ಬಳ್ಳಾರಿ: ಹೆಮ್ಮಾರಿ ಕೊರೊನಾ ಎರಡನೇ ಅಲೆಯ ಆರ್ಭಟ ಇನ್ನೂ ನಿಂತಿಲ್ಲ. ಮಹಾಮಾರಿ ವೈರಸ್​ಗೆ ಈಗಾಗಲೇ ರಾಜ್ಯದಲ್ಲಿ ಸಾವಿರಾರು ಜೀವಗಳು ಬಲಿಯಾಗಿವೆ. ನಿತ್ಯ ಸಾವಿನ ಮೃದಂಗ ಬಾರಿಸುತ್ತಲೇ ಇದೆ. ಈ ನಡುವೆ ಸೆಂಚೂರಿ ಬಾರಿಸಿದ್ದ ದಂಪತಿ ಕೊರೊನಾ ಗೆದ್ದು ಜಿಲ್ಲೆಯ ಜನರಿಗೆ ಹೊಸ ಭರವಸೆಯನ್ನ ಮೂಡಿಸಿದ್ದಾರೆ.

ಮನೆಯಲ್ಲಿ ಟ್ರೀಟ್ಮೆಂಟ್ ಪಡೆದು ವೈರಸ್ ಮೆಟ್ಟಿನಿಂತ ಶತಾಯುಷಿ ದಂಪತಿ
ಗಣಿನಾಡು ಬಳ್ಳಾರಿಯಲ್ಲಿ ನೂರು ವರ್ಷ ಪೂರೈಸಿದ ವೃದ್ಧ ದಂಪತಿ ಮನೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಸಂಡೂರು ತಾಲೂಕಿನ ತುಂಬರಗುದ್ದಿ ಗ್ರಾಮದ 103 ವರ್ಷದ ವೀರಣ್ಣ ಹಾಗೂ 101 ವರ್ಷದ ಈರಮ್ಮ ಕೊರೊನಾ ಜಯಿಸಿದ್ದಾರೆ. ವೃದ್ಧ ದಂಪತಿಗೆ ಮೇ 17ರಂದು ವೈರಸ್ ತಗುಲಿತ್ತು. ಮನೆಗೆ ಬಂದಿದ್ದ ಆರೋಗ್ಯ ಇಲಾಖೆ ಸಿಬ್ಬಂದಿ, ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ದಂಪತಿಯನ್ನ ಕೋವಿಡ್ ಕೇರ್ ಸಂಟರ್‌ಗೆ ಶಿಫ್ಟ್ ಮಾಡಲು ಮುಂದಾಗಿದ್ದರು.

ಈ ವೇಳೆ ಅವರ ಕುಟುಂಬಸ್ಥರು, ತುಂಬಾ ವಯಸ್ಸಾಗಿರುವ ಕಾರಣ ಇಬ್ಬರಿಗೂ ಕೊರೊನಾ ಕೇರ್​ ಸೆಂಟರ್​​​ ಸರಿ ಹೊಂದುವುದಿಲ್ಲ. ನಾವು ಮನೆಯಲ್ಲೇ ಎಲ್ಲಾ ರೀತಿಯ ಟ್ರೀಟ್ಮೆಂಟ್​​ಗೆ ಸಹಕಾರ ಕೊಡುತ್ತೇವೆ ಅಂತಾ ಸಂಡೂತು ತಾಲೂಕು ಆಡಳಿತಕ್ಕೆ ಮನವಿ ಮಾಡಿಕೊಂಡಿದ್ದಾರೆ. ಅದರಂತೆ ಅಧಿಕಾರಿಗಳು ಸಹ ಅದಕ್ಕೆ ಒಪ್ಪಿಗೆಯನ್ನ ನೀಡಿದ್ದರು.

ಬಳಿಕ ವೃದ್ಧ ದಂಪತಿಯ ಮೊಮ್ಮಗ ಡಾ.ಭರತ ಕುಮಾರ್ ವೃದ್ಧರ ಆರೈಕೆಯನ್ನ ಆರಂಭಿಸಿದರು. ಆದ್ರೆ ಚಿಕಿತ್ಸೆ ಆರಂಭಿಸಿ ಎರಡು ದಿನಗಳ ಕಳೆಯುತ್ತಿದ್ದಂತೆ ತಾತ ವೀರಣ್ಣ ಆರೋಗ್ಯ ತುಂಬಾ ಹದಗೆಟ್ಟಿತ್ತು. ಆಹಾರ ಕೂಡ ಸೇವಿಸಲಾಗದ ಹಂತಕ್ಕೆ ತಲುಪಿಬಿಟ್ಟದ್ದರು. ಅಜ್ಜಿಯ ಆರೋಗ್ಯದಲ್ಲಿ ಮಾತ್ರ ಸ್ಥಿರತೆ ಇದ್ದಿತು. ತಾತನ ಆರೋಗ್ಯ ಪರಿಸ್ಥಿತಿ ಕೈಮೀರಿದರೆ ಅಂತ ಕುಟುಂಬಸ್ಥರು ತಲೆ ಮೇಲೆ ಕೈಹೊತ್ತಿದ್ರು. ಆದರೆ ಡಾ.ಭರತಕುಮಾರ್ ಸತತ ಪ್ರಯತ್ನದಿಂದಾಗಿ ವೃದ್ಧ ದಂಪತಿ ಕೊರೊನಾವನ್ನ ಒದ್ದು ಓಡಿಸಿದ್ದಾರೆ.

ಕೊರೊನಾ ದೊಡ್ಡ ಕಾಯಿಲೆಯಲ್ಲ. ಹೆದರಬೇಡಿ ಧೈರ್ಯವಾಗಿರಿ. ಭಯವಿಲ್ಲದೇ ಎದುರಿಸಿದ್ರೆ ಸುಲಭವಾಗಿ ಕೊರೊನಾ ಓಡಿಸಬಹುದು.
-ಈರಮ್ಮ, ಶತಾಯಿಷಿ, ಕೊರೊನಾ ಗೆದ್ದ ಅಜ್ಜಿ

ಶತಾಯುಷಿ ದಂಪತಿಗೆ ಆರು ತಿಂಗಳಿಗೊಮ್ಮೆ ದಾವಣಗೆರೆ ಖಾಸಗಿ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ನಡೆಸಲಾಗುತ್ತದೆ. ಆಸ್ಪತ್ರೆಗೆ ಹೋಗುವ ಮುನ್ನ ಕುಟುಂಬಸ್ಥರು ಇವ್ರಿಗೆ ಕೊರೊನಾ ಟೆಸ್ಟ್ ಮಾಡಿಸಿದ್ರು. ಮೇ 17ರಂದು ವೃದ್ಧ ದಂಪತಿಗೆ ಕೊರೊನಾ ಪಾಸಿಟಿವ್ ಎಂದು ಗೊತ್ತಾಗಿದೆ. ಅಧಿಕಾರಿಗಳ ಒಪ್ಪಿಗೆ ಮೇರಿಗೆ ಮನೆಯಲ್ಲಿ ಚಿಕಿತ್ಸಾ ಕ್ರಮ ಏನೋ ಆರಂಭಿಸಿದ್ರು. ಆದರೆ ತಾತನನ್ನು ಉಳಿಸಿಕೊಳ್ಳುವುದೇ ಕುಟುಂಬಸ್ಥರ ಪಾಲಿಗೆ ಸವಾಲಿನ ಕೆಲಸವಾಗಿತ್ತು. ಇವರಿಗೆ ಕೊರೊನಾ ಇರುವ ಬಗ್ಗೆ ಹೇಳಿರಲಿಲ್ಲ. ಮೊಮ್ಮಕ್ಕಳ ಪ್ರಯತ್ನದಿಂದ 10 ದಿನ ಚಿಕಿತ್ಸೆ ಪಡೆದ ವೀರಣ್ಣ ಹಾಗೂ ಈರಮ್ಮ ಇಂದು ಕೊರೊನಾ ಮೆಟ್ಟಿ ನಿಂತಿದ್ದಾರೆ. ಗುಣಮುಖರಾಗಿ ಮತ್ತೆ ಮೊದಲಿನಂತೆ ಆಗಿರೋದು ತುಂಬರಗುದ್ದಿ ಗ್ರಾಮಸ್ಥರ ಸಂತಸಕ್ಕೆ ಪಾರವೇ ಇಲ್ಲದಂತಾಗಿದೆ. ವೈರಸ್ ಮೆಟ್ಟಿನಿಂತ ವೃದ್ಧ ಜೀವಿಗಳಿಗೆ ಗ್ರಾಮಸ್ಥರು ಸನ್ಮಾನಿಸಿದ್ದಾರೆ.

ಒಟ್ನಲ್ಲಿ ಕೊರೊನಾ ಪಾಸಿಟಿವ್ ಅಂದಾಕ್ಷಣ ಹೆದರುವವರಿಗೆ, ಈ ಶತಾಯುಷಿ ದಂಪತಿ ಮಾದರಿಯಾಗಿದ್ದಾರೆ. ಕೊರೊನಾ ದೊಡ್ಡ ಕಾಯಿಲೆಯಲ್ಲ ಅಂತ ಸಮಾಜಕ್ಕೆ ತೋರಿಸಿಕೊಟ್ಟಿದ್ದಾರೆ.

The post ಕೊರೊನಾ ಒದ್ದು ಓಡಿಸಿದ ಶತಾಯುಷಿ ದಂಪತಿ.. ಸತಿ-ಪತಿಯ ಕೋವಿಡ್ ವಿರುದ್ಧದ ಹೋರಾಟ ಸಕ್ಸಸ್ appeared first on News First Kannada.

Source: newsfirstlive.com

Source link