ದೇಶದ ಭದ್ರತೆಗಾಗಿ ವೈರಿಗಳ ಮಟ್ಟಹಾಕುವಲ್ಲಿ ಡಿಆರ್​ಡಿಓ ಮುಂಚೂಣಿಯಲ್ಲಿದೆ. ಈಗ ಕಣ್ಣಿಗೆ ಕಾಣದ ವೈರಿ ಕೊರೊನಾ ಹುಟ್ಟಡಗಿಸಲು ಡಿಆರ್​ಡಿಓ ಕೊಟ್ಟ ಕೊಡುಗೆ ಅತ್ಯಂತ ಮಹತ್ವದ್ದಾಗಿದೆ. ಭಾರತದ ರಕ್ಷಣಾ ಕ್ಷೇತ್ರದಲ್ಲಿ ಅತ್ಯುನ್ನತ ಸ್ಥಾನ ಹೊಂದಿರುವ ಡಿಆರ್​ಡಿಓ ಈಗ ಇನ್ನೊಂದು ಹೆಜ್ಜೆ ಮುಂದೆ ಹೋಗಿ ಕೊರೊನಾ ವಿರುದ್ಧದ ರಾಮಬಾಣವನ್ನು ಅಭಿವೃದ್ಧಿಪಡಿಸಿ ಬಿಡುಗಡೆ ಮಾಡಿದೆ.

ಕೊರೊನಾ ವಿರುದ್ಧ ಡಿಆರ್​ಡಿಓ ರಾಮಬಾಣ ಪ್ರಯೋಗ
ಕೊರೊನಾ ಸೋಂಕಿತರಿಗೆ ಸಂಜೀವಿನಿಯಾಗುವ ಮೆಡಿಸಿನ್

ದೇಶ ಅತ್ಯಂತ ವಿಷಮ ಗಳಿಗೆಯನ್ನು ಎದುರಿಸುತ್ತಿದೆ. ಇಂಥ ವಿಷಮ ವೇಳೆಯಲ್ಲಿ ಭಾರತದ ಡಿಫೆನ್ಸ್ ರೀಸರ್ಚ್ ಮತ್ತು ಡೆವಲಪ್​ಮೆಂಟ್ ಆರ್ಗನೈಸೇಷನ್ ಬೆಳ್ಳಿ ಕಿರಣದಂತೆ ಗೋಚರಿಸಿದೆ. ಡಿಆರ್​ಡಿಓನ ನ್ಯೂಕ್ಲಿಯರ್ ಮತ್ತು ಅಲ್ಲೈಡ್ ಸೈನ್ಸಸ್, ಡಾ.ರೆಡ್ಡೀಸ್ ಲ್ಯಾಬ್ ಜೊತೆ ಸೇರಿ ಹೊಸ ಔಷಧಿಯನ್ನು ಅಭಿವೃದ್ಧಿಪಡಿಸಿದೆ. ಈ ಔಷಧಿ ಸೋಂಕಿತರನ್ನು ವೇಗವಾಗಿ ಗುಣಮುಖಗೊಳಿಸುವುದರ ಜೊತೆಗೆ, ಕೃತಕ ಆಕ್ಸಿಜನ್ ಪಡೆಯುವ ಹಂತಕ್ಕೆ ಹೋಗದಂತೆ ಕೂಡ ತಡೆಯುವುದು ಪ್ರಯೋಗದಲ್ಲಿ ಕಂಡು ಬಂದಿದೆ. ಇಂತದ್ದೊಂದು ಔಷಧ ಇದೀಗ ರಿಲೀಸ್ ಆಗಿದ್ದು ಸೋಂಕಿತರ ಚಿಕಿತ್ಸೆಗೆ ಲಭ್ಯವಾಗುತ್ತಿದೆ.

2-ಡಿ ಆಕ್ಸಿ-ಡಿ-ಗ್ಲೂಕೋಸ್ (2-ಡಿಜಿ) ಹೆಸರಿನ ಔಷಧವನ್ನು ಡಿಆರ್​ಡಿಓ ಅಭಿವೃದ್ಧಿಪಡಿಸಿದೆ. ಈ ಔಷಧವನ್ನ ಸುಲಭವಾಗಿ ತಯಾರಿಸಬಹುದಾಗಿದೆ ಎಂದು ಡಿಆರ್​ಡಿಓ ಹೇಳಿದೆ. ಹೀಗಾಗಿ ದೊಡ್ಡ ಪ್ರಮಾಣದಲ್ಲಿ ಅತ್ಯಂತ ಸುಲಭವಾಗಿ ಇದನ್ನು ತಯಾರಿಸಬಹುದು. ಇದು ಪೌಡರ್ ರೂಪದಲ್ಲಿದ್ದು ನೀರಿನೊಂದಿಗೆ ಮಿಶ್ರಣ ಮಾಡಿ ಕುಡಿಯಬೇಕು. ಮಧ್ಯಮ ಮತ್ತು ಗಂಭೀರ ಸೋಂಕಿತರಿಗೆ ಇದನ್ನು ನೀಡಬೇಕಾಗಿದ್ದು, ಅಂಥವರನ್ನು ವೇಗವಾಗಿ ಗುಣಮುಖರನ್ನಾಗಿಸುತ್ತೆ ಅನ್ನೋದು ಕೂಡ ತಿಳಿದುಬಂದಿದೆ. 2-ಡಿಜಿಯೊಂದಿಗೆ ಚಿಕಿತ್ಸೆ ಪಡೆದ ಕೊರೊನಾ ರೋಗಿಗಳ ಪೈಕಿ ಹೆಚ್ಚಿನ ಮಂದಿಗೆ ಆರ್​​​ಟಿ-ಪಿಸಿಆರ್ ವರದಿ ನೆಗೆಟಿವ್ ತೋರಿಸುತ್ತಿದೆ. ಹೀಗಾಗಿ ಈ 2-ಡಿಜಿಯೊಂದಿಗೆ ಚಿಕಿತ್ಸೆ ಪಡೆದ ರೋಗಿಗಳು ಸ್ಟ್ಯಾಂಡರ್ಡ್ ಆಫ್ ಕೇರ್​ಗಿಂತ ವೇಗವಾಗಿ ಗುಣಮುಖರಾಗಿದ್ದು ತಿಳಿದು ಬಂದಿದೆ.

ಮಕ್ಕಳಿಗೂ ಜೀವಾಮೃತವಾಗಲಿದ್ಯಂತೆ ಈ ಮೆಡಿಸಿನ್
ವೈದ್ಯರ ಸಲಹೆ ಮೇರೆಗೆ ಮೆಡಿಸಿನ್ ಬಳಸಲು ಸಲಹೆ
ಪೋಷಕರಿಗೂ ನೆಮ್ಮದಿ ತಂದ ರಕ್ಷಣಾ ಅಭಿವೃದ್ಧಿ ಸಂಸ್ಥೆ

ಮೊದಲನೇ ಅಲೆಯಲ್ಲಿ ವೃದ್ಧರನ್ನು ಟಾರ್ಗೆಟ್ ಮಾಡಿದ್ದ ಕೊರೊನಾ ಸೋಂಕು, ಈಗ ಎರಡನೇ ಅಲೆಯಲ್ಲಿ ಯುವಕರನ್ನು ತೀವ್ರವಾಗಿ ಕಾಡುತ್ತಿದೆ ಅಂತಾ ಹಲವು ತಜ್ಞರು ಅಭಿಪ್ರಾಯಪಡ್ತಿದ್ದಾರೆ. ಅದೇ ಇನ್ನೊಂದೆಡೆ ಭಾರತಕ್ಕೆ ಮೂರನೇ ಕೊರೊನಾ ಅಲೆ ಕೂಡ ಅಪ್ಪಳಿಸಲಿದೆ ಅಂತ ತಜ್ಞರು ಈಗಾಗಲೇ ಆತಂಕಪಡ್ತಿದ್ದಾರೆ. ಆತಂಕಕಾರಿ ವಿಚಾರ ಅಂದ್ರೆ ಮೂರನೇ ಅಲೆಯಲ್ಲಿ ಕೊರೊನಾ ಮಕ್ಕಳನ್ನು ಹೆಚ್ಚು ಭಾದಿಸಬಹುದು ಎನ್ನಲಾಗ್ತಿದೆ. ಹೀಗಾಗಿ ಪೋಷಕರಿಗೂ ಡಿಆರ್​ಡಿಓ 2-ಡಿ ಆಕ್ಸಿ-ಡಿ-ಗ್ಲೂಕೋಸ್ ಮೂಲಕ ನೆಮ್ಮದಿಯನ್ನು ತಂದಿದೆ.

ಹೇಗೆ ಕೆಲಸ ಮಾಡುತ್ತೆ ಈ 2-ಡಿ ಆಕ್ಸಿ-ಡಿ-ಗ್ಲೂಕೋಸ್?
ಇದರಿಂದ ಕೊರೊನಾ ಕಂಟ್ರೋಲ್ ಆಗೋದಾದ್ರೂ ಹೇಗೆ?

ದೇಶದಲ್ಲಿ ಕೊರೊನಾ ತಡೆಗಟ್ಟುವ ಉದ್ದೇಶದಿಂದ ಒಂದೆಡೆ ವ್ಯಾಕ್ಸಿನೇಷನ್ ಆರಂಭವಾಗಿದೆ. ಈಗಾಗಲೇ ನೀಡಲಾಗುತ್ತಿರುವ ಕೋವಿಶೀಲ್ಡ್ ಹಾಗೂ ಕೊವ್ಯಾಕ್ಸಿನ್​ ಜೊತೆಗೆ ಇನ್ನು ಕೆಲವೇ ದಿನಗಳಲ್ಲಿ ಸ್ಫುಟ್ನಿಕ್ ವಿ ಹಾಗೂ ಸ್ಫುಟ್ನಿಕ್ ಲೈಟ್ ಕೂಡ ಸೇರುವ ನಿರೀಕ್ಷೆ ಇದೆ. ಮತ್ತೊಂದೆಡೆ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡೋದಕ್ಕಾಗಿ ಭಾರತದಲ್ಲೇ ಉಪಸ್ಥಿತವಿರುವ ಝೈಡಸ್ ಕ್ಯಾಡಿಲ್ಲಾ ಕೂಡ ಇಂಜೆಕ್ಷನ್ ತಯಾರಿಸಿದ್ದು ಅದೂ ಕೆಲವೇ ದಿನಗಳಲ್ಲಿ ಮಾರುಕಟ್ಟೆಗೆ ಬರಹುದಾಗಿದೆ. ಜೊತೆಗೆ ಅಮೆರಿಕಾದ ಆ್ಯಂಟಿಬಾಡಿ ಕಾಕ್​ಟೆಲ್​ಗೂ ದೇಶದಲ್ಲಿ ಅನುಮತಿ ನೀಡಲಾಗಿದ್ದು ಇದೂ ಕೂಡ ಸೋಂಕಿತರನ್ನು ವೇಗವಾಗಿ ಗುಣಮುಖರನ್ನಾಗಿಸುವ ಗುಣ ಹೊಂದಿದೆ ಅನ್ನೋದನ್ನು ತಜ್ಞರು ಹೇಳ್ತಾರೆ. ಈ ನಡುವೆ ಡಿಆರ್​ಡಿಓ ಕೂಡ ಐಸಿಂಗ್ ಆನ್​ ದಿ ಕೇಕ್ ಅನ್ನೋ ಹಾಗೆ 2-ಡಿ ಆಕ್ಸಿ-ಡಿ-ಗ್ಲೂಕೋಸ್ ಔಷಧವನ್ನು ಬಿಡುಗಡೆ ಮಾಡಿದೆ.

ಡಿಆರ್​ಡಿಓ ಅಭಿವೃದ್ಧಿಪಡಿಸಿರೋ 2-ಡಿ ಆಕ್ಸಿ-ಡಿ-ಗ್ಲೂಕೋಸ್ ಔಷಧ ಪುಡಿರೂಪದಲ್ಲಿ ಇರುತ್ತೆ. ಇದನ್ನು ಸಾಮಾನ್ಯ ಗ್ಲುಕೋಸ್​ನಂತೆಯೇ ಚಿಕ್ಕ ಚಿಕ್ಕ ಪ್ಯಾಕೇಟ್​ಗಳಲ್ಲಿ ಇಡಲಾಗುತ್ತೆ. ಈ ಗ್ಲುಕೋಸ್​ ರೀತಿಯ ಪುಡಿಯನ್ನು ನೀರಿನಲ್ಲಿ ಮಿಶ್ರಣ ಮಾಡಿ ವೈದ್ಯರು ತಿಳಿಸುವಂತೆ ಕುಡಿಯಬೇಕಾಗುತ್ತದೆ. ದೇಹವನ್ನು ಪ್ರವೇಶಿಸಿದ ಬಳಿಕ 2-ಡಿ ಆಕ್ಸಿ-ಡಿ-ಗ್ಲೂಕೋಸ್ ಔಷಧ ಮೊದಲು ಕೊರೊನಾ ವೈರಸ್​ ಬೆಳವಣಿಗೆಯನ್ನು ತಡೆಗಟ್ಟುತ್ತದೆ. ಬಳಿಕ ಕೊರೊನಾ ವೈರಸ್ ಆಕ್ರಮಿಸಿಕೊಂಡಿರುವ ಜೀವಕೋಶಗಳನ್ನು ಪ್ರವೇಶಿಸುತ್ತದೆ. ಅಲ್ಲಿರುವ ಕೊರೊನಾ ವೈರಸ್​ ಅನ್ನು ಇಲ್ಲವಾಗಿಸಿ ಆಯಾ ಜೀವಕೋಶಗಳಿಗೆ ಜೀವದಾನ ನೀಡುತ್ತದೆ. ಈ ಮೂಲಕ ಮನುಷ್ಯನ ಜೀವನವನ್ನೂ ಉಳಿಸುತ್ತೆ. ಜೊತೆಗೆ ಬೇಗ ಗುಣಮುಖರನ್ನಾಗಿಸುತ್ತೆ ಕೂಡ.

ಗೇಮ್ ಚೇಂಜರ್ ಆಗಲಿದ್ಯಾ ಡಿಆರ್ಡಿಓ ಜೀವಾಮೃತ?
ಕೊರೊನಾ ಕಂಟ್ರೋಲ್ ಮಾಡುವಲ್ಲಿ ಮುಂಚೂಣಿಯಲ್ಲಿರುತ್ತಾ?

ಈಗ ಬರ್ತಿರೋ ಔಷಧಿ ವಿಶ್ವವೇ ಭಾರತದತ್ತ ತಿರುಗಿನೋಡುವಂತೆ ಮಾಡೋದ್ರಲ್ಲಿ ಅನುಮಾನವೇ ಇಲ್ಲ. ಬಹುಶಃ ಇದು ಗೇಮ್ ಚೇಂಜರ್ ಆಗಿಬಿಡಬಹುದು ಅಂತಾನೇ ಹೇಳಲಾಗ್ತಿದೆ. ಕೊರೊನಾ ಸೋಂಕಿತರಿಗೆ ರೋಗ ಉಲ್ಭಣಗೊಳ್ಳುವ ಲಕ್ಷಣ ಕಂಡುಬಂದ ತಕ್ಷಣ ಈ ಔಷಧ ಬಳಕೆ ಮಾಡಿದ್ರೆ 24 ಗಂಟೆ ಅಥವಾ 48 ಗಂಟೆಯಲ್ಲೇ ಹೆಚ್ಚು ಕಡಿಮೆ ಕಂಟ್ರೋಲ್ ಆಗಿಬಿಡುತ್ತಂತೆ.

ಅಪಾಯಕಾರಿ ಸ್ಥಿತಿಯಿಂದ ಹೊರಬರುವಂತೆ ಮಾಡುತ್ತಾ?
ರೋಗ ಉಲ್ಭಣಗೊಂಡವರು ಬೇಗ ಚೇತರಿಸಿಕೊಳ್ತಾರಾ?

ಆಸ್ಪತ್ರೆಗೆ ದಾಖಲಾಗುವ ರೋಗಿಗಳಿಗೆ ಸೋಂಕು ಉಲ್ಭಣಗೊಳ್ಳದಿರಲೆಂದು ಇದನ್ನು ಬಳಕೆ ಮಾಡಬಹುದು ಅಂತ ಹೇಳಲಾಗ್ತಾ ಇದೆ. ಈ ಮೆಡಿಸಿನ್ ತೆಗೆದುಕೊಂಡ್ರೆ ಅಪಾಯ ತಪ್ಪುತ್ತೆ ಅನ್ನೋ ಭರವಸೆ ಸಿಕ್ಕಿದೆ. ಅಲ್ಲದೇ ಸೋಂಕಿನಿಂದಾಗಿ ಆಮ್ಲಜನಕ ಸಮಸ್ಯೆ ಎದುರಿಸುತ್ತಿರುವವರಿಗೂ ಅದರ ಅವಲಂಬನೆ ಕಡಿಮೆಯಾಗುವಂತೆ ಮಾಡಲಿದೆ ಅನ್ನೋದು ಕ್ಲಿನಿಕಲ್ ಟ್ರಯಲ್​ ವೇಳೆ ತಿಳಿದುಬಂದಿತ್ತೆಂದು ಅಧಿಕೃತವಾದ ಡಿಆರ್​ಡಿಓ ಪ್ರಕಟಿಸಿದೆ. ಡಿಆರ್‌ಡಿಓ ಪ್ರಕಾರ, 2-ಡಿಜಿಯೊಂದಿಗೆ ಚಿಕಿತ್ಸೆ ಪಡೆದ ರೋಗಿಗಳ ಮೇಲೆ ಎಸ್‌ಒಸಿ ಅಂದ್ರೆ ಸ್ಟ್ಯಾಂಡರ್ಡ್ ಆಫ್ ಕೇರ್ ಗಿಂತ ವೇಗವಾಗಿ ಪರಿಣಾಮ ಬೀರುತ್ತದೆ ಅಂತಿದ್ದಾರೆ.

ಈ ಮೂಲಕ ಇನ್ಮುಂದೆ ಆಕ್ಸಿಜನ್ ಗಾಗಿ ಪರದಾಟ, ರೆಮ್ಡಿಸಿವಿರ್ ಗಾಗಿ ಪರದಾಟ ತಪ್ಪಬಹುದು ಅಂತ ಅಂದಾಜು ಮಾಡಲಾಗ್ತಾ ಇದೆ. ಈ ಪರಿಣಾಮಕಾರಿ ಔಷಧ ಹಂತ ಹಂತವಾಗಿ ಸಿದ್ಧವಾಗಿ ಎಲ್ಲಾ ಕಡೆ ಸಿಗುವಂತೆ ಆಗುತ್ತೆ. ಈ ಮೆಡಿಸಿನ್ ನಿಂದ ಯಾವುದೇ ಅಡ್ಡ ಪರಿಣಾಮಗಳೂ ಕೂಡ ಆಗಲ್ಲ ಅನ್ನೋದು ಸಂಶೋಧನೆಯಿಂದ ಖಚಿತವಾಗಿದೆ. ರಕ್ಷಣಾ ಕ್ಷೇತ್ರದಲ್ಲಿ ಅಭೂತಪೂರ್ವ ಸಾಧನೆ ಮಾಡಿರುವ ಭಾರತೀಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಇದೀಗ ಆರೋಗ್ಯ ಕ್ಷೇತ್ರದಲ್ಲೂ ಮಹತ್ತರ ಸಾಧನೆ ಮಾಡಿರುವುದು ಹೆಮ್ಮೆಯ ವಿಚಾರ.

ಕೊರೊನಾ ಅಬ್ಬರಿಸುತ್ತಿರುವ ಇಂತಹ ತುರ್ತು ಸಂದರ್ಭದಲ್ಲಿ ಭಾರತೀಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ನಿಜಕ್ಕೂ ಮಹತ್ವದ ಕೊಡುಗೆ ನೀಡಿದೆ. ಇದು ಕೊರೊನಾ ಸೋಂಕಿತರನ್ನು ರಕ್ಷಣೆ ಮಾಡುವಲ್ಲಿ ಅತ್ಯಂತ ಸಹಕಾರಿಯಾಗಲಿದೆ. ಇದರಿಂದಾಗಿ ವೈದ್ಯಕೀಯ ವಲಯಕ್ಕೂ ಮತ್ತಷ್ಟು ಬಲ ಬಂದಂತಾಗಿದೆ.

The post ಕೊರೊನಾ ವಿರುದ್ಧ ಹೋರಾಟದಲ್ಲಿ ಗೇಮ್ ಚೇಂಜರ್ ಆಗಲಿದ್ಯಾ DRDO ಜೀವಾಮೃತ? appeared first on News First Kannada.

Source: newsfirstlive.com

Source link