ಕೊರೊನಾ ಲಸಿಕೆ ಹಾಕಿಸಿಕೊಳ್ಳದ 15ರಿಂದ 18 ವರ್ಷದ ಮಕ್ಕಳಿಗೆ ಶಾಲೆಯೊಳಗೆ ಪ್ರವೇಶವಿಲ್ಲ; ಹರಿಯಾಣ ಸರ್ಕಾರ ಸೂಚನೆ | Unvaccinated children wont be allowed to enter schools Haryana government alert


ಕೊರೊನಾ ಲಸಿಕೆ ಹಾಕಿಸಿಕೊಳ್ಳದ 15ರಿಂದ 18 ವರ್ಷದ ಮಕ್ಕಳಿಗೆ ಶಾಲೆಯೊಳಗೆ ಪ್ರವೇಶವಿಲ್ಲ; ಹರಿಯಾಣ ಸರ್ಕಾರ ಸೂಚನೆ

ಪ್ರಾತಿನಿಧಿಕ ಚಿತ್ರ

ನವದೆಹಲಿ: ಹರಿಯಾಣದಲ್ಲಿ ಕಳೆದ ಹದಿನೈದು ದಿನಗಳಲ್ಲಿ ಕೊರೊನಾವೈರಸ್ ಪ್ರಕರಣಗಳು ಭಾರೀ ಹೆಚ್ಚಾಗಿರುವುದರಿಂದ ಪ್ರಸ್ತುತ ಹರಿಯಾಣದಲ್ಲಿ ಶಾಲೆಗಳನ್ನು ಮುಚ್ಚಲಾಗಿದೆ. ಕೊವಿಡ್-19 ಲಸಿಕೆ ಹಾಕಿಸಿಕೊಳ್ಳದಿದ್ದರೆ 15ರಿಂದ 18 ವರ್ಷ ವಯಸ್ಸಿನ ಮಕ್ಕಳಿಗೆ ಶಾಲೆಗಳು ಮತ್ತೆ ತೆರೆದಾಗ ಅವರಿಗೆ ಶಾಲೆಯೊಳಗೆ ಪ್ರವೇಶಿಸಲು ಅನುಮತಿ ನೀಡುವುದಿಲ್ಲ ಎಂದು ಹರಿಯಾಣ ಆರೋಗ್ಯ ಸಚಿವ ಅನಿಲ್ ವಿಜ್ ಹೇಳಿದ್ದಾರೆ.

ಹರಿಯಾಣದಲ್ಲಿ ಪ್ರಸ್ತುತ ಕೋವಿಡ್-19 ಪರಿಸ್ಥಿತಿಯನ್ನು ಪರಿಶೀಲಿಸಲು ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಸಚಿವರು ಈ ಸೂಚನೆಯನ್ನು ನೀಡಿದ್ದಾರೆ. 15 ರಿಂದ 18 ವರ್ಷದೊಳಗಿನ ಎಲ್ಲಾ ಮಕ್ಕಳ ಪೋಷಕರು ತಮ್ಮ ಮಕ್ಕಳಿಗೆ ಬೇಗನೆ ಲಸಿಕೆ ಹಾಕಿಸಬೇಕು. ಮತ್ತೆ ಶಾಲೆಗಳು ಆರಂಭವಾದಾಗ ಕೊರೊನಾ ಲಸಿಕೆ ಹಾಕದವರಿಗೆ ಶಾಲೆಗೆ ಪ್ರವೇಶಿಸಲು ಅನುಮತಿಸಲಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.

ಹರಿಯಾಣದಲ್ಲಿ 15-18 ವರ್ಷ ವಯಸ್ಸಿನ 15 ಲಕ್ಷಕ್ಕೂ ಹೆಚ್ಚು ಮಕ್ಕಳು ಕೋವಿಡ್ ಲಸಿಕೆ ಪಡೆಯಲು ಅರ್ಹರಾಗಿದ್ದಾರೆ. ಈ ವಯಸ್ಸಿನವರಿಗೆ ಲಸಿಕೆಯನ್ನು ಜನವರಿ 3ರಿಂದ ಪ್ರಾರಂಭಿಸಲಾಗಿದೆ. ರಾಜ್ಯದಲ್ಲಿ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಪ್ರತಿ ಜಿಲ್ಲೆಗೆ ಇಬ್ಬರು ನೋಡಲ್ ಅಧಿಕಾರಿಗಳನ್ನು ನೇಮಿಸಲಾಗುವುದು. ಅದರಲ್ಲಿ ಒಬ್ಬ ಅಧಿಕಾರಿ ಸರ್ಕಾರಿ ಆಸ್ಪತ್ರೆಗಳಲ್ಲಿ ಮತ್ತು ಇನ್ನೊಬ್ಬರು ಖಾಸಗಿ ಆಸ್ಪತ್ರೆಗಳಲ್ಲಿ ವ್ಯವಸ್ಥೆಗಳನ್ನು ಮೇಲ್ವಿಚಾರಣೆ ಮಾಡುತ್ತಾರೆ ಎಂದು ಸಚಿವ ವಿಜ್ ಹೇಳಿದರು.

TV9 Kannada


Leave a Reply

Your email address will not be published. Required fields are marked *