ಕೊರೊನಾ ಶುರುವಾದ್ಮೇಲೆ ಎಷ್ಟೋ ಕಡೆ ಮಾನವೀಯತೆಯೇ ಸತ್ತು ಹೋಗಿದೆ. ಈ ಮಹಾಮಾರಿ ಮಾನವೀಯ ಸಂಬಂಧಗಳನ್ನೇ ಸಾಯಿಸಿಬಿಟ್ಟಿದೆ. ರಕ್ತ ಸಂಬಂಧಗಳಿಗೆ ಬೆಲೆಯೇ ಇಲ್ಲದಂತೆ ಮಾಡಿದೆ. ಆದ್ರೂ ಈ ರೌದ್ರಾವತಾರದ ಮಧ್ಯೆ ಕೆಲವೊಂದು ದೃಶ್ಯಗಳು, ಕೆಲವೊಂದು ಘಟನೆಗಳು ಹೃದಯ ಹಿಂಡ್ತಿವೆ. ನಾವೀಗ ನಿಮಗೆ ಹೇಳೋಕೆ ಹೊರಟಿರೋದು ಅಂತದ್ದೇ ಕಥೆ.

ಅಸ್ಸಾಂನಲ್ಲಿ ಇದ್ದಾರೆ ಸೂಪರ್ ಸೊಸೆ
ನಿಜ. ಇದು ತುಂಬಾ ಅಪರೂಪದ ದೃಶ್ಯ. ಮಗನಿಲ್ಲದ ವೇಳೆ ಸೊಸೆಯೇ ಮಗನಂತೆ ಜೊತೆ ನಿಲ್ಲಬಲ್ಲರು ಅನ್ನೋದಕ್ಕೆ ಸಾಕ್ಷಿಯಾಗಿರೋ ದೃಶ್ಯ. ಸೊಸೆಯೇ ಮಗಳಾಗಬಲ್ಲರು ಅನ್ನೋದಕ್ಕೆ ಸಾಕ್ಷಿಯಾಗಿರೋ ಈ ಫೋಟೋ ಅಸ್ಸಾಂ ರಾಜ್ಯದ ರಾಹಾ ಜಿಲ್ಲೆಯ ಭಟಿಗಾಂವ್ ಗ್ರಾಮದ್ದು. ಮಾವನನ್ನ ಹೀಗೆ ಬೆನ್ನ ಮೇಲೆ ಹೊತ್ತಿರೋ ಈಕೆ ನಿಹಾರಿಕಾ ದಾಸ್‌. ಮಾವ ತುಳೇಶ್ವರ್ ದಾಸ್‌ಗೆ ಈಗ 75 ವರ್ಷ ವಯಸ್ಸು. ನಿಹಾರಿಕಾಳ ಪತಿ ಸೂರಜ್‌ ಸದ್ಯ ಊರಲ್ಲಿಲ್ಲ. ಬೇರೆ ಊರಲ್ಲಿ ಕೆಲಸ ಮಾಡ್ತಿದ್ದಾರೆ. ಇಡೀ ಕುಟುಂಬದ ಜವಾಬ್ದಾರಿ ನಿಹಾರಿಕಾ ಮೇಲಿತ್ತು. ಆಕೆಯೇ ಮನೆಯನ್ನ ನೋಡ್ಕೋಬೇಕಿತ್ತು.

ಮಾವನನ್ನ ತಂದೆಯಂತೆ ನೋಡಿಕೊಂಡ ಸೊಸೆ
ಹೀಗಿರೋವಾಗ್ಲೇ 75 ವರ್ಷದ ವೃದ್ಧ ಮಾವ ತುಳೇಶ್ವರ್ ದಾಸ್ಗೆ ಕೊರೊನಾ ಸೋಂಕು ತಗುಲಿಬಿಡುತ್ತೆ. ಮೊದಲೇ ವಯಸ್ಸಾಗಿದೆ. ಮಾವನ ಆರೋಗ್ಯ ಬೇರೆ ಹದಗೆಟ್ಟಿದೆ. ಆತಂಕಕ್ಕೀಡಾಗಿದ್ದರು ನಿಹಾರಿಕಾ. ಏನ್ಮಾಡೋದು, ಪತಿ ಬೇರೆ ಊರಲ್ಲಿಲ್ಲ ಅನ್ನೋ ಚಿಂತೆ. ತಾನೇ ಮಾವನನ್ನ ನೋಡ್ಕೊಳ್ಳೋಕೆ ಶುರು ಮಾಡ್ತಾರೆ. ಮಾವನಿಗೆ ತಾನೇ ಎಲ್ಲಾ ಸೇವೆಯನ್ನೂ ಮಾಡಿದ್ದು, ಮಗಳಂತೆ ಜೊತೆಗಿದ್ದು ನೋಡ್ಕೊಂಡಿದ್ದಾರೆ.  ಊಟ ಮಾಡಿಸೋದು, ಸ್ನಾನ ಮಾಡಿಸೋದು ಎಲ್ಲಾ ಜವಾಬ್ದಾರಿಯನ್ನೂ ತಾನೇ ತೆಗೆದುಕೊಂಡಿದ್ದರು. ಆದರೆ ಮಾವನ ಆರೋಗ್ಯ ಸುಧಾರಿಸೋ ಲಕ್ಷಣ ಕಾಣಿಸೋದಿಲ್ಲ. ಆಸ್ಪತ್ರೆಗೆ ದಾಖಲು ಮಾಡದೆ ಬೇರೆ ವಿಧಿಯಿಲ್ಲ ಅನ್ನೋ ಪರಿಸ್ಥಿತಿ.

ಮಾವನಿಗೆ ಕೊರೊನಾ ಬಂದರು ಜಗ್ಗಲಿಲ್ಲ ಸೊಸೆ
ತಕ್ಷಣಕ್ಕೆ ಮಾವನನ್ನ ಆಸ್ಪತ್ರೆಗೆ ದಾಖಲು ಮಾಡ್ಬೇಕು ಅಂದ್ರೆ ಅದಕ್ಕೆ ವಾಹನದ ವ್ಯವಸ್ಥೆಯಾಗ್ಬೇಕು. ಮನೆಯಲ್ಲಿಟ್ಟುಕೊಂಡು ನೋಡಿಕೊಳ್ಳೋ ಪರಿಸ್ಥಿತಿ ಖಂಡಿತಾ ಇಲ್ಲ. ಮನೆಯಲ್ಲೇ ಇಟ್ಕೊಂಡ್ರೆ ಅವ್ರ ಆರೋಗ್ಯ ಇನ್ನೂ ಹದಗೆಡಬಹುದು. ಹೀಗೆ ಯೋಚ್ನೆ ಮಾಡ್ತಿದ್ದ ನಿಹಾರಿಕಾ ಮಾವನನ್ನ ಹತ್ತಿರದ ಕೋವಿಡ್‌ ಕೇರ್‌ ಸೆಂಟರ್‌ಗೆ ದಾಖಲು ಮಾಡೋಕೆ ನಿರ್ಧಾರ ಮಾಡ್ತಾರೆ.

ಕೋವಿಡ್‌ ಕೇರ್‌ ಸೆಂಟರ್‌ನಲ್ಲಿ ಚಿಕಿತ್ಸೆ ಕೊಡಿಸೋ ನಿರ್ಧಾರ ಮಾಡಿದ್ಮೇಲೆ ಹೊಸ ಚಿಂತೆ ಕಾಡೋಕೆ ಶುರುವಾಗುತ್ತೆ. ಕರ್ಕೊಂಡ್‌ ಹೋಗೋದು ಹೇಗೆ..? ಸದ್ಯ ಗಾಡಿ ಸಿಗೋ ಸ್ಥಿತಿಯಲ್ಲಿಲ್ಲ. ಆಸ್ಪತ್ರೆಗೆ ತುರ್ತಾಗಿ ದಾಖಲು ಮಾಡ್ಬೇಕು. ಆಗ್ಲೇ ಆಕೆ ಈ ನಿರ್ಧಾರವನ್ನ ತೆಗೆದುಕೊಂಡಿದ್ದು. ಮಕ್ಕಳನ್ನ ಉಪ್ಪು ಮೂಟೆ ಮಾಡಿ ಆಡಿಸ್ತಾರಲ್ಲ ಹಾಗೆಯೇ ಮಾವನನ್ನ ಎತ್ಕೊಂಡ್‌ ಹೋಗ್ತಾರೆ. ಕೋವಿಡ್‌ ಕೇರ್‌ ಸೆಂಟರ್‌ ಮನೆ ಪಕ್ಕವೇ ಇರುತ್ತೆ. ನಡೆಯುವಂತಹ ಸ್ಥಿತಿಯಲ್ಲಿ ಮಾವ ಇರೋದಿಲ್ಲ. ಎದ್ದೇಳೋಕೂ ಆಗದಂತಹ ಸ್ಥಿತಿ ಮಾವನದ್ದು. ಹೀಗಾಗಿ ಮಲಗಿದ್ದ ಮಾವನನ್ನ ಬೆನ್ನ ಮೇಲೆ ಹೊತ್ತು ಪಕ್ಕದ ಕೋವಿಡ್‌ ಕೇರ್‌ ಸೆಂಟರ್‌ವರೆಗೂ ನಡ್ಕೊಂಡು ಹೋಗಿದ್ದಾರೆ. ಯಾರು ನೋಡ್ಲಿ.. ಏನೇ ಅನ್ಲಿ.. ಯಾವುದಕ್ಕೂ ತಲೆ ಕೆಡಿಸಿಕೊಳ್ಳೋದಿಲ್ಲ ನಿಹಾರಿಕಾ. ತೂಕ ಹೆಚ್ಚಿದ್ರೂ ಕೇರ್‌ ಮಾಡದೆ ಮಾವನನ್ನ ಬೆನ್ನ ಮೇಲೆಯೇ ಹೊತ್ತು ಕೋವಿಡ್‌ ಕೇರ್‌ ಸೆಂಟರ್‌ ತಲುಪಿದ್ದರು.

ಅಸ್ಸಾಂನ ನಿಹಾರಿಕಾರಿಂದ ಶ್ಲಾಘನೀಯ ಕಾರ್ಯ
ಕೂಡ್ಲೇ ಅಲ್ಲಿದ್ದ ವೈದ್ಯರು ಮಾವ ತುಳೇಶ್ವರ್‌ಗೆ ಚಿಕಿತ್ಸೆ ಕೊಡಲು ಆರಂಭಿಸಿದ್ರು. ಇದೇ ಟೈಮ್‌ನಲ್ಲಿ ನಿಹಾರಿಕಾಗೂ ಕೋವಿಡ್‌ ಟೆಸ್ಟ್‌ ಮಾಡ್ತಾರೆ. ಟೆಸ್ಟ್‌ ವೇಳೆ ಆಕೆಗೂ ಕೊರೊನಾ ಪಾಸಿಟಿವ್‌ ಇರೋದು ಗೊತ್ತಾಗುತ್ತೆ. ಇಬ್ಬರನ್ನೂ ಕೋವಿಡ್‌ ಕೇರ್‌ ಸೆಂಟರ್‌ಗೆ ದಾಖಲಿಸಿಕೊಂಡು ಚಿಕಿತ್ಸೆ ಕೊಡ್ಲಾಗುತ್ತೆ. ಆದರೆ ಈ ವೇಳೆ ಮಾವನ ಆರೋಗ್ಯ ಹದಗೆಟ್ಟಿದ್ದರಿಂದ ಅವರನ್ನ ಜಿಲ್ಲಾ ಕೋವಿಡ್‌ ಕೇರ್‌ ಸೆಂಟರ್‌ಗೆ ಶಿಫ್ಟ್‌ ಮಾಡೋಕೆ ಸ್ಥಳೀಯ ವೈದ್ಯರು ಮುಂದಾಗ್ತಾರೆ. ಆದರೆ ನಿಹಾರಿಕಾ ಒಪ್ಪೋದಿಲ್ಲ. ಯಾವುದೇ ಕಾರಣಕ್ಕೂ ಮಾವ ಒಬ್ಬರನ್ನೇ ಕಳುಹಿಸೋದಿಲ್ಲ ಅಂತ ಪಟ್ಟು ಹಿಡಿದು ಕೂರುತ್ತಾರೆ. ಆಸ್ಪತ್ರೆಗೆ ಹೋದವ್ರು ಮರಳಿ ಜೀವಂತ ಬರೋದಿಲ್ಲ, ನಾನೂ ಜೊತೆಗೇ ಇರ್ತೀನಿ, ಒಬ್ರನ್ನ ಮಾತ್ರ ಖಂಡಿತಾ ಕಳುಹಿಸಲಲ್ಲ ಅಂತ ಪಟ್ಟು ಹಿಡಿದ್ದರು. ನಿಹಾರಿಕಾ ಒತ್ತಾಯಕ್ಕೆ ಮಣಿದ ವೈದ್ಯರು ಕೊನೆಗೆ ಇಬ್ಬರನ್ನೂ ಕರ್ಕೊಂಡು ಹೋಗೋಕೆ ಸಿದ್ಧರಾಗ್ತಾರೆ.

ಎಲ್ಲಾ ಗ್ರಹಣಿಯರಿಗೂ ಮಾದರಿ ಅಸ್ಸಾಂನ ಮಹಿಳೆ
ಆ ನಂತ್ರ ಆ್ಯಂಬುಲೆನ್ಸ್‌ ವ್ಯವಸ್ಥೆ ಮಾಡಿ ಇಬ್ಬರನ್ನೂ ಕೋವಿಡ್‌ ಆಸ್ಪತ್ರೆಗೆ ದಾಖಲು ಮಾಡ್ಲಾಗಿದೆ. ಈ ವೇಳೆ ಮತ್ತೆ ಮಾವನನ್ನ ಬೆನ್ನ ಮೇಲೆ ಹೊತ್ತು ಆ್ಯಂಬುಲೆನ್ಸ್‌ಗೆ ಹತ್ತಿಸಿದ್ದಾರೆ ನಿಹಾರಿಕಾ. ಸದ್ಯ ಸೋಶಿಯಲ್‌ ಮೀಡಿಯಾ ತುಂಬಾ ಈ ಫೋಟೋದೆ ಸದ್ದು. ಮಾವನ ಮೇಲೆ ನಿಹಾರಿಕಾ ತೋರಿಸಿರೋ ಪ್ರೀತಿಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸ್ತಿದ್ದಾರೆ.

ನಿಜ ಅಲ್ವಾ.. ಕಾರ್ಯೇಶು ದಾಸಿ.. ಕರುಣೇಶು ಮಂತ್ರಿ.. ಭೋಜೇಶು ಮಾತಾ.. ಕ್ಷಯನೇಶು ಧರಿತ್ರಿ.. ಅಂತ ಹೆಣ್ಣನ್ನ ಸುಮ್ಮನೆ ಹೇಳೋದಲ್ಲ. ಆಕೆ ನಿಜ ಅರ್ಥದಲ್ಲಿ ಈ ಎಲ್ಲಾ ಪಾತ್ರವನ್ನೂ ನಿಭಾಯಿಸುವವರು. ಅದರಲ್ಲೂ ಆಕೆಯಲ್ಲಿರೋ ಆ ತಾಯ್ತನಕ್ಕೆ ಬೆಲೆ ಕಟ್ಟಲಾಗದು, ಯಾರೇ ಆಗ್ಲಿ ಅವ್ರನ್ನ ಮಗುವಿನಂತೆ ನೋಡಿಕೊಳ್ಳೋ ಆಕೆಯ ಮನಸ್ಸು ನಿಜಕ್ಕೂ ಗ್ರೇಟ್‌.

The post ಕೊರೊನಾ ಬಂದರು ಜಗ್ಗಲಿಲ್ಲ..ಮಾವನನ್ನ ಬೆನ್ನ ಮೇಲೆ ಹೊತ್ತು ಆಸ್ಪತ್ರೆಗೆ ಸೇರಿಸಿದ ಸೊಸೆ appeared first on News First Kannada.

Source: newsfirstlive.com

Source link