ಉತ್ತರ ಕೊರಿಯಾದ ಕಿಮ್ ಜಾಂಗ್ ಉನ್​ ಫೇಮಸ್ ಆಗಿರೋದೇ ತಮ್ಮ ವಿಭಿನ್ನ ಕಾರಣಕ್ಕಾಗಿ. ತಮ್ಮ ಸರ್ವಾಧಿಕಾರಿ ಆಡಳಿತ ಮತ್ತು ವಿಚಿತ್ರ ಎನಿಸುವ ಆದೇಶಗಳು ಹಲವಾರು ಬಾರಿ ಕುತೂಹಲ ಹುಟ್ಟಿಸುತ್ತವೆ. ಈ ಕೊರೊನಾ ಕಾಲದಲ್ಲಿ ಮತ್ತೊಂದು ರೀತಿಯ ಆಜ್ಞೆಯನ್ನು ಮಾಡಿದ್ದಾರೆ ಕಿಮ್ ಜಾಂಗ್ ಉನ್.

ಕೊರೊನಾ ಕಾಲದಲ್ಲಿ ಕಿಮ್ ಮಾಡಿದ ಆದೇಶವೇನು?
ಉತ್ತರ ಕೊರಿಯಾದ ಜನಕ್ಕೆ ಇವನ ಬಗ್ಗೆ ಅದ್ಯಾವ ಭಾವನೆ ಇದೆಯೋ ಗೊತ್ತಿಲ್ಲ. ಏನೇ ಇದ್ದರೂ ವ್ಯಕ್ತಪಡಿಸುವಂತೆಯೇ ಇಲ್ಲ. ಕಾರಣ ಈ ದೇಶ ಇರೋದೇ ಹೀಗೆ. ಇಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವೂ ಇಲ್ಲ, ಮಾಧ್ಯಮ ಸ್ವಾತಂತ್ರ್ಯ ಮೊದಲೇ ಇಲ್ಲ, ಇನ್ನು ಸಾಮಾಜಿಕ ಜಾಲತಾಣಗಳಂತೂ ಇಲ್ಲವೇ ಇಲ್ಲ. ಇದೆಂತಾ ದೇಶ ಅಂದುಕೊಂಡ್ರೆ ಇದು ಮೊದಲಿನಿಂದಲೂ ಇರೋದೇ ಹೀಗೆ. ಇಲ್ಲಿನ ಜನಕ್ಕೆ ಹೀಗೆಯೇ ಬದುಕಿ ಅಭ್ಯಾಸವಾಗಿ ಬಿಟ್ಟಿದೆ. ಕಿಮ್ ಏನು ಅಪ್ಪಣೆ ಕೊಡುತ್ತಾರೋ ಅದರಂತೆ ನಡೆದುಕೊಳ್ಳುವುದಷ್ಟೇ ಇಲ್ಲಿನ ಜನರ ಕೆಲಸ. ಅದು ಬಿಟ್ಟರೆ ಸದಾ ಕಿಮ್ ಆರಾಧಿಸೋದು, ಹೊಗಳೋದು ಬಿಟ್ರೆ ಬೇರೆ ಯಾವುದೂ ಇಲ್ಲಿ ಕಾಣಲ್ಲ.

ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಹೇಳಿದ್ದೇನು?
ಅಲ್ಲೆಲ್ಲೋ ಅರಮನೆಯಲ್ಲಿ ಕುಳಿತು ಆರ್ಡರ್ ಮಾಡಿದರೆ ಮುಗೀತು ಕಿಮ್ ಹೇಳಿದ ಮಾತುಗಳನ್ನು ಕಣ್ಣು ಮುಚ್ಚಿ ಪಾಲಿಸಿ ಬಿಡ್ತಾರೆ ನಾರ್ತ್ ಕೊರಿಯಾ ಜನ. ಕೇವಲ 37 ವರ್ಷದ ಕಿಮ್ ಈ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್​ ತನ್ನ ವಿಚಿತ್ರ ಕಾರ್ಯಶೈಲಿ, ಧೋರಣೆಗಳಿಂದ ಸುದ್ದಿಯಾಗುತ್ತಲೇ ಇರುತ್ತಾರೆ. ಹೀಗೆ ಒಮ್ಮೆ ತನ್ನಂತೆ ದೇಶದ ಪುರುಷರು ಹಾಗೂ ತನ್ನ ಪತ್ನಿಯಂತೆ ದೇಶದ ಮಹಿಳೆಯರು ಕೇಶ ವಿನ್ಯಾಸ ಮಾಡಿಕೊಳ್ಳಬೇಕು ಅಂದಿದ್ರೂ ಅದನ್ನು ಜನ್ರು ತುಟಿಕ್ ಪಿಟಿಕ್ ಅನ್ನದೇ ಪಾಲಿಸಿದ್ದರು. ಉತ್ತರ ಕೊರಿಯಾದ ಪ್ರಜೆಗಳು ಅಂತಾರಾಷ್ಟ್ರೀಯ ಕರೆಗಳನ್ನು ಮಾಡುವಂತಿಲ್ಲ ಅನ್ನುತ್ತಲೇ ಅಲ್ಲಿಂದ ಯಾವುದೇ ಕರೆಗಳು ಹೋಗುತ್ತಿಲ್ಲ. ಹೊರ ದೇಶದ ಸಂಗೀತ ಕೇಳುವಂತಿಲ್ಲ, ಚಲನಚಿತ್ರ ನೋಡುವಂತಿಲ್ಲ, ನೀಲಿ ಬಣ್ಣದ ಜೀನ್ಸ್ ಧರಿಸುವಂತಿಲ್ಲ, ಅಧ್ಯಕ್ಷರ ಹೆಸರನ್ನು ಯಾರೂ ಇಟ್ಟುಕೊಳ್ಳುವಂತಿಲ್ಲ ಹೀಗೆ ವಿಚಿತ್ರ ನಿಯಮಗಳನ್ನೆಲ್ಲಾ ಜಾರಿಗೆ ತಂದರೆ ಅದನ್ನು ಕೀ ಕೊಟ್ಟ ರೋಬೋಗಳಂತೆ ಪಾಲಿಸುತ್ತಾರೆ ಉತ್ತರ ಕೊರಿಯಾದ ಜನ್ರು. ಹಿಂದೊಮ್ಮೆ ಕೊರೊನಾ ಅನ್ನೋದು ನಾರ್ತ್ ಕೊರಿಯಾ ಗಡಿಗೂ ಕಾಲಿಟ್ಟಿಲ್ಲ ಇಂದಿದ್ದರು ಕಿಮ್. ಇದೀಗ ಬೀದಿ ಬದಿಯಲ್ಲಿ ಬೆಕ್ಕು, ಪಾರಿವಾಳಗಳು ಕಂಡಲ್ಲಿ ಗುಂಡಿಕ್ಕಲು ಆದೇಶ ಮಾಡಿ ಬಿಟ್ಟಿದ್ದಾರೆ ಕಿಮ್.

ಕೊರೊನಾ ಬರದಂತೆ ತಡೆಯಲು ಮಾಡ್ತಿರೋದೇನು?
ಪ್ರಾಣಿಗಳು- ಪಕ್ಷಿಗಳು ತಮ್ಮ ಪಾಡಿಗೆ ತಾವು ಅಡ್ಡಾಡಿಕೊಂಡು ಇರ್ತಾವೆ. ಇಂತ ಮುಗ್ಧ ಜೀವಿಗಳು ಕಂಡಲ್ಲಿ ಗುಂಡಿಕ್ಕಿ ಕೊಲ್ಲಲು ಕಿಮ್ ಆದೇಶ ಹೊರಡಿಸಿದ್ದಾರೆ. ಕಾರಣ ಇಷ್ಟೆ, ಇದುವರೆಗೂ ಕೊರೊನಾ ಒಂದು ಕೇಸ್ ಗಳು ಪತ್ತೆಯಾಗಿಲ್ಲ ಎಂದ ಕಿಮ್, ಇನ್ಮುಂದೆ ಹರಡಬಾರದು ಎನ್ನುವ ದೂರಾಲೋಚನೆಯಿಂದ ಈ ನಿರ್ಧಾರ ಮಾಡಿದ್ದಾರೆ. ಇದುವರೆಗೂ ಎಲ್ಲ ಕಡೆ ಬಾವಲಿಗಳಿಂದ ಕೊರೊನಾ ಹರಡೋದು ಅನ್ನೋದು ತಿಳಿದ ವಿಷಯ. ಆದ್ರೆ ಪಾರಿವಾಳದಿಂದ, ಬೆಕ್ಕಿನಿಂದ ಹರಡಿದ್ದರ ಬಗ್ಗೆ ಇದೇ ಮೊದಲ ಬಾರಿ ಕೇಳ್ತಾ ಇರೋದು. ಏನೇ ಆದರೂ ಪಾರಿವಾಳಗಳು ಕೋವಿಡ್ ವೈರಸ್ ಅನ್ನು ಹೊತ್ತು ತರವುದಿಲ್ಲ. ಆದರೂ ಅದನ್ನು ಉಡಾಯಿಸಲು ಹೇಳಿರುವ ಕಿಮ್ ತಲೆಯಲ್ಲಿ ಬೇರೆನೇ ಪ್ಲಾನ್ ಇದೆ.

ನೆರೆಯ ದೇಶಗಳಿಂದ ಹಕ್ಕಿಗಳೂ ಹಾರಿ ಬರಬಾರದಾ?
ಪಾರಿವಾಳ, ಗೂಬೆಗಳು ಕಂಡ್ರೆ ಏನು ಮಾಡ್ತಿದಾರೆ ಇಲ್ಲಿ?

ಪಾರಿವಾಳಗಳು ಒಂದು ಊರಿನಿಂದ ಇನ್ನೊಂದು ಊರಿಗೆ ಹಾರಾಡೊದು ಸಹಜ. ಈ ನಾರ್ತ್ ಕೊರಿಯಾ ಕೊರೊನಾ ಹಾಟ್ ಸ್ಪಾಟ್ ಎನಿಸಿಕೊಂಡ ಚೀನಾದ ಗಡಿಯ ಸಮೀಪ ಇದೆ. ಒಂದು ವೇಳೆ ಚೀನಾದಿಂದ ಕೊರೊನಾ ಹೊತ್ತು ನಾರ್ತ್ ಕೊರಿಯಾಗೆ ಪಾರಿವಾಳಗಳು ಎಂಟ್ರಿ ಕೊಟ್ಟರೆ, ಪಾರಿವಾಳಗಳಿಂದ ಅಲ್ಲಿನ ಪ್ರಾಣಿಗಳಿಗೆ ಪಕ್ಷಿಗಳಿಗೆ ಹರಡಿ ನೇರವಾಗಿ ಮನಷ್ಯರು ಅಲ್ಲಿಂದ ಕಿಮ್ ಅರಮನೆಯ ವರೆಗೂ ಕೊರೊನಾ ಕಾಲಿಡಬಹುದು ಎನ್ನುವ ಆಲೋಚನೆಯಿಂದ ಊರಿನಲ್ಲಿ ಇರುವ ಎಲ್ಲ ಪಾರಿವಾಳಗಳನ್ನು, ಹಾಗೂ ಚೀನಾ ಬಾರ್ಡರ್ ನಲ್ಲಿ ಹಾರಿ ಬರುತ್ತಿರುವ ಎಲ್ಲ ಹಕ್ಕಿಗಳನ್ನು ಗಡಿ ದಾಟುವ ಮೊದಲೇ ಕೊಲ್ಲಬೇಕು ಎನ್ನುವ ಆಜ್ಞೆ ಮಾಡಿದ್ದಾರೆ. ಆಜ್ಞೆ ಎಂದ್ರೆ ಆಜ್ಞೆ ಅನ್ನೋ ರೀತಿಯಲ್ಲಿ ನಾರ್ತ್ ಕೊರಿಯಾ ಸೈನಿಕರು ತಮ್ಮ ಗನ್ ಗಳನ್ನು ಆಕಾಶಕ್ಕೆ ಗುರಿ ಮಾಡಿ ಪಾರಿವಾಳಗಳಿಗಾಗಿ ಕಾಯುತ್ತಿದ್ದಾರೆ.

ಉತ್ತರ ಕೊರಿಯಾದ ಬೆಕ್ಕುಗಳಿಗೂ ಕಾದಿದ್ಯಾ ಆಪತ್ತು?
ಕಿಮ್ ಗೆ ಇಂತಹ ಪ್ಲಾನ್ ಹೇಳಿಕೊಟ್ಟವರಾದ್ರು ಯಾರು?

ನಾರ್ತ್ ಕೊರಿಯಾ ಬೀದಿ ಸುತ್ತುವ ಬೆಕ್ಕುಗಳಿಗಾಗಿ ಸಹ ಶೋಧ ಕಾರ್ಯ ನಡೆಸಲಾಗುತ್ತಿದೆ. ಬೆಕ್ಕುಗಳು ಬೇಟೆಯಾಡುವ ಪ್ರಾಣಿ, ಯಾವುದೇ ಸಂದರ್ಭದಲ್ಲಿ ಈ ದೇಶದ ಬೆಕ್ಕುಗಳು ಪಾರಿವಾಳಗಳನ್ನು ಬೇಟೆಯಾಡಿದ್ದರೆ, ಇನ್ನು ಆ ಪಾರಿವಾಳ ಚೀನಾದಿಂದ ಬಂದಿದ್ದಾದರೆ, ಬರೀ ಬೆಕ್ಕಿನಿಂದ ಇಡೀ ನಾರ್ತ್ ಕೊರಿಯ ಕೊರೊನಾವನ್ನು ಅನುಭವಿಸಬೇಕಾಗುತ್ತದೆ ಎನ್ನುವ ಯೋಚನೆಯಿಂದ ನಾರ್ತ್ ಕೊರಿಯಾದಲ್ಲಿ ಇರುವ ಎಲ್ಲ ಬೆಕ್ಕುಗಳನ್ನು ಗುಂಡಿಕ್ಕಿ ಕೊಲ್ಲಲು ಆಜ್ಞೆಯಾಗಿದೆ.

ಕಿಮ್ ಆದೇಶ ಪಾಲಿಸ್ತಾರಾ ಉತ್ತರ ಕೊರಿಯಾದ ಜನ?
ಬೆಕ್ಕು ಮತ್ತು ಪಾರಿವಾಳಗಳು ಕೊರೊನಾ ಹರಡುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ ಎನ್ನುವ ಮಾಹಿತಿ ಹಿಡಿದ ಕಿಮ್ ಚೀನಾದಿಂದ ಉತ್ತರ ಕೊರಿಯಾಕ್ಕೆ ಕೊರೊನಾ ವೈರಾಣುಗಳನ್ನು ಹೊತ್ತು ತರುತ್ತಿವೆ ಎಂಬ ಸಂದೇಹದ ಮೇರೆಗೆ ಅವುಗಳನ್ನು ಸಾಯಿಸುವಂತೆ ಆದೇಶಿಸಿದ್ದಾರೆ. ಸದರಿ ಆದೇಶದನ್ವಯ ಅಲ್ಲಿನ ಅಧಿಕಾರಿಗಳು ಪಾರಿವಾಳಗಳಿಗೆ ಗುಂಡಿಕ್ಕುತ್ತಿದ್ದು, ಬೆಕ್ಕುಗಳಿಗಾಗಿ ಹುಡುಕಾಡುತ್ತಿದ್ದಾರೆ ಹಾಗೂ ಬೆಕ್ಕುಗಳನ್ನು ವಶಕ್ಕೆ ನೀಡಲು ನಿರಾಕರಿಸುವ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳುವುದಾಗಿಯೂ ಎಚ್ಚರಿಸುತ್ತಿದ್ದಾರೆ. ಹೈಸನ್​ ಪ್ರದೇಶದಲ್ಲಿ ಬೆಕ್ಕುಗಳನ್ನು ಸಾಕಿದ್ದಕ್ಕಾಗಿ ಒಂದು ಕುಟುಂಬವನ್ನು 20ದಿನಗಳ ಕಾಲ ಐಸೋಲೇಷನ್​ನಲ್ಲಿ ಇರಿಸಲಾಗಿತ್ತು. ಹೀಗಾಗಿ ನಾರ್ತ್ ಕೊರಿಯಾದಲ್ಲಿ ಪ್ರಾಣಿ ಪ್ರಿಯರು ಸಹ ತಮ್ಮ ಮನೆಯಲ್ಲಿ ಸಾಕಿದ್ದ ಬೆಕ್ಕನ್ನು ಅಧಿಕಾರಿಗಳಿಗೆ ನೀಡಿ ಕಣ್ಣೊರೆಸಿಕೊಳ್ಳುತ್ತಿದ್ದಾರೆ.

The post ಕೊರೊನಾ ನಿಯಂತ್ರಣಕ್ಕೆ ಕಿಮ್ ಮತ್ತೊಂದು ಅಮಾನವೀಯ ಆದೇಶ.. ಬೆಚ್ಚಿಬಿದ್ದ ಉತ್ತರ ಕೊರಿಯಾ appeared first on News First Kannada.

Source: newsfirstlive.com

Source link