ನವದೆಹಲಿ: ಭಾರತದ ಕೊರೊನಾ ಸಂಕಷ್ಟ ನಿವಾರಿಸಲು ಅನೇಕ ದೇಶಗಳಿಂದ ನೆರವಿನ ಮಹಾಪೂರ ಹರಿದುಬರ್ತಿದೆ. ಅಮೆರಿಕ, ಡೆನ್ಮಾರ್ಕ್, ಯುರೋಪಿಯನ್ ಯೂನಿಯನ್, ಇಂಗ್ಲೆಂಡ್, ಸೌದಿ ಅರೇಬಿಯಾ, ಯುಎಇ, ಜರ್ಮನಿ, ಫ್ರಾನ್ಸ್ ಸೇರಿದಂತೆ ಹಲವು ದೇಶಗಳು ಸಹಾಯಹಸ್ತ ಚಾಚಿದ್ದು, ಭಾರತದೊಂದಿಗೆ ನಾವಿದ್ದೇವೆ ಎಂದು ಹೇಳಿವೆ.

ಇಂಗ್ಲೆಂಡ್ ಭಾರತಕ್ಕೆ ವೆಂಟಿಲೇಟರ್​, ಆಕ್ಸಿಜೆನ್ ಕಾನ್ಸಂಟ್ರೇಟರ್ ಸೇರಿದಂತೆ 600 ಕ್ಕೂ ಹೆಚ್ಚು ಅತ್ಯಂತ ಉಪಯುಕ್ತ ವೈದ್ಯಕೀಯ ಉಪಕರಣಗಳನ್ನ ಕಳಿಸುತ್ತಿದೆ. ನಾಳೆ ಬೆಳಗ್ಗೆ ಈ ಉಪಕರಣಗಳು ಭಾರತವನ್ನ ತಲುಪಲಿವೆ. ಕೊರೊನಾ ವಿರುದ್ಧ ಹೋರಾಟದ ಅತ್ಯಂತ ಕ್ಲಿಷ್ಟ​​ವಾದ ಈ ಸಮಯದಲ್ಲಿ ಸ್ನೇಹಿತನಾಗಿ ಮತ್ತು ಪಾಲುದಾರನಾಗಿ ನಾವು ಭಾರತದೊಂದಿಗೆ ನಿಲ್ಲುತ್ತೇವೆ ಅಂತ ಯುಕೆ ಪ್ರಧಾನಿ ಬೋರಿಸ್ ಜಾನ್ಸನ್ ಹೇಳಿದ್ದಾರೆ.

ಗಾಳಿಯಿಂದ ಆಮ್ಲಜನಕವನ್ನು ಹೊರತೆಗೆಯಬಲ್ಲ​​ 495 ಆಕ್ಸಿಜನ್ ಕಾನ್ಸಂಟ್ರೇಟರ್, ​120 ನಾನ್ ಇನ್​​ವೇಸಿವ್​ ವೆಂಟಿಲೇಟರ್‌ಗಳು ಮತ್ತು 20 ಹಸ್ತಚಾಲಿತ ವೆಂಟಿಲೇಟರ್‌ಗಳು ಸೇರಿದಂತೆ ಒಟ್ಟಾರೆ ಒಂಭತ್ತು ವಿಮಾನಯಾನ ಕಂಟೇನರ್ ಲೋಡ್​ನಷ್ಟು ಸಾಮಗ್ರಿಗಳನ್ನ ಈ ವಾರ ಇಂಗ್ಲೆಂಡ್ ಭಾರತಕ್ಕೆ ಕಳುಹಿಸುತ್ತಿದೆ.

ನಮ್ಮ ಕಷ್ಟಕಾಲದಲ್ಲಿ ಭಾರತ ನೆರವಾಗಿತ್ತು, ಈಗ ಭಾರತಕ್ಕೆ ನಮ್ಮ ನೆರವು
ಅಮೆರಿಕಾ, ಭಾರತಕ್ಕೆ ವ್ಯಾಕ್ಸಿನ್ ತಯಾರಿಕೆಗೆ ಬೇಕಾದ ಕಚ್ಚಾವಸ್ತು, ವೆಂಟಿಲೇಟರ್ ಹಾಗೂ ಆಕ್ಸಿಜನ್ ನೀಡಲು ಮುಂದಾಗಿದೆ. ಸಾಂಕ್ರಾಮಿಕದ ಆರಂಭದಲ್ಲಿ ನಮ್ಮ ಆಸ್ಪತ್ರೆಗಳು ತತ್ತರಿಸಿದ್ದಾಗ ಭಾರತ ನೆರವು ನೀಡಿತ್ತು. ಈಗ ಭಾರತಕ್ಕೆ ಅಗತ್ಯ ಸಮಯದಲ್ಲಿ ಸಹಾಯ ಮಾಡಲು ನಾವು ನಿಶ್ಚಯಿಸಿದ್ದೇವೆ ಎಂದು ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.

ಇನ್ನು ಯುರೋಪಿನ ಇತರ ದೇಶಗಳಾದ ಡೆನ್ಮಾರ್ಕ್, ಫ್ರಾನ್ಸ್, ಜರ್ಮನಿ ಕೂಡ ನೆರವನ್ನ ನೀಡುತ್ತಿವೆ. ಭಾರತ ಅನೇಕ ದೇಶಗಳಿಗೆ ವ್ಯಾಕ್ಸಿನ್ ಡೋಸ್​ಗಳನ್ನ ಕಳಿಸುವ ಮೂಲಕ ನೆರವಾಗಿತ್ತು. ಈಗ ಭಾರತ ಸಂಕಷ್ಟದಲ್ಲಿರುವಾಗ ಹಲವು ದೇಶಗಳು ನೆರವು ನೀಡಲು ಮುಂದೆ ಬಂದು ಮಾನವೀಯತೆ ಮೆರೆದಿವೆ.

 

The post ಕೊರೊನಾ ವಿರುದ್ಧ ಯುದ್ಧ; ಭಾರತಕ್ಕೆ ಅಮೆರಿಕ, ಡೆನ್ಮಾರ್ಕ್, EU, UK ಮುಂತಾದ ರಾಷ್ಟ್ರಗಳಿಂದ ನೆರವಿನ ಮಹಾಪೂರ appeared first on News First Kannada.

Source: News First Kannada
Read More