ಬೆಂಗಳೂರು: ಅವರು ಮುಸಲ್ಮಾನರು. ಒಂದು ಕಡೆ ಕನ್ನಡಮ್ಮನ ಅಭಿಮಾನಿ ಬಳಗ ಕಟ್ಕೊಂಡು ವರ್ಷವಿಡೀ ಕನ್ನಡ ಸೇವೆ ಮಾಡ್ತಾರೆ. ಮತ್ತೊಂದ್ಕಡೆ ಕೊರೊನಾ ಹೆಚ್ಚಾದಾಗಿಂದ ಜಾತಿ ಮತ ಧರ್ಮಗಳನ್ನ ನೋಡದೇ ಸೋಂಕಿತರ ಅಂತ್ಯಸಂಸ್ಕಾರ ಮಾಡೋ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ.

ಮುಸ್ಲಿಮರಿಂದ ಕ್ರೈಸ್ತ ವ್ಯಕ್ತಿಯ ಅಂತ್ಯಸಂಸ್ಕಾರ 
ಜಾತಿ ಧರ್ಮ ಮರೆತು ಮಾನವೀಯತೆ ಮೆರೆದ ಯುವಕರು 

ಶಫಿವುಲ್ಲ ಎಂಬುವವರು ನಗರದ ಚಂದ್ರಲೇಔಟ್ ನಿವಾಸಿ. ಕನ್ನಡ ರಕ್ಷಣಾ ವೇದಿಕೆ ಅಭಿಮಾನಿಗಳ ಬಳಗದ ಮೂಲಕ ಕನ್ನಡದ ಸೇವೆ ಮಾಡೋದ್ರ ಜೊತೆಗೆ ಕೋವಿಡ್ ನಿಂದ ಮೃತಪಟ್ಟವರ ಅಂತ್ಯಸಂಸ್ಕಾರ ಮಾಡುವ ಮೂಲಕ ಮಾನವೀಯತೆ ಕಾರ್ಯ ಮಾಡ್ತಿದ್ದಾರೆ.
ಕಳೆದ ಮೇ 31 ರಂದು ಕ್ರೈಸ್ತ ಧರ್ಮದ ಸವರಿಮುತ್ತು ಎಂಬುವವರು ಕೋವಿಡ್ ನಿಂದ ಮೃತಪಟ್ಟಿದ್ರು. ಈ ವೇಳೆ ಮೃತದೇಹವನ್ನ ಕೊಂಡೊಯ್ಯಲಿಕ್ಕೆ ಪತ್ನಿಯನ್ನ ಬಿಟ್ಟರೆ ಆಸ್ಪತ್ರೆ ಬಳಿ ಯಾರೂ ಬಂದಿರಲಿಲ್ಲ. ಏನು ಮಾಡ್ಬೇಕು ಎಂದು ತಿಳಿಯದೇ ಮೃತನ ಪತ್ನಿ ಆಸ್ಪತ್ರೆ ಬಳಿ ಕಣ್ಣೀರಿಡ್ತಿದ್ರು. ಈ ವೇಳೆ ಕಿಮ್ಸ್​ ಆಸ್ಪತ್ರೆ ಸಿಬ್ಬಂದಿ ಚಂದ್ರಾಲೇಔಟ್ ನ ಸೈಫುಲ್ಲಾರಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಬಂದ ಸೈಫುಲ್ಲ ಮೃತದೇಹವನ್ನ ಪಡೆದು ಚರ್ಚ್ ಸಿಬ್ಬಂದಿಯನ್ನ ಅಂತ್ಯಸಂಸ್ಕಾರಕ್ಕೆ ವಿಧಿವಿಧಾನ ಮಾಡಲಿಕ್ಕೆ ಸಹಾಯ ಮಾಡುವಂತೆ ಕೋರಿದ್ದಾರೆ. ಕೋವಿಡ್ ನಿಂದ ಮೃತಪಟ್ಟಿದ್ದಕ್ಕೆ ಕುಟುಂಬಸ್ಥರು ಹಾಗೂ ಚರ್ಚ್ ಸಿಬ್ಬಂದಿ ಕೂಡ ಸ್ಥಳಕ್ಕೆ ಬರಲಿಕ್ಕೆ ನಿರಾಕರಿಸಿದ್ದಾರೆ. ಕಡೆಗೆ ಮೃತನ ಪತ್ನಿಯ ಮಾರ್ಗದರ್ಶನದಲ್ಲಿ ಕ್ರೈಸ್ತ ಧರ್ಮದ ವಿಧಿವಿಧಾನದಂತೆ ಮುಸ್ಲಿಂ ಯುವಕರೇ ಅಂತ್ಯಸಂಸ್ಕಾರ ನಡೆಸಿದ್ದಾರೆ.

ಅನಾಥ ಶವಗಳ ಅಂತ್ಯಸಂಸ್ಕಾರ ಮಾಡ್ತಿದೆ ಈ ಬಳಗ

ಕೊರೊನಾ ಅಲೆ ಹೆಚ್ಚಾದಾಗಿನಿಂದ ಸೈಫುಲ್ಲಾ ಹಾಗೂ ಚಂದ್ರಾಲೇಔಟ್ ನ ಕನ್ನಡ ರಕ್ಷಣಾ ವೇದಿಕೆ ಅಭಿಮಾನಿ ಬಳಗದ ಕನ್ನಡ ಪರ ಕಾರ್ಯಕರ್ತರು ಕೋವಿಡ್ ವಾರಿಯರ್ ಗಳಾಗಿ ಕೆಲಸ ಮಾಡ್ತಿದ್ದಾರೆ. ಯಾವುದೇ ಜಾತಿ ಮತ ಧರ್ಮಗಳ ಭೇದವಿಲ್ಲದೇ ಅನಾಥಶವಗಳನ್ನ ಅಂತ್ಯಸಂಸ್ಕಾರ ಮಾಡುವ ಮೂಲಕ ಮಾನವೀಯತೆ ಮೆರೆಯೋದರ ಜೊತೆಗೆ ಬಡವರಿಗೆ ಫುಡ್ ಕಿಟ್ ಹಾಗೂ ಉಚಿತ ಆಂಬುಲೆನ್ಸ್ ಸೇವೆ ನೀಡ್ತಿದ್ದಾರೆ.

ಕ್ರೂರಿ ಕೊರೊನಾಗೆ ಯಾವುದೇ ಜಾತಿ ಮತ ಧರ್ಮಗಳ ಭೇದವಿಲ್ಲ. ಇಂತಹ ಕಷ್ಟ ಕಾಲದಲ್ಲಿ ಅಸಹಾಯಕರ ಪಾಲಿಗೆ ಸಕಾಲಕ್ಕೆ ನೆರವಾಗೋದರ ಮೂಲಕ ಮಾನವೀಯ ಕಾರ್ಯಕ್ಕೆ ಮುಂದಾಗಿರೋ ಇವರ ಕಾರ್ಯ ನಿಜಕ್ಕೂ ಶ್ಲಾಘನೀಯ.

The post ಕೊರೊನಾ ಸಂಕಷ್ಟದಲ್ಲಿ ಜಾತಿ-ಮತ ಮರೆತು ಜನಸೇವೆಗೆ ನಿಂತ ಯುವಕರು appeared first on News First Kannada.

Source: newsfirstlive.com

Source link