ಚೆನ್ನೈ: ಕೊರೊನಾ ಸೋಂಕು ಬರದಂತೆ ತಡೆಯಲು ಹಾವನ್ನು ಜಗಿದು ತಿನ್ನುತ್ತಿರುವ ವಿಡಿಯೋ ಮಾಡಿ ಹರಿಬಿಟ್ಟಿದ್ದ ಭೂಪ ಈಗ ಪೊಲೀಸರ ಅತಿಥಿಯಾಗಿದ್ದಾನೆ. ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯ ಪೆರುಮಲ್ಪತ್ತಿ ಗ್ರಾಮದ 50 ವರ್ಷದ ವಡಿವೇಲು ಎಂಬಾತನನ್ನು ಅರಣ್ಯ ಇಲಾಖೆ ಪೊಲೀಸರು ಬಂಧಿಸಿದ್ದು, 7000 ರೂಪಾಯಿ ದಂಡ ವಿಧಿಸಿದ್ದಾರೆ.

ವಡಿವೇಲು ರೈತನಾಗಿದ್ದು, ಗದ್ದೆಯಲ್ಲಿ ಸತ್ತುಬಿದ್ದಿದ್ದ ವಿಷಕಾರಿ ಹಾವನ್ನು ಹಿಡಿದ ಆತ, ಅದನ್ನು ತಾನು ತಿನ್ನುತ್ತಿರುವ ವಿಡಿಯೋ ಮಾಡುವಂತೆ ಜೊತೆಯಿದ್ದವರಿಗೆ ಹೇಳಿದ್ದಾನೆ. ಕೊರೊನಾ ಸೋಂಕಿಗೆ ವಿರುದ್ಧವಾಗಿ ಹಾವಿನ ವಿಷ ಕೆಲಸ ಮಾಡುತ್ತದೆ. ಕೊರೊನಾ ಸೋಂಕನ್ನು ಈ ವಿಷ ದೂರವಿಡುತ್ತದೆ. ಹೀಗಾಗಿ ಸೋಂಕಿನಿಂದ ರಕ್ಷಿಸಿಕೊಳ್ಳಲು ತಾನು ಹಾವು ತಿನ್ನುತ್ತಿರುವುದಾಗಿ ವಿಡಿಯೋದಲ್ಲಿ ಹೇಳಿದ್ದಾನೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಆನಂತರ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ನೋಡಿದ ಜಿಲ್ಲಾ ಅರಣ್ಯಾಧಿಕಾರಿ ಆನಂದ್ ವಡಿವೇಲುನನ್ನು ಬಂಧಿಸುವಂತೆ ತಮ್ಮ ತಂಡಕ್ಕೆ ಆದೇಶಿಸಿದ್ದಾರೆ.

ಇನ್ನು ತನ್ನ ಜೊತೆಗಿದ್ದವರು ಹಾವು ತಿನ್ನುವಂತೆ ಪ್ರೇರೇಪಿಸಿದರು. ಆ ಸಮಯದಲ್ಲಿ ತಾನು ಮದ್ಯ ಕುಡಿದಿದ್ದೆ ಎಂದು ವಡಿವೇಲು ಹೇಳಿಕೆ ನೀಡಿರುವುದಾಗಿ ಅರಣ್ಯಾಧಿಕಾರಿ ತಿಳಿಸಿದ್ದಾರೆ. ವಡಿವೇಲು ತಿಂದಿದ್ದ ಹಾವು ಅದಾಗಲೇ ಸತ್ತಿತ್ತು. ಅದೃಷ್ಟವಶಾತ್ ವಿಷವಿರುವ ಗ್ರಂಥಿಯನ್ನು ವಡಿವೇಲು ಜಗಿದಿಲ್ಲ. ಈ ಹಾವು ಅತ್ಯಂತ ವಿಷಕಾರಿ ಎಂದು ಹೇಳಿದ್ದಾರೆ.

The post ಕೊರೊನಾ ಬರಲ್ಲ ಎಂದು ವಿಷಕಾರಿ ಹಾವು ತಿಂದ ರೈತ ಏನಾದ ಗೊತ್ತಾ..? appeared first on News First Kannada.

Source: newsfirstlive.com

Source link