ಚಿಕ್ಕಮಗಳೂರು: ಕೃಷಿ ಮಾರುಕಟ್ಟೆಯಲ್ಲಿ ಇದ್ದ ಜನರನ್ನ ಕಂಡು ಪಟ್ಟಣ ಪಂಚಾಯಿತಿ ಅಧಿಕಾರಿಗಳು ಹಾಗೂ ಪೌರಕಾರ್ಮಿಕರು ಜನರಲ್ಲಿ ಸಾಮಾಜಿಕ ಅಂತರ ಕಾಪಾಡಿ ಮುಖಕ್ಕೆ ಮಾಸ್ಕ್ ಧರಿಸುವಂತೆ ಕೈಮುಗಿದು ಪ್ರಾರ್ಥಿಸುತ್ತಿರುವುದು ತರೀಕೆರೆ ತಾಲೂಕಿನಲ್ಲಿ ಕಂಡುಬಂದಿದೆ.

ಜನತಾ  ಕರ್ಫ್ಯೂ ಇರುವ ಹಿನ್ನೆಲೆಯಲ್ಲಿ ಬೆಳಗ್ಗೆ 10ರ ನಂತರ ಯಾವುದೇ ವಸ್ತುಗಳು ಸಿಗುವುದಿಲ್ಲ ಎಂದು ತರೀಕೆರೆ ಪಟ್ಟಣದ ಎಪಿಎಂಸಿ ಮಾರುಕಟ್ಟೆಯಲ್ಲಿ ಬೆಳ್ಳಂಬೆಳಗ್ಗೆಯೇ ನೂರಾರು ಜನ ವ್ಯಾಪಾರ-ವಹಿವಾಟಿನಲ್ಲಿ ತೊಡಗಿದ್ದರು. ಅಲ್ಲಿದ್ದವರಲ್ಲಿ ಬಹುತೇಕರು ಮುಖಕ್ಕೆ ಮಾಸ್ಕ್ ಹಾಕಿರಲಿಲ್ಲ. ಸಾಮಾಜಿಕ ಅಂತರದ ನಿಯಮವನ್ನೂ ಸಂಪೂರ್ಣವಾಗಿ ಗಾಳಿಗೆ ತೂರಿದ್ದರು.

ಪಟ್ಟಣ ಪಂಚಾಯಿತಿಯ 20ಕ್ಕೂ ಹೆಚ್ಚು ನೌಕರರು ಮೈಮುಗಿದು ಸಾಲಾಗಿ ಇಡೀ ಎ.ಪಿ.ಎಂ.ಸಿ ಮಾರ್ಕೇಟ್‍ನಲ್ಲಿ ಒಂದು ಸುತ್ತು ಹಾಕಿ ಪ್ರಾರ್ಥಿಸಿಕೊಂಡಿದ್ದಾರೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಸರ್ಕಾರ ಸೋಂಕಿತರ ಸಂಖ್ಯೆಯನ್ನ ಕಡಿಮೆ ಮಾಡಲೆಂದು ಲಾಕ್‍ಡೌನ್ ಮೊರೆ ಹೋಗಿದೆ. ನೀವು ಮತ್ತೆ ಬೇಜಾವಾಬ್ದಾರಿತನ ತೋರಿದರೆ ಈ ಲಾಕ್‍ಡೌನ್ ಮತ್ತಷ್ಟು ದಿನ ವಿಸ್ತರಣೆಯಾಗಬಹುದು ಎಂದರು.

ಈಗಲಾದರೂ ಅಗತ್ಯ ವಸ್ತುಗಳ ಖರೀದಿಗೆ ಅವಕಾಶವಿದೆ. ಸೋಂಕಿತರ ಸಂಖ್ಯೆ ಹೀಗೆ ಮುಂದುವರೆದರೆ ಮುಂದಿನ ಸರ್ಕಾರ ಯಾವ ರೀತಿ ಕ್ರಮಕೈಗೊಳ್ಳುತ್ತೋ ಗೊತ್ತಿಲ್ಲ. ಹಾಗಾಗಿ, ವರ್ತಕರು-ಗ್ರಾಹಕರು ಸರ್ಕಾರದ ಮನವಿಗೆ ಸ್ಪಂದಿಸಿ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಎಂದು ಕೈಮುಗಿದು ಮನವಿ ಮಾಡಿದ್ದಾರೆ. ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಹಾಂತೇಶ್ ಕೂಡ ಜೀಪಿನಲ್ಲಿ ಅನೌನ್ಸ್ ಮಾಡುತ್ತಾ ರೈತರು, ವ್ಯಾಪಾರಿಗಳು, ವರ್ತಕರಲ್ಲಿ ಕೈಮುಗಿದು ಮಾಸ್ಕ್ ಧರಿಸಿ ಅಂತರ ಕಾಪಾಡುವಂತೆ ಹೇಳಿದ್ದಾರೆ. ಮಾಸ್ಕ್ ಇಲ್ಲದೆ ಎಪಿಎಂಸಿಯಲ್ಲಿ ಬೇಕಾಬಿಟ್ಟಿ ಓಡಾಡಿದ ಜನಸಾಮಾನ್ಯರಿಗೆ ಫೈನ್ ಹಾಕುವ ಮೂಲಕ ಕ್ಲಾಸ್ ತೆಗೆದುಕೊಂಡಿದ್ದಾರೆ.

The post ಕೊರೊನಾ ನಿಯಮ ಪಾಲಿಸುವಂತೆ ಕೈಮುಗಿದು ಕೇಳಿದ ಪೌರ ಕಾರ್ಮಿಕರು appeared first on Public TV.

Source: publictv.in

Source link