ಬಸವರಾಜ್ ಬೊಮ್ಮಾಯಿ (ಸಂಗ್ರಹ ಚಿತ್ರ)
ದಾವಣಗೆರೆ: ರಾಜ್ಯದಲ್ಲೂ ಕೊರೊನಾ ರೂಪಾಂತರಿ ಒಮಿಕ್ರಾನ್ (Omicron) ಆತಂಕ ದಿನೇ ದಿನೇ ಹೆಚ್ಚುತ್ತಿದೆ. ಹೀಗಾಗಿ ಗಡಿ ಭಾಗಗಳಲ್ಲಿ ಹೈ ಅಲರ್ಟ್ ಮಾಡಲಾಗಿದೆ. ಆದರೆ ಕೊರೊನಾ (Coronavirus) ಭೀತಿ ನಡುವೆಯೂ ಈಗ ಅನೇಕ ಮದುವೆ ಸಮಾರಂಭಗಳು ಸಾಲುಗಟ್ಟಿ ನಿಂತಿವೆ. ಹೀಗಿರುವಾಗ ಇಂದು ದಾಣಗೆರೆ ಜಿಲ್ಲೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಭೇಟಿ ನೀಡಲಿದ್ದು, 3 ವಿಐಪಿ ಮದುವೆಯಲ್ಲಿ ಭಾಗಿಯಾಗಲಿದ್ದಾರೆ. ಇಂದು (ನವೆಂಬರ್ 29) 11.30ಕ್ಕೆ ಉದ್ಯಮಿ ಕಾಸಲ್ ನಾಗರಾಜ್ ಅವರ ಸಹೋದರನ ಪುತ್ರ ವೈಭವ್ ವಿವಾಹ, 12 ಗಂಟೆಗೆ ಜವಳಿ ಉದ್ಯಮಿ ಬಿಎಸ್ ಚನ್ನಬಸಪ್ಪ ಸನ್ಸ್ ಮಾಲೀಕ ಬಿಸಿ ಚಂದ್ರಶೇಖರ ಪುತ್ರ ವಿವೇಕ್ ಮದುವೆ, ನಂತರ 12.30 ಕ್ಕೆ ಉಮಾ ದೇವರಿಗಿರಿಮಠ ಅವರ ಪುತ್ರಿ ಮೇಘನಾ ವಿವಾಹದಲ್ಲಿ ಸಿಎಂ ಭಾಗಿಯಾಗಲಿದ್ದಾರೆ.
ದಾವಣಗೆರೆಯಲ್ಲಿ ನಡೆಯಲಿರುವ ಈ ಮೂರು ಮದುವೆ ಸಮಾರಂಭದಲ್ಲಿ ಭಾಗಿಯಾದ ನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಸ್ತೆ ಮಾರ್ಗವಾಗಿ ಬೆಂಗಳೂರಿಗೆ ತೆರಳಲಿದ್ದಾರೆ.
ಸಿಎಂ ಬೊಮ್ಮಾಯಿ ಮಹತ್ವದ ಸಭೆ
ರಾಜ್ಯದಲ್ಲಿ ಕೊವಿಡ್ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ನ. 27 ರಂದು 4 ಗಂಟೆಗೆ ಆರೋಗ್ಯ ಅಧಿಕಾರಿಗಳ ಜೊತೆ ಸಭೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಭೆ ನಡೆಸಿದ್ದಾರೆ. ವಿದೇಶದಲ್ಲಿ ಹೊಸ ರೂಪಾಂತರ ತಳಿ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಅಲರ್ಟ್ ಆಗಿದ್ದು, ಆರೋಗ್ಯ ಇಲಾಖೆ ಮತ್ತು ಬಿಬಿಎಂಪಿ ಅಧಿಕಾರಿಗಳ ಜೊತೆ ಸಿಎಂ ಬೊಮ್ಮಾಯಿ ಮಹತ್ವದ ಸಭೆ ನಡೆಸಿದ್ದಾರೆ. ಈ ಕುರಿತು ಬೆಂಗಳೂರಿನಲ್ಲಿ ಮಾತನಾಡಿರುವ ಸಿಎಂ ಬೊಮ್ಮಾಯಿ, ಶಾಲೆಗಳು, ಹಾಸ್ಟಲ್ಗಳಲ್ಲಿ ಕೊವಿಡ್ ಹೆಚ್ಚಾಗುತ್ತಿರುವ ಸಂಬಂಧ ಆತಂಕ ವ್ಯಕ್ತಪಡಿಸಿದ್ದಾರೆ. ಶಾಲೆಗಳು, ಹಾಸ್ಟೆಲ್ಗಳಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಧಾರವಾಡ ಸೇರಿ ರಾಜ್ಯದ ಕೆಲವೆಡೆ ಕೊರೊನಾ ಸೋಂಕು ಹೆಚ್ಚಾಗುತ್ತಿದೆ. ಹೀಗಾಗಿ ಸಂಜೆ ಕೊವಿಡ್ ತಜ್ಞರು, ಅಧಿಕಾರಿಗಳ ಜತೆ ಸಭೆ ಮಾಡುತ್ತಿದ್ದೇನೆ ಎಂದು ಬೊಮ್ಮಾಯಿ ನುಡಿದಿದ್ದರು.
ಅಭಿವೃದ್ಧಿ ಆಯುಕ್ತರು, ಬಿಬಿಎಂಪಿ ಮುಖ್ಯ ಆಯುಕ್ತರು, ವಿಪತ್ತು ನಿರ್ವಹಣಾ ಇಲಾಖೆ ಪ್ರಧಾನ ಕಾರ್ಯದರ್ಶಿ, ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗಳು, ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಸಭೆಯಲ್ಲಿ ಭಾಗವಹಿಸಿದ್ದರು. ಧಾರವಾಡ, ದಕ್ಷಿಣ ಕನ್ನಡ, ಉಡುಪಿ, ಚಾಮರಾಜನಗರ, ಕೊಡಗು, ಮೈಸೂರು, ಬೆಂಗಳೂರು ನಗರ ಜಿಲ್ಲಾಧಿಕಾರಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಪಾಲ್ಗೊಂಡಿದ್ದರು. ಅಲ್ಲದೇ ತಾಂತ್ರಿಕ ಸಲಹಾ ಸಮಿತಿ ಸದಸ್ಯರಿಗೂ ಸಭೆಗೆ ಆಹ್ವಾನ ನೀಡಲಾಗಿತ್ತು.
ಹೊಸ ತಳಿಯ ಕೊರೊನಾ ಆತಂಕ ಹಿನ್ನೆಲೆ; ಆರೋಗ್ಯ ಇಲಾಖೆ, ತಾಂತ್ರಿಕ ಸಲಹಾ ಸಮಿತಿ ಜೊತೆ ಸಚಿವ ಸುಧಾಕರ್ ಸಭೆ