ಓಟಿಟಿ ಪ್ಲಾಟ್​ಫಾರಂ ಚಿತ್ರರಂಗಕ್ಕೆ ಕಂಟಕ ಅಂತಾರೆ. ಅದು ಸುಳ್ಳು, ಓಟಿಟಿ ನಮಗೆ ವರದಾನ. ಯಾಕಂದ್ರೆ ಥಿಯೇಟರ್​ಗೆ ಹೋಗಿ ಸಿನಿಮಾ ನೋಡಲು ಆಗದವರು ಮೊಬೈಲ್​ನಲ್ಲಿ ಸಿನಿಮಾ ನೋಡ್ತಾರೆ. ಈ ಥರ ಫೆಸಿಲಿಟಿ ಬಂದಿರೋದಕ್ಕೆ ನಾವು ಖುಷಿ ಪಡಬೇಕು. ಅದನ್ನ ನಾವು ಓಟಿಟಿ ಅನ್ನೋದಕ್ಕಿಂತ ಎಟಿಟಿ ಅನ್ನಬೇಕು ಅಂದ್ರೆ ಎನೀ ಟೈಂ ಥಿಯೇಟರ್
-ಆರ್​. ಚಂದ್ರು

ಕೊರೊನಾ ಮಹಾಮಾರಿ ಹೊಡೆತದಿಂದ ತಪ್ಪಿಸಿಕೊಳ್ಳದ ಉದ್ಯಮವೇ ಇಲ್ಲ. ಕೆಲವು ಉದ್ಯಮಗಳು ಕೊರೊನಾ ಬಂದ ಮೇಲೆ ಬಾಗಿಲು ಬಂದ್ ಮಾಡಿವೆ. ಇನ್ನು ಕೆಲವು ಆರಕ್ಕೇರದೇ ಮೂರಕ್ಕಿಳಿಯದೇ ಸಂಕಷ್ಟದಲ್ಲಿವೆ. ಇವುಗಳ ಮಧ್ಯೆ ಬಣ್ಣದ ಲೋಕ ಅಂದ್ರೆ ಚಿತ್ರೋದ್ಯಮ ಹೊಳಪನ್ನು ಕಳೆದುಕೊಂಡಿದೆ. ಅಲ್ಲದೇ ಮಾಯಾ ಲೋಕದಲ್ಲಿ ಮತ್ತೆ ಯಾವಾಗ ಬೆಳಕು ಮೂಡಿ ಬರಲಿದೆ ಎಂಬ ಹಗಲುಗನಸು ಕಾಣ್ತಿದ್ದಾರೆ ಚಿತ್ರೋದ್ಯಮದ ಮಂದಿ.

ಕನಸಿನ ಲೋಕಕ್ಕೆ ಮತ್ಯಾವಾಗ ಬಣ್ಣ?
ಬಣ್ಣದ ಲೋಕದಲ್ಲಿ ಬದುಕು ಕಟ್ಟಿಕೊಳ್ಳಬೇಕು ಎಂದು ಸಾಕಷ್ಟು ಯುವ ನಟ-ನಟಿಯರು, ತಂತ್ರಜ್ಞರು, ಕನಸು ಕಂಡು ಗಾಂಧಿನಗರಕ್ಕೆ ಬರ್ತಾರೆ. ಜೊತೆಗೆ ಸಾಕಷ್ಟು ಜನ ತಮ್ಮ ಕನಸನ್ನು ನನಸು ಮಾಡಿಕೊಂಡು ಸ್ಟಾರ್​ಡಂ ಪಡೆದುಕೊಂಡಿದ್ದಾರೆ. ಆದ್ರೆ ಈ ಮಹಾಮಾರಿ ಬಂದ ಮೇಲೆ ಕನಸು ಕಾಣುವ ಕಣ್ಣುಗಳಲ್ಲಿ ನಿದ್ದೆಯೇ ಇಲ್ಲದಂತಾಗಿದೆ. ಕಳೆದ ಒಂದು ವರ್ಷದಿಂದ ಚಿತ್ರರಂಗ ಕೊರೊನಾ ಹೊಡೆತಕ್ಕೆ ಸಿಲುಕಿ ಹಿಮ್ಮುಖವಾಗಿ ಚಲಿಸುತ್ತಿದೆ. ಸದಾ ಪ್ರೇಕ್ಷಕ ಪ್ರಭುಗಳಿಗೆ ರಂಜಿಸ್ತಿದ್ದ ಚಿತ್ರಮಂದಿರಗಳು ಕಳೆದ ಒಂದು ವರ್ಷದಲ್ಲಿ ಬಾಗಿಲು ಮುಚ್ಚಿರುವ ದಿನಗಳೇ ಹೆಚ್ಚು.

ಕೊರೊನಾ ಮೊದಲ ಅಲೆಯ ಹೊಡೆತಕ್ಕೆ ತತ್ತರಿಸಿದ್ದ ಚಿತ್ರರಂಗದಲ್ಲಿ, ಈ ವರ್ಷದ ಆರಂಭದಲ್ಲಿ ಕೊಂಚ ಗೆಲುವಿನ ಲಕ್ಷಣ ಕಾಣಿಸಿತ್ತು. ಅಷ್ಟರಲ್ಲಿ ಈ ಕಿಲ್ಲರ್ ಕೊರೊನಾ ಮತ್ತೆ ಚಿತ್ರರಂಗವನ್ನು ಪ್ರಪಾತಕ್ಕೆ ತಳ್ಳಿಬಿಟ್ಟಿದೆ. ಕಳೆದ ಒಂದು ತಿಂಗಳಿದ ಚಿತ್ರರಂಗದ ಎಲ್ಲಾ ಕೆಲಸಗಳು ಬಂದ್ ಆಗಿವೆ. ಚಿತ್ರಮಂದಿರಗಳು ಕ್ಲೋಸ್ ಆಗಿವೆ. ಇದರಿಂದ ಕೋಟಿ ಕೋಟಿ ಸುರಿದು ಸಿನಿಮಾ ನಿರ್ಮಾಣ ಮಾಡಿದ್ದ ನಿರ್ಮಾಪಕರು ಕಂಗಲಾಗಿದ್ದಾರೆ. ಜೊತೆಗೆ ಚಿತ್ರಮಂದಿರಗಳ ಮಾಲೀಕರು ಕೂಡ ತತ್ತರಿಸಿ ಹೋಗಿದ್ದಾರೆ.

ಕಾಯಿಲೆಗಿಂತ ಕಾಯಿಲೆ ಬರುತ್ತೆ ಅನ್ನೋ ಭಯದಲ್ಲಿ ಜನ ಇದ್ದಾರೆ. ಆದ್ರೆ ಈ ಪರಿಸ್ಥಿತಿ ಶಾಶ್ವತ ಅಲ್ಲ. ಮುಂದಿನ ದಿನಗಳಲ್ಲಿ ಇಂದು ಬಿದ್ದಿರುವ ನಾವೆಲ್ಲಾ ಎದ್ದೇಳ್ತೀವಿ. ಆದ್ರೆ ಅಲ್ಲಿಯ ತನಕ ನಮ್ಮಲ್ಲಿ ತಾಳ್ಮೆಯಿರಬೇಕು, ಜೊತೆಗೆ ನಮ್ಮ ಜೀವವನ್ನು ಉಳಿಸಿಕೊಳ್ಳಬೇಕು, ಉದ್ಯಮಗಳ ಜೊತೆಗೆ ಸಾಮಾನ್ಯ ಜನರ ಬದುಕು ಸರಿಹೋಗಬೇಕು ಆಗ ನಾವು ಸರಿ ಹೋಗ್ತೀವಿ. ಮತ್ತೆ ಚಿತ್ರೋದ್ಯಮದಲ್ಲಿ ಬಣ್ಣ ಜಗಮಗಿಸಲಿದೆ.
-ಯೋಗರಾಜ್ ಭಟ್, ನಿರ್ದೇಶಕ

ಇದಿಷ್ಟೇ ಅಲ್ಲ.. ಕೊರೊನಾ ಲಾಕ್​ಡೌನ್​ನಿಂದ ಚಿತ್ರರಂಗವನ್ನೇ ನಂಬಿಕೊಂಡಿದ್ದ 20 ಸಾವಿರಕ್ಕೂ ಹೆಚ್ಚಿನ ಮಂದಿಯ ಬದುಕು ಅತಂತ್ರವಾಗಿದೆ. ಅಷ್ಟರ ಮಟ್ಟಿಗೆ ಈ ಕೊರೊನಾ ಭೀತಿ ಹುಟ್ಟಿಸಿದೆ. ಇನ್ನು ಚಿತ್ರರಂಗ ಮೊದಲಿನಂತೆ ಆಗುತ್ತಾ.? ಆದರೂ ಅದಕ್ಕೆ ಎಷ್ಟು ಸಮಯ ಬೇಕು ಎಂಬ ಆತಂಕದಲ್ಲೇ ಇದ್ದಾರೆ ಸಿನಿಮಾ ಮಂದಿ. ಈ ವಿಚಾರವಾಗಿ ಸಿನಿ ಪಂಡಿತರನ್ನ ಮಾತಾಡಿಸಿದ್ರೆ ಮತ್ತೆ ಗಾಂಧಿನಗರದಲ್ಲಿ ಹಿಂದಿನ ಹೊಳಪು ಕಾಣಿಸೋದು ಡೌಟ್ ಅಂತಾರೆ. ಸದ್ಯದ ಪರಿಸ್ಥಿಯಲ್ಲಿ ಹೊಸ ನಿರ್ಮಾಪಕರು ಗಾಂಧಿನಗರದ ಕಡೆ ಮುಖ ಹಾಕಿಯೂ ನೋಡಲ್ಲ. ಕಳೆದ ಎರಡ್ಮೂರು ವರ್ಷಗಳಂತೆ ಇನ್ಮುಂದೆ 200-300 ಚಿತ್ರಗಳ ನಿರ್ಮಾಣ ಕನಸಿನ ಮಾತು. ಒಂದು ವೇಳೆ ಚಿತ್ರರಂಗ ಮತ್ತೆ ಮೊದಲಿನಂತೆ ಆದ್ರು ಅದಕ್ಕೆ ತುಂಬಾ ಸಮಯ ಬೇಕು ಎಂದು ಹೇಳ್ತಾರೆ.

ಆದರೆ ಸಿನಿಮಾ ನಿರ್ದೇಶಕರಲ್ಲಿ ಮತ್ತೆ ಪುಟಿದೇಳುವ ಭರವಸೆ ಇದೆ. ಕಿಲ್ಲರ್ ಕೊರೊನಾ ವಿರುದ್ದ ನಾವು ಹೋರಾಡಿ ಮತ್ತೆ ಎದ್ದು ಗೆದ್ದೇ ಗೆಲ್ತೀವಿ ಅನೋ ನಂಬಿಕೆ ಇದೆ. ಸ್ಯಾಂಡಲ್​ವುಡ್​ನ ವಿಕಟ ಕವಿ ನಿರ್ದೇಶಕ ಯೋಗರಾಜ್ ಭಟ್ ಹೇಳುವಂತೆ ಈ ಕೊರೊನಾದಿಂದ ಸಿನಿಮಾ ಮಾತ್ರವಲ್ಲ, ಎಲ್ಲಾ ಉದ್ಯಮಗಳು ಬಿದ್ದಿವೆ. ಈ ಸಮಯದಲ್ಲಿ ನಾವು ಸ್ವಾರ್ಥಿಗಳಾಗಿ ನಮ್ಮ ರಂಗವನ್ನು ಮಾತ್ರ ಯೋಚಿಸಬಾರದು. ಆಶಾದಾಯವಾಗಿ ಬದುಕಬೇಕು.. ಅನ್ನೋ ಆಶಾಭಾವನೆ ಇರಬೇಕು.

ಚಿತ್ರರಂಗದ ಬಣ್ಣ ಯಾವುದೇ ಕಾರಣಕ್ಕೂ ಮಾಸಲ್ಲ. ದೇವರು ಒಬ್ಬ ಇದ್ದಾನೆ, ಕಷ್ಟ ಕಳೆದ ಮೇಲೆ ಸುಖ ಬರಲೇಬೇಕು. ಈ ಹಿಂದೆ ಎಷ್ಟೋ ವೈರಸ್​ಗಳು ಬಂದಿವೆ, ಯುದ್ಧಗಳಾಗಿವೆ. ಅದಾದ ನಂತರ ನಾವು ಚೇತರಿಸಿಕೊಂಡಿದ್ದೇವೆ. ಮುಂದಿನ ದಿನಗಳಲ್ಲಿ ಖಂಡಿತಾ ಒಳ್ಳೆಯದಾಗುತ್ತೆ
-ಆರ್​. ಚಂದ್ರು, ನಿರ್ದೇಶಕ

ಈ ಎಲ್ಲಾ ಕಷ್ಟ ಕಳೆದ ಮೇಲೆ ಜನರು ಮನರಂಜನೆಗೆ ಒತ್ತು ಕೊಡ್ತಾರೆ. ಸಿನಿಮಾಗೆ ಯಾವತ್ತು ಸಾವಿಲ್ಲ. ಚಿತ್ರರಂಗಕ್ಕೆ ಒಳ್ಳೆಯದಾಗುತ್ತೆ. ಆದ್ರೆ ಸದ್ಯದ ಪರಿಸ್ಥತಿಯಲ್ಲಿ ನಮ್ಮ ಜೀವ ಕಾಪಾಡಿಕೊಳ್ಳಬೇಕು. ಒಂದೆರಡು ತಿಂಗಳು ಲೇಟ್ ಆಗಬಹುದು. ಆದ್ರೆ ನಮಗೆ ಭವಿಷ್ಯ ಇದ್ದೆ ಇದೆ. ಎಲ್ಲಾ ಜನರ ಬಳಿಯೂ ಸ್ಮಾರ್ಟ್​ ಫೋನ್​ ಇದೆ. ಆದ್ದರಿಂದ ನಾವು ಧೃತಿಗೆಡುವಂತ ಅವಶ್ಯಕತೆ ಇಲ್ಲ. ಥಿಯೇಟರ್​ ಲೇಟಾದ್ರು ನಾವು ಸಿನಿಮಾಗಳನ್ನ ಎಟಿಟಿಗೆ, ಓಟಿಟಿಗೆ ಬಿಡಬಹುದು. ಓಟಿಟಿಯಲ್ಲಿ ಸಿನಿಮಾ ರಿಲೀಸ್​ ಮಾಡಿದ್ರೆ ಲಾಭ ಕಡಿಮೆ ಆಗಬಹುದು. ಆದ್ರೆ ನಮ್ಮ ಶ್ರಮಕ್ಕೆ ಪ್ರತಿಫಲ ಸಿಕ್ಕೇ ಸಿಗುತ್ತೆ. ನಾವು ಹೋಪ್​ ಕಳೆದುಕೊಳ್ಳಬಾರದಷ್ಟೆ ಎಂಬುದು ನಿರ್ದೇಶಕ ಆರ್​ ಚಂದ್ರು ಅವರ ಮಾತು.

ಇನ್ನು ನಿರ್ಮಾಪಕರ ಪ್ರಕಾರ ಚಿತ್ರಮಂದಿರಗಳು ಓಪನ್​ ಆದ್ರೆ ಖಂಡಿತಾ ಜನರು ಥಿಯೇಟರ್​ಗೆ ಬಂದು ಸಿನಿಮಾ ನೋಡ್ತಾರೆ. ಚಿತ್ರರಂಗಕ್ಕೆ ಯಾವುದೇ ಕಾರಣಕ್ಕೂ ಸಮಸ್ಯೆ ಆಗಲ್ಲ. ನಾವು ಮತ್ತೆ ಪುಟಿದೇಳ್ತೇವೆ. ಆ ಶಕ್ತಿ ಚಿತ್ರರಂಗಕ್ಕಿದೆ ಎಂಬ ನಂಬಿಕೆಯಲ್ಲಿದ್ದಾರೆ. ಆದ್ರೆ ಸದ್ಯದ ಪರಿಸ್ಥಿತಿಯನ್ನು ಅವಲೋಕಿಸಿದ್ರೆ ಮಾಯಾಲೋಕದಲ್ಲಿ ಮತ್ತೆ ಬಣ್ಣದ ಬೆಳಕಿನ ಹೊಳಪು ಮೂಡೋಕೆ ಕೆಲವು ವರ್ಷಗಳಂತೂ ಬೇಕು. ಯಾಕಂದ್ರೆ ಕಳೆದ ಒಂದು ವರ್ಷದಲ್ಲಿ ಸ್ಟಾರ್ ​ನಟರ ಹೊಸ ಚಿತ್ರಗಳು ಶುರುವಾಗಿಲ್ಲ.

ಜೇಮ್ಸ್, ಕೆಜಿಎಫ್2, ಕೋಟಿಗೊಬ್ಬ 3, ಭಜರಂಗಿ 2, ವಿಕ್ರಾಂತ್ ರೋಣ ಸಿನಿಮಾಗಳು ರಿಲೀಸ್​ ಆದ್ರೆ ಮುಂದಿನ ಒಂದೆರಡು ವರ್ಷ ಯಾವುದೇ ಸ್ಟಾರ್​ ನಟರ ಚಿತ್ರಗಳಿಲ್ಲ. ಆದರೂ ಕಂಟೆಂಟ್​ ಓರಿಯೆಂಟೆಡ್​ ಸಿನಿಮಾಗಳಿವೆ. ಆದ್ರೆ ಆ ಚಿತ್ರಗಳನ್ನು ಪ್ರೇಕ್ಷಕ ಪ್ರಭುಗಳು ಕೈ ಹಿಡಿತಾರಾ ಇಲ್ಲವಾ ಅನ್ನೋದು ಸಿನಿಮಾಗಳು ರಿಲೀಸ್​ ಆದ ಮೇಲಷ್ಟೆ ತಿಳಿಯುತ್ತೆ. ಸದ್ಯ ಸ್ಯಾಂಡಲ್​ವುಡ್​ನಲ್ಲಿ ಸಿನಿಮಾ ಎಂಬ ಸೂರ್ಯನ ಸುತ್ತ ಕೊರೊನಾ ಎಂಬ ಮೋಡ ಆವರಿಸಿದ್ದು, ಆ ಮೋಡ ಸರಿದ ಮೇಲಷ್ಟೇ ಗಾಂಧಿನಗರದಲ್ಲಿ ಬಣ್ಣದ ಹೊಳಪು ನೋಡೋಕೆ ಸಾಧ್ಯ.

ವಿಶೇಷ ವರದಿ; ಸತೀಶ್ ಎಂ.ಬಿ, ಫಿಲ್ಮ್ ಬ್ಯೂರೋ 

The post ಕೊರೊನಾ ಕರಿ ನೆರಳಲ್ಲಿ ಬಣ್ಣ ಕಳೆದುಕೊಂಡ ಚಿತ್ರರಂಗ; ಮತ್ತೆ ಬೆಳಕು ಮೂಡೋದ್ಯಾವಾಗ? appeared first on News First Kannada.

Source: newsfirstlive.com

Source link