ಕೊರೊನಾ ಇದುವರೆಗೆ ನಿಖರವಾದ ಚಿಕಿತ್ಸೆ ಅಂತ ಇಲ್ಲ. ಆದ್ರೆ ಒಂದಿಷ್ಟು ಮೆಡಿಸಿನ್ ಕಾಂಬಿನೇಷನ್ ಮಾಡಿ ಟ್ರೀಟ್ ಮೆಂಟ್ ಕೊಡಲಾಗ್ತಾ ಇದೆ. ಚಿಕಿತ್ಸಾ ವಿಧಾನ ಮತ್ತು ಕೊರೊನಾಗೆ ನಿಖರವಾದ ಪ್ರತ್ಯೇಕ ಮೆಡಿಸಿನ್ ಬಗ್ಗೆ ಸಂಶೋಧನೆಗಳು ಮುಂದುವರಿದಿವೆ. ಈಗ ಮತ್ತೊಂದು ರೀತಿಯ ಸುಲಭ ಮತ್ತು ಅಷ್ಟೇ ಪರಿಣಾಮಕಾರಿ ಚಿಕಿತ್ಸಾ ವಿಧಾನದ ಬಗ್ಗೆ ಒಂದಿಷ್ಟು ಡಿಟೇಲ್ ಕೊಡ್ತೀವಿ.

ಕೊರೊನಾ ಸಮರದಲ್ಲಿ ಅದೆಷ್ಟು ಅಸ್ತ್ರಗಳನ್ನು ಪ್ರಯೋಗ ಮಾಡಿದ್ರೂ ಕಡಿಮೆನೇ ಅನ್ನೋ ತರಾ ಆಗಿಬಿಟ್ಟಿದೆ. ಕೊರೊನಾ ಬಂದಾಗ ಇದಕ್ಯಾವ ರೀತಿ ಚಿಕಿತ್ಸೆ ಕೊಡಬೇಕು ಅನ್ನೋದೇ ಗೊಂದಲ ಮೂಡಿಸಿತ್ತು. ಅಷ್ಟೇ ಅಲ್ಲ, ಒಬ್ಬೊಬ್ಬರು ಒಂದೊಂದು ರೀತಿಯ ಸಲಹೆ ಕೊಡ್ತಾ ಇದ್ರು. ಇದೊಂದು ಸಾಂಕ್ರಾಮಿಕ ರೋಗವಾಗಿದ್ದರಿಂದ ಸರ್ಕಾರವೇ ಒಂದು ಮಾರ್ಗಸೂಚಿ ಹೊರಡಿಸಿತ್ತು. ಸಾಮಾನ್ಯ ಲಕ್ಷಣ ಇದ್ದವರು,ಲಕ್ಷಣ ಇಲ್ಲದೇ ಇದ್ದ ಸೋಂಕಿತರು,ರೋಗ ಉಲ್ಭಣಿಿಸಿದ ಸೋಂಕಿತರಿಗೆ ಯಾವ ರೀತಿ ಚಿಕಿತ್ಸೆ ನೀಡಬೇಕೆಂದು ಮಾರ್ಗೂಸೂಚಿಯೇ ಇದೆ. ಆದ್ರೆ ಇದನ್ನೆಲ್ಲವನ್ನೂ ಮೀರಿ ಕೊರೊನಾ ಮನುಷ್ಯನ ಜೀವ ತೆಗೆಯುತ್ತಿದೆ. ಅದೇನೇ ಚಿಕಿತ್ಸೆ ನೀಡಿದರೂ ಲಕ್ಷಾಂತರ ಜನ ಈವರೆಗೆ ಪ್ರಾಣ ಕಳೆದುಕೊಂಡಿದ್ದಾರೆ. ವಿಶ್ವದಲ್ಲಿ 34 ಲಕ್ಷ ಜನ ಮೃತಪಟ್ಟಿದ್ದಾರೆ ಅಂದರೆ ಇದೆಷ್ಟು ಮಾರಣಾಂತಿಕ ವೈರಸ್ ಆಗಿರಬೇಕು. ಹೀಗಾಗಿ ಈ ಕೊರೊನಾ ಗುಣಪಡಿಸೋದಕ್ಕೆ ಅಂತಾನೇ ಒಂದು ಪ್ರತ್ಯೇಕವಾದ ಮೆಡಿಸಿನ್ ಕಂಡು ಹಿಡಿಯಬೇಕೆಂದು ಎಲ್ಲಾ ದೇಶಗಳೂ ಪ್ರಯತ್ನ ಮಾಡ್ತಾನೇ ಇದಾವೆ. ಸದ್ಯಕ್ಕೆ ಬೇರೆ ಬೇರೆ ರೀತಿಯ ಮೆಡಿಸಿನ್ ಗಳು ವರ್ಕೌಟ್ ಆಗ್ತಾ ಇದ್ರೂ ಒಂದು ನಿಶ್ಚಿತವಾದ ಔಷಧಿ ಕಂಡು ಹಿಡಿಯುವ ಪ್ರಯತ್ನ ಮುಂದುವರೆದಿದೆ.

ಎರಡನೇ ಅಲೆ ಬಂದಾಗ ಭಾರತದಲ್ಲಂತೂ ಕೊರೊನಾ ಸಿಕ್ಕಾಪಟ್ಟೆ ಆಘಾತ ಕೊಟ್ಟು ಬಿಟ್ಟಿತ್ತು. ಉಸಿರಾಟದ ಸಮಸ್ಯೆಯಿಂದ ಆಕ್ಸಿಜನ್ ಗಾಗಿ ಪರದಾಡುವಂತಾಯ್ತು. ಅದಾದ ಬಳಿಕ ರೆಮ್ ಡಿಸಿವಿರ್ ಇಂಜೆಕ್ಷನ್ ಗೆ ಬೇಡಿಕೆ ಹೆಚ್ಚಾಯ್ತು. ಇಷ್ಟೆಲ್ಲಾ ಆಯ್ತು ಹೇಗೋ ಒಂದು ದಾರಿ ಸಿಗ್ತು ಅಂದುಕೊಳ್ಳುವಷ್ಟರಲ್ಲಿ ಒಂದೊಂದೇ ಫಂಗಸ್ ಕಾಟ ಶುರುವಾಯ್ತು. ಇದರ ನಡುವೆ, ಡಿಆರ್ ಡಿಒ ಅಭಿವೃದ್ಧಿಪಡಿಸಿದ ಮೆಡಿಸಿನ್ ಮತ್ತು ಅಮೆರಿಕಾ ಮೂಲದ ಕಂಪನಿಯ ಕಾಕ್ ಟೇಲ್ ಮೆಡಿಸಿನ್ ಕಿಟ್ ಕೂಡ ಬಂದಿದೆ. ಇವೆಲ್ಲಾ ಅಸ್ತ್ರಗಳನ್ನು ಬಳಸಿ ಹೇಗಾದರೂ ಕೊರೊನಾ ವಿರುದ್ಧದ ಸಮರದಲ್ಲಿ ಗೆಲ್ಲಬೇಕೆಂಬುದೇ ಜಗತ್ತಿನ ಎಲ್ಲಾ ದೇಶಗಳ ಹಂಬಲ. ಇಂತಹ ಹಂಬಲ, ಗುರಿಯ ಫಲವಾಗಿಯೇ ಈಗಾಗಲೇ ವ್ಯಾಕ್ಸಿನೇಷನ್ ಬಂದು ಎಲ್ಲಾ ಕಡೆ ಹಂಚಿಕೆ ಮಾಡಲಾಗ್ತಾ ಇದೆ. ಇದೆಲ್ಲದರ ನಡುವೆ ಈಗ ಇಂಡಿಯಾದಲ್ಲಿ ಕೊರೊನಾ ಸೋಂಕಿತರಿಗೆ ರೋಗ ಉಲ್ಭಣಗೊಂಡ್ರೆ ಅವರ ಪ್ರಾಣ ಉಳಿಸೋದು ಹೇಗೆ ಎಂಬುದರ ಬಗ್ಗೆ ಮತ್ತೊಂದು ಮಹತ್ವದ ಸಂಶೋಧನೆ ನಡೆದಿದೆ. ಅದರ ಫಲಿತಾಂಶ ಕೂಡ ಬಂದಿದ್ದು ಈಗ ಎಲ್ಲಾ ಕಡೆ ಈ ಪ್ರಯೋಗ ಮಾಡಲು ಚಿಂತನೆ ನಡೀತಾ ಇದೆ.

ಈ ಚಿಕಿತ್ಸೆ ಸಕ್ಸಸ್ ಆಗಿಬಿಟ್ರೆ ಆಕ್ಸಿಜನ್ ಪರದಾಟಕ್ಕೆ ಇತಿಶ್ರೀ

ಕೊರೊನಾ ಉಲ್ಭಣವಾಗಿದ್ರೂ ಬದುಕಿಸಿ ಬಿಡುತ್ತೆ ಈ ಚಿಕಿತ್ಸೆ

ಎಲ್ಲವೂ ಅಂದುಕೊಂಡಂತೆ ಆಗಿ ಬಿಟ್ರೆ, ಈ ಚಿಕಿತ್ಸೆಗೆ ಎಲ್ಲಾ ಕಡೆ ಉತ್ತಮ ಫಲಿತಾಂಶ ಲಭ್ಯವಾಗಿಬಿಟ್ರೆ ಖಂಡಿತವಾಗಿಯೂ ಈ ಟ್ರೀಟ್ ಮೆಂಟ್ ಕೊರೊನಾ ಸೋಂಕು ಉಲ್ಭಣಗೊಂಡವರಿಗೆ ಜೀವ ರಕ್ಷಕನಾಗಿ ಬಿಡುತ್ತೆ. ಕೊರೊನಾ ಅದೆಷ್ಟೇ ಉಲ್ಭಣವಾಗಿದ್ರೂ ಜನರ ಪ್ರಾಣವನ್ನು ಉಳಿಸಿ ಬಿಡುತ್ತೆ. ಕೇವಲ ಮೂರ್ನಾಲ್ಕು ದಿನಗಳಲ್ಲೇ ಸೋಂಕು ಉಲ್ಭಣಗೊಂಡವರು ಚೇತರಿಸಿಕೊಳ್ಳುವಂತಾಗಿ ಬಿಡುತ್ತೆ. ಭಾರತದ ತಜ್ಞ ವೈದ್ಯರು ಇಂತದ್ದೊಂದು ಮಾರ್ಗವನ್ನು ಕಂಡು ಕೊಂಡಿದ್ದಾರೆ. ಈಗಾಗಲೇ ದೆಹಲಿ,ಪಾಟ್ನಾ, ಚೆನ್ನೈನಲ್ಲಿ ಇದರ ಪ್ರಯೋಗ ಕೂಡ ನಡೆದಿಯಂತೆ. ಇನ್ಮುಂದೆ ಈ ಪ್ರಯೋಗವನ್ನೂ ರಾಜ್ಯದಲ್ಲಿ ಕೂಡ ನಡೆಸಲು ಚಿಂತನೆ ನಡೆಸಲಾಗಿದೆ.

ಏನದು ಕೊರೊನಾಗೆ ಕಂಡುಕೊಂಡ ಹೊಸ ಚಿಕಿತ್ಸಾ ವಿಧಾನ?

ಕೊರೊನಾ ಸೋಂಕಿತರೆಲ್ಲರಿಗೂ ರೋಗ ಉಲ್ಭಣವಾಗಲ್ಲ. ಆದ್ರೆ ಸೋಂಕು ಹೆಚ್ಚಾಗಿ ವ್ಯಾಪಿಸಿದ್ರೆ ಮತ್ತು ಸರಿಯಾದ ಟೈಮಿಗೆ ಚಿಕಿತ್ಸೆ ಪಡೆದುಕೊಳ್ಳದೇ ಇದ್ರೆ ರೋಗ ಉಲ್ಭಣಿಸಬಹುದು. ಈ ವೇಳೆ ಶ್ವಾಸಕೋಶಕ್ಕೆ ಕೊರೊನಾ ತೀವ್ರತೆರನಾದ ಹಾನಿ ಉಂಟು ಮಾಡಿ ಉಸಿರಾಟದ ಸಮಸ್ಯೆ ಹೆಚ್ಚಾಗುತ್ತದೆ. ಸಹಜವಾಗಿ ಕೃತಕ ಉಸಿರಾಟದ ವ್ಯವಸ್ಥೆ ಮಾಡಲೇಬೇಕಾಗುತ್ತದೆ. ಒಮ್ಮೆ ವೆಂಟಿಲೇಟರ್ ಗೆ ಹೋದ್ರೆ ಕನಿಷ್ಠ ಒಂದು ವಾರ ಅಲ್ಲೇ ಚಿಕಿತ್ಸೆ ಕೊಡಬೇಕಾಗುತ್ತದೆ. ಕೇಸ್ ಗಂಭೀರವಾಗಿದ್ದರೆ 7 ರಿಂದ 14 ದಿನಗಳ ಕಾಲ ಚಿಕಿತ್ಸೆ ಅನಿವಾರ್ಯ.ಈಗ ಎಲ್ಲಾ ಕಡೆ ಸೋಂಕಿತರಿಗೆ ಆಕ್ಸಿಜನ್ ಹೆಚ್ಚು ಬೇಕಾಗ್ತಾ ಇರೋದ್ರಿಂದಾನೇ ಬೇಡಿಕೆಯಂತೂ ಸಿಕ್ಕಾಪಟ್ಟೆ ಹೆಚ್ಚಿದೆ. ಆದರೆ, ಈ ಚಿಕಿತ್ಸಾ ವಿಧಾನದಿಂದ ಈ ಆಕ್ಸಿಜನ್ ಅವಲಂಬನೆಯೂ ಕಡಿಮೆಯಾಗುತ್ತೆ. ಇದೇ ಲೋ ರೇಡಿಯೇಷನ್ ಥೆರಪಿ. ಲಘು ವಿಕಿರಣ ಚಿಕಿತ್ಸೆ. ಸೋಂಕು ಉಲ್ಭಣಿಸಿ ಶ್ವಾಸಕೋಶದ ಸಮಸ್ಯೆ ಎದುರಿಸ್ತಾ ಇರುವವರಿಗೆ ಈ ಚಿಕಿತ್ಸೆ ನೀಡಿದರೆ ಇದು ವೈರಸ್ ಅನ್ನು ನಾಶ ಮಾಡಿ ಆದಷ್ಟು ಬೇಗ ರೋಗಿ ಚೇತರಿಸಿಕೊಳ್ಳುವಂತಾಗುತ್ತದೆ. ಇದರಿಂದ ಎರಡು ಮೂರು ದಿನಗಳಲ್ಲೇ ರೋಗಿ ಚೇತರಿಸಿಕೊಂಡು ನಾರ್ಮಲ್ ಟ್ರೀಟ್ ಮೆಂಟ್ ಗೆ ಸರಿ ಹೋಗುತ್ತಾನೆ.

ಹೇಗಿರುತ್ತೆ ಈ ಲೋ ರೇಡಿಯೇಷನ್ ಥೆರಪಿಯ ವಿಧಾನ?

ಸಾಮಾನ್ಯವಾಗಿ ಈ ಚಿಕಿತ್ಸಾ ವಿಧಾನವನ್ನು ಅನುಸರಿಸುವುದು ಕ್ಯಾನ್ಸರ್ ರೋಗಿಗಳಿಗೆ. ರೇಡಿಯೇಷನ್ ಥರಪಿ ಮೂಲಕ ದೇಹದಲ್ಲಿರುವ ಕ್ಯಾನ್ಸರ್ ಕೋಶಗಳನ್ನು ನಾಶ ಮಾಡಲಾಗುತ್ತದೆ. ಆದರೆ,ಕ್ಯಾನ್ಸರ್ ರೋಗಿಗಳಿಗೆ ಲಘು ವಿಕಿರಣ ಚಿಕಿತ್ಸೆ ಸಾಕಾಗಲ್ಲ. ಹೀಗಾಗಿ ಕ್ಯಾನ್ಸರ್ ಕೋಶಗಳನ್ನು ನಾಶ ಮಾಡಲು 60ರಿಂದ 70 ಗ್ರೇಯ್ ನಷ್ಟು ವಿಕಿರಣ ಹಾಯಿಸಲಾಗುತ್ತದೆ. ಆದರೆ, ಈ ಕೊರೊನಾ ರೋಗಿಗಳಿಗೆ ಇಷ್ಟೊಂದು ಪ್ರಮಾಣದ ವಿಕಿರಣ ಹಾಯಿಸುವ ಅಗತ್ಯತೆ ಇರೋದಿಲ್ಲ. ಬಹಳ ಕಡಿಮೆ ಪ್ರಮಾಣದಲ್ಲಿ ಇದನ್ನು ಬಳಕೆ ಮಾಡಲಾಗುತ್ತೆ. ಕೊರೊನಾಗೆ ಲಘು ವಿಕಿರಣ ಚಿಕಿತ್ಸೆ ಅಂದರೆ 0.5 ಗ್ರೇಯ್ ನಷ್ಟು ಮಾತ್ರ ವಿಕಿರಣವನ್ನು ದೇಹದ ಮೇಲೆ ಹಾಯಿಸಲಾಗುತ್ತದೆ. ಶ್ವಾಸಕೋಶದ ಮೇಲೆ ಈ ಪ್ರಯೋಗ ಮಾಡಿದಾಗ ಅಲ್ಲಿರುವ ಕೊರೊನಾ ವೈರಸ್ ನಾಶವಾಗುತ್ತದೆ. ವೈರಸ್ ನಾಶವಾದ ಬಳಿಕ ನಿಧಾನವಾಗಿ ಶ್ವಾಸಕೋಶದ ತೊಂದರೆಗಳು ಕೂಡ ಮಾಯವಾಗಿ ರೋಗಿ ಚೇತರಿಸಿಕೊಳ್ಳುತ್ತಾನೆ.

ಈ ಲಘು ವಿಕರಣ ಥೆರಪಿಯ ಪ್ರಯೋಗ ಯಶಸ್ವಿಯಾಗ್ತಿದ್ಯಾ?

ದೇಶದ ಕೆಲವೇ ಕೆಲವು ಕಡೆ ಮಾತ್ರ ಇಂತದ್ದೊಂದು ಪ್ರಯೋಗ ನಡೆಸಲಾಗಿದೆ. ಈ ಥೆರಪಿ ಶೇಕಡಾ 90ರಷ್ಟು ಉತ್ತಮ ಫಲಿತಾಂಶ ನೀಡಿದೆ. ಮುಂದೆ ರಾಜ್ಯದಲ್ಲಿಯೂ ಕೆಲವು ಕಡೆ ಈ ಪ್ರಯೋಗ ನಡೆಸಲು ಅನುಮತಿ ಕೋರಲಾಗುತ್ತಿದೆ. ಬಹಳ ಗಂಭೀರವಾದ ರೋಗಿಗಳ ಮೇಲೆ ಇದನ್ನು ಪ್ರಯೋಗ ಮಾಡಿ ಇದರ ಪರಿಣಾಮಗಳ ಕುರಿತಾದ ಮಾಹಿತಿಯನ್ನು ಸಂಗ್ರಹಿಸಿ ಇದ್ನು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆಗೆ ಕಳಿಸಲಾಗುತ್ತದೆ. ಬಳಿಕ ಐಸಿಎಂಆರ್ ಅನುಮತಿ ನೀಡಿದ ಬಳಿಕ ಎಲ್ಲಾ ಕಡೆ ಈ ಚಿಕಿತ್ಸಾ ವಿಧಾನ ಅನುಸರಿಸಲು ಅವಕಾಶ ಸಿಗಬಹುದು.

ಅತ್ಯಂತ ಕಡಿಮೆ ಅವಧಿಯಲ್ಲಿ ಥೆರಪಿಯಿಂದ ಹೆಚ್ಚು ಪರಿಣಾಮ

ಈ ಲೋ ರೇಡಿಯೇಷನ್ ಥೆರಪಿ ಅತ್ಯಂತ ಕಡಿಮೆ ಅವಧಿಯಲ್ಲಿ ಮಾಡಬಹುದಾದ ಚಿಕಿತ್ಸಾ ವಿಧಾನ. ಕೇವಲ 10ರಿಂದ 15 ನಿಮಿಷಗಳ ಕಾಲ ಈ ಲೋ ರೇಡಿಯೇಷನ್ ಥೆರಪಿ ಮುಗಿದು ಹೋಗುತ್ತೆ. ಇದಕ್ಕೆ ತಜ್ಞ ವೈದ್ಯರ ಅಗತ್ಯತೆ ಇದ್ದೇ ಇರುತ್ತೆ. ಸಾಮಾನ್ಯವಾಗಿ ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ನೀಡುವ ವೈದ್ಯರು ಕೊರೊನಾ ಸೋಂಕಿತರಿಗೂ ಈ ಟ್ರೀಟ್ ಮೆಂಟ್ ಕೊಡಬೇಕಾಗುತ್ತದೆ. ಆದರೆ , ಈ ಥೆರಪಿ ಸಕ್ಸಸ್ ಆದ್ರೆ ತುಂಬಾ ಕಡಿಮೆ ಅವಧಿಯಲ್ಲಿ ಹೆಚ್ಚು ಜನರಿಗೆ ಚಿಕಿತ್ಸೆ ಕೊಡಬಹುದಾಗಿದೆ. ಈ ಲೋ ರೆಡಿಯೇಷನ್ ಥೆರಪಿ ವ್ಯವಸ್ಥೆ ಮಾಡಿಕೊಂಡು ,ಅಥವಾ ಇದು ಲಭ್ಯವಿದ್ದಲ್ಲೇ ರೋಗಿಗಳನ್ನು ಕರೆದೊಯ್ದು ಚಿಕಿತ್ಸೆ ಕೊಡಿಸಬಹುದು. ಇದರಿಂದ ಆಕ್ಸಿಜನ್ ಅವಲಂಬನೆಯೂ ತಪ್ಪಲಿದೆ.ರೋಗಿಯೂ ಬೇಗ ಗುಣಮುಖನಾಗುತ್ತಾನೆ. ಕೊರೊನಾದಿಂದಾಗಿ ರೋಗ ಉಲ್ಭಣಿಸಿದ್ರೂ ಪ್ರಾಣಕ್ಕೆ ಕುತ್ತು ಬರಲ್ಲ. ಒಂದು ಬಾರಿ ವೈರಾಣು ಕಂಟ್ರೋಲ್ ಆಗಿ ಬಿಟ್ಟರೆ ಬಳಿಕ ಕೊರೊನಾದಿಂದ ಮುಕ್ತರನ್ನಾಗಿಸೋದು ಸುಲಭ.

ಈ ಲಘು ವಿಕಿರಣ ಚಿಕಿತ್ಸೆಯ ವೆಚ್ಚ ಹೆಚ್ಚಾಗುತ್ತಾ,ಕಡಿಮೆನಾ?

ಕೊರೊನಾ ಸೋಂಕಿತರು ಆಸ್ಪತ್ರೆ ಸೇರಿದರೆ ಸಾಕು ಲಕ್ಷ ಲಕ್ಷ ಬಿಲ್ ಆಗ್ತಾ ಇರೋದು ಸಾಮಾನ್ಯವಾಗಿ ಬಿಟ್ಟಿದೆ. ಇದರಿಂದ ಜನ ಸಾಮಾನ್ಯರಂತೂ ಆಸ್ಪತ್ರೆ ಕಡೆ ಹೋಗೋದಕ್ಕೆ ಹಿಂಜರಿತಾ ಇದಾರೆ. ಆದ್ರೆ ತಮ್ಮವರನ್ನು ಉಳಿಸಿಕೊಳ್ಳಬೇಕು ಅಂತಾ ಅದೆಷ್ಟೇ ಲಕ್ಷ ಖರ್ಚಾದರೂ ಚಿಕಿತ್ಸೆ ಕೊಡಿಸ್ತಾ ಇದಾರೆ. ಬಡವರಿಗೆ ಕೊರೊನಾ ಉಲ್ಭಣವಾಗಿ ಬಿಟ್ರಂತೂ ತಮ್ಮ ಹತ್ತಿರ  ಇದ್ದಿದ್ದೆಲ್ಲ ಅಡವಿಡುವ ಪರಿಸ್ಥಿತಿ. ಇನ್ನು ಕೆಲವರು ಆಸ್ತಿ ಪಾಸ್ತಿ ಮಾರಿಕೊಂಡ ಉದಾಹರಣೆಗಳೂ ಇದ್ದಾವೆ. ಸಾಮಾನ್ಯ ಲಕ್ಷಣವಿದ್ದು ಗುಣಮುಖರಾಗಿ ಬಿಟ್ಟರೆ ಐದರಿಂದ ಹತ್ತು ಸಾವಿರದೊಳಗೆ ಖರ್ಚು ಮುಗಿದು ಹೋಗುತ್ತೆ. ಆದ್ರೆ, ಕಾಯಿಲೆ ಗಂಭೀರ ಸ್ವರೂಪ ಪಡೆದುಕೊಂಡು ಬಿಟ್ರೆ ಪ್ರತಿನಿತ್ಯ ಹಣವನ್ನು ನೀರಿನಂತೆ ಹರಿಸಬೇಕಾಗಿದೆ. ಸರ್ಕಾರಿ ಆಸ್ಪತ್ರೆಯಾದರೆ ತೊಂದರೆ ಆಗಲ್ಲ. ಖಾಸಗಿ ಆಸ್ಪತ್ರೆಗೆ ಸೇರಿ ಬಿಟ್ರೆ ಲಕ್ಷಾಂತರ ರೂಪಾಯಿ ಬಿಲ್ ಆಗಿ ಹೋಗುತ್ತೆ. ಆದ್ರೆ ಈ ಲಘು ವಿಕಿರಣ ಚಿಕಿತ್ಸೆ ಅತ್ಯಂತ ಕಡಿಮೆ ವೆಚ್ಚದಲ್ಲೇ ಮಾಡಿ ಮುಗಿಸಬಹುದು. ಒಮ್ಮೆ ಲೋ ರೇಡಿಯಷನ್ ಥೆರಪಿಗೆ ಒಳಗಾದರೆ ನಂತರದ ಮೂರು ದಿನಗಳಲ್ಲೇ ಆಕ್ಸಿಜನ್ ಅವಲಂಬನೆಯಿಂದ ಹೊರಗೆ ಬರಬಹುದು. ಇದರಿಂದಾಗಿ ಮುಂದೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಖರ್ಚು ಕಡಿಮೆ ಮಾಡಿಕೊಳ್ಳಬಹುದು.

ಚಿಕಿತ್ಸಾ ವಿಧಾನ ಯಾವುದಾದರೂ ಆಗಿರಲಿ. ಆದ್ರೆ ಅದು ಜನ ಸಾಮಾನ್ಯರ ಕೈಗೆ ಎಟುಕುವಂತಿರಲಿ. ಹಾಗೆಯೇ ಕೊರೊನಾ ಮುಕ್ತರನ್ನಾಗಿಸಲಿ. ಇದೀಗ ಎಲ್ಲರೂ ಬಯಸೋದು ಇದನ್ನೇ.

The post ಕೊರೊನಾ ವಿರುದ್ಧ ಹೋರಾಡಲು ಬರ್ತಿದೆ ಹೊಸ ಅಸ್ತ್ರ: ಇದು ವ್ಯಾಕ್ಸಿನ್ನೂ ಅಲ್ಲ, ಮಾತ್ರೆನೂ ಅಲ್ಲ appeared first on News First Kannada.

Source: newsfirstlive.com

Source link