ಎಪಿಎಂಸಿ ಮಾರುಕಟ್ಟೆ
ಕೋಲಾರ: ಏಷ್ಯಾದಲ್ಲೇ ಎರಡನೇ ಅತಿದೊಡ್ಡ ಎಪಿಎಂಸಿ ಮಾರುಕಟ್ಟೆ (APMC Market) ಎಂಬ ಹೆಗ್ಗಳಿಗೆ ಕೋಲಾರದ ಮಾರುಕಟ್ಟೆ ಪಾತ್ರವಾಗಿದೆ. ಆದರೆ ಕೊರೊನಾ ಪರಿಸ್ಥಿತಿಯಲ್ಲಿ ಆ ಹೆಗ್ಗಳಿಕೆಯೇ ಮಾರಕವಾಗಿ ಪರಿಣಮಿಸುತ್ತಿದ್ದು, ಕೊರೊನಾ ಮೂರನೇ ಅಲೆಯ (Corona 3rd wave) ಸಂದರ್ಭದಲ್ಲೂ ಇದೊಂದು ಆತಂಕದ ಕೇಂದ್ರವಾಗಿ ಮಾರ್ಪಟ್ಟಿದೆ. ಇದಕ್ಕೆ ಕಾರಣ ಏಷ್ಯಾದ ದೊಡ್ಡ ಮಾರುಕಟ್ಟೆಯೇ ಕೊರೊನಾ ಸೋಂಕನ್ನು(coronavirus) ಹೆಚ್ಚಿಸುವ ಮಾರುಕಟ್ಟೆಯಾಗುತ್ತಾ ಎನ್ನುವ ಭಯ ಕೋಲಾರದಲ್ಲಿ ಶುರುವಾಗಿದೆ. ಕೊರೊನಾದ ಮೊದಲನೇ ಹಾಗೂ ಎರಡನೇ ಅಲೆಯಲ್ಲಿ ಹೆಚ್ಚಾಗಿ ಸೋಂಕು ಹರಡಿದ್ದೇ ಎಪಿಎಂಸಿ ಮಾರುಕಟ್ಟೆ ಮೂಲಕ. ಇದೇ ಮಾರುಕಟ್ಟೆಯಿಂದ ಹೊರ ರಾಜ್ಯಗಳಿಗೆ ಹೋಗುವ ಡ್ರೈವರ್ಗಳು, ಕ್ಲೀನರ್ಗಳ ಮೂಲಕ ಸೋಂಕು ಹರಡಿತ್ತು. ಈಗ ಮೂರನೇ ಅಲೆಯಲ್ಲೂ ಇದೇ ಎಪಿಎಂಸಿ ಮಾರುಕಟ್ಟೆ ಕೋಲಾರಕ್ಕೆ ಮಾರಕವಾಗಿ ಪರಿಣಮಿಸಲಿದೆ ಎಂಬ ಆತಂಕ ವ್ಯಕ್ತವಾಗಿದೆ.
ದೇಶದ ಬಹುತೇಕ ರಾಜ್ಯಗಳಿಂದ ವ್ಯಾಪಾರಸ್ಥರು ಬರುತ್ತಾರೆ
ಕೋಲಾರದ ಎಪಿಎಂಸಿ ಮಾರುಕಟ್ಟೆಗೆ ದೇಶದ ನಾನಾ ರಾಜ್ಯಗಳಿಂದ ಅಂದre ಕೇರಳಾ, ತಮಿಳುನಾಡು, ಮಹಾರಾಷ್ಟ್ರ, ಗುಜರಾತ್, ರಾಜಾಸ್ಥಾನ್, ಜಾರ್ಖಂಡ್, ದೆಹಲಿ, ಉತ್ತರ ಪ್ರದೇಶ, ಸೇರಿದಂತೆ ಹಲವು ರಾಜ್ಯಗಳಿಂದ ವ್ಯಾಪಾರಸ್ಥರು ಟೊಮ್ಯಾಟೋ ಖರೀದಿಗೆ ಇಲ್ಲಿಗೆ ಬರುತ್ತಾರೆ. ಜೊತೆಗೆ ಲಾರಿ ಚಾಲಕರು, ಕ್ಲೀನರ್ಗಳು, ಕಾರ್ಮಿಕರು ಆಗಮಿಸುತ್ತಾರೆ. ಹಾಗಾಗಿ ಸೋಂಕು ಹೆಚ್ಚಿರುವ ರಾಜ್ಯಗಳಿಂದ ಬರುವವರಿಂದ ಕೋಲಾರಕ್ಕೆ ಕಂಟಕ ಎದುರಾಗುವ ಆತಂಕ ಹೆಚ್ಚಾಗಿದೆ. ಹಾಗಾಗಿ ಹೊರ ರಾಜ್ಯಗಳಿಂದ ಬರುವವರ ಕೊವಿಡ್ ಟೆಸ್ಟ್ ರಿಪೋರ್ಟ್ ಹಾಗೂ ಎರಡು ಡೋಸ್ ವ್ಯಾಕ್ಸಿನ್ ಹಾಕಿಕೊಂಡಿರುವ ಕುರಿತು ಮಾಹಿತಿ ಪಡೆದರೆ ಒಳ್ಳೆಯದು ಎಂದು ಸಿಎಂಆರ್ ಮಂಡಿ ಮಾಲೀಕ ಶ್ರೀನಾಥ್ ಹೇಳಿದ್ದಾರೆ.
ಗಡಿಯಲ್ಲಿ ನಿರ್ಭಂಧ ಹಾಕದಿರುವುದೇ ಆತಂಕ
ಜಿಲ್ಲೆಯ ಅಥವಾ ಅಂತರಾಜ್ಯದ ಗಡಿಗಳಲ್ಲಿ ನಿರ್ಬಂಧ ವಿಧಿಸುವ ಕುರಿತು ರಾಜ್ಯ ಸರ್ಕಾರವೇ ತೀರ್ಮಾನ ಮಾಡಬೇಕು. ಆದರೆ ಈವರೆಗೆ ಕೋಲಾರ ಜಿಲ್ಲಾಡಳಿತಕ್ಕೆ ಸರ್ಕಾರದಿಂದ ನಮಗೆ ಯಾವುದೇ ಮಾರ್ಗಸೂಚಿ ಬಿಡುಗಡೆಯಾಗಿಲ್ಲ. ಹಾಗಾಗಿ ಸದ್ಯ ನಮ್ಮ ವ್ಯಾಪ್ತಿಯಲ್ಲಿ ಎಪಿಎಂಸಿ ಮಾರುಕಟ್ಟೆಗೆ ಬರುವ ಹೊರ ರಾಜ್ಯದವರಿಗೆ ಹಾಗೂ ಇಲ್ಲಿ ಕೆಲಸ ಮಾಡುವ ಜನರಿಗೆ ಕೊರೊನಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲು ತಿಳಿಸಲಾಗಿದೆ ಎಂದು ಸಿಎಂಆರ್ ಮಂಡಿ ಮಾಲೀಕ ಶ್ರೀನಾಥ್ ತಿಳಿಸಿದ್ದಾರೆ.
ಹೈರಿಸ್ಕ್ ರಾಜ್ಯಗಳಿಂದ ಬರುವವರ ಮೇಲೆ ಮಾತ್ರ ನಿಗಾ
ಇನ್ನು ಹೈರಿಸ್ಕ್ ರಾಜ್ಯಗಳಾಗಿರುವ ಕೇರಳಾ ಮತ್ತು ಮಹಾರಾಷ್ಟ್ರಗಳಿಂದ ಕೋಲಾರ ಎಪಿಎಂಸಿ ಮಾರುಕಟ್ಟೆಗೆ ಬರುವ ವಾಹನಗಳನ್ನು ಮಾತ್ರ ಸದ್ಯ ತಪಾಸಣೆ ಮಾಡುವ ಜೊತೆಗೆ ಅಲ್ಲಿಂದ ಬರುವ ಡ್ರೈವರ್ಗಳು, ವ್ಯಾಪಾರಸ್ಥರ ಕೊವಿಡ್ ನೆಗೆಟೀವ್ ರಿಪೋರ್ಟ್ ಜೊತೆಗೆ ವ್ಯಾಕ್ಸಿನ್ ರಿಪೋರ್ಟ್ ಪಡೆದು ಮಾರುಕಟ್ಟೆ ಒಳಗೆ ಬಿಡುವಂತೆ ಸೂಚನೆ ನೀಡಲಾಗಿದೆ ಎಂದು ಎಪಿಎಂಸಿ ಕಾರ್ಯದರ್ಶಿ ರವಿಕುಮಾರ್ ಹೇಳಿದ್ದಾರೆ. ಆದರೆ ಗಡಿಗಳಲ್ಲಿ ನಿರ್ಭಂದ ಕುರಿತು ಸರ್ಕಾರದಿಂದ ಅದೇಶ ಬಂದರೆ ಮಾತ್ರ ಗಡಿಗಳಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಇಲ್ಲಿನ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಒಟ್ಟಾರೆ ಕೋಲಾರಕ್ಕೆ ಎಪಿಎಂಸಿ ಮಾರುಕಟ್ಟೆ ಕಳೆದ ಎರಡು ಅಲೆಗಳಲ್ಲಿ ಕೊರೊನಾ ಸೋಂಕು ಹರಡುವ ಕೇಂದ್ರವಾಗಿತ್ತು. ಸದ್ಯದ ಪರಿಸ್ಥಿತಿಯಲ್ಲಿ ಗಡಿಗಳಲ್ಲಿ ಯಾವುದೇ ನಿರ್ಭಂದ ವಿಧಿಸದಿರುವುದನ್ನು ನೋಡಿದರೆ ಈ ಮೂರನೇ ಅಲೆಯಲ್ಲೂ ಕೂಡಾ ಇದೇ ಎಪಿಎಂಸಿ ಮಾರುಕಟ್ಟೆ ಕೊರೊನಾ ಹರಡುವ ಕೇಂದ್ರವಾಗಿ ಪರಿಣಮಿಸುತ್ತಿದೆಯಾ ಎನ್ನುವ ಆತಂಕಕ್ಕೆ ಕಾರಣವಾಗಿದೆ. ಈ ಕೂಡಲೇ ಸರ್ಕಾರ ಹಾಗೂ ಜಿಲ್ಲಾಡಳಿತ ಅಗತ್ಯ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಬೇಕಿದೆ.
ವರದಿ: ರಾಜೇಂದ್ರ ಸಿಂಹ