ಕೊರೊನಾ, ಪ್ಲೇಗ್, ಬರ್ಡ್​​ ಫ್ಲೂ ಆಯ್ತು; ಈಗ ಪತ್ತೆ ಹಚ್ಚಲಾಗದಂಥ ಹಂದಿಜ್ವರದ ಹೊಸ ತಳಿ ಚೀನಾದಲ್ಲಿ ಪತ್ತೆ

ಕೊರೊನಾ, ಪ್ಲೇಗ್, ಬರ್ಡ್​​ ಫ್ಲೂ ಆಯ್ತು; ಈಗ ಪತ್ತೆ ಹಚ್ಚಲಾಗದಂಥ ಹಂದಿಜ್ವರದ ಹೊಸ ತಳಿ ಚೀನಾದಲ್ಲಿ ಪತ್ತೆ

ವಿಶ್ವಕ್ಕೆಲ್ಲಾ ಕೊರೊನಾವೈರಸ್​ ಹರಡಿದ ದೇಶ ಎಂಬ ಹಣೆಪಟ್ಟಿ ಹೊತ್ತಿರೋ ಚೀನಾದಲ್ಲಿ ಈಗ  ಮತ್ತೊಂದು ಕಳವಳಕಾರಿ ಬೆಳವಣಿಗೆ ನಡೆದಿದೆ. ಕೊರೊನಾವೈರಸ್​ ಹಲವು ವೇಷ ಧರಿಸಿ, ರೂಪಾಂತರಗೊಂಡು ಹಬ್ಬುತ್ತಲೇ ಇದೆ. ಭಾರತದಲ್ಲಿ ಡೆಲ್ಟಾ, ಡೆಲ್ಟಾ ಪ್ಲಸ್​ ಹಾಗೂ ಇನ್ನಿತರೆ ದೇಶಗಳಲ್ಲಿ ಆಲ್ಫಾ, ಬೀಟಾ, ಥೀಟಾ, ಲಾಂಬ್ಡಾ ಮುಂತಾದ ಕೊರೊನಾ ವೇರಿಯಂಟ್​ಗಳು ಕಾಣಿಸಿಕೊಂಡಿವೆ. ಇದನ್ನ ನಿಯಂತ್ರಣಕ್ಕೆ ತರಲು ಹೆಣಗಾಡುತ್ತಿರುವ ಹೊತ್ತಲ್ಲೇ ಈಗ ಚೀನಾದಲ್ಲಿ ಹಂದಿಜ್ವರದ ರೂಪಾಂತರಿ ತಳಿಗಳು ಕಾಣಿಸಿಕೊಂಡಿರುವ ಬಗ್ಗೆ ವರದಿಯಾಗಿದೆ.

ಚೀನಾದಲ್ಲಿ ಇತ್ತೀಚೆಗೆ ಇನ್​ಫ್ಲುಯೆನ್ಸಾ ವೈರಸ್​, ಬ್ಯುಬೋನಿಕ್ ಪ್ಲೇಗ್, ಬ್ರೂಸೆಲೋಸಿಸ್​, ಬರ್ಡ್​ ಫ್ಲೂ ಕಾಣಿಸಿಕೊಂಡಿತ್ತು. ಇದರ ಬೆನ್ನಲ್ಲೇ ಈಗ ಹಂದಿಜ್ವರ/H1N1 ಹಬ್ಬುತ್ತಿದೆ. ಕಳೆದ ವರ್ಷದ ಅಂತ್ಯದಿಂದಲೇ H1N1 ಹರಡಲು ಶುರುವಾಗಿದ್ದು, ಚೀನಾದ ಸುಮಾರು 6 ಪ್ರಾಂತ್ಯಗಳಲ್ಲಿ ಕಾಣಿಸಿಕೊಂಡಿವೆ. ಅಂದಿನಿಂದ ವೈರಸ್​ ಹರಡುತ್ತಾ ಈಗ ಮ್ಯುಟೇಟ್​ ಆಗುತ್ತಿದೆ. ಈ ರೂಪಾಂತರಿ ತಳಿಯನ್ನ ಪತ್ತೆಹಚ್ಚುವುದು ಕಠಿಣ ಅಂತ ತಜ್ಞರು ಹೇಳಿದ್ದಾರೆ. ಫಾರ್ಮ್​ಗಳಲ್ಲಿರೋ ಹಂದಿಗಳಲ್ಲಿ ಕಡಿಮೆ ಪ್ರಮಾಣದಲ್ಲಿ ಸೋಂಕಿನ ರೋಗಲಕ್ಷಣ ಕಾಣಿಸಿಕೊಳ್ತಿದ್ದು, ಅದನ್ನ ಪತ್ತೆಹಚ್ಚುವ ವೇಳೆಗೆ ಮತ್ತಷ್ಟು ವ್ಯಾಪಿಸುತ್ತಿದೆ. ದೊಡ್ಡ ಮಟ್ಟದಲ್ಲಿ ಸ್ವೈನ್ ಫ್ಲೂ ಹಬ್ಬುತ್ತಿದೆ ಎಂದು ವರದಿಗಳು ಹೇಳುತ್ತಿವೆ.

ಇನ್ನು ಚೀನಾದಲ್ಲಿ ಸದ್ಯ ಕಮ್ಯುನಿಸ್ಟ್​​ ಪಕ್ಷದ 100ನೇ ವರ್ಷಾಚರಣೆಯನ್ನ ಅದ್ಧೂರಿಯಾಗಿ ನಡೆಸಲಾಗ್ತಿದೆ. ಕಮ್ಯುನಿಸ್ಟ್​ ಪಕ್ಷದ ಮ್ಯೂಸಿಯಂವೊಂದನ್ನ ಉದ್ಘಾಟನೆ ಮಾಡಲಾಗಿದೆ. ಒಂದರ ಮೇಲೊಂದು ಸಾಂಕ್ರಾಮಿಕ ಕಾಣಿಸಿಕೊಳ್ತಿದ್ರೂ ಅದನ್ನ ತಡೆಗಟ್ಟಲು ಚೀನಾ ಹೆಚ್ಚಿನ ಆಸಕ್ತಿ ವಹಿಸುತ್ತಿಲ್ಲ ಅನ್ನೋ ಆರೋಪ ಕೇಳಿಬಂದಿದೆ.

ಮ್ಯೂಸಿಯಂನಲ್ಲಿ ಚೀನಾದ ಲೀಡರ್​​ಗಳು ಮತ್ತು ಸಂಸ್ಕೃತಿಯ ಬಗೆಗಿನ ಸಾವಿರಾರು ಫೋಟೋಗಳಿವೆ. ಎಲ್ಲರಿಗಿಂತ ಹೆಚ್ಚಾಗಿ ಶೀ ಜಿನ್​ಪಿಂಗ್​ರನ್ನ ವೈಭವೀಕರಿಸಲಾಗಿದೆ. ಕೊರೊನಾ ವೈರಸ್ಸೇ ಇರಲಿ, ಹಂದಿಜ್ವರವೇ ಬರಲಿ..ನನಗೆ ಸಾಟಿಯಿಲ್ಲ ಅನ್ನೋ ಥರ ಚೀನಾ ಅಧ್ಯಕ್ಷ ಶೀ ಜಿನ್​ಪಿಂಗ್ ತಮ್ಮ ಪಕ್ಷದ ಶತಮಾನೋತ್ಸವದ ಸಂಭ್ರಮದಲ್ಲಿದ್ದಾರೆ. ತಾವೊಬ್ಬ ಗ್ರೇಟೆಸ್ಟ್​ ಲೀಡರ್​ ಎಂದು ಬಿಂಬಿಸಿಕೊಳ್ಳುವಲ್ಲಿ ಜಿನ್​ಪಿಂಗ್ ತಡಗಿದ್ದಾರೆಯೇ ಹೊರತು, ಸಾಂಕ್ರಾಮಿಕಗಳ ಬಗ್ಗೆ ತಲೆಕೆಡಿಸಿಕೊಳ್ಳದಿರೋದು ಖಂಡನೆಗೆ ಗುರಿಯಾಗಿದೆ.

 

The post ಕೊರೊನಾ, ಪ್ಲೇಗ್, ಬರ್ಡ್​​ ಫ್ಲೂ ಆಯ್ತು; ಈಗ ಪತ್ತೆ ಹಚ್ಚಲಾಗದಂಥ ಹಂದಿಜ್ವರದ ಹೊಸ ತಳಿ ಚೀನಾದಲ್ಲಿ ಪತ್ತೆ appeared first on News First Kannada.

Source: newsfirstlive.com

Source link