ಕೊರೊನಾ ಲಸಿಕೆ 2ನೇ ಡೋಸ್​ಗೂ-3ನೇ ಡೋಸ್​​ಗೂ ನಡುವಿನ ಅವಧಿ 6ತಿಂಗಳಿಗೆ ಇಳಿಯುವ ಸಾಧ್ಯತೆ; ಶೀಘ್ರವೇ ಕೇಂದ್ರದಿಂದ ನಿರ್ಧಾರ | Union government may soon reduce the gap between Covid Vaccine Second Dose and Booster Dose


ಕೊರೊನಾ ಲಸಿಕೆ 2ನೇ ಡೋಸ್​ಗೂ-3ನೇ ಡೋಸ್​​ಗೂ ನಡುವಿನ ಅವಧಿ 6ತಿಂಗಳಿಗೆ ಇಳಿಯುವ ಸಾಧ್ಯತೆ; ಶೀಘ್ರವೇ ಕೇಂದ್ರದಿಂದ ನಿರ್ಧಾರ

ಲಸಿಕೆ (ಸಾಂದರ್ಭಿಕ ಚಿತ್ರ)

ಸದ್ಯ ದೇಶದ ಜನರಿಗೆ ಕೊರೊನಾ ಲಸಿಕೆ ಮೂರನೇ ಡೋಸ್ ನೀಡುವ ಅಭಿಯಾನ ಶುರುವಾಗಿದೆ. ಎರಡನೇ ಡೋಸ್ ತೆಗೆದುಕೊಂಡು 9 ತಿಂಗಳು ಪೂರ್ಣಗೊಂಡ, 18 ವರ್ಷ ಮೇಲ್ಪಟ್ಟ ಎಲ್ಲರೂ ಕೊರೊನಾ ಲಸಿಕೆ ಮೂರನೇ ಡೋಸ್ ತೆಗೆದುಕೊಳ್ಳಲು ಅರ್ಹರು ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಆದರೆ ಈ ಎರಡನೇ ಡೋಸ್ ಮತ್ತು ಮೂರನೇ ಡೋಸ್​ ನಡುವಿನ ಸಮಯದ ಅಂತರವನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರ ನಿರ್ಧಾರ ಮಾಡಿದ್ದಾಗಿ ಪಿಟಿಐ ವರದಿ ಮಾಡಿದೆ. ಈ ಅವಧಿ 9 ತಿಂಗಳು ಇದ್ದಿದ್ದನ್ನು 6 ತಿಂಗಳಿಗೆ ಇಳಿಸುವ ಸಾಧ್ಯತೆ ಇದೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿದ್ದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಎರಡನೇ ಡೋಸ್​ ಮತ್ತು 3ನೇ ಡೋಸ್​ ನಡುವಿನ ಅಂತರವನ್ನು 6ತಿಂಗಳಿಗೆ ಇಳಿಸುವ ನಿಟ್ಟಿನಲ್ಲಿ ಸಮಗ್ರವಾಗಿ ಚರ್ಚಿಸಲು, ಪ್ರತಿರಕ್ಷಣೆ ಕುರಿತ ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪು (NTAGEI) ಏಪ್ರಿಲ್​ 29ರಂದು ಸಭೆ ನಡೆಸಲಿದೆ ಎಂದು ಹೇಳಲಾಗಿದೆ.

ದೇಶದಲ್ಲಿ ಕೊರೊನಾ ವೈರಸ್​ ಹೆಚ್ಚುತ್ತಿರುವ ಬೆನ್ನಲ್ಲೇ ಬುಧವಾರ ಪ್ರಧಾನಮಂತ್ರಿ ನರೇಂದ್ರ ಮೋದಿ ಎಲ್ಲ ರಾಜ್ಯಗಳ ಸಿಎಂಗಳ ಜತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ್ದಾರೆ. ಕಳೆದ ಎರಡು ವಾರಗಳಿಂದ ದೇಶದಲ್ಲಿ ಕೊರೊನಾ ಸೋಂಕಿನ ಪ್ರಮಾಣ ಹೆಚ್ಚುತ್ತಿದೆ. ಹೀಗಾಗಿ ಜನರು ಎಚ್ಚರಿಕೆಯಿಂದ ಇರಬೇಕು. ಮಾಸ್ಕ್​​ಗಳನ್ನು ಮರೆಯಬಾರದು. ಹಾಗೇ, ಸದ್ಯದ ಮಟ್ಟಿಗೆ ಕೊರೊನಾದಿಂದ ಪಾರು ಮಾಡುವ ಅತ್ಯಂತ ದೊಡ್ಡ ರಕ್ಷಣಾ ಸಾಧನವೆಂದರೆ ಅದು ಲಸಿಕೆ ಮಾತ್ರ ಎಂದು ಹೇಳಿದ್ದರು. ಸದ್ಯ ದೇಶದಲ್ಲಿ 47,36,567  ಆರೋಗ್ಯ ಕಾರ್ಯಕರ್ತರು, ಕೊರೊನಾ ವಿರುದ್ಧ ಹೋರಾಟದಲ್ಲಿ ಮುಂಚೂಣಿಯಲ್ಲಿರುವ 74,47,184 ಮಂದಿ, 60 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ 1,45,45,595 ಜನರು ಈಗಾಗಲೇ ಕೊರೊನಾ ಲಸಿಕೆ ಬೂಸ್ಟರ್ ಡೋಸ್ ಪಡೆದಿದ್ದಾರೆ. ಹಾಗೇ, ಮಂಗಳವಾರದವರೆಗೆ 18-59 ವರ್ಷದವರೆಗಿನ 5,17,547 ಜನರಿಗೆ ಮೂರನೇ ಡೋಸ್​ ಲಸಿಕೆ ನೀಡಿಕೆಯಾಗಿದೆ.

ಇಲ್ಲಿಯವರೆಗೆ ಎರಡನೇ ಡೋಸ್ ಪಡೆದು 9 ತಿಂಗಳು ಕಳೆದವರಿಗೆ ಮೂರನೇ ಡೋಸ್ ನೀಡಲಾಗುತ್ತಿತ್ತು. ಆದರೆ ಅಂತಾರಾಷ್ಟ್ರೀಯವಾಗಿ ಮತ್ತು ಸ್ಥಳೀಯವಾಗಿ ನಡೆಸಿದ ಕೆಲವು ಅಧ್ಯಯನಗಳು ಮತ್ತು ವೈಜ್ಞಾನಿಕ ಪುರಾವೆಗಳನ್ನು ಆಧರಿಸಿ, ಕೊವಿಡ್​ 19 ಎರಡನೇ ಡೋಸ್​​ಗಳೂ-ಮೂರನೇ ಡೋಸ್​ಗಳು ನಡುವಿನ ಅಂತರ ಕಡಿಮೆ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. NTAGI  ಶುಕ್ರವಾರ ಈ ಬಗ್ಗೆ ಸಭೆ ನಡೆಸಿದ ಬಳಿಕವಷ್ಟೇ ಅಂತಿಮ ನಿರ್ಧಾರ ಹೊರಬೀಳಲಿದೆ ಎಂದು ಪಿಟಿಐ ವರದಿಯಲ್ಲಿ ಉಲ್ಲೇಖಿಸಿದೆ.

TV9 Kannada


Leave a Reply

Your email address will not be published. Required fields are marked *