ಕಳೆದ ಎರಡು ವರ್ಷದಿಂದೀಚೆಗೆ.. ಧಾಂ ಧೂಂ ಅಂತ ಮದುವೆಯಾಗಬೇಕು ಅಂದುಕೊಂಡಿದ್ದ ಎಷ್ಟೋ ಜೋಡಿಗಳಿಗೆ ಕೊರೊನಾ ಸಾಂಕ್ರಾಮಿಕ ಹಾಗೂ ಲಾಕ್​ಡೌನ್ ಅಡ್ಡಿಯಾಗಿದೆ. ಅದ್ಧುರಿಯಾಗಿ ಮದುವೆಯಾಗೋದಿರಲಿ, ತಮ್ಮ ಆಪ್ತ ಬಳಗದವರನ್ನ ಕರೆದು ಮದುವೆಯಾಗೋದಕ್ಕೂ ಹಲವು ನಿಯಮಗಳನ್ನ ಪಾಲಿಸಲೇಬಾಕಾದ ಅನಿವಾರ್ಯತೆ ಇದೆ. ಮಂಟಪದಲ್ಲಿ, ರೆಸಾರ್ಟ್​ನಲ್ಲಿ ಮದುವೆ ಆಗಬೇಕಿದ್ದ ಅನೇಕ ಜೋಡಿಗಳು ಲಾಕ್​ಡೌನ್​ ಹಿನ್ನೆಲೆ ಮನೆಯಲ್ಲೇ ಸರಳವಾಗಿ ಮದುವೆಯಾಗೋ ಮೂಲಕ ವೈವಾಹಿಕ ಬಂಧನದಲ್ಲಿ ಲಾಕ್ ಆದ್ರು. ಇನ್ನೂ ಕೆಲವರು ಕದ್ದುಮುಚ್ಚಿ ಹೆಚ್ಚು ಜನರನ್ನ ಸೇರಿಸಿ ಮದುವೆಯಾಗೋ ಮೂಲಕ ಫಜೀತಿಗೆ ಸಿಲುಕಿದ್ರು. ಕೊರೊನಾ ನಿರ್ಬಂಧಗಳ ಹಿನ್ನೆಲೆ ಕೇರಳ ತಮಿಳುನಾಡು ನಡುವೆ ಇರೋ ಈ ಸೇತುವೆಯೊಂದು ಈಗ ಮದುವೆಗಳಿಗೆ ಹಾಟ್​​ಸ್ಪಾಟ್​ ಆಗಿದೆ. ಕಳೆದ ಲಾಕ್​ಡೌನ್ ಸಂದರ್ಭದಲ್ಲೇ ಇಲ್ಲಿ 11 ಮದುವೆಗಳು ನೆರವೇರಿವೆ ಅಂದ್ರೆ ನೀವು ನಂಬಲೇಬೇಕು.

ಆ ಊರ ಚೆಲುವ ಈ ಊರ ಚೆಲುವೆ, ಸೇತುವೆ ಮೇಲೆ ಮದುವೆಯಾದ್ರು
ಹೌದು. ಕೇರಳ ಹಾಗೂ ತಮಿಳುನಾಡನ್ನ ಪ್ರತ್ಯೇಕಿಸೋ ಚಿನಾರ್​ ನದಿಯ ಸೇತುವೆ ಈಗ ಮದುವೆ ಆಗೋ ಜೋಡಿಗಳಿಗೆ ಫೇವರಿಟ್​ ಸ್ಪಾಟ್​ ಆಗಿದೆ. ಕಳೆದ ಸೋಮವಾರ ಇಲ್ಲಿ ಮತ್ತೊಂದು ಮದುವೆ ನೆರವೇರಿದೆ. ಕೇರಳದ ಇಡುಕ್ಕಿಯ ಮರಯೂರು ಮೂಲದ ವರ ಉನ್ನಿಕೃಷ್ಣನ್, ತಮಿಳುನಾಡಿನ ದಿಂಡಿಗುಲ್​ನ ಬತ್ಲಗುಂಡು ಮೂಲಕ ವಧು ತಂಗಮಾಯಿಲ್ ಅವರನ್ನ ವರಿಸಿದ್ದಾರೆ. ಕಳೆದ ಲಾಕ್​ಡೌನ್​ನಲ್ಲಿ ಜೋಡಿಗಳು ಕ್ವಾರಂಟೀನ್ ನಿಯಮಗಳ ಹಿನ್ನೆಲೆ ಈ ಬ್ರಿಡ್ಜ್​ ಮೇಲೆ ಮದುವೆಯಾಗಿದ್ದರು. ಆದ್ರೆ ಈ ಬಾರಿ ಕೊರೊನಾ ಟೆಸ್ಟ್​ ಮಾಡಿಸಲು ಕಾಯಬೇಕೆಂಬ  ಕಾರಣ ಬ್ರಿಡ್ಜ್​​ ಮೊರೆ ಹೋಗಿದ್ದಾರೆ.

ಕೇರಳಕ್ಕೆ ಬರುವವರು ಕೊರೊನಾ ನೆಗೆಟಿವ್ ವರದಿ ಸಲ್ಲಿಸೋದು ಕಡ್ಡಾಯ. ಆದ್ರೆ ಅದಕ್ಕೆ ಹೆಚ್ಚಿನ ಸಮಯ ಬೇಕು ಹಾಗು ಖರ್ಚು ಕೂಡ ಜಾಸ್ತಿ. ತಮಿಳುನಾಡಿನ ಉಡುಮಾಲ್​​ಪೆಟ್ಟಿಯಲ್ಲಿ ಹೆಣ್ಣಿನ ಕಡೆಯವರಿಗೆ ಕೊರೊನಾ ಟೆಸ್ಟ್​ ಮಾಡಿಸಲು ತಲಾ 2,600 ರೂಪಾಯಿ ಕೊಡಬೇಕಿತ್ತು. ಅಂದ್ರೆ ಕುಟುಂಬದ 10 ಜನರಿಗೆ ಟೆಸ್ಟ್​ ಮಾಡಿಸಬೇಕಂದ್ರೆ ಬರೋಬ್ಬರಿ 26 ಸಾವಿರ ರೂಪಾಯಿ ಖರ್ಚು ಮಾಡಬೇಕಿತ್ತು. ಹಾಗೇ ಆ ಕಡೆ ಕೇರಳದಲ್ಲಿ ವರನ ಮನೆಯವರು ಕೊರೊನಾ ಟೆಸ್ಟ್​ ಮಾಡಿಸಲು ಖಾಸಗಿ ಲ್ಯಾಬ್​ಗಳಿಗೆ ಹೋಗಬೇಕಿತ್ತು. ಅದಕ್ಕೆ ಹೆಚ್ಚಿನ ಸಮಯ ಹಿಡಯುತ್ತಿತ್ತು. ಹೀಗಾಗಿ ಉನ್ನಿಕೃಷ್ಣನ್ ಬ್ರಿಡ್ಜ್ ಮೇಲೆ ಮದುವೆಯಾಗಲು ನಿರ್ಧರಿಸಿದರಂತೆ.

ಕೇರಳದ ಕಡೆ ವರನ ಕುಟುಂಬ, ತಮಿಳುನಾಡಿನ ಕಡೆ ವಧು ಕುಟುಂಬ, ಸೇತುವೆ ಮೇಲೆ ಮದುವೆ
ಯಾವುದೇ ಪುರೋಹಿತರಿಲ್ಲದೇ ಸರಳವಾಗಿ ಉನ್ನಿಕೃಷ್ಣನ್ ಹಾಗೂ ತಂಗಮಾಯಿಲ್  ವಿವಾಹವಾಗಿದ್ದಾರೆ. ಎರಡೂ ರಾಜ್ಯಗಳ ಪೊಲೀಸ್, ಆರೋಗ್ಯ, ಅರಣ್ಯ ಮತ್ತು ಅಬಕಾರಿ ಇಲಾಖೆಯ ಅಧಿಕಾರಿಗಳು ಈ ಮದುವೆಗೆ ಸಾಕ್ಷಿಯಾದ್ರು. ಮೊದಲಿಗೆ ವಧು ತನ್ನ ಕೋವಿಡ್ ನೆಗೆಟಿವ್​ ವರದಿಯನ್ನ ಸಲ್ಲಿಸಿ ಸೇತುವೆಯ ಮೇಲೆ ನಡೆದುಕೊಂಡು ಹೋಗಿದ್ದಾರೆ. ನಂತರ ವರ ಕೂಡ ರಿಪೋರ್ಟ್​ ಕೊಟ್ಟು ಆಕೆಯನ್ನ ಹಿಂಬಾಲಿಸಿದ್ದಾರೆ. ತಾಳಿ ಕಟ್ಟುವಾಗ ವಧು-ವರರಿಬ್ಬರ ಕುಟುಂಬಗಳು ಸೇತುವೆಯ ಎರಡೂ ಬದಿಯಿಂದ ಶುಭ ಸಂದರ್ಭವನ್ನು ವೀಕ್ಷಿಸಿ ಆಶೀರ್ವದಿಸಿದ್ದಾರೆ.

The post ಕೊರೊನಾ ನಿರ್ಬಂಧದ ನಡುವೆ ಮದುವೆಯಾಗೋಕೆ 2 ರಾಜ್ಯಗಳ ಈ ಜೋಡಿ ಏನ್ ಮಾಡಿದ್ರು ಗೊತ್ತಾ appeared first on News First Kannada.

Source: newsfirstlive.com

Source link