ಕೊರೊನಾ ಭೀಕರತೆ ಇಡಿ ಜಗತ್ತು ತಲ್ಲಣಿಸಿದೆ. ಅದರಲ್ಲೂ ಕೊರೊನಾ ಎರಡನೇ ಅಲೆ ಹೊಡೆತಕ್ಕೆ ಭಾರತ ತತ್ತರಿಸಿ ಹೋಗಿದೆ. ಪ್ರತಿನಿತ್ಯ ಸಾವಿರಾರು ಜನರು ಮಾರಿಗೆ ತುತ್ತಾಗುತ್ತಿದ್ದಾರೆ. ಇದೆಲ್ಲದರ ನಡುವೆ ನಿಟ್ಟುಸಿರು ಬಿಡುವ ಸುದ್ದಿಯನ್ನ ಅಮೆರಿಕಾದ ಫೈಜರ್​ ಕಂಪನಿ ನೀಡಿದೆ.

ಕಳೆದ ಒಂದೂವರೆ ವರ್ಷಗಳಿಂದ ಜಗತ್ತಿನಾದ್ಯಂತ ಮನುಕುಲವನ್ನ ಹಿಂಡಿ ಹಿಪ್ಪೆ ಮಾಡ್ತಿರೋ ಕೊರೊನಾವನ್ನ ಇನ್ನೂ ಮಣಿಸಲು ಸಾಧ್ಯವಾಗಿಲ್ಲ. ಕಾರಣ ಕೊರೊನಾಗೆ ಔಷಧಿಯೇ ಇನ್ನೂ ರೆಡಿಯಿಲ್ಲ. ಕೊರೊನಾ ಸೋಂಕು ತಗುಲಿದ್ರೆ ನಾವು ಬದುಕುವುದೇ ಅನುಮಾನ ಅಂತಾ ಜನ ಆತಂಕಕ್ಕೊಳಗಾಗುತ್ತಿರೋದೇ ಈ ಕಾರಣಕ್ಕಾಗಿ. ಆದ್ರೆ ಅಮೆರಿಕಾದ ಔಷಧ ತಯಾರಿಕಾ ​ ಕಂಪನಿ ಫೈಜರ್​ ಈಗ ಈ ಆತಂಕ ದೂರ ಮಾಡುವ ನಿಟ್ಟಿನಲ್ಲಿ ಸಾಹಸ ಕೈಗೊಂಡಿದೆ. ಕೊರೊನಾಗೆ ತಾನು ಔಷಧಿ ಕಂಡುಹಿಡಿಯುತ್ತಿರೋದಾಗಿ ಹೇಳಿಕೊಂಡಿದೆ.

ಔಷಧ ತಯಾರಿಕೆಯಲ್ಲಿ ನಿರತವಾಗಿರುವ ಫೈಜರ್
ಯೆಸ್​..ಇಡೀ ಜಗತ್ತನ್ನೇ ತಲ್ಲಣಗೊಳಿಸಿರುವ..ಲಕ್ಷಾಂತರ ಜನರ ಸಾವಿಗೆ ಕಾರಣವಾಗಿರುವ ಕೊರೊನಾ ಸೋಂಕಿಗೆ ತಾನು ಔಷಧಿ ಕಂಡು ಹಿಡಿಯುತ್ತಿರುವುದಾಗಿ ಫೈಜರ್​ ಕಂಪನಿ ತಿಳಿಸಿದೆ. ಕೊರೊನಾರ್ಭಟಕ್ಕೆ ಸಿಲುಕಿ ನಲುಗುತ್ತಿರುವ ಜಗತ್ತಿನ ಅನೇಕ ರಾಷ್ಟ್ರಗಳಲ್ಲಿ ಫೈಜರ್​ ಪಂಪನಿಯ ಈ ಘೋಷಣೆ ಹೊಸ ಭರವಸೆ ಮೂಡಿಸಿದೆ.

ಮಾತ್ರೆ ಸಿದ್ಧವಾದರೆ ಮನೆಯಲ್ಲಿಯೇ ಚಿಕಿತ್ಸೆ ನೀಡಲು ಸಾಧ್ಯ
ಕೊರೊನಾಗೆ ಈಗಾಗಲೇ ಲಸಿಕೆ ಸಿದ್ಧಪಡಿಸಿರುವ ಫೈಜರ್​ ಕಂಪನಿ ಸದ್ಯ ಔಷಧಿಯನ್ನು ತಯಾರಿಸುತ್ತಿರುವುದಾಗಿ ಹೇಳಿದೆ. ಮಾತ್ರೆ ಹಾಗೂ ಇಂಜೆಕ್ಷನ್​ ರೂಪದಲ್ಲಿ ಔಷಧಿಗಳನ್ನು ತಯಾರಿಸಲಾಗುತ್ತಿದೆ. ಆದರೆ ಮಾತ್ರೆ ರೂಪದ ಔಷಧಿ ಮೇಲೆ ನಾವು ಹೆಚ್ಚಿನ ಗಮನ ಹರಿಸಿದ್ದೇವೆ ಅಂತಾ ಫೈಜರ್​ ಸಿಇಒ ಡಾ. ಆಲ್ಬರ್ಟ್ ಬೌರ್ಲಾ ಮಾಹಿತಿ ನೀಡಿದ್ದಾರೆ.

ಇಂಜೆಕ್ಷನ್​ ಔಷಧಗಿಂತಲೂ ಮಾತ್ರೆ ರೂಪದ ಔಷಧಿ ಬಳಕೆಗೆ ಹೆಚ್ಚು ಅನುಕೂಲಕರವಾಗಿರಲಿದ್ದು, ಮಾತ್ರೆ ಸಿದ್ಧವಾದರೆ ಸೋಂಕಿತರಿಗೆ ಮನೆಯಲ್ಲೇ ಚಿಕಿತ್ಸೆ ನೀಡಬಹುದಾಗಿದೆ. ಇನ್ನು ಕೊರೊನಾ ಸೋಂಕಿಗೆ ಇದುವರೆಗೂ ಯಾವುದೇ ಔಷಧಿ ಇಲ್ಲಾ. ಫೈಜರ್​ ಔಷಧಿಯನ್ನ ಕಂಡುಹಿಡಿದ್ದಿದ್ದೇ ಆದರೆ ಕೊರೊನಾಗೆ ಲಸಿಕೆ ಕಂಡುಹಿಡಿದ ಮೊದಲ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

Image Source:
Pfizer/facebook

ಈಗಾಗಲೇ ಫೈಜರ್‌ ಕಂಪನಿಯ ಲಸಿಕೆ ಲಭ್ಯವಿದೆ. ಆದ್ರೆ ಕೋವಿಡ್‌ಗೆಂದೇ ಅಭಿವೃದ್ಧಿಪಡಿಸಲಾದ ಔಷಧಿ ಲಭ್ಯವಿಲ್ಲ. ಇದಕ್ಕಾಗಿಯೇ ಈಗ ಮಾತ್ರೆಗಳನ್ನ ಅಭಿವೃದ್ಧಿ ಪಡಿಸಿರೋ ಫೈಜರ್ ಕಂಪನಿ, ಅವುಗಳನ್ನ​ ಪ್ರಯೋಗಕ್ಕೆ ಒಳಪಡಿಸಿದೆ. ಸೋಂಕಿನ ವಿರುದ್ಧ ಮಾತ್ರೆಗಳು ಎಷ್ಟು ಪರಿಣಾಮಕಾರಿಯಾಗಿವೆ ಅನ್ನೋದನ್ನ ತಿಳಿಯೋಕೆ ಸ್ವಯಂ ಸೇವಕರ ಮೇಲೆ ಮಾತ್ರೆಗಳ ಪ್ರಯೋಗ ನಡೀತಿದೆ.

ಅಮೆರಿಕಾ, ಬೆಲ್ಜಿಯಂನಲ್ಲಿ ಪ್ರಯೋಗ ಹಂತದಲ್ಲಿರುವ ಟ್ಯಾಬ್ಲೆಟ್
ಫೈಜರ್​ ಕಂಪನಿ ತಯಾರಿಸುತ್ತಿರುವ ಮಾತ್ರೆಗಳು ಸದ್ಯ ಪ್ರಯೋಗ ಹಂತದಲ್ಲಿದ್ದು, ಅಮೆರಿಕಾ ಹಾಗೂ ಬೆಲ್ಜಿಯಂನಲ್ಲಿ ಸ್ವಯಂ ಸೇವಕರ ಮೇಲೆ ಮಾತ್ರೆಗಳ ಪ್ರಯೋಗ ನಡೀತಿದೆ. 18 ರಿಂದ 60 ವರ್ಷದ ಒಳಗಿನ ಒಟ್ಟು 60 ಜನರನ್ನು ಈ ಪ್ರಯೋಗಕ್ಕೆ ಒಳಪಡಿಸಲಾಗಿದೆ. ಒಂದು ವೇಳೆ ಪ್ರಯೋಗ ಯಶಸ್ವಿಯಾದಲ್ಲಿ ಮಾತ್ರೆಯಿಂದಲೇ ಕೊರೊನಾಗೆ ಯಶಸ್ವಿ ಚಿಕಿತ್ಸೆ ನೀಡಬಹುದು ಅಂತಾ ಔಷಧಿ ಉತ್ಪನ್ನ ಕಂಪನಿ ಫೈಜರ್ ಮಾಹಿತಿ ನೀಡಿದೆ.

ಒಟ್ಟಾರೆ ಕೊರೊನಾ ಸಂಕಷ್ಟದಿಂದ ಬಳಲಿರುವ ಜಗತ್ತಿಗೆ ಇದುವರೆಗೂ ಲಸಿಕೆಯೊಂದೇ ರಾಮಬಾಣವಾಗಿತ್ತು. ಆದರೆ ಸದ್ಯ ಸೋಂಕಿಗೆ ಔಷಧಿ ತಯಾರಾಗುತ್ತಿದ್ದು, ಈ ಔಷಧಿ ಯಶಸ್ವಿಯಾದ್ರೆ ಕೊರೊನಾ ಸೋಂಕಿನ ವಿರುದ್ಧದ ಹೋರಾಟಕ್ಕೆ ಬಹುದೊಡ್ಡ ಅಸ್ತ್ರ ಸಿಕ್ಕಂತಾಗುತ್ತದೆ. ಆದಷ್ಟು ಬೇಗ ಈ ಔಷಧಿ ಯಶಸ್ವಿಯಾಗಲಿ, ಕೊರೊನಾ ಸೋಂಕಿತರ ಚಿಕಿತ್ಸೆಗೆ ಲಭ್ಯವಾಗಲಿ ಅಂತಾ ಆಶಿಸೋಣ.

Image credit: pfizer

The post ಕೊರೊನಾ ಮಾತ್ರೆ ಪ್ರಯೋಗ ಶುರು-ಮಾತ್ರೆ ಸಿದ್ಧವಾದರೆ ಮನೆಯಲ್ಲಿಯೇ ಚಿಕಿತ್ಸೆ.. ಧೈರ್ಯದಿಂದ ಇರಿ appeared first on News First Kannada.

Source: newsfirstlive.com

Source link