ಬೆಂಗಳೂರು:  ರಾಜ್ಯದಲ್ಲಿ ಕೋವಿಡ್ ಲಾಕ್​ಡೌನ್​ನಿಂದ ಸಂಕಷ್ಟಕ್ಕೀಡಾಗಿರುವ ಬಡವರಿಗೆ ಹಣಕಾಸು ಪ್ಯಾಕೇಜ್ ಘೋಷಣೆ ಮಾಡುವ ವಿಚಾರವಾಗಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಇಂದು ಮಹತ್ವದ ಹೇಳಿಕೆ ನೀಡಿದ್ದಾರೆ.
ಇಂದು ಸಂಜೆ ಮುಖ್ಯಮಂತ್ರಿ ಯಡಿಯೂರಪ್ಪ ಸುದ್ದಿಗೋಷ್ಟಿ ಕರೆದಿದ್ದಾರೆ. ಈ ಸುದ್ದಿಗೋಷ್ಟಿಯಲ್ಲಿ ಘೋಷಣೆ ಬಗ್ಗೆ ನಿರೀಕ್ಷೆ ಇಟ್ಟುಕೊಳ್ಳೋಣ ಎಂದು ಅವರು ಹೇಳಿದ್ದಾರೆ. ಈ ಹೇಳಿಕೆ  ಭಾರೀ ನಿರೀಕ್ಷೆ ಹುಟ್ಟಿಸಿದೆ.
ಇಂದು ವಿಧಾನಸೌಧದಲ್ಲಿ ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಅವರೊಂದಿಗೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಿ.ಟಿ ರವಿ ಹಲವು ವಿಚಾರಗಳ ಬಗ್ಗೆ ಉತ್ತರಿಸಿದ್ರು.  ವ್ಯಾಕ್ಸಿನ್ ಬಗ್ಗೆ ಕಾಂಗ್ರೆಸ್ ಹಾಗೂ ವಿಪಕ್ಷ ನಾಯಕರು ವಿರೋಧಿಸಿ ಮಾತಾಡಿದ್ರು. ಶಶಿ ತರೂರ್, ಜೈರಾಂ ರಮೇಶ್, ಭೂಪೇಶ್ ಬಗೇಲ್ ಸೇರಿದಂತೆ ಹಲವರು ವಿರೋಧಿಸಿದ್ರು. ಅತೀ ಹೆಚ್ಚು ವ್ಯಾಕ್ಸಿನೇಷನ್‌ ಕೊಡುವ ರಾಷ್ಟ್ರಗಳ ಪೈಕಿ ನಮ್ಮ ದೇಶ ನಂಬರ್ ಒನ್ ಸ್ಥಾನದಲ್ಲಿದೆ. ಫ್ರಂಟ್ ಲೈನ್ ವರ್ಕರ್ಸ್​ಗೆ ಆದ್ಯತೆ ಅಂತ ಹೇಳದಿದ್ದರೆ ಟ್ರೀಟ್ಮೆಂಟ್ ಕೊಡಲು ವೈದ್ಯರು ಸಿಗ್ತಿರಲಿಲ್ಲ. ದಾದಿಯರು, ಪೊಲೀಸರು ಸಿಗ್ತಿರಲಿಲ್ಲ. ಏನೂ ಮಾಡದಿದ್ದರೆ ಪರಿಸ್ಥಿತಿ ಎಷ್ಟು ಭೀಕರ ಆಗ್ತಿತ್ತು ಅಂತ ಕಲ್ಪಿಸಿಕೊಳ್ಳಿ. ಆಕ್ಸಿಜನ್ ಜನರೇಟರ್ ಯೂನಿಟ್ ಕೇಂದ್ರದಿಂದ ಕೊಟ್ಟಿದ್ದೇವೆ. ಒಂದೊಂದು‌ ಪರಿಸ್ಥಿತಿ ನಿಭಾಯಿಸಲು ಏನು ಮಾಡಬೇಕೋ ಮಾಡ್ತಿದ್ದೇವೆ ಎಂದರು.
ಐವರು ಸಚಿವರ ಟೀಮ್ ಮಾಡಿದ ನಂತರ ಗೊಂದಲ ಸರಿಯಾಗಿದೆ
ಆರಂಭದಲ್ಲಿ ರಾಜ್ಯ ಸರ್ಕಾರದಲ್ಲಿ ಗೊಂದಲ ಇದ್ದದ್ದು ನಿಜ. ಈಗ ಸರಿ ಮಾಡಿಕೊಂಡಿದ್ದಾರೆ, ಐವರು ಸಚಿವರ ಟೀಮ್ ಮಾಡಿದ ನಂತರ ಸರಿಯಾಗಿದೆ ಎಂದು ರವಿ ಹೇಳಿದರು. ಮೂರು ತಿಂಗಳ ಹಿಂದೆ ಆಕ್ಸಿಜನ್ ಗೆ ಡಿಮ್ಯಾಂಡ್ ಇರಲಿಲ್ಲ. ಇದೊಂದು ವಿವಾದವೂ ಆಗಿರಲಿಲ್ಲ ಮೂರು ತಿಂಗಳ ಹಿಂದಿನ ಪ್ರಶ್ನೆಯೇ ಬೇರೆ, ಈಗಿನ ಪ್ರಶ್ನೆಯೇ ಬೇರೆ. ನ್ಯಾಯಾಧೀಶರು ಸರ್ವಜ್ಞರಲ್ಲ, ಹೀಗಾಗಿ ತಜ್ಞರ ಸಮಿತಿ‌ ಆಧಾರದ ಮೇಲೆ ಹಂಚಿಕೆ ಆಗಬೇಕು ಅಂತ ಕಡೆಗೆ ಸುಪ್ರೀಂ ಕೋರ್ಟ್ ಹೇಳಿದೆ ಎಂದರು.
ನಮ್ಮ ಪ್ಲಾನ್ ಆಫ್ ಆಕ್ಷನ್ ರಾಜಕೀಯ ಲಾಭಕ್ಕಾಗಿ ಮಾಡಿಲ್ಲ. ಪ್ರಾಮಾಣಿಕವಾಗಿ ನಮ್ಮ ಕೆಲಸ ಮಾಡಿದ್ದೇವೆ. ಪ್ರೊಡಕ್ಷನ್ ಆಗಲಿಲ್ಲ, ಆಮದು ಬರಲಿಲ್ಲ. ಕೋವ್ಯಾಕ್ಸಿನ್ ಡೆವಲಪ್ ಮಾಡೋದು ಕೋವಿಡ್ ಡೆಡ್ ವೈರಸ್ ಸೆಲ್​​ಗಳಿಂದ, ಹೀಗಾಗಿ ಅದು ಉತ್ಪಾದನೆ ಆಗೋದು ಎರಡೇ ಯೂನಿಟ್ ನಲ್ಲಿ. ಟ್ಯಾಪ್​ನಿಂದ ನೀರು ಬಿಟ್ಟಂತೆ ತುಂಬಿಕೊಡಲು ಆಗಲ್ಲ. ಎಚ್ಚರ ತಪ್ಪಿದರೆ ಇನ್ನೊಂದು ವುಹಾನ್ ಆಗಲಿದೆ ಎಂದು ಹೇಳಿದರು.
ಮೊದಲನೇ ಡೋಸ್ ಕೋವ್ಯಾಕ್ಸಿನ್ ಪಡೆದ ನಂತರ ಎರಡನೇ ಡೋಸ್ ನಿಗದಿತ ಸಮಯಕ್ಕೆ ಪಡೆಯದಿದ್ದರೆ ವ್ಯರ್ಥ ಆಗುತ್ತಾ ಎಂಬ ವಿಚಾರವಾಗಿ ಕೇಂದ್ರ ಸಚಿವ ಸದಾನಂದಗೌಡ ಉತ್ತರಿಸಿದ್ರು. ಅಮೆರಿಕಾ ಮುಂತಾದ ರಾಷ್ಟ್ರಗಳಲ್ಲಿ ಕೋವ್ಯಾಕ್ಸಿನ್ ಮೊದಲ ಡೋಸ್ ಪಡೆದ ಮೂರ್ನಾಲ್ಕು ತಿಂಗಳ ನಂತರ ಎರಡನೇ ಡೋಸ್ ಪಡೆದರೂ ಆಗುತ್ತೆ ಎಂಬ ಮಾಹಿತಿ ಇದೆ
ಮೊದಲ ಡೋಸ್ ವ್ಯರ್ಥ ಆಗಬಾರದು ಎಂದೇ ಈಗ ಕೇವಲ 45 ವರ್ಷ ಮೇಲ್ಪಟ್ಟವರಿಗೆ ಕೊಡಲು ತೀರ್ಮಾನ ಮಾಡಲಾಗಿದೆ ಎಂದರು. 
ಸಿದ್ಧತೆ ಮೀರಿ ಸೋಂಕು ಹೆಚ್ಚಾಗಿದ್ದರಿಂದ ಆಕ್ಸಿಜನ್ ಸಾಲಲಿಲ್ಲ
ಇದೇ ವೇಳೆ ಆಕ್ಸಿಜನ್ ಕೊರತೆ ಬಗ್ಗೆ ಮಾತನಾಡಿದ ಸಿ.ಟಿ ರವಿ, ಪ್ರತಿ ಸಾವು ದುಃಖ ಕೊಡುತ್ತೆ, ಆದರೆ ಈ ಸಾವಿನಲ್ಲೂ ವಿಕೃತ ಆನಂದ ಪಡೀತಿದ್ದಾರೆ. ಆ ನಾಯಕರ ಪಾರ್ಟಿಯ ಅಧಿನಾಯಕಿಯ ತವರಲ್ಲಿ ಎಷ್ಟಿದೆ, ಹೇಗಿದೆ? ಎಂದು ಕಾಂಗ್ರೆಸ್​ ವಿರುದ್ಧ ಹರಿಹಾಯ್ದರು. ನಾವು ಪೂರ್ವ ತಯಾರಿ ಮಾಡದಿದ್ದರೆ ಚಾಮರಾಜನಗರಕ್ಕಿಂತ ನೂರು ಪಟ್ಟು ಅನಾಹುತ ಎಲ್ಲಾ ಜಿಲ್ಲೆಗಳಲ್ಲೂ ಆಗ್ತಿತ್ತು. ನಾವು ಸಿದ್ದತೆ ಮಾಡಿದ್ವಿ, ಆದ್ರೆ ನಮ್ಮ ಸಿದ್ಧತೆ ಮೀರಿ ಸೋಂಕು ಹೆಚ್ಚಾಗಿದ್ದರಿಂದ ಅದು ಸಾಲಲಿಲ್ಲ ಎಂದು ಹೇಳಿದ್ರು.
ಪ್ಯಾಂಡಮಿಕ್ ಎದುರಿಸಲು ಜವಾಬ್ದಾರಿಯಿಂದ ಕೆಲಸ ಮಾಡೋಣ. ರಾಜಕೀಯ ಮಾಡೋಕೆ ಮುಂದೆ ಸಮಯ ಇದೆ. ಈಗ ಸಾಂಕ್ರಾಮಿಕ ಎದುರಿಸೋದೇ ಅದ್ಯತೆ ಆಗಿರಲಿ ಎಂದರು.

The post ಕೊರೊನಾ ಪ್ಯಾಕೇಜ್​ ಘೋಷಿಸ್ತಾರಾ ಸಿಎಂ? ಭಾರೀ ನಿರೀಕ್ಷೆಯ ಹೇಳಿಕೆ ಕೊಟ್ಟ ಸಿ.ಟಿ. ರವಿ appeared first on News First Kannada.

Source: newsfirstlive.com

Source link