ನವದೆಹಲಿ: ಕೊರೊನಾ ಲಸಿಕೆ ವಿಚಾರದಲ್ಲಿ ಭಾರತ ಒಂದು ಹೆಜ್ಜೆ ಮುಂದೆಯೇ ಇದೆ. ಒಂದಲ್ಲ ಎರಡೆರಡು ಲಸಿಕೆಗಳು ದೇಶದಲ್ಲಿ ಅಭಿವೃದ್ಧಿಗೊಂಡಿರೋದು ನಮಗೆಲ್ಲ ಗೊತ್ತಿರೋ ವಿಷಯ. ಆದ್ರೆ ಅವುಗಳಲ್ಲಿ ಒಂದಾದ ಕೋವ್ಯಾಕ್ಸಿನ್​ ಪರಿಣಾಮದ ಬಗ್ಗೆ ಸಾಕಷ್ಟು ಚರ್ಚೆ ಶುರುವಾಗಿದ್ದವು. ಅದಕ್ಕೆಲ್ಲ ಈಗ ತೆರೆಬಿದ್ದಿದ್ದು ಲಸಿಕೆ ಪರಿಣಾಮಕಾರಿ ಎಂಬುದು ಸಾಬೀತಾಗಿದೆ.

ಕೋವ್ಯಾಕ್ಸಿನ್​ ಲಸಿಕೆ ಶೇ. 77ರಷ್ಟು ಪರಿಣಾಮಕಾರಿ
3ನೇ ಹಂತದ ಪ್ರಯೋಗದ ದತ್ತಾಂಶದಿಂದ ಸಾಬೀತು

ವಿಶ್ವವನ್ನೇ ಕಂಗೆಡಿಸಿರುವ ಕೊರೊನಾ ಮಹಾಮಾರಿಯ ವಿರುದ್ಧ ಹೋರಾಡಲು ಸದ್ಯಕ್ಕಿರುವ ಪ್ರಭಲ ಅಸ್ತ್ರವೇ ವ್ಯಾಕ್ಸಿನ್​ಗಳು. ಈ ನಿಟ್ಟಿನಲ್ಲಿ ಕೋವಿಶೀಲ್ಡ್​ ಮತ್ತು ಕೋವ್ಯಾಕ್ಸಿನ್​ ಎಂಬ ಎರಡು ಲಸಿಕೆಗಳನ್ನು ಭಾರತ ಅಭಿವೃದ್ಧಿ ಪಡಿಸಿತ್ತು. ಆದ್ರೆ ಇವುಗಳ ಪೈಕಿ ಕೋವ್ಯಾಕ್ಸಿನ್​ಗೆ ಡಬ್ಲ್ಯೂಹೆಚ್​ಒದಿಂದ ತುರ್ತು ಬಳಕೆಗೆ ಅನುಮತಿ ಸಿಕ್ಕಿರಲಿಲ್ಲ. ಹೀಗಾಗಿ ಲಸಿಕೆಯ ಪರಿಣಾಮದ ಬಗ್ಗೆಯೇ ಹಲವು ಪ್ರಶ್ನೆಗಳು ಹುಟ್ಟಿಕೊಂಡಿದ್ದವು. ಆದ್ರೆ ಅವುಗಳಿಗೆಲ್ಲ ಈಗ ಉತ್ತರ ಸಿಕ್ಕಿದೆ. ಕೋವ್ಯಾಕ್ಸಿನ್​ ಶೇಕಡಾ 77ರಷ್ಟು ಪರಿಣಾಮಕಾರಿ ಎಂಬುದನ್ನು ಸಬ್ಜೆಕ್ಟ್ ಎಕ್ಸ್‌ಪರ್ಟ್ ಕಮಿಟಿಯೂ ಒಪ್ಪಿಕೊಂಡಿದೆ.

ಕೋವ್ಯಾಕ್ಸಿನ್​ ತುರ್ತು ಬಳಕೆಗೆ ಜನವರಿಯಲ್ಲಿ ಭಾರತ ಅನುಮತಿ ನೀಡಿತ್ತು. ಆದರೆ ಅನುಮೋದನೆ ಬೆನ್ನಲ್ಲೇ 3ನೇ ಹಂತದ ಟ್ರಯಲ್ಸ್ ಬಗ್ಗೆ ಪ್ರಶ್ನೆಗಳೂ ಮೂಡಿದ್ದವು. ಆದರೆ ಕೋವ್ಯಾಕ್ಸಿನ್​ ಲಸಿಕೆ ಶೇಕಡಾ77.8ರಷ್ಟು ಪರಿಣಾಮಕಾರಿ ಎಂಬುದು 3ನೇ ಹಂತದ ಪ್ರಯೋಗದ ದತ್ತಾಂಶದಿಂದ ಸಾಭೀತಾಗಿದೆ. ಈ ದತ್ತಾಂಶಗಳಿಗೆ ಸಬ್ಜೆಕ್ಟ್ ಎಕ್ಸ್‌ಪರ್ಟ್ ಕಮಿಟಿಯೂ ಅನುಮೋದನೆ ನೀಡಿದೆ.

ಇನ್ನು ಈ ಬೆನ್ನಲ್ಲೇ ವಿಶ್ವ ಆರೋಗ್ಯ ಸಂಸ್ಥೆಯಿಂದಲೂ ಲಸಿಕೆಯ ತುರ್ತು ಬಳಕೆಗೆ ಅನುಮತಿ ಸಿಗುವ ನಿರೀಕ್ಷೆಯಲ್ಲಿ ಭಾರತ್​ ಬಯೋಟೆಕ್​ ಕಂಪೆನಿ ಇದೆ.

ಜುಲೈ 23ರಂದು ಡಬ್ಲ್ಯೂಹೆಚ್​ಒ ಮೀಟಿಂಗ್​ ನಡೆಯಲಿದ್ದು ಸಭೆಯಲ್ಲಿ ಲಸಿಕೆಗಳ ತುರ್ತು ಬಳಕೆ ಅನುಮತಿ ಬಗ್ಗೆ ಚರ್ಚೆ ನಡೆಯಲಿದೆ. ಈ ವೇಳೆ ಕೋವ್ಯಾಕ್ಸಿನ್​ ಬಳಕೆಗೂ ಅನುಮತಿ ಸಿಗಬಹುದೆಂಬ ನಿರೀಕ್ಷೆಯನ್ನು ಭಾರತ್​ ಬಯೋಟೆಕ್​ ಇಟ್ಟುಕೊಂಡಿದ್ದು, ಮೇ ತಿಂಗಳಿನಲ್ಲೇ ತುರ್ತು ಬಳಕೆಗೆ ಅನುಮೋದನೆ ನೀಡುವಂತೆ ಕಂಪೆನಿ ಅರ್ಜಿ ಸಲ್ಲಿಕೆಯನ್ನೂ ಮಾಡಿದೆ.

ಒಟ್ಟಿನಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದ ಕೋವ್ಯಾಕ್ಸಿನ್​ ಪರಿಣಾಮಕಾರಿತ್ವ ಕೊನೆಗೂ ಸಾಭೀತಾಗಿದೆ. ಈ ಮೂಲಕ ಎಲ್ಲಾ ಊಹಾಪೋಹಗಳಿಗೂ ತೆರೆಬಿದ್ದಿದೆ. ಇನ್ನು ಡಬ್ಲ್ಯೂಹೆಚ್​ಒನಿಂದ ಮಾತ್ರ ತುರ್ತು ಬಳಕೆಗೆ ಅನುಮೋದನೆ ಸಿಗೋದು ಬಾಕಿಯಿದ್ದು, ಅದೂ ನೆರವೇರಿದಲ್ಲಿ ಲಸಿಕಾ ಅಭಿಯಾನಕ್ಕೆ ಮತ್ತಷ್ಟು ಬಲಬರೋದು ಗ್ಯಾರಂಟಿ.

The post ಕೊರೊನಾ ವೈರಸ್​ ವಿರುದ್ಧ ಕೋವ್ಯಾಕ್ಸಿನ್ ಎಷ್ಟು ಪರಿಣಾಮಕಾರಿ..?; ಹೊರಬಿತ್ತು ಸಿಹಿಸುದ್ದಿ appeared first on News First Kannada.

Source: newsfirstlive.com

Source link