ನವದೆಹಲಿ: ಕೊರೊನಾ ಕೊರೊನಾ ಕೊರೊನಾ.. ಎಲ್ಲಿ ನೋಡಿದ್ರೂ ಈ ಹೆಸರು ಕೇಳಿ ಕೇಳಿ ತಲೆ ಚಿಟ್ಟು ಹಿಡಿದು ಹೋಗುವಂಥ ಪರಿಸ್ಥಿತಿ ನಿರ್ಮಾಣವಾಗಿ ಬಿಟ್ಟಿದೆ. ದೇಶದಲ್ಲಿ ಪ್ರತಿದಿನ 4 ಲಕ್ಷಕ್ಕೂ ಅಧಿಕ ಜನರಿಗೆ ಸೋಂಕು ತಗುಲ್ತಾ ಇದೆ. ಈ ನಡುವೆ ಹಲವರಿಗೆ ಆಕ್ಸಿಜನ್ ಸಿಗ್ತಿಲ್ಲ, ಆಸ್ಪತ್ರೆಗಳಲ್ಲಿ ಬೆಡ್ ಸಿಗ್ತಿಲ್ಲ, ಬೆಡ್​ ಸಿಕ್ಕರೂ ಚಿಕಿತ್ಸೆ ಸಿಗ್ತಿಲ್ಲ, ಚಿಕಿತ್ಸೆ ಪಡೆಯುತ್ತಿರೋರು ಬೇಗ ಬೇಗ ಗುಣಮುಖರಾಗ್ತಿಲ್ಲ. ಇಂಥ ಪರಿಸ್ಥಿತಿಯಲ್ಲಿ ಏನು ಮಾಡಬೇಕು ಅನ್ನೋದು ಜನರಿಗೆ ಅರ್ಥವಾಗ್ತಿಲ್ಲ? ಸರ್ಕಾರಗಳಿಗೆ ದಿಕ್ಕೇ ತೋಚದ ಸ್ಥಿತಿ. ಇನ್ನೊಂದೆಡೆ ವೈದ್ಯರಿಗೂ ಹೇಗೆ ಚಿಕಿತ್ಸೆ ನೀಡಬೇಕು? ಅನ್ನೋ ಪ್ರಶ್ನೆ. ಈ ಪ್ರಶ್ನೆಗೆ ಇಂದು ಉತ್ತರವನ್ನು ಡಿಆರ್​ಡಿಓ ನೀಡಿದೆ.

ದೇಶಕ್ಕೆ ತೊಂದರೆ ಎದುರಾದಾಗಲೆಲ್ಲ ಹೆಮ್ಮೆಯ ಡಿಆರ್​ಡಿಓ ವಿನೂತನವಾದ ಕ್ರಮದ ಮೂಲಕ ಸಹಾಯಕ್ಕೆ ಬರುತ್ತೆ. ಇದೀಗ ಡಿಆರ್​ಡಿಓ ಮತ್ತೊಂದು ಮಹತ್ತರ ಸಂಶೋಧನೆ ಮಾಡಿದ್ದು, ದೇಶದ ಜನರ ನಿರೀಕ್ಷೆ ಗರಿಗೆದರುವಂತೆ ಮಾಡಿದೆ.

ಆಗಸದಲ್ಲಿ ಆರ್ಭಟಿಸುವ ಯುದ್ಧ ವಿಮಾನ.. ವೈರಿಗಳ ಗುಂಡಿಗೆಯ ಬಿಸಿ ರಕ್ತ ಬಸಿಯುವ ಮದ್ದು ಗುಂಡುಗಳು.. ಕಬ್ಬಿಣದ ಕೋಟೆಯಲ್ಲಿ ವೈರಿ ಅವಿತಿದ್ದರೂ ಹುಡುಕಿ ಹೊಡೆದು ಹಾಕುವ ಮಿಸೈಲ್​ಗಳು.. ಗುಂಡು ಹೊಡೆದರೂ ಕುಗ್ಗದ.. ಗ್ರೆನೇಡ್ ಸಿಡಿಸಿದರೂ ಪುಡಿಯಾಗದ ಅತ್ಯಾಧುನಿಕ ವಾಹನಗಳು.. ಹೀಗೆ ದೇಶದ ಭದ್ರತೆಗಾಗಿ ವೈರಿಗಳ ಮಟ್ಟಹಾಕುವಲ್ಲಿ ಮುಂಚೂಣಿಯಲ್ಲಿರೋ ಡಿಆರ್​ಡಿಓ ಈಗ ಕಣ್ಣಿಗೆ ಕಾಣದ ವೈರಿ ಕೊರೊನಾದ ಹುಟ್ಟಡಗಿಸಲು ಆಕಾಶ ಭೂಮಿಯನ್ನೇ ಒಂದು ಮಾಡುತ್ತಿದೆ.

ಒಂದು ಕಡೆ ದೇಶದ ಅತ್ಯಾಧುನಿಕ ಯುದ್ಧ ವಿಮಾನ ತೇಜಸ್​ನಲ್ಲಿ ಬಳಕೆಯಾಗುವ ಆಕ್ಸಿಜನ್ ಟೆಕ್ನಾಲಜಿಯನ್ನು ಹಂಚಿಕೊಂಡು, ಈ ಮೂಲಕ ಲಕ್ಷಾಂತರ ಜೀವನವನ್ನು ಡಿಫೆನ್ಸ್ ರೀಸರ್ಚ್ ಮತ್ತು ಡೆವಲಪ್​ಮೆಂಟ್ ಆರ್ಗನೈಸೇಷನ್ ಉಳಿಸುತ್ತಿದೆ. ಇನ್ನೊಂದು ಕಡೆ ತಾನೇ ಹಲವು ಕಡೆ ಅತ್ಯಾಧುನಿಕ ಆಸ್ಪತ್ರೆ ಮಾಡಿ ಜನರಿಗೆ ಚಿಕಿತ್ಸೆ ನೀಡುತ್ತಿದೆ. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಡಿಆರ್​ಡಿಓ ಕೊರೊನಾ ವಿರುದ್ಧದ ರಾಮಬಾಣ ಅಭಿವೃದ್ಧಿಪಡಿಸಿದೆ ಮತ್ತು ಅದಕ್ಕೆ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ(ಡಿಸಿಜಿಐ) ಅನುಮತಿಯೂ ದೊರೆತಿದೆ.

ಕೊರೊನಾ ವಿರುದ್ಧ ಡಿಆರ್​ಡಿಓ ರಾಮಬಾಣ
ಕೊರೊನಾ ಬೆಳವಣಿಗೆ ತಡೆಯೋ ಸಂಜೀವಿನಿ
ಜೀವಕೋಶಕ್ಕೆ ಜೀವ ತುಂಬು ಅಮೃತಕ್ಕೆ ಅನುಮತಿ

ಇಂದು ದೇಶ ಅತ್ಯಂತ ವಿಷಮ ಗಳಿಗೆಯನ್ನು ಎದುರಿಸುತ್ತಿದೆ. ಇಂಥ ವಿಷಮ ವೇಳೆಯಲ್ಲಿ ಭಾರತದ ಡಿಫೆನ್ಸ್ ರೀಸರ್ಚ್ ಮತ್ತು ಡೆವಲಪ್​ಮೆಂಟ್ ಆರ್ಗನೈಸೇಷನ್ ಕಪ್ಪು ಮೋಡದಲ್ಲಿ ಬೆಳ್ಳಿ ಕಿರಣದಂತೆ ಗೋಚರಿಸಿದೆ. ಡಿಆರ್​ಡಿಓನ ನ್ಯೂಕ್ಲಿಯರ್ ಮತ್ತು ಅಲ್ಲೈಡ್ ಸೈನ್ಸಸ್, ಡಾ. ರೆಡ್ಡೀಸ್ ಲ್ಯಾಬ್ ಜೊತೆ ಸೇರಿ ಹೊಸ ಔಷಧಿಯನ್ನು ಅಭಿವೃದ್ಧಿಪಡಿಸಿದೆ. ಈ ಔಷಧಿ ಸೋಂಕಿತರನ್ನು ವೇಗವಾಗಿ ಗುಣಮುಖಗೊಳಿಸುವುದರ ಜೊತೆಗೆ, ಕೃತಕ ಆಕ್ಸಿಜನ್ ಪಡೆಯುವ ಹಂತಕ್ಕೆ ಹೋಗದಂತೆ ಕೂಡ ತಡೆಯುವುದು ಪ್ರಯೋಗದಲ್ಲಿ ಕಂಡುಬಂದಿದೆ.

ಹೌದು, 2-ಡಿ ಆಕ್ಸಿ-ಡಿ-ಗ್ಲೂಕೋಸ್ (2-ಡಿಜಿ) ಹೆಸರಿನ ಔಷಧವನ್ನು ಡಿಆರ್​ಡಿಓ ಅಭಿವೃದ್ಧಿ ಪಡಿಸಿದೆ. ಈ ಔಷಧಕ್ಕೆ ಇದೀಗ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಕೂಡ ಅನುಮತಿ ನೀಡಿದ್ದು, ಶೀಘ್ರದಲ್ಲೇ ಜನರಿಗೆ ಲಭ್ಯವಾಗಲಿದೆ ಎಂದು ತಿಳಿದುಬಂದಿದೆ. ಇನ್ನು ಈ ಔಷಧ ಸುಲಭವಾಗಿ ತಯಾರಿಸಬಹುದಾಗಿದೆ ಎಂದು ಡಿಆರ್​ಡಿಓ ಹೇಳಿದೆ. ಹೀಗಾಗಿ ದೊಡ್ಡ ಪ್ರಮಾಣದಲ್ಲಿ ಅತ್ಯಂತ ಸುಲಭವಾಗಿ ಇದನ್ನು ತಯಾರಿಸಬಹುದು. ಇದು ಪೌಡರ್ ರೂಪದಲ್ಲಿದ್ದು ನೀರಿನೊಂದಿಗೆ ಮಿಶ್ರಣ ಮಾಡಿ ಕುಡಿಯಬೇಕು.

ಮಧ್ಯಮ ಮತ್ತು ಗಂಭೀರ ಸೋಂಕಿತರಿಗೆ ಇದನ್ನು ನೀಡಬೇಕಾಗಿದ್ದು, ಅಂಥವರನ್ನು ವೇಗವಾಗಿ ಗುಣಮುಖರನ್ನಾಗಿಸುತ್ತೆ ಅನ್ನೋದು ಕೂಡ ತಿಳಿದುಬಂದಿದೆ. ಅಲ್ಲದೇ, 2-ಡಿಜಿಯೊಂದಿಗೆ ಚಿಕಿತ್ಸೆ ಪಡೆದ ರೋಗಿಗಳ ಪೈಕಿ ಹೆಚ್ಚಿನ ಸಂಖ್ಯೆಯಲ್ಲಿ ಕೊರೊನಾ ರೋಗಿಗಳಲ್ಲಿ ಆರ್​​ಟಿ-ಪಿಸಿಆರ್ ನೆಗೆಟಿವ್ ತೋರಿಸುತ್ತಿದೆ. ಹೀಗಾಗಿ ಈ 2-ಡಿಜಿಯೊಂದಿಗೆ ಚಿಕಿತ್ಸೆ ಪಡೆದ ರೋಗಿಗಳು ಸ್ಟ್ಯಾಂಡರ್ಡ್ ಆಫ್ ಕೇರ್​ಗಿಂತ ವೇಗವಾಗಿ ಗುಣಮುಖರಾಗಿದ್ದು ತಿಳಿದುಬಂದಿದೆ.

ಮಕ್ಕಳಿಗೂ ನೀಡಬಹುದಾದ ಔಷಧ
ಪಾಲಕರಿಗೂ ನೆಮ್ಮದಿ ತಂದ ಡಿಆರ್​ಡಿಓ

ಮೊದಲನೇ ಅಲೆಯಲ್ಲಿ ವೃದ್ಧರನ್ನು ಟಾರ್ಗೆಟ್ ಮಾಡಿದ್ದ ಕೊರೊನಾ ಸೋಂಕು, ಈಗ ಎರಡನೇ ಅಲೆಯಲ್ಲಿ ಯುವಕರನ್ನು ತೀವ್ರವಾಗಿ ಕಾಡುತ್ತಿದೆ ಅಂತಾ ಹಲವು ತಜ್ಞರು ಅಭಿಪ್ರಾಯಪಡ್ತಿದ್ದಾರೆ. ಇನ್ನೊಂದೆಡೆ ಭಾರತಕ್ಕೆ ಮೂರನೇ ಕೊರೊನಾ ಅಲೆ ಕೂಡ ಅಪ್ಪಳಿಸಲಿದೆ ಅಂತ ತಜ್ಞರು ಈಗಾಗಲೇ ಆತಂಕಪಡ್ತಿದ್ದಾರೆ. ಇನ್ನೂ ಆತಂಕಕಾರಿ ವಿಚಾರ ಅಂದ್ರೆ ಮೂರನೇ ಅಲೆಯಲ್ಲಿ ಕೊರೊನಾ ಮಕ್ಕಳನ್ನು ಹೆಚ್ಚು ಭಾದಿಸಬಹುದು ಎನ್ನಲಾಗ್ತಿದೆ. ಈ ಬಗ್ಗೆ ಇತ್ತೀಚೆಗೆ ತಾನೆ ಭಾರತದ ಸುಪ್ರೀಂಕೋರ್ಟ್​ ಕೂಡ ಆತಂಕ ವ್ಯಕ್ತಪಡಿಸಿ, ಸಿದ್ಧತೆ ಮಾಡಿಕೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು.

ಹೀಗಾಗಿ ಸಹಜವಾಗಿ ಕೊರೊನಾ ಆತಂಕ ತಂದ ಒತ್ತಡದಲ್ಲಿ ಕುಸಿದು ಹೋಗುತ್ತಿರುವ ಜನರು, ಮಕ್ಕಳಿಗೂ ಸೋಂಕು ಬಾಧಿಸಬಹುದು ಅನ್ನೋ ವಿಚಾರ ತಿಳಿದು ಮತ್ತಷ್ಟು ಆಘಾತಕ್ಕೆ ಒಳಗಾಗಿದ್ದಾರೆ. ಇಂಥ ಪೋಷಕರಿಗೂ ಡಿಆರ್​ಡಿಓ 2-ಡಿ ಆಕ್ಸಿ-ಡಿ-ಗ್ಲೂಕೋಸ್ ಮೂಲಕ ನೆಮ್ಮದಿಯನ್ನು ತಂದಿದೆ. ಯಾಕಂದ್ರೆ ಈ ಔಷಧವನ್ನು ಮಕ್ಕಳಿಗೂ ನೀಡಬಹುದು ಎಂದು ತಿಳಿದು ಬಂದಿದ್ದು, ಬೇಗ ಮಕ್ಕಳನ್ನೂ ಗುಣಮುಖರನ್ನಾಗಿಸಬಹುದು ಅನ್ನೋದು ಡಿಆರ್​ಡಿಓ ಅಭಿಪ್ರಾಯ.

ಇದು ಕೊರೊನಾವನ್ನ ತಡೆಗಟ್ಟೋದಾದ್ರೂ ಹೇಗೆ?
ದೇಶದಲ್ಲಿ ಕೊರೊನಾ ತಡೆಗಟ್ಟುವ ಉದ್ದೇಶದಿಂದ ಒಂದೆಡೆ ವ್ಯಾಕ್ಸಿನೇಷನ್ ಆರಂಭವಾಗಿದೆ. ಈಗಾಗಲೇ ನೀಡಲಾಗುತ್ತಿರುವ ಕೋವಿಶೀಲ್ಡ್ ಹಾಗೂ ಕೊವ್ಯಾಕ್ಸಿನ್​ ಜೊತೆಗೆ ಇನ್ನು ಕೆಲವೇ ದಿನಗಳಲ್ಲಿ ಸ್ಫುಟ್ನಿಕ್ ವಿ ಹಾಗೂ ಸ್ಫುಟ್ನಿಕ್ ಲೈಟ್ ಲಸಿಕೆಗಳು ಕೂಡ ಸೇರುವ ನಿರೀಕ್ಷೆ ಇದೆ. ಮತ್ತೊಂದೆಡೆ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡೋದಕ್ಕಾಗಿ ಭಾರತದಲ್ಲೇ ಉಪಸ್ಥಿತವಿರುವ ಝೈಡಸ್ ಕ್ಯಾಡಿಲ್ಲಾ ಕೂಡ ಇಂಜೆಕ್ಷನ್ ತಯಾರಿಸಿದ್ದು ಅದೂ ಕೆಲವೇ ದಿನಗಳಲ್ಲಿ ಮಾರುಕಟ್ಟೆಗೆ ಬರಬಹುದಾಗಿದೆ. ಜೊತೆಗೆ ಅಮೆರಿಕಾದ ಆ್ಯಂಟಿಬಾಡಿ ಕಾಕ್​ಟೆಲ್​ಗೂ ದೇಶದಲ್ಲಿ ಅನುಮತಿ ನೀಡಲಾಗಿದ್ದು ಇದೂ ಕೂಡ ಸೋಂಕಿತರನ್ನು ವೇಗವಾಗಿ ಗುಣಮುಖರನ್ನಾಗಿಸುವ ಗುಣ ಹೊಂದಿದೆ ಅನ್ನೋದನ್ನು ತಜ್ಞರು ಹೇಳ್ತಾರೆ. ಇದೇ ಕಾರಣದಿಂದಾಗಿ ಕಳೆದ ವರ್ಷ ಅಂದಿನ ಅಮೆರಿಕಾದ ಅಧ್ಯಕರಾಗಿದ್ದ ಡೋನಾಲ್ಡ್​ ಟ್ರಂಪ್​ಗೂ ಈ ಕಾಕ್​ಟೆಲ್ ನೀಡಲಾಗಿದ್ದು, ಕೇವಲ ಮೂರೇ ದಿನದಲ್ಲಿ ಅವರು ಗುಣಮುಖರಾಗಿದ್ದರು ಅಂತಾ ಹೇಳಲಾಗಿದೆ.

ಹೀಗೆ ಕೇಂದ್ರ ಸರ್ಕಾರ ದೇಶದ ಜನರ ಪ್ರಾಣ ಮತ್ತು ಜೀವನ ಉಳಿಸಲು ಇನ್ನಿಲ್ಲದ ಯತ್ನ ಮಾಡುತ್ತಲೇ ಇದೆ. ಈ ನಡುವೆ ಡಿಆರ್​ಡಿಓ ಕೂಡ ಐಸಿಂಗ್ ಆನ್​ ದಿ ಕೇಕ್ ಅನ್ನೋ ಹಾಗೆ 2-ಡಿ ಆಕ್ಸಿ-ಡಿ-ಗ್ಲೂಕೋಸ್ ಔಷಧವನ್ನು ಬಿಡುಗಡೆ ಮಾಡಿದೆ. ಹೀಗಾಗಿಯೇ ಸಹಜವಾಗಿ ಇದು ಹೇಗೆ ಕಾರ್ಯ ನಿರ್ವಹಿಸುತ್ತೆ ಅನ್ನೋ ಪ್ರಶ್ನೆ ಮೂಡುತ್ತೆ.

2-ಡಿ ಆಕ್ಸಿ-ಡಿ-ಗ್ಲೂಕೋಸ್ ಔಷಧ ಪುಡಿ ರೂಪದಲ್ಲಿ ಇರುತ್ತೆ. ಇದನ್ನು ಸಾಮಾನ್ಯ ಗ್ಲುಕೋಸ್​ನಂತೆಯೇ ಚಿಕ್ಕ ಚಿಕ್ಕ ಪ್ಯಾಕೇಟ್​ಗಳಲ್ಲಿ ಇಡಲಾಗುತ್ತೆ. ಈ ಗ್ಲುಕೋಸ್​ ರೀತಿಯ ಪುಡಿಯನ್ನು ನೀರಿನಲ್ಲಿ ಮಿಶ್ರಣ ಮಾಡಿ ವೈದ್ಯರು ತಿಳಿಸುವಂತೆ ಕುಡಿಯಬೇಕಾಗುತ್ತದೆ. ಹೀಗೆ ಕುಡಿದಾಗ ಅದು ದೇಹವನ್ನು ಪ್ರವೇಶಿಸುತ್ತದೆ. ದೇಹವನ್ನು ಪ್ರವೇಶಿಸಿದ ಬಳಿಕ 2-ಡಿ ಆಕ್ಸಿ-ಡಿ-ಗ್ಲೂಕೋಸ್ ಔಷಧ ಮೊದಲು ಕೊರೊನಾ ವೈರಸ್​ ಬೆಳವಣಿಗೆಯನ್ನು ತಡೆಗಟ್ಟುತ್ತದೆ. ಬಳಿಕ ಕೊರೊನಾ ವೈರಸ್ ಆಕ್ರಮಿಸಿಕೊಂಡಿರುವ ಜೀವಕೋಶಗಳನ್ನು ಪ್ರವೇಶಿಸುತ್ತದೆ. ಬಳಿಕ ಅಲ್ಲಿರುವ ಕೊರೊನಾ ವೈರಸ್​ ಅನ್ನು ಇಲ್ಲವಾಗಿಸಿ ಆಯಾ ಜೀವಕೋಶಗಳಿಗೆ ಇದು ಜೀವದಾನ ನೀಡುತ್ತದೆ. ಈ ಮೂಲಕ ಮನುಷ್ಯನ ಜೀವನವನ್ನೂ ಉಳಿಸುತ್ತೆ. ಜೊತೆಗೆ ಬೇಗ ಗುಣಮುಖರನ್ನಾಗಿಸುತ್ತೆ ಕೂಡ.

ಒಟ್ಟಿನಲ್ಲಿ ಒಂದು ದೇಶದ ಅಂತಃಸತ್ವ ಗೋಚರವಾಗುವುದೇ ಅತ್ಯಂತ ದೊಡ್ಡ ಸಮಸ್ಯೆಗಳು ಬಂದಾಗ. ಹೀಗೆ ಸಮಸ್ಯೆಗಳು ಬಂದಾಗ ಕೆಲವರು ಇನ್ನೊಬ್ಬರನ್ನು ದೂಷಿಸುತ್ತಾ ಕೂರುತ್ತಾರೆ. ಆದ್ರೆ ಡಿಆರ್​ಡಿಓನಂಥ ಸಂಸ್ಥೆಗಳು ತಾವೇ ಮುಂದೆ ನಿಂತು ಅಂಥ ಸಮಸ್ಯೆ ನಿವಾರಿಸಲು ಶ್ರಮಿಸುತ್ತವೆ. ಅದು ಇಂದು ಮತ್ತೊಮ್ಮೆ ಪ್ರೂವ್ ಆಗಿದೆ.

ವಿಶೇಷ ವರದಿ: ರಾಘವೇಂದ್ರ ಗುಡಿ, ಡಿಜಿಟಲ್ ಡೆಸ್ಕ್

The post ಕೊರೊನಾ ವಿರುದ್ಧ DRDO ರಾಮಬಾಣ- ಮಕ್ಕಳಿಗೂ ನೀಡಬಹುದಾದ ಔಷಧಕ್ಕೆ DCGI ಅನುಮತಿ appeared first on News First Kannada.

Source: newsfirstlive.com

Source link