ಬೆಂಗಳೂರು: ಕೊರೊನಾ ಸಂಕಷ್ಟದಲ್ಲಿರುವಾಗ ಸರ್ಕಾರದ ವಿವಿಧ ನಿಗಮಗಳು ಮಾಡಿರುವ ಸಹಾಯ ಏನು ಅನ್ನೋ ಪ್ರಶ್ನೆ ಇದೀಗ ಶುರುವಾಗಿದೆ. ವಿಶೇಷ ಏನಂದ್ರೆ ನಿಗಮಗಳ ಬಗ್ಗೆ ಸ್ವತಃ ಬಿಜೆಪಿ ಸರ್ಕಾರದ ಕೆಲವು ಶಾಸಕರು, ನಾಯಕರೇ ಪ್ರಶ್ನೆ ಮಾಡ್ತಿದ್ದಾರೆ ಅನ್ನೋ ಮಾಹಿತಿ ನ್ಯೂಸ್​ಫಸ್ಟ್​ಗೆ ಲಭ್ಯವಾಗಿದೆ.

ರಾಜ್ಯದಲ್ಲಿ ಕೊರೊನಾ ವೈರಸ್‌ನ ಅಟ್ಟಹಾಸ ಹಿನ್ನೆಲೆಯಲ್ಲಿ ಲಾಕ್​ಡೌನ್ ಜಾರಿಯಾಗಿದೆ. ಲಾಕ್​ಡೌನ್​ನಿಂದ ಸಾಮಾನ್ಯ ಜನರು ಸಂಕಷ್ಟಕ್ಕೆ ಸಿಲುಕಿದ್ದು, ಇದನ್ನ ಅರಿತ ವಿವಿಧ ಸಂಘ ಸಂಸ್ಥೆಗಳು ಸಾರ್ವಜನಿಕರಿಗೆ ಸಹಾಯಹಸ್ತ ಚಾಚಿವೆ. ಹೊರತಾಗಿ ರಾಜ್ಯ ಸರ್ಕಾರ ಕೂಡ ಒಂದಿಷ್ಟು ಕ್ಷೇತ್ರಗಳಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದೆ. ಎರಡು ಹಂತದಲ್ಲಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿರುವ ಸರ್ಕಾರ, ಮೊದಲ ಪ್ಯಾಕೇಜ್‌ನಲ್ಲಿ 1,250 ಕೋಟಿ ರೂಪಾಯಿ, ಎರಡನೇ ಪ್ಯಾಕೇಜ್‌ನಲ್ಲಿ 500 ಕೋಟಿ ರೂಪಾಯಿ ಘೋಷಣೆ ಮಾಡಿದೆ.

ಸರ್ಕಾರದ ಅನುದಾನ ಎಲ್ಲಿಗೆ ಹೋಯ್ತು?
ಎಲ್ಲರೂ ಕೋವಿಡ್-19 ಸಂಕಷ್ಟದ ಸಂದರ್ಭದಲ್ಲಿ ಜನರಿಗೆ ಕೈಲಾದ ಸಹಾಯ ಮಾಡ್ತಿದ್ದಾರೆ. ಇತ್ತ, ಸರ್ಕಾರವೇ ಸ್ಥಾಪಿಸಿದ ಅಭಿವೃದ್ಧಿ ನಿಗಮಗಳು ಏನು ಮಾಡುತ್ತಿವೆ? ಅಂತಾ ರಾಜ್ಯ ಬಿಜೆಪಿ ನಾಯಕರೇ ಪ್ರಶ್ನೆ ಮಾಡಲಾರಂಭಿಸಿದ್ದಾರೆ. ರಾಜ್ಯದಲ್ಲಿ ವೀರಶೈವ-ಲಿಂಗಾಯತ ಸಮುದಾಯಕ್ಕಾಗಿ, ‘ವೀರಶೈವ- ಲಿಂಗಾಯತ ಅಭಿವೃದ್ಧಿ ನಿಗಮ’, ಮರಾಠ ಸಮುದಾಯಕ್ಕಾಗಿ ‘ಮರಾಠ ಅಭಿವೃದ್ಧಿ ನಿಗಮ’, ಗೊಲ್ಲ ಸಮುದಾಯದ ಅಭಿವೃದ್ಧಿಗಾಗಿ ‘ಗೊಲ್ಲ ನಿಗಮ’, ಉಪ್ಪಾರ ಸಮುದಾಯದ ಅಭಿವೃದ್ಧಿಗೆ ‘ಉಪ್ಪಾರ ನಿಗಮ’, ಒಕ್ಕಲಿಗ ಸಮುದಾಯದ ಅಭಿವೃದ್ಧಿಗಾಗಿ ‘ಒಕ್ಕಲಿಗ ಅಭಿವೃದ್ಧಿ ನಿಗಮ’ ರಚನೆಯಾಗಿದೆ.

ಇದರ ಪೈಕಿ ಮರಾಠ ಅಭಿವೃದ್ಧಿ ನಿಗಮಕ್ಕೆ 50 ಕೋಟಿ, ವೀರಶೈವ- ಲಿಂಗಾಯತ ಹಾಗೂ ಒಕ್ಕಲಿಗ ಪ್ರಾಧಿಕಾರಕ್ಕೆ ತಲಾ 500 ಕೋಟಿ ಅನುದಾನ ಮೀಸಲು ಇಡಲಾಗಿದೆ. ಕೋವಿಡ್-19 ಸಂಕಷ್ಟದ ಸಂದರ್ಭದಲ್ಲಿ ಈ ನಿಗಮಗಳು ಮಾಡಿದ್ದಾದ್ರೂ ಏನು? ಎಂಬ ಪ್ರಶ್ನೆಯನ್ನ ಬಿಜೆಪಿ ನಾಯಕರು ಸೇರಿದಂತೆ ಸಾಮಾನ್ಯ ಜನರೂ ಎತ್ತಿದ್ದಾರೆ.

ಪರಮಶಿವಯ್ಯ ಸ್ಥಾನಕ್ಕೆ ಕುತ್ತು?
ಆಯಾ ನಿಗಮಗಳು, ಆಯಾ ಸಮುದಾಯದ ಒಳಿತಿಗಾಗಿ ದುಡಿದಿದ್ರೆ, ಸರ್ಕಾರಕ್ಕೆ ಒಳ್ಳೆಯ ಹೆಸರು ಬರುತ್ತಿತ್ತು. ವೀರಶೈವ-ಲಿಂಗಾಯತ ಸಮುದಾಯದ ಅಭಿವೃದ್ಧಿ ನಿಗಮಕ್ಕೆ ಪರಮಶಿವಯ್ಯ ಅವರನ್ನು ನೇಮಕ ಮಾಡಿದ್ದಾರೆ. ಅವರು ಕೋವಿಡ್ ಸಂಕಷ್ಟ ವೀರಶೈವ-ಲಿಂಗಾಯತ ಸಮುದಾಯಕ್ಕೆ ಸಹಾಯಹಸ್ತ ಏನು ಮಾಡಿದ್ದಾರೆ? ರಾಜ್ಯದಲ್ಲಿ ಅತಿ ದೊಡ್ಡ ಸಮುದಾಯ ಅಂದರೆ ವೀರಶೈವ- ಲಿಂಗಾಯತ ಸಮುದಾಯ. ನಿಗಮದ ಅಧ್ಯಕ್ಷ ಸ್ಥಾನದಲ್ಲಿ ಕುಳಿತು ಕೊಂಡ ಮೇಲೆ ಆರ್ಥಿಕವಾಗಿ ಹಿಂದುಳಿದ ಜನರನ್ನು ಗುರುತಿಸಿ, ನೇರವಾಗಿ ಸಹಾಯ ಮಾಡಬಹುದಿತ್ತು. ಅವರಿಂದ ಈ ಕೆಲಸ ಮಾಡಲಾಗುತ್ತಿಲ್ಲ. ಅವರನ್ನೇ ಮೊದಲು ಬದಲಾಯಿಸಿ ಎಂದು ಕೆಲವರು ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ.

ಇನ್ನು ಒಕ್ಕಲಿಗ ನಿಗಮಕ್ಕೆ ಅಧ್ಯಕ್ಷರ ನೇಮಕವಾಗಿಲ್ಲ. ಗೊಲ್ಲ ಹಾಗೂ ಉಪ್ಪಾರ ನಿಗಮಕ್ಕೂ ಇದೇ ಪರಿಸ್ಥಿತಿ ಮುಂದುವರಿದಿದೆ. ಹೀಗಾಗಿ ಕೆಲವು ನಾಯಕರು ಆಕ್ರೋಶವನ್ನು ಹೊರ ಹಾಕುತ್ತಿದ್ದಾರೆ ಅನ್ನೋ ಮಾಹಿತಿ ನ್ಯೂಸ್​ಫಸ್ಟ್​ಗೆ ಲಭ್ಯವಾಗಿದೆ.

The post ಕೊರೊನಾ ಸಂಕಷ್ಟದಲ್ಲಿ ಸರ್ಕಾರದ ‘ಜಾತಿ ನಿಗಮಗಳ’ ಪಾತ್ರವೇನು? ಬಿಜೆಪಿ ನಾಯಕರಿಂದಲೇ ಪ್ರಶ್ನೆ appeared first on News First Kannada.

Source: newsfirstlive.com

Source link