ಕೊರೊನಾ ವ್ಯಾಕ್ಸಿನ್ ವಿಚಾರದಲ್ಲಿ ಹೊಸದೊಂದು ಚರ್ಚೆ, ಸಂಶೋಧನೆ ನಡೀತಾ ಇದೆ. ಇದೇ ಮಿಕ್ಸ್ & ಮ್ಯಾಚ್ ವ್ಯಾಕ್ಸಿನ್. ಅಂದ್ರೆ ಮೊದಲ ಡೋಸ್ ಪಡೆದುಕೊಂಡ ಕಂಪನಿಯದ್ದೇ ಲಸಿಕೆಯನ್ನು ಎರಡನೇ ಡೋಸ್ ಪಡೆದುಕೊಳ್ಳಬೇಕಾಗಿಲ್ಲ. ಇದೇನಾದ್ರೂ ಫೈನಲ್ ಆದ್ರೆ ಮುಂದೆ ವ್ಯಾಕ್ಸಿನ್ ಹಾಕಿಸಿಕೊಳ್ಳೋರಿಗೆ ಹೆಚ್ಚಿನ ಅನುಕೂಲ ಆಗುತ್ತೆ.

ಒಂದು ಸಮಯ ಇತ್ತು ಕೊರೊನಾಗೆ ಲಸಿಕೆ ಹಾಕಿಸಿಕೊಳ್ಳಿ ಅಂದ್ರೆ ಜನರು ಮೈಲಿ ದೂರು ಓಡಿ ಹೋಗ್ತಿದ್ರು. ಅನಕ್ಷರಸ್ತರು ಇರಲಿ, ವಿದ್ಯಾವಂತರೇ ಬೇಡಪ್ಪಾ ಬೇಡ ಲಸಿಕ ಮಾತ್ರ ಬೇಡ ಅಂತಿದ್ರು. ಯಾವಾಗ ಎರಡನೇ ಅಲೆ ಹೊಡೆತ ಜೋರಾಯ್ತೋ ಲಸಿಕೆ ಹಾಕಿಸಿಕೊಳ್ಳೋಕೆ ಇಡೀ ದೇಶದಲ್ಲಿ ಹನುಮಂತನ ಬಾಲದಂತೆ ಕ್ಯೂ ಇದೆ. ಆದರೆ, ಈಗ ಲಸಿಕೆಯೇ ಸಿಗ್ತಿಲ್ಲ. ಈ ಸಮಸ್ಯೆ ನಮ್ಮ ದೇಶದಲ್ಲಿ ಮಾತ್ರ ಅಲ್ಲಾ. ಬೇರೆ ಬೇರೆ ದೇಶಗಳಲ್ಲೂ ಇದೇ ಪರಿಸ್ಥಿತಿ ಇದೆ. ಹಾಗಾಗಿ ವಿಜ್ಞಾನಿಗಳು, ಸಂಶೋಧಕರು ಈ ಸಮಸ್ಯೆ ಬಗೆಹರಿಸೋಕೆ ಅನೇಕ ದಾರಿಗಳನ್ನ ಹುಡುಕ್ತಿದ್ದಾರೆ.

ಸದ್ಯ ಆ ನಿಟ್ಟಿನಲ್ಲಿ ಹೊಸದೊಂದು ಚಿಂತನೆ ಆರಂಭವಾಗಿದೆ. ಇಲ್ಲಿಯವರೆಗೂ ಮೊದಲನೇ ಲಸಿಕೆ ಕೋವ್ಯಾಕ್ಸಿನ್​ ಹಾಕಿಸಿಕೊಂಡರೆ, ಎರಡನೇ ಲಸಿಕೆಯನ್ನೂ ಕೋವ್ಯಾಕ್ಸಿನ್​ ಹಾಕಿಸಿಕೊಳ್ಳಬೇಕಿತ್ತು. ಅದೇ ರೀತಿ ಮೊದಲನೇ ಲಸಿಕೆ ಕೋವಿಶೀಲ್ಡ್​ ಹಾಕಿಸಿಕೊಂಡ್ರೆ, ಎರಡನೇ ಲಸಿಕೆಯನ್ನೂ ಕೋವಿಶೀಲ್ಡ್​ ಹಾಕಿಸಿಕೊಳ್ಳಬೇಕಿತ್ತು. ಇದು ಲಸಿಕೆಯ ಕೊರತೆಯನ್ನು ಉಂಟು ಮಾಡಿದೆ. ಇಡೀ ದೇಶಕ್ಕೆ ಒಂದು ಸ್ವಲ್ಪ ಮಟ್ಟಿಗೆ ಕೋವಿಶೀಲ್ಡ್​ ಲಸಿಕೆ ಹಾಗೋ ಹೀಗೋ ಸಿಗ್ತಾ ಇದೆ. ಆದರೆ, ಮೊದಲನೇ ಹಂತದಲ್ಲಿ ಕೋವ್ಯಾಕ್ಸಿನ್​ ಹಾಕಿಸಿಕೊಂಡ ಲಕ್ಷಾಂತರ ಮಂದಿ ಎರಡನೇ ಡೋಸ್​ಗೆ ನಿಜವಾಗಲೂ ಅಲೆಯುವಂತಾಗಿದೆ. ಎಲ್ಲಾ ಆಸ್ಪತ್ರೆಗಳ ಮುಂದೆನೂ ನೋ ಸ್ಟಾಕ್​ ಬೋರ್ಡ್​​ಗಳೇ ರಾರಾಜಿಸ್ತಿವೆ. ಇದರಿಂದ ಬಂದ ದಾರಿಗೆ ಸುಂಕ ಇಲ್ಲದಂತೆ ಜನರು ಆಸ್ಪತ್ರೆಯಿಂದ ಮನೆಗೆ ಮನೆಯಿಂದ ಆಸ್ಪತ್ರೆಗೆ ಅಲೆಯುವಂತಾಗಿದೆ.

ಸರ್ಕಾರಕ್ಕೆ ಲಸಿಕೆ ಒದಿಗಿಸಿಕೊಡೋದೇ ದೊಡ್ಡ ತಲೆನೋವಾಗಿದೆ. ಸರ್ಕಾರ ಒಂದು ಕಡೆ ಲಸಿಕೆ ಉತ್ಪಾದಿಸೋಕೆ ಕಂಪನಿಗಳಿಗೆ ಆರ್ಥಿಕ ಸಹಾಯದ ಜೊತೆಗೆ ಏನೆಲ್ಲಾ ಬೇಕೋ ಅಂತಹ ವ್ಯವಸ್ಥೆಗಳನ್ನು ಮಾಡಿಕೊಡ್ತಿದೆ. ಈ ಎಲ್ಲಾ ಸಮಸ್ಯೆಗಳನ್ನ ನಿವಾರಿಸೋಕೆ ಈಗ ಮಿಕ್ಸ್​​ & ಮ್ಯಾಚ್​ ಲಸಿಕೆ ಬಗ್ಗೆ ಸಂಶೋಧನೆ ಮಾಡಲಾಗ್ತಿದೆ.

ಇಂಗ್ಲೆಂಡ್​​​ನಲ್ಲಿ ಪ್ರಯೋಗ ಯಶಸ್ವಿ
ಬ್ರಿಟನ್​ನಲ್ಲಿನ ವಿಜ್ಞಾನಿಗಳೂ ಸಹ ಇಂತಹುದ್ದೇ ಎಕ್ಸ್​ಪೆರಿಮೆಂಟ್​ ಮಾಡಿದ್ದಾರೆ. ಮೊದಲನೇ ಹಂತದಲ್ಲಿ ಫೈಜರ್​ ವ್ಯಾಕ್ಸಿನ್​ ತೆಗೆದುಕೊಂಡ ಕೆಲವರಿಗೆ ಎರಡನೇ ಲಸಿಕೆಯಾಗಿ ಆಸ್ಟಾಜೆನಿಕಾ ನೀಡಲಾಗಿದೆ. ಈ ರೀತಿಯ ಮಿಕ್ಸ್ &​ ಮ್ಯಾಚ್​ ಮಾಡಿರೋದು ಉತ್ತಮ ಫಲಿತಾಂಶವನ್ನೇ ನೀಡಿದೆ. ಈ ಬಗ್ಗೆ ನಡೆದ ಅಧ್ಯಯನದಲ್ಲಿ ಎರೆಡು ಬೇರೆ ಬೇರೆ ಲಸಿಕೆಯನ್ನ ತೆಗೆದುಕೊಂಡವರಲ್ಲಿ ಸುದೀರ್ಘಕಾಲದವರೆಗೆ ರೋಗನಿರೋಧಕ ಶಕ್ತಿ ಇರಲಿದೆ ಎಂಬ ಅಂಶ ವಿಜ್ಞಾನಿಗಳಿಗೆ ತಿಳಿದುಬಂದಿದೆ. ಅಷ್ಟೇ ಅಲ್ಲ ಈ ರೀತಿ ಬೇರೆ ಬೇರೆ ಲಸಿಕೆ ತೆಗೆದುಕೊಳ್ಳುವುದು ಸುರಕ್ಷಿತ ಎಂಬುದು ಕೂಡ ತಿಳಿದುಬಂದಿದೆ.

ಬ್ರಿಟನ್​ ಅಷ್ಟೇ ಅಲ್ಲ, ಸ್ಪೇನ್​ ಕೂಡ ಇದೇ ರೀತಿಯ ಪರೀಕ್ಷೆ ನಡೆಸಿದೆ. ಅಲ್ಲಿನ ವಿಜ್ಞಾನಿಗಳೂ ಸಹ ಕೆಲವರಿಗೆ ಮೊದಲನೆ ಹಂತದಲ್ಲಿ ಒಂದು ಲಸಿಕೆ, ಎರಡನೇ ಹಂತದಲ್ಲಿ ಮತ್ತೊಂದು ಲಸಿಕೆ ನೀಡಿ ಪರೀಕ್ಷೆ ನಡೆಸಿದ್ದಾರೆ. ಅಲ್ಲೂ ಕೂಡ ಎರಡು ಬೇರೆ ಬೇರೆ ಲಸಿಕೆ ತೆಗೆದುಕೊಂಡವರಲ್ಲಿ ಅತ್ಯುತ್ತಮ ರೋಗನಿರೋಧಕ ಅಂಶಗಳು ಕಂಡುಬಂದಿದೆ. ಜೊತೆಗೆ ಅತ್ಯಂತ ಸುರಕ್ಷಿತ ಎಂಬ ವರದಿಯೂ ಬಂದಿದೆ.

ಯಾವಾಗ ಬೇರೆ ಬೇರೆ ದೇಶಗಳಲ್ಲಿ ಲಸಿಕೆಗಳನ್ನ ಮಿಕ್ಸ್​ ಮಾಡುವುದರಿಂದ ಉತ್ತಮ ಫಲಿತಾಂಶ ಬಂತೋ ಭಾರತದಲ್ಲೂ ಕೋವಿಡ್​ ನಿಯಂತ್ರಣಕ್ಕೆ ಈ ರೀತಿಯ ಪ್ರಯತ್ನಗಳನ್ನು ಯಾಕೆ ಮಾಡಬಾರದು ಎಂಬ ಚಿಂತನೆ ನಡೆಯುತ್ತಿದೆ. ನ್ಯಾಷನಲ್​ ಟೆಕ್ನಿಕಲ್​ ಅಡ್​ವೈಸರಿ ಗ್ರೂಪ್​ ಆನ್​ ಇಮ್ಯೂನೈಸೇಷನ್​ ಈ ರೀತಿ ವ್ಯಾಕ್ಸಿನ್​ಗಳನ್ನು ಮಿಕ್ಸ್​ ಮಾಡಬಹುದೇ ಎಂಬುದರ ಬಗ್ಗೆ ಚರ್ಚೆ ಆರಂಭಿಸಿದೆ.

ಭಾರತದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯಕ್ಕೆ ಸಲಹೆ ನೀಡುವಂತಹ ಅಧಿಕಾರಿಗಳಲ್ಲೂ ಇದೊಂದು ಉತ್ತಮ ಪ್ರಯತ್ನ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಒಂದು ವೇಳೆ ಇಂತಹ ಪ್ರಯತ್ನ ಭಾರತದಲ್ಲೂ ನಡೆದರೆ, ಸದ್ಯ ಉಂಟಾಗಿರುವ ಲಸಿಕೆ ಸಮಸ್ಯೆಯನ್ನ ತಕ್ಕಮಟ್ಟಿಗೆ ನಿವಾರಿಸಬಹುದಾಗಿದೆ ಎಂದಿದ್ದಾರೆ.

ಮೊದಲನೆ ಹಂತದಲ್ಲಿ ಒಂದು ಲಸಿಕೆ ಎರಡನೇ ಹಂತದಲ್ಲಿ ಮತ್ತೊಂದು ಲಸಿಕೆ ನೀಡುವ ಪ್ರಯತ್ನಕ್ಕೆ ತಾಂತ್ರಿಕವಾಗಿ ಯಾವುದೇ ಅಡ್ಡಿಯಿಲ್ಲ. ಗಮನಿಸಬೇಕಾದ ಮತ್ತೊಂದು ಅಂಶವೇನಂದರೆ, ಬೇರೆ ಬೇರೆ ಕಂಪನಿಗಳು ಲಸಿಕೆ ಉತ್ಪಾದಿಸಲು ಬೇರೆ ಬೇರೆ ತಂತ್ರಜ್ಞಾನ ಅನುಸರಿಸುತ್ತಿವೆ. ಆದರೆ, ಎಲ್ಲಾ ಕಂಪನಿಗಳ ಉದ್ದೇಶವೂ ಕೋವಿಡ್​ ವೈರಸ್​ ನಿಯಂತ್ರಿಸುವುದೇ ಆಗಿದೆ. ಹಾಗಾಗಿ ಇಂತಹ ಪ್ರಯತ್ನ ಅಧಿಕಾರಿಗಳಲ್ಲಿ ಆಶಾವಾದ ಮೂಡಿಸಿದೆ.

ಒಂದು ವೇಳೆ ಈ ಪ್ರಯತ್ನಕ್ಕೆ ಯಶಸ್ಸು ಸಿಕ್ಕರೆ, ದೇಶ ವಿದೇಶಗಳಿಗೆ ಪ್ರಯಾಣ ಮಾಡುವವರಿಗೂ ಸಾಕಷ್ಟು ಅನುಕೂಲವಾಗಲಿದೆ. ಏಕೆಂದರೆ ಒಂದು ದೇಶದಲ್ಲಿ ಮೊದಲನೇ ಲಸಿಕೆಯನ್ನು ಪಡೆದವರು ಇನ್ನೊಂದು ದೇಶದಲ್ಲಿ ಎರಡನೇ ಲಸಿಕೆಯನ್ನು ಪಡೆಯಬಹುದಾಗಿದೆ. ಸದ್ಯ ಇಂತಹ ಪ್ರಯತ್ನ ಮಾಡಬೇಕೆ ಬೇಡವೇ ಎಂಬ ತೀವ್ರ ಚರ್ಚೆ ಭಾರತೀಯ ವಿಜ್ಞಾನಿಗಳಲ್ಲಿ ನಡೆಯುತ್ತಿದೆ. ಆದರೆ, ಸದ್ಯದ ಮಾಹಿತಿಯ ಪ್ರಕಾರ ವಿಜ್ಞಾನಿಗಳು ಇಂತಹ ಚಿಂತನೆಯ ಪರವಾಗಿಯೇ ಇದ್ದಾರೆ ಎಂಬುದು ಸಮಾಧಾನಕರ ಸಂಗತಿ.

The post ಕೊರೊನಾ ಲಸಿಕೆ ಮಿಕ್ಸ್ &​ ಮ್ಯಾಚ್​ಗೆ ಸಂಶೋಧನೆ.. ಇದ್ರಿಂದ ಏನು ಲಾಭ..? appeared first on News First Kannada.

Source: newsfirstlive.com

Source link