ಕೊರೊನಾ ಎರಡನೇ ಅಲೆಯನ್ನ ಮಾನಸಿಕವಾಗಿ ಗೆದ್ದರೆ ದೈಹಿಕವಾಗಿಯೂ ಗೆಲ್ಲಬಹುದು ಎಂದು ತೋರಿಸಿಕೊಟ್ಟಿದೆ ಗವಿಸಿದ್ದೇಶ್ವರ ಮಠ.

ಹೌದು..ಕೊಪ್ಪಳದಲ್ಲಿರೋ ಸಮಾರು 800 ವರ್ಷಗಳ ಇತಿಹಾಸವುಳ್ಳ ಮಠ ಇದು. ಇದನ್ನ ಗವಿಮಠ ಅಂತಾನೂ ಕರೆಯುತ್ತಾರೆ. ಉತ್ತರ ಕರ್ನಾಟಕದ ಅತ್ಯಂತ ಹಳೆಯ ಮಠಗಳಲ್ಲಿ ಒಂದಾಗಿದೆ. ಪ್ರಸಿದ್ದ ಲಿಂಗಾಯತ ಮಠಗಳಲ್ಲಿಯೂ ಒಂದಾಗಿದೆ. ಶಿಕ್ಷಣ ಸಂಸ್ಥೆಗಳನ್ನ ನಡೆಸುವುದು, ಅಗತ್ಯವಿರುವವರಿಗೆ ದಾಸೋಹ ಮತ್ತು ಆಧ್ಯಾತ್ನಿಕ ಜ್ಞಾನವನ್ನು ನೀಡುವುದು ಮುಂತಾದ ವಿವಿಧ ಚಟುವಟಿಕೆಗಳಿಂದ ಸಮಾಜವನ್ನ ಉನ್ನತೀಕರಿಸುವಲ್ಲಿ ಗವಿಮಠ ಹಿಂದಿನಿಂದಲೂ ತೊಡಗಿಸಿಕೊಂಡು ಬಂದಿದೆ. ಶ್ರೀ ಶಿವಶಾಂತೇಶ್ವರ ಮಹಾಸ್ವಾಮಿಗಳು, ಮರಿಶಾಂತವೀರ ಮಹಾಸ್ವಾಮಿಗಳು ಕೂಡ ಇದನ್ನ ಮುಂದುವರೆಸಿಕೊಂಡು ಬಂದಿದ್ದರು. ಈಗ ಮಠವನ್ನ ಮುನ್ನೆಡೆಸಿಕೊಂಡು ಹೋಗುತ್ತಿರೋದು ಶ್ರೀ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು.

ಗವಿ ಮಠದ ಆವರಣದಲ್ಲಿದೆ ಕೋವಿಡ್ ಕೇರ್ ಆಸ್ಪತ್ರೆ
ಕೊರೊನಾ ಎರಡನೇ ಅಲೆಯ ಆರ್ಭಟಕ್ಕೆ ಜನಸಾಮಾನ್ಯರು ತತ್ತರಿಸಿಹೋಗಿದ್ದಾರೆ. ಯಾವಾಗ ಜನ ಸಾವು ನೋವಿನಲ್ಲಿ ಮುಳುಗುತ್ತಿದ್ದರೋ ಆಗಲೇ ನೋಡಿ ಗವಿಸಿದ್ದೇಶ್ವರ ಸ್ಚಾಮೀಜಿಗಳು ಒಂದು ಹೆಜ್ಜೆ ಮುಂದೆ ಬಂದು ಕೋವಿಡ್ ಕೇರ್ ಸೆಂಟರ್ ಸ್ಥಾಪಿಸುವ ಆಲೋಚನೆ ನಡೆಸಿದ್ದರು. ತಮ್ಮ ಮಠದ ಆವರಣದಲ್ಲಿರುವ ವೃದ್ಧಾಶ್ರಮ ಹಾಗು ವಿದ್ಯಾರ್ಥಿನಿಲಯವನ್ನು ಕೋವಿಡ್ ಆಸ್ಪತ್ರೆ ಹಾಗು ಕೋವಿಡ್ ಕೇರ್​ ಸೆಂಟರ್​ ಮಾಡಿಕೊಳ್ಳುವಂತೆ ಜಿಲ್ಲಾಡಳಿತಕ್ಕೆ ಬಿಟ್ಟುಕೊಟ್ಟಿದ್ದರು.

ಕೋವಿಡ್ ಆಸ್ಪತ್ರಯಲ್ಲಿ ಹೇಗೆ ಚಿಕಿತ್ಸೆ ಕೊಡ್ತಾರೆ ಗೊತ್ತಾ?
ಗಂಭೀರ ಕಾಯಿಲೆಯಿಂದ ಜಗತ್ತೇ ದೊಡ್ಡ ಸಮಸ್ಯೆಯನ್ನ ಎದುರಿಸುತ್ತಿರುವ ಸಂದರ್ಭದಲ್ಲಿ ಕೋವಿಡ್ ಕೇರ್ ಸೆಂಟರ್​ ಮಾಡೋದು ಅಂದ್ರೆ ಸಾಮಾನ್ಯ ವಿಚಾರವೇನಲ್ಲ. ಆದ್ರೂ ಕೂಡ ಇತರರಿಗೆ ಮಾದರಿ ಆಗುವಂತೆ ಮಠದ ಆವರಣದಲ್ಲಿಯೇ ಜಿಲ್ಲಾಡಳಿತದ ಸಹಯೋಗದೊಂದಿಗೆ ಕೋವಿಡ್ ಆಸ್ಪತ್ರೆಯನ್ನ ಪ್ರಾರಂಭಿಸಿರುವುದು ಸಾಮಾನ್ಯ ವಿಚಾರ ಅಲ್ಲವೇ ಅಲ್ಲ. ಈ ಕಾರ್ಯಕ್ಕೆ ಇನ್ನುಳಿದವರು ಕೂಡ ಕೈ ಜೋಡಿಸೋ ಮೂಲಕ ಕೋವಿಡ್ ಕೇರ್​ ಸೆಂಟರ್​ ಸುಸೂತ್ರವಾಗಿ ನಡೆದುಕೊಂಡು ಬರುತ್ತಿದೆ.

ಮಠದಿಂದಲೇ ಉಚಿತ ಹಾಸಿಗೆ ಹಾಗೂ ಊಟದ ವ್ಯವಸ್ಥೆ 
ಗವಿಸಿದ್ದೇಶ್ವರ ಮಠದಲ್ಲಿ ಯಾವಾಗ ಕೋವಿಡ್ ಆಸ್ಪತ್ರೆ ನಿರ್ಮಾಣ ಆಗಿತ್ತೋ ಆಗಿನಿಂದಲೇ ಇಲ್ಲಿ ಹಾಸಿಗೆ ಹಾಗೂ ಊಟದ  ವ್ಯವಸ್ಥೆಯನ್ನು ಸಂಪೂರ್ಣ ಉಚಿತವಾಗಿ ಮಠದಿಂದ ಪೂರೈಸುತ್ತಿದ್ದಾರೆ. ಇಲ್ಲಿ ಒಂದೇ ರೀತಿಯ ಊಟದ ವ್ಯವಸ್ಥೆಯ ಮಾಡಿಕೊಂಡಿಲ್ಲ. ದಿನಕ್ಕೊಂದು ಊಟದ ವ್ಯವಸ್ಥೆಯನ್ನ ಮಾಡಿಕೊಂಡಿದ್ದಾರೆ. ಪೌಷ್ಠಿಕಯುಕ್ತ ಆಹಾರವನ್ನ ನೀಡುತ್ತಿದ್ದಾರೆ. ಇದು ಇಲ್ಲಿ ಚಿಕಿತ್ಸೆ ಪಡೆಯುತ್ತಿರೋ ಸೋಂಕಿತರಿಗೆ ಹೆಚ್ಚು ಅನುಕೂಲಕರವಾಗಿದೆ.

ಇನ್ನು ಕೋವಿಡ್ ಆಸ್ಪತ್ರೆ ಅಂದ ಮೇಲೆ ಅದರಲ್ಲಿ ಏನಿರಬೇಕು ಅನ್ನೋದನ್ನ ತಿಳಿದುಕೊಂಡು ತಮ್ಮ ಕೈಲಾದ ಸಹಾಯವನ್ನ ಮಾಡುತ್ತಾ, ಇನ್ನುಳಿದಂತೆ ಅಗತ್ಯವಿರುವ ವೈದ್ಯಕೀಯ ವಸ್ತುಗಳನ್ನ ದಾನಿಗಳ ಮೂಲಕ ತರಿಸಿಕೊಂಡಿದ್ದಾರೆ. ಅದೇ ಕಾರಣಕ್ಕಾಗಿ ದಾನಿಗಳನ್ನು ಹುಡುಕಿ ಅವರಿಂದ ವೆಂಟಿಲೇಟರ್, ಆಕ್ಸಿಜನ್ ಸಿಲಿಂಡರ್, ಕಾನ್ಸಂಟ್ರೇಟರ್ಗಳನ್ನು ಸೋಂಕಿತರಿಗಾಗಿ ದಾನ ಮಾಡಿಸುತ್ತಿದ್ದಾರೆ. ಇನ್ನು ಈ ಕಾರ್ಯವನ್ನ ತಿಳಿಯುತ್ತಿದ್ದಂತೆಯೇ ಕೆಲವರು ಸ್ವಯಂಪ್ರೇರಿತರಾಗಿ ಕೋವಿಡ್ ಆಸ್ಪತ್ರೆಯ ಸೇವೆಗಾಗಿಧಾವಿಸುತ್ತಿದ್ದಾರೆ.

ಮಠದ ಮಹಾಸ್ವಾಮಿ ಆಸ್ಪತ್ರೆಯಲ್ಲಿ ಕಸ ಗುಡಿಸಿದ್ದು ಯಾಕೆ?
ನಾವೆಲ್ಲರು ನೋಡಿದ ಹಾಗೆ ದಾನಿಗಳು ಬೇಕಾದ ಸಹಾಯ ಮಾಡಿ ಸುಮ್ಮನಾಗಿ ಬಿಡುತ್ತಾರೆ. ಆದ್ರೆ ಗವಿಸಿದ್ದೇಶ್ವರ ಮಹಾ ಸ್ವಾಮಿಗಳು ಹಾಗೆ ಮಾಡಲಿಲ್ಲ. ಅವರು ತಮ್ಮ ಮಠದ ಆವರಣವನ್ನು ಕೋವಿಡ್ ಆಸ್ಪತ್ರೆಗಾಗಿ ಬಿಟ್ಟುಕೊಟ್ಟಿದ್ದಲ್ಲದೇ ತಾವೇ ಸ್ವತಃ ಮುಂದೆ ನಿಂತು ಸೋಂಕಿತರ ಕಾಳಜಿ ವಹಿಸುತ್ತಿದ್ದಾರೆ. ಅದಕ್ಕೆ ಸಾಕ್ಷಿ ಎಂಬಂತೆ ಖುದ್ದು ಸ್ವಾಮಿಜಿಗಳೇ ಆಸ್ಪತ್ರೆಗೆ ಭೇಟಿ ಕೊಟ್ಟು ಸ್ವಚ್ಚತೆ ಬಗ್ಗೆ ಹೆಚ್ಚು ಗಮನ ಕೊಡುವಂತೆ ಸಿಬ್ಬಂದಿಗೆ ಸೂಚಿಸಿದ್ದಾರೆ. ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಅವರೇ ಕೋವಿಡ್ ಆಸ್ಪತ್ರೆಯ ಸುತ್ತ ಮುತ್ತ ಕಸ ಗುಡಿಸಿ ಸ್ವಚ್ಛವಾಗಿ ಇರುವಂತೆ ನೋಡಿಕೊಳ್ಳುತ್ತಿದ್ದಾರೆ.

ಗವಿ ಸಿದ್ದೇಶ್ವರ ಮಹಾ ಸ್ವಾಮಿಗಳು ಕೇವಲ ಸ್ವಚ್ಛತೆ ಕಡೆ ಮಾತ್ರ ಗಮನ ಹರಿಸಿಲ್ಲ ಅವರೇ ಕುದ್ದು ಕಾಳಜಿಯನ್ನ ವಹಿಸುತ್ತಿದ್ದಾರೆ. ಪ್ರತಿಯೊಬ್ಬ ಸೋಂಕಿತರ ಆರೋಗ್ಯದ ಬಗ್ಗೆ ಹೆಚ್ಚು ನಿಗಾ ವಹಿಸುತ್ತಿದ್ದಾರೆ. ಇನ್ನು ಕೋವಿಡ್ ಆಸ್ಪತ್ರೆಯಲ್ಲಿ 100 ಹಾಸಿಗೆ ಹಾಗೂ ವಿದ್ಯಾರ್ಥಿನಿಯರ ವಸತಿ ನಿಲಯದ ಕೋವಿಡ್ ಕೇಂದ್ರದಲ್ಲಿ 200 ಹಾಸಿಗೆಗಳ ವ್ಯವಸ್ಥೆ ಮಾಡಲಾಗಿದೆ. ಇಲ್ಲಿಯವರೆಗೆ ಈ ಆಸ್ಪತ್ರೆಯಲ್ಲಿ 110 ಮಂದಿ ದಾಖಲಾಗಿದೆ ಚಿಕಿತ್ಸೆಯನ್ನ ಪಡೆದುಕೊಂಡಿದ್ದಾರೆ.

ಸ್ವಾಮಿಜಿಗಳು ಮಾಡಿದ ಕಾರ್ಯ ಎಲ್ಲರಿಗೂ ಮಾದರಿ ಆಗಿದೆ ಅಂದ್ರೆ ತಪ್ಪಾಗೋದಿಲ್ಲ. ಜಿಲ್ಲಾಡಳಿತದ ಸಹಯೋಗದೊಂದಿಗೆ ನಡೆಯುತ್ತಿರೊ ಆಸ್ಪತ್ರೆ ಇದಾಗಿದೆ. ಇಲ್ಲಿ 110 ಸೋಂಕಿತರನ್ನ ದಾಖಲಿಸಿ ಚಿಕಿತ್ಸೆಯನ್ನ ನೀಡಲಾಗುತ್ತಿದೆ. ಕೋವಿಡ್​​ಗೆ ಸಂಬಂಧ ಪಟ್ಟಂತೆ ಚಿಕಿತ್ಸೆ ಬಿಟ್ಟು ಇಲ್ಲಿ ಬೇರೆ ರೀತಿಯ ಚಟುವಟಿಕೆಗಳನ್ನ ಕೂಡ ಮಾಡಿಸಲಾಗುತ್ತೆ.

ಹೈಟಕ್ ಅಲ್ಲ.. ಎಲ್ಲಾ ಸೌಲಭ್ಯಗಳೂ ಲಭ್ಯ
ಇಲ್ಲಿ ವೈದ್ಯರ ನಿರಂತರ ಶ್ರಮ, ಶ್ರೀಗಳ ಮುತುವರ್ಜಿ ಎರಡು ಒಟ್ಟಿಗೆ ಕೆಲಸ ಮಾಡ್ತಾ ಇದೆ. ಹೀಗಾಗಿ ಸೋಂಕಿತರು ಇಲ್ಲಿಂದ ನೆಮ್ಮದಿಯಾಗಿ ಗುಣಮುಖರಾಗಿ ವಾಪಸ್ ಆಗ್ತಾ ಇದಾರೆ. ಇಲ್ಲಿಗೆ ಸೋಂಕಿತರನ್ನು ದಾಖಲಿಸಿದರೆ ಕುಟುಂಬದವರಿಗೂ ಕೂಡ ಅಷ್ಟರಮಟ್ಟಿಗೆ ನಿಟ್ಟುಸಿರು ಬಿಡುವಂತಾಗಿದೆ. ಬಹುಶಃ ಹೈಟೆಕ್ ಆಸ್ಪತ್ರೆ ಅಲ್ಲದದಿದ್ರೂ ಸಾಮಾನ್ಯ ಆಸ್ಪತ್ರೆಯಲ್ಲಿ ಸಿಗುವ ಎಲ್ಲಾ ಸೌಲಭ್ಯಗಳು ಇಲ್ಲಿ ಸಿಗುವಂತೆ ನೋಡಿಕೊಳ್ಳಲಾಗ್ತಾ ಇದೆ. ಇಲ್ಲಿ ಬಂದು ಮಾನಸಿಕವಾಗಿಯೂ ಗಟ್ಟಿಯಾಗಿ, ಕೊರೊನಾವನ್ನು ಗೆಲ್ಲುತ್ತಿದ್ದಾರೆ ಸೋಂಕಿತರು.

ಗವಿಸಿದ್ಧೇಶ್ವರ ಸ್ವಾಮಿಗಳು ನಿಜಕ್ಕೂ ಮಾದರಿ
ಕರ್ನಾಟಕದಲ್ಲಿ ಮಠ ಮಾನ್ಯಗಳು ಸಮಾಜ ಸೇವೆಯಲ್ಲಿ, ಅಕ್ಷರ-ಅನ್ನ ದಾಸೋಹದಲ್ಲಿ ವಿಶ್ವಕ್ಕೇ ಮಾದರಿ. ಇಲ್ಲಿನ ಮಠಗಳು ಮಾಡುತ್ತಿರುವ ಕೆಲಸ ಯಾವ ಸರ್ಕಾರವೂ ಮಾಡಲು ಆಗಲ್ಲ. ಅದಕ್ಕೆ ನಮ್ಮ ಕರ್ನಾಟಕದ ಹತ್ತು ಹಲವು ಮಠಗಳನ್ನ ಉದಾಹರಣೆ ಕೊಡಬಹುದು. ಈ ಕೊರೊನಾ ಸಂಕಷ್ಟ ಕಾಲದಲ್ಲೂ ಹಲವು ಮಠಗಳ ಸ್ವಾಮೀಜಿಗಳು ನೆರವು ನೀಡ್ತಾನೇ ಇದ್ದಾರೆ. ಹೀಗೆ ನೇರವಾಗಿ ಕೊರೊನಾದಿಂದ ಸೋಂಕಿತರನ್ನು ಕಾಪಾಡಲು ತಾವೇ ಖುದ್ದಾಗಿ ಬಂದು ನಿಂತ ಗವಿಸಿದ್ಧೇಶ್ವರ ಸ್ವಾಮೀಜಿಗಳು ನಿಜಕ್ಕೂ ಮಾದರಿ.

The post ಕೊರೊನಾ ವಿರುದ್ಧ ಹೋರಾಟಕ್ಕೆ ನಿಂತ ಗವಿಸಿದ್ದೇಶ್ವರ ಮಠ appeared first on News First Kannada.

Source: newsfirstlive.com

Source link