡುವೆ ದ್ವಿತೀಯ ಪಿಯು ಮಧ್ಯ ವಾರ್ಷಿಕ ಪರೀಕ್ಷೆ ವೇಳಾಪಟ್ಟಿ ಶುಕ್ರವಾರ ಪ್ರಕಟವಾಗಿದೆ. ಪರೀಕ್ಷೆ ದಿನಾಂಕವನ್ನು ಹೇಳಲಾಗಿದೆ.

ಇದನ್ನೂ ಓದಿ:
3 ವರ್ಷಗಳ ಡಿಪ್ಲೊಮಾ ನೇರ ನೇಮಕಾತಿ, ಅನುಕಂಪದ ನೇಮಕಾತಿ, ಉನ್ನತ ಶಿಕ್ಷಣ ಪಡೆಯಲು ಪಿಯುಸಿಗೆ ಸಮ

PU Midterm Exams: ದ್ವಿತೀಯ ಪಿಯು ಮಧ್ಯವಾರ್ಷಿಕ ಪರೀಕ್ಷೆ ವೇಳಾಪಟ್ಟಿ ಪ್ರಕಟ

TV9 Kannada


Leave a Reply

Your email address will not be published. Required fields are marked *